ಕೊರೋನ ಲಸಿಕೆಗೆ ಜನತೆ 2022ರವರೆಗೆ ಕಾಯಬೇಕು: ಏಮ್ಸ್ ನಿರ್ದೇಶಕ

Update: 2020-11-08 16:45 GMT

ಹೊಸದಿಲ್ಲಿ, ನ.9: ಕೊರೋನ ಲಸಿಕೆ ಭಾರತದ ಮಾರುಕಟ್ಟೆಯಲ್ಲಿ ಸುಲಭವಾಗಿ ಲಭಿಸುವಂತಾಗಲು 1 ವರ್ಷಕ್ಕೂ ಹೆಚ್ಚು ಸಮಯ ಬೇಕಾಗಬಹುದು. ಲಸಿಕೆಗಾಗಿ ಜನಸಾಮಾನ್ಯರು 2022ರವರೆಗೆ ಕಾಯಬೇಕು. ಕೊರೋನ ಅಂತ್ಯವಾಗುವುದಿಲ್ಲ ಎಂದು ಅಖಿಲ ಭಾರತ ವೈದ್ಯವಿಜ್ಞಾನ ಸಂಸ್ಥೆ(ಎಐಐಎಂಎಸ್)ಯ ನಿರ್ದೇಶಕ ಡಾ ರಣದೀಪ್ ಗುಲೇರಿಯಾ ಹೇಳಿದ್ದಾರೆ.

ನಮ್ಮ ದೇಶದಲ್ಲಿ ಜನಸಂಖ್ಯೆ ಹೆಚ್ಚಿದೆ. ಮೆಡಿಕಲ್‌ನಿಂದ ಜ್ವರದ ಲಸಿಕೆಯನ್ನು ತರುವಂತೆ ಕೊರೋನ ಲಸಿಕೆಯನ್ನೂ ಜನತೆ ಪಡೆಯುವ ದಿನಕ್ಕೆ ಇನ್ನೂ ಸುಮಾರು 14 ತಿಂಗಳು ಕಾಯಬೇಕಾಗಬಹುದು ಎಂದು ಸಿಎನ್‌ಎನ್-ನ್ಯೂಸ್ 18 ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ

ಡಾ.ಗುಲೇರಿಯಾ ಅಭಿಪ್ರಾಯ ಪಟ್ಟಿದ್ದಾರೆ. ದೇಶದಲ್ಲಿ ಕೊರೋನ ವೈರಸ್ ನಿರ್ವಹಣೆಗೆ ಸರಕಾರ ನೇಮಿಸಿದ ರಾಷ್ಟ್ರೀಯ ಕಾರ್ಯಪಡೆಯ ಸದಸ್ಯನಾಗಿಯೂ ಡಾ. ಗುಲೇರಿಯಾ ಕಾರ್ಯ ನಿರ್ವಹಿಸಿದ್ದಾರೆ.

ಕೊರೋನ ಸೋಂಕಿಗೆ ಲಸಿಕೆ ಲಭ್ಯವಾದ ಬಳಿಕದ ಸವಾಲಿನ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ದೇಶದ ಎಲ್ಲಾ ಮೂಲೆಗೂ ಲಸಿಕೆಯನ್ನು ತಲುಪಿಸುವ ವ್ಯವಸ್ಥೆಯೇ ದೊಡ್ಡ ಸವಾಲಾಗಿದೆ. ಸಾಕಷ್ಟು ಸೂಜಿ, ಲಸಿಕೆಯನ್ನು ಸಂಗ್ರಹಿಸಿ ಬಳಿಕ ಸೂಕ್ತ ವಿತರಣಾ ಕೊಂಡಿಯ ಮೂಲಕ ದೇಶದ ಪ್ರತಿಯೊಂದು ಮೂಲೆಗೂ ತಲುಪಿಸುವುದು ಬೃಹತ್ ಸವಾಲಿನ ಕಾರ್ಯವಾಗಿದೆ. ಸೋಂಕಿಗೆ ಹೊಸ ಲಸಿಕೆ ಸಂಶೋಧಿಸಲ್ಪಟ್ಟರೆ ಮತ್ತು ಇದು ಮೊದಲಿನ ಲಸಿಕೆಗಿಂತ ಹೆಚ್ಚು ಪರಿಣಾಮಕಾರಿ ಎಂದು ದೃಢಪಟ್ಟರೆ ಆಗ ಎರಡನೇ ಲಸಿಕೆಯನ್ನು ಹೇಗೆ ತಲುಪಿಸುವುದು? ಯಾರಿಗೆ ಮೊದಲಿನ ಲಸಿಕೆ ಸಾಕು, ಯಾರಿಗೆ ಎರಡನೇ ಲಸಿಕೆಯ ಅಗತ್ಯವಿದೆ ಎಂಬುದನ್ನು ನಿರ್ಧರಿಸುವುದು ಮತ್ತೊಂದು ಸವಾಲಿನ ಕಾರ್ಯವಾಗಿದೆ ಎಂದು ಡಾ. ಗುಲೇರಿಯಾ ಹೇಳಿದರು.

ಕೊರೋನ ಸೋಂಕಿನ ಲಸಿಕೆ ಅಭಿವೃದ್ಧಿ ಕಾರ್ಯದಲ್ಲಿ ಭಾರತ ಸರ್ವಶಕ್ತಿ ಬಳಸುತ್ತದೆ ಮತ್ತು ಲಸಿಕೆ ಲಭ್ಯವಾದ ಬಳಿಕ ಅದನ್ನು ಮಾನವೀಯತೆಗೆ ಸಹಾಯ ಮಾಡುವ ದೃಷ್ಟಿಯಿಂದ, ಆಸಕ್ತ ರಾಷ್ಟ್ರಗಳಿಗೆ ಸರಬರಾಜು ಮಾಡಲಿದೆ ಎಂದು ಭಾರತದ ವಿದೇಶ ಕಾರ್ಯದರ್ಶಿ ಹರ್ಷವರ್ಧನ ಶ್ರಿಂಗ್ಲ ಶುಕ್ರವಾರ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News