ನಟ ಅರ್ಜುನ್ ರಾಂಪಾಲ್ ಮನೆ ಜಾಲಾಡಿದ ಎನ್‌ಸಿಬಿ

Update: 2020-11-09 16:38 GMT

 ಮುಂಬೈ,ನ.9: ಮಾದಕ ದ್ರವ್ಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಾದಕ ದ್ರವ್ಯ ನಿಯಂತ್ರಣ ಘಟಕ (ಎನ್‌ಸಿಬಿ)ದ ತನಿಖಾಧಿಕಾರಿಗಳು ಸೋಮವಾರ ಬಾಲಿವುಡ್ ನಟ ಅರ್ಜುನ್ ರಾಮಪಾಲ್ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ರಾಮಪಾಲ್ ವಿರುದ್ಧ ಯಾವುದಾದರೂ ಆರೋಪ ಹೊರಿಸಲಾಗಿದೆಯೇ ಎನ್ನುವುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ.

ರಾಮಪಾಲ್ ನಿವಾಸದಿಂದ ಕೆಲವು ವಿದ್ಯುನ್ಮಾನ ಸಾಧನಗಳನ್ನು ವಶಪಡಿಸಿಕೊಳ್ಳಲಾ ಗಿದೆ ಮತ್ತು ನ.11ರಂದು ತನ್ನೆದುರು ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಸೂಚಿಸಲಾಗಿದೆ ಎಂದು ಎನ್‌ಸಿಬಿ ತಿಳಿಸಿದೆ.

ಬಾಲಿವುಡ್ ಗಣ್ಯರಿಗೆ ಮಾದಕ ದ್ರವ್ಯ ಪೂರೈಕೆಯ ಜಾಲವನ್ನು ಬಯಲಿಗೆಳೆಯುವ ಪ್ರಯತ್ನದ ಅಂಗವಾಗಿ ರಾಮಪಾಲ್ ನಿವಾಸ ಸೇರಿದಂತೆ ಅಂಧೇರಿ,ಖಾರ್ ಮತ್ತು ಬಾಂದ್ರಾಗಳ ಮೂರು ಸ್ಥಳಗಳಲ್ಲಿ ಎನ್‌ ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಎನ್‌ಸಿಬಿ ಈ ಮೊದಲು ನಟ ಸುಶಾಂತf ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಡ್ರಗ್ ಪೆಡ್ಲರ್‌ಗಳಿಗೆ ಸಂಬಂಧಿಸಿದಂತೆ ರಾಮಪಾಲ್ ಲಿವ್ ಇನ್ ಸಂಗಾತಿ ಗ್ಯಾಬ್ರಿಯೆಲಾ ಡಿಮೆಟ್ರಿಯೇಡ್ಸ್ ಅವರ ಸೋದರ ಅಗಿಸಿಲಾವಸ್ ಡಿಮೆಟ್ರಿಯೇಡ್ಸ್‌ನನ್ನು ವಶಕ್ಕೆ ತೆಗೆದುಕೊಂಡಿತ್ತು. ಶುಕ್ರವಾರ ಇಲ್ಲಿಯ ವಿಶೇಷ ನ್ಯಾಯಾಲಯವು ಅಗಿಸಿಲಾವಸ್‌ಗೆ ಜಾಮೀನು ನೀಡಿತ್ತಾದರೂ ಇನ್ನೊಂದು ಮಾದಕ ದ್ರವ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಸಿಬಿ ಶನಿವಾರ ಆತನನ್ನು ಮತ್ತೆ ಬಂಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News