ಇನ್ನು ವಾಟ್ಸ್ ಆ್ಯಪ್ ನಲ್ಲಿಯೂ ಪೇಮೆಂಟ್ಸ್ ಸೇವೆ ಲಭ್ಯ
ಹೊಸದಿಲ್ಲಿ: ಫೇಸ್ ಬುಕ್‍ಗೆ ತನ್ನ ವಾಟ್ಸ್ ಆ್ಯಪ್ ಪೇಮೆಂಟ್ ಸರ್ವಿಸ್ ಆರಂಭಿಸಲು ಭಾರತ ಸರಕಾರ ಅನುಮತಿಸಿದೆ. ವಾಟ್ಸ್ ಆ್ಯಪ್ ಪೇಮೆಂಟ್ ಸೇವೆಗಳು ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಮಲ್ಟಿ ಬ್ಯಾಂಕ್ ಯುಪಿಐ ಮೂಲಕ ತನ್ನ ಕಾರ್ಯವನ್ನು ಆರಂಭಿಸಬಹುದು ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ ಹೇಳಿದೆ.
ತನ್ನ ವಾಟ್ಸ್ ಆ್ಯಪ್ ಪೇಮೆಂಟ್ ಸೇವೆಗಳನ್ನು ಭಾರತದಲ್ಲಿ ಆರಂಭಿಸುವ ನಿಟ್ಟಿನಲ್ಲಿ ಫೇಸ್ ಬುಕ್ ಬಹಳಷ್ಟು ಸಮಯದಿಂದ ಪರೀಕ್ಷೆಗಳನ್ನು ನಡೆಸುತ್ತಲೇ ಇದ್ದರೂ ಹಲವಾರು ನಿಯಂತ್ರಣಾ ಕ್ರಮಗಳಿಂದಾಗಿ ಅದರ ಈ ಪ್ರಾಯೋಗಿಕ ಹೆಜ್ಜೆ ಕೆಲವೇ ಕೆಲವು ಬಳಕೆದಾರರಿಗೆ ಸೀಮಿತವಾಗಿತ್ತು.
ಭಾರತದಲ್ಲಿ ಈಗಾಗಲೇ ಪೇಟಿಎಂ, ಗೂಗಲ್ ಪೇ, ಫೋನ್ ಪೇ ಹಾಗೂ ಅಮೆಝಾನ್ ಪೇ ಜನಪ್ರಿಯವಾಗಿದ್ದು ಇವುಗಳ ಜತೆಗೆ ವಾಟ್ಸ್ ಆ್ಯಪ್ ಪೇಮೆಂಟ್ ಸೇವೆಗಳು ಸ್ಫರ್ಧಿಸಲಿವೆ. ವಾಟ್ಸ್ ಆ್ಯಪ್ ಈಗಾಗಲೇ ಭಾರತದಲ್ಲಿ ಜನಪ್ರಿಯ ಮೆಸೇಜಿಂಗ್ ಆ್ಯಪ್ ಆಗಿರುವುದರಿಂದ ಅದರ ಪೇಮೆಂಟ್ ಸೇವೆಗಳಿಗೆ ಹೆಚ್ಚು ಗ್ರಾಹಕರು ಲಭ್ಯವಾಗುವ ನಿರೀಕ್ಷೆಯಿದೆ.
ಫೇಸ್ಬುಕ್ ಈ ವರ್ಷ ಈಗಾಗಲೇ ಜಿಯೋ ಪ್ಲಾಟ್‍ಫಾಮ್ರ್ಸ್‍ನಲ್ಲಿ ಶಏ 9.99 ಪಾಲುದಾರಿಕೆ ಪಡೆದುಕೊಂಡಿರುವುದರಿಂದ ಭಾರತದಲ್ಲಿ ವಾಟ್ಸ್ ಆ್ಯಪ್ ಪೇಮೆಂಟ್ ಸೇವೆಗಳ ಛಾಪು ಮೂಡಿಸಲು ಸಂಸ್ಥೆಗೆ ಜಿಯೋ ಸಹಾಯ ಮಾಡುವ ಸಾಧ್ಯತೆಯೂ ಇದೆ.