ಜಂಬೂ ಸವಾರಿಗೆ ಸಿದ್ಧಗೊಳ್ಳುತ್ತಿರುವ ಆನೆಗಳು: ವಿಶೇಷ ಅತಿಥ್ಯ ನೀಡುತ್ತಿರುವ ಜಿಲ್ಲಾಡಳಿತ
► ಮೈಸೂರು ದಸರಾ ಜಂಬೂ ಸವಾರಿಗೆ ಇನ್ನೆರಡೆ ದಿನ ಬಾಕಿ
ಮೈಸೂರು,ಅ.24: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂ ಸವಾರಿಗೆ ಇನ್ನು ಎರಡು ದಿನಗಳಷ್ಟೇ ಬಾಕಿಯಿದ್ದು, ಕೋವಿಡ್ ಕಾರಣ ಈ ಬಾರಿ ಸರಳ ದಸರಾ ಆಚರಣೆ ಮಾಡಲಾಗುತ್ತಿದ್ದು, ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ಗಜಪಡೆಗಳನ್ನು ಜಂಬೂ ಸವಾರಿಗೆ ಸಿದ್ದಗೊಳಿಸಲಾಗುತ್ತಿದೆ.
ಹುಣಸೂರಿನ ಬಳ್ಳೆ ಅರಣ್ಯ ಆನೆ ಕ್ಯಾಂಪಿನಿಂದ ಬಂದಿರುವ ಗಜಪಡೆಗಳು ಅರಮನೆ ಆವರಣದಲ್ಲಿ ಮಾವುತರು ಮತ್ತು ಕಾವಾಡಿಗಳೊಂದಿಗೆ ಸ್ವಚ್ಚಂದವಾಗಿ ವಿರಮಿಸುತ್ತಿವೆ. ಇದೇ ಪ್ರಥಮ ಬಾರಿಗೆ ಅಭಿಮನ್ಯು ಆನೆ ಅಂಬಾರಿ ಹೊರುತ್ತಿರುವುದು ವಿಶೇಷ.
ಈ ಹಿಂದೆ ಅರ್ಜುನ ಆನೆ ಅಂಬಾರಿಯನ್ನು ಹೊರುತ್ತಿತ್ತು. ಅದಕ್ಕೂ ಮೊದಲು ಬಲರಾಮ ಆನೆ 18 ಬಾರಿ ಅಂಬಾರಿಯನ್ನು ಹೊತ್ತಿದ ಕೀರ್ತಿಯನ್ನು ಪಡೆದಿದೆ. 60 ವರ್ಷ ವಯಸ್ಸು ತುಂಬಿದ ಅನೆಗಳ ಮೇಲೆ ಬಾರದ ವಸ್ತುಗಳನ್ನು ಹೊರಿಸಬಾರದು ಎಂಬ ನ್ಯಾಯಾಲಯದ ಆದೇಶದಂತೆ ಅರ್ಜುನ ಆನೆ ಅಂಬಾರಿ ಹೊರುತ್ತಿಲ್ಲ ಎಂದು ಗಜಪಡೆಗಳ ಉಸ್ತುವಾರಿ ವಹಿಸಿಕೊಂಡಿರುವ ಹಿರಿಯ ಪಶುವೈದ್ಯ ಡಾ.ನಾಗರಾಜ್ “ವಾರ್ತಾಭಾರತಿ”ಗೆ ತಿಳಿಸಿದರು.
ದಸರಾಗೆ ಪ್ರತಿ ಬಾರಿ 12 ರಿಂದ 15 ಆನೆಗಳು ಬರುತ್ತಿದ್ದವು. ಕೋವಿಡ್ ಕಾರಣ ಈ ಬಾರಿ ಕೇವಲ ಅಭಿಮನ್ಯು ನೇತೃತ್ವದ ವಿಕ್ರಮ, ಗೋಪಿ, ವಿಜಯ ಮತ್ತು ಕಾವೇರಿ ಸೇರಿದಂತೆ ಒಟ್ಟು ಐದು ಆನೆಗಳನ್ನು ಕರೆತರಲಾಗಿದೆ. ಕಳೆದ 15 ದಿನಗಳ ಹಿಂದೆಯೇ ಈ ಆನೆಗಳು ನಾಡಿಗೆ ಬಂದಿದ್ದು, ದಸರಾ ಜಂಬೂ ಸವಾರಿಗೆ ಹೊಂದಿಕೊಳ್ಳಲು ಅನುಸರಿಸಬೇಕಾದ ಎಲ್ಲಾ ಕ್ರಮಗಳನ್ನು ಪ್ರತಿ ನಿತ್ಯ ಕೈಗೊಳ್ಳಲಾಗುತ್ತಿದೆ.
ಗಜಪಡೆ ಮೇಲೆ ತಾಯಿ ಶ್ರೀಚಾಮುಂಡೇಶ್ವರಿ ದೇವಿಯ ಚಿನ್ನದ ಮೂರ್ತಿಯನ್ನು ಸುಮಾರು 750 ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಠಾಪಿಸಿ ಅರಮನೆಯಿಂದ ವಿವಿಧ ಕಲಾತಂಡಗಳು, ಟ್ಯಾಬ್ಲೊ, ಸಾಂಸ್ಕøತಿಕ ಮೇಳಗಳು ಸೇರಿದಂತೆ ವಿವಿಧ ಬಗೆಯ ಕಲಾತಂಡಗಳೊಂದಿಗೆ ಬನ್ನಿಮಂಟಪದ ವರೆಗೆ ಈ ಹಿಂದೆ ಮೆರವಣಿಗೆ ಸಾಗುತಿತ್ತು. ಕೊರೋನಾ ಕಾರಣದಿಂದ ಜನ ಸಂದಣಿ ತಪ್ಪಿಸುವ ಸಲುವಾಗಿ ಈ ಬಾರಿ ಅರಮನೆಯೊಳಗೆ ಜಂಬೂ ಸವಾರಿ ಮೆರವಣಿಗೆ ನಡೆಯಲಿದೆ ಎಂದು ಹೇಳಿದರು.
ಅರಮನೆಯೊಳಗೆ ಜಂಬೂ ಸವಾರಿ ನಡೆಯುವುದರಿಂದ ಹೆಚ್ಚು ಕಲಾತಂಡಗಳು ಭಾಗವಹಿಸುವುದಿಲ್ಲ ಎಂದು ತಿಳಿದು ಬಂದಿದೆ. ಆದರೆ ಕೆಲವು ಕಲಾತಂಡ ಮತ್ತು ವಾದ್ಯ ಮತ್ತು ಕೆಲವು ಟ್ಯಾಬ್ಲೊಗಳಿಗೆ ಅವಕಾಶ ನೀಡಬಹುದು ಎಂಬ ನಿರೀಕ್ಷೆ ಇದೆ. ಸರ್ಕಾರ ಮತ್ತು ಜಿಲ್ಲಾಡಳಿತ ಯಾವ ನಿರ್ಧಾರ ಕೈಗೊಳ್ಳಲಿದೆ ಕಾದು ನೋಡಬೇಕು ಎಂದರು.
ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ವೀಶೇಷ ಆತಿಥ್ಯ ನೀಡಲಾಗುತ್ತಿದ್ದು. ಅವುಗಳಿಗೆ ದಿನಕ್ಕೆ ಎರಡು ಬಾರಿ ನೀರಿನಿಂದ ಸ್ನಾನ ಮಾಡಿಸಲಾಗುವುದು. ಪ್ರೋಟಿನ್ ಅಂಶ ಹೆಚ್ಚಿಸಲು, ಗೋದಿ, ಹುರುಳಿ, ಸೇರಿದಂತೆ ಹಲವರು ಕಾಳುಗಳನ್ನು ಬೇಯಿಸಿ ದೊಡ್ಡ ದೊಡ್ಡ ಪಾತ್ರೆಯಲ್ಲಿ ನೀಡಲಾಗುತ್ತದೆ. ಜೊತೆಗೆ ಕಬ್ಬು, ಬೆಲ್ಲ, ಕೊಬ್ಬರಿಯನ್ನು ನೀಡಲಾಗುತ್ತಿದೆ. ಇನ್ನುಳಿದ ಸಮಯಗಳಲ್ಲಿ ಸೊಪ್ಪು, ಹುಲ್ಲು ಸೇರಿದಂತೆ ಹಸಿ ಪದಾರ್ಥಗಳನ್ನು ನೀಡುತ್ತಿದ್ದೇವೆ.
ಜಂಬೂ ಸವಾರಿಯಲ್ಲಿ ಹೊಂದುಕೊಳ್ಳುವ ಸಲುವಾರಿ, ಒಂದು ವಾರದಿಂದ ಗಜಪಡೆಗಳಿಗೆ ತಾಲೀಮು ನಡೆಸಲಾಗುತ್ತಿತ್ತು. ಅಭಿಮನ್ಯು ಆನೆಗೆ ಬಾರ ಹೊರಿಸುವ ಕಾರ್ಯವನ್ನು ಕೈಗೊಂಡಿದ್ದು, ಹಂತ ಹಂತವಾಗಿ ಮರಳು ಮೋಟೆ ಹೊರಿಸುವುದು ಮತ್ತು ಮರದ ಅಂಬಾರಿಯನ್ನು ಹೊರಿಸಿ ತಾಲೀಮು ಮಾಡಿಸಲಾಗುತ್ತಿದೆ.
ಅಭಿಮನ್ಯುವಿನ ಅಕ್ಕ ಪಕ್ಕದಲ್ಲಿ ವಿಜಯ ಮತ್ತು ಕಾವೇರಿ ಆನೆಗಳು ಹೆಜ್ಜೆಹಾಕಲಿವೆ. ಇನ್ನುಳಿದ ಮೂರು ಆನೆಗಳಲ್ಲಿ ಒಂದನ್ನು ಪಟ್ಟದ ಆನೆ ಮಾಡಲಾಗುವುದು. ಈ ಆನೆಗಳ ಜೊತೆಯಲ್ಲಿ ಅಶ್ವಾರೋಹಿ ಪಡೆಗಳು ಸಾಗಲಿದ್ದು, ಅವುಗಳನ್ನು ತಾಲೀಮಿನಲ್ಲಿ ಕರೆದುಕೊಂಡು ಹೋಗಲಾಗುತ್ತದೆ. ಅಂಬಾರಿ ಹೊರುವ ಮೊದಲು ರಿಹರ್ಸಲ್ ಅನ್ನು ಶನಿವಾರ ಬೆಳಿಗ್ಗೆ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಜಂಬೂ ಸವಾರಿ ವೇಳೆ ಗಾರ್ಡ್‍ಆಫ್ ಅನರ್ ನೀಡಲಾಗುವುದು. ಈ ವೇಳೆ ಪಿರಂಗಿಯಲ್ಲಿ 20 ಸುತ್ತು ಕುಶಾಲತೋಪು ಹಾರಿಸಲಾಗುವುದು. ಅವುಗಳ ಶಬ್ದಕ್ಕೆ ಆನೆಗಳು ಹೊಂದಿಕೊಳ್ಳುವಂತೆ ತಾಲೀಮು ನಡೆಸುವ ಎರಡು ಬಾರಿ ಕುಶಾಲತೋಪುಗಳನ್ನು ಹಾರಿಸಲಾಗಿದೆ. ಈ ಶಬ್ದಗಳಿಗೆ ಅಶ್ವಗಳು ಮತ್ತು ಗಜಪಡೆಗಳು ಹೊಂದುಕೊಂಡಿವೆ ಎಂದು ಹೇಳಿದರು.
ಜಂಬೂ ಸವಾರಿ ಹೊರಲಿರುವ ಅಭಿಮನ್ಯು ಆನೆಯು ಸುಮಾರು 21 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದ್ದು,2015 ರ ವರೆವಿಗೂ ಕರ್ನಾಟಕ ವಾದ್ಯಗೋಷ್ಠಿಯವರು ಕುಳಿತುಕೊಳ್ಳುವ ಗಾಡಿಯನ್ನು ಎಳೆಯುವ ಜವಾಬ್ದಾರಿಯನ್ನು ನಿರ್ವಹಿಸಿತ್ತು. ಹಾಗಾಗಿ ಇದು ಬೇಗ ಹೊಂದಿಕೊಂಡಿದೆ. ಜೊತೆಗೆ ಜಂಬೂ ಸವಾರಿಯನ್ನು ಯಶಸ್ವಿಗೊಳಿಸಲಿದೆ ಎಂದು ಹೇಳಿದರು.
ಅರಮನೆ ಆವರಣದಲ್ಲಿ ಮೈಸೂರು ರಾಜವಂಶಸ್ಥರು ವಿವಿಧ ಪೂಜಾ ಕಾರ್ಯಗಳನ್ನು ಕೈಗೊಂಡಿದ್ದು, ಪ್ರತಿನಿತ್ಯ ಪುರೋಹಿತರು. ಈ ಹಿಂದೆ ನಡೆದು ಬಂದ ಸಂಪ್ರದಾಗಳಂತೆ ನವರಾತ್ರಿ ಪೂಜೆಯನ್ನು ರಾಜವಂಶಸ್ಥ ಯದುವೀರ್ ಕೈಯಲ್ಲಿ ನೆರವೇರಿಸುತ್ತಿದ್ದಾರೆ.
ಅರಮನೆ ಆವರಣದಲ್ಲಿ ಪ್ರತಿನಿತ್ಯ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಕಾರ್ಯಕ್ರಮಕ್ಕೆ ಅದ್ದೂರಿ ಸೆಟ್ ಹಾಕಲಾಗಿದೆ. ಸಂಜೆ ನಡೆಯುವ ಕಾರ್ಯಕ್ರಮಕ್ಕೆ ಕೇವಲ 50 ಮಂದಿಗಷ್ಟೆ ಅವಕಾಶ ಕಲ್ಪಿಸಲಾಗಿದೆ. ಇನ್ನೂ ಮೈಸೂರಿನ ತುಂಬೆಲ್ಲಾ ಅದ್ಧೂರಿ ದೀಪಗಳನ್ನು ಅಳವಡಿಸಿ ನೋಡುಗರ ಕಣ್ಮನ ತಣಿಸುವಂತಿದೆ.