ಅಕ್ರಮ ಭೂ ಮಾರಾಟ, ಡ್ರಗ್ಸ್ ದಂಧೆ ಕುರಿತು ವರದಿ ಮಾಡುತ್ತಿದ್ದ 29 ವರ್ಷದ ಪತ್ರಕರ್ತನ ಕಗ್ಗೊಲೆ

Update: 2020-11-09 16:09 GMT

ಚೆನ್ನೈ : ತಮಿಳುನಾಡಿನ ಕುಂದ್ರತ್ತೂರು ಎಂಬಲ್ಲಿ ಸರಕಾರಿ ಜಮೀನಿನ ಅಕ್ರಮ ಮಾರಾಟ ಹಾಗೂ ಗಾಂಜಾ  ಮಾರಾಟ ಕುರಿತಂತೆ ವರದಿ ಮಾಡಿ ಅಕ್ರಮಗಳನ್ನು ಬಯಲಿಗೆಳೆಯುತ್ತಿದ್ದ  ತಮಿಳನ್ ಟಿವಿ  ವಾಹಿನಿಯಲ್ಲಿ ವರದಿಗಾರನಾಗಿದ್ದ 29 ವರ್ಷದ ಜಿ. ಮೋಸಸ್ ಎಂಬವರನ್ನು ದುಷ್ಕರ್ಮಿಗಳು ಅವರ ಮನೆ ಸಮೀಪವೇ ಹತ್ಯೆಗೈದಿದ್ದಾರೆ.

ಮೋಸೆಸ್ ಅವರು ಕುಂದ್ರತ್ತೂರಿನ ಸೋಮಂಗಲಂ ಸಮೀಪದ ನಲ್ಲೂರು ಗ್ರಾಮದ ನಿವಾಸಿಯಾಗಿದ್ದಾರೆ. ರವಿವಾರ  ರಾತ್ರಿ  ಮನೆಯಿಂದ ಹೊರಗೆ ಹೊರಟ ಮೋಸೆಸ್ ಅವರನ್ನು ದುಷ್ಕರ್ಮಿಗಳು ಅಡ್ಡಗಟ್ಟಿ ಮನೆಯಿಂದ  ಅನತಿ ದೂರದಲ್ಲಿ ಅವರಿಗೆ ಚೂರಿಯಿಂದ ಇರಿದಿದ್ದರು. ಅವರು ಅಲ್ಲಿಂದ ತಪ್ಪಿಸಿಕೊಂಡು ತಮ್ಮ ಮನೆಯತ್ತ ಧಾವಿಸಿದರೂ ದುಷ್ಕರ್ಮಿಗಳು ಮತ್ತೆ ಅವರ ಮೇಲೆ ದಾಳಿ ನಡೆಸಿ ಪರಾರಿಯಾಗಿದ್ದರು.  ಮೋಸೆಸ್ ಅವರನ್ನು ತಕ್ಷಣ ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಅದಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದರು.

ಘಟನೆ ಸಂಬಂಧ  ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ತಮಿಳನ್ ವಾಹಿನಿಯ ಸಿರಪ್ಪು ಪಾರ್ವೈ (ಸ್ಪೆಷಲ್ ಫೋಕಸ್) ಕಾರ್ಯಕ್ರಮದ ಮೂಲಕ ಮೋಸೆಸ್ ಅವರು ಸ್ಥಳೀಯವಾಗಿ ನಡೆಯುತ್ತಿದ್ದ ಹಲವು ಅಕ್ರಮಗಳನ್ನು ಬಯಲಿಗೆಳೆದಿದ್ದರು. ಸ್ಥಳೀಯ ಗ್ಯಾಂಗ್ ಒಂದು ನಡೆಸುತ್ತಿದ್ದ ಗಾಂಜಾ ವ್ಯವಹಾರದ ಕುರಿತು ವರದಿ ಮಾಡಿದ್ದ ಅವರು ಬೆದರಿಕೆಗಳನ್ನು ಎದುರಿಸುತ್ತಿದ್ದರೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News