ಭಾರತ ಮರೆಯುತ್ತಿರುವ ಮೌಲಾನಾ ಆಝಾದ್
ಕಳೆದ ವರ್ಷ ಮಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಸ್ವತಂತ್ರ ಭಾರತದ ಶಿಕ್ಷಣ ಸಚಿವ, ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಮೌಲಾನಾ ಅಬುಲ್ ಕಲಾಂ ಆಝಾದರ ಕುರಿತಂತೆ ಉಪನ್ಯಾಸ ನೀಡಲು ನನ್ನನ್ನು ಆಹ್ವಾನಿಸಿದ್ದರು. ಉಪನ್ಯಾಸಕ್ಕಿಂತ ಮುಂಚೆ ಸಂಸ್ಥೆಯ ಪ್ರಾಂಶುಪಾಲರ ಕೊಠಡಿಯಲ್ಲಿ ತುಸು ಹೊತ್ತು ಕೂತಿದ್ದಾಗ ಅಲ್ಲಿ ತೂಗು ಹಾಕಲಾಗಿದ್ದ ಪಟಗಳನ್ನು ಗಮನಿಸಿದೆ. ಅದರಲ್ಲಿ ಗಾಂಧೀಜಿ, ನೆಹರೂ, ಸರ್ವಪಳ್ಳಿ ರಾಧಾಕೃಷ್ಣನ್, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪಟಗಳಿದ್ದವು. ಆದರೆ ದೇಶದ ಪ್ರಪ್ರಥಮ ಶಿಕ್ಷಣ ಸಚಿವ ಮೌಲಾನಾರ ಪಟ ಮಾತ್ರ ಇರಲಿಲ್ಲ. ನೋಡ್ಕೊಂಡು ಮನಸ್ಸಲ್ಲೇ ನೋವು ನುಂಗಿದೆ. ಆ ಬಳಿಕ ಕೆಲವು ಮುಸ್ಲಿಂ ಕಾಲೇಜುಗಳಿಗೆ ಹೋದಾಗೆಲ್ಲಾ ತೂಗು ಹಾಕಲಾಗಿದ್ದ ಪಟಗಳನ್ನು ಗಮನಿಸತೊಡಗಿದೆ. ನಮ್ಮ ಮಂಗಳೂರಿನ ಬಹುತೇಕ ಯಾವ ಮುಸ್ಲಿಂ ಆಡಳಿತದ ಶಿಕ್ಷಣ ಸಂಸ್ಥೆಗಳಲ್ಲೂ ಮೌಲಾನಾರ ಪಟ ಇಲ್ಲದ್ದನ್ನು ಗಮನಿಸಿದ್ದೆ. ಒಂದು ಮುಸ್ಲಿಂ ಆಡಳಿತದ ಕಾಲೇಜೊಂದರ ಮುಸ್ಲಿಂ ಪ್ರಾಂಶುಪಾಲರಲ್ಲಿ ನೇರವಾಗಿ ಕೇಳಿಯೇ ಬಿಟ್ಟೆ.. "ಇಲ್ಲಿ ಗಾಂಧಿ, ನೆಹರೂ,ಅಂಬೇಡ್ಕರ್ ಸರ್ವಪಲ್ಲಿ ರಾಧಾಕೃಷ್ಣನ್‌ರವರ ಪಟಗಳಿವೆ, ಆದರೆ ದೇಶದ ಮೊದಲ ಶಿಕ್ಷಣ ಸಚಿವ ಆಝಾದರ ಪಟವೇಕಿಲ್ಲ..?
ಅದಕ್ಕವರು " ನಮ್ಮಲ್ಲಿ ಪಟ ಇಡುವ ಸಂಸ್ಕೃತಿ ಇಲ್ಲವಲ್ಲ ಎಂದರು..
ಪಟವಿಡುವ ಸಂಸ್ಕೃತಿಯಿಲ್ಲದಿದ್ದರೆ ಮುಸ್ಲಿಮೇತರರ ಪಟ ಇಡಬಹುದೇ... ಎಂದು ಮರುಪ್ರಶ್ನೆ ಹಾಕಿದೆ. ಆ ಪ್ರಾಂಶುಪಾಲರು ಮೌನಕ್ಕೆ ಶರಣಾದರು.
ಇಂದು ಗಾಂಧಿ, ನೆಹರೂ, ಪಟೇಲರಂತಹ ಸ್ವಾತಂತ್ರ್ಯ ಹೋರಾಟಗಾರರನ್ನು ಆಗಾಗ ನೆನಪಿಸುವ ಪರಿಪಾಠವಿದೆ. ಆದರೆ ಅವರಷ್ಟೇ ಮಹತ್ವದ ಸ್ವಾತಂತ್ರ್ಯ ಹೋರಾಟಗಾರ ಮತ್ತು ತೂಕದ ರಾಷ್ಟ್ರೀಯ ನಾಯಕರಾದ ಮೌಲಾನಾರನ್ನು ಎಲ್ಲರೂ ಮರೆತೇ ಬಿಟ್ಟಿರುವುದು ದುರದೃಷ್ಟಕರ.
ಭಾರತದಲ್ಲಿ ಮದ್ರಸಗಳ ಮೇಲೆ ಸುಖಾಸುಮ್ಮನೆ ಭ್ರಷ್ಟಾಚಾರದ ಆರೋಪ ಹೊರಿಸಲಾಗುತ್ತದೆ. ಈ ದೇಶಕ್ಕೆ ಅಸಂಖ್ಯ ಅಪ್ರತಿಮ ದೇಶಪ್ರೇಮಿ ಸ್ವಾತಂತ್ರ್ಯ ಹೋರಾಟಗಾರರನ್ನು ಮದ್ರಸಗಳು ನೀಡಿವೆ ಎನ್ನುವ ವಾಸ್ತವವನ್ನು ಇತಿಹಾಸ ಪ್ರಜ್ಞೆಯುಳ್ಳ ಯಾರೂ ನಿರಾಕರಿಸಲಾರರು.
ಆಧುನಿಕ ಶಿಕ್ಷಣ ಪಡೆದ ಪಾಶ್ಚಾತ್ಯ ಜೀವನ ಶೈಲಿಯ ಮುಹಮ್ಮದ್ ಅಲಿ ಜಿನ್ನಾ ಧರ್ಮಾಧಾರಿತ ದೇಶಕ್ಕೆ ಬೇಡಿಕೆಯಿಟ್ಟರು. ಆದರೆ ಮದ್ರಸದ ಉತ್ಪನ್ನ ಮತ್ತು ಇಸ್ಲಾಮೀ ವಿದ್ವಾಂಸರಾಗಿದ್ದ ಮೌಲಾನಾ ಬಹುಧರ್ಮೀಯ, ಬಹುಸಂಸ್ಕೃತಿಯ ದೇಶದ ಪರ ಅಚಲವಾಗಿ ನಿಂತರು. ಅದಾಗಲೇ ದ್ವಿರಾಷ್ಟ್ರ ಸಿದ್ಧಾಂತದ ಪರಮ ಪ್ರತಿಪಾದಕರಾಗಿದ್ದ ಜಿನ್ನಾಗೆ ಖಾಯಿದೇ ಆಝಂ ಎಂಬ ಬಿರುದನ್ನು ಗಾಂಧೀಜಿ ಕೊಟ್ಟಾಗ ಮೌಲಾನಾ ಅದನ್ನು ಕಟುವಾಗಿ ವಿರೋಧಿಸಿದ್ದರು.
ದೇಶ ವಿಭಜನೆಯ ವಿಚಾರದಲ್ಲಿ ಪಟೇಲ್ "ಕೊಳೆಯುತ್ತಿರುವ ಗಾಯವನ್ನು ತುಂಡರಿಸಬೇಕು" ಎಂದರೆ, ನೆಹರೂ " ಈಗಾಗಲೇ ದೇಶದೊಳಗೆ ಎರಡು ದೇಶವಿದೆ" ಎಂದಿದ್ದರು. ಗಾಂಧೀಜಿ "ಈ ದೇಶ ವಿಭಜನೆಯಾಗುವುದಾದರೆ ನನ್ನ ಮೃತದೇಹದ ಮೇಲಾಗಲಿ" ಎಂದಿದ್ದರು. ಕೊನೆಗೆ ಅನಿವಾರ್ಯವಾಗಿ ಗಾಂಧೀಜಿಯೇ ದೇಶವಿಭಜನೆಯ ಪತ್ರಕ್ಕೆ ಅಂಕಿತ ಹಾಕಬೇಕಾಗಿ ಬಂದಿತ್ತು. ಆ ಕಾರಣಕ್ಕಾಗಿ ಮೌಲಾನಾ ಗಾಂಧೀಜಿಯವರ ಜೊತೆ ಹತ್ತು ದಿನಗಳ ಕಾಲ ಮಾತುಬಿಟ್ಟಿದ್ದರು. ಒಂದೊಮ್ಮೆ ಗಾಂಧೀಜಿ ದೇಶ ವಿಭಜನೆಯ ವಿಚಾರದಲ್ಲಿ ಮೌಲಾನಾರ ಕುರಿತು ಅದೆಷ್ಟು ಆತಂಕಿತರಾಗಿದ್ದರೆಂದರೆ ಮೌಲಾನಾರನ್ನು ಕರೆದು "ದೇಶ ವಿಭಜನೆಗೆ ತಾವು ಯಾವತ್ತೂ ಒಪ್ಪುವುದಿಲ್ಲ" ಎಂದು ಮಾತು ಪಡಕೊಂಡಿದ್ದರು. ಆಗ ಮೌಲಾನಾ ಹೇಳಿದ್ದ ಮಾತು "ದೇಶ ವಿಭಜನೆಯಾದರೆ ಅದು ಬ್ರಿಟಿಷರ ಪಾಲಿನ ನಿಜವಾದ ಗೆಲುವು" ಎಂದಿದ್ದರು.
ದೇಶ ವಿಭಜನೆಯಾಗಿ ಮುಸ್ಲಿಮರು ಗುಂಪು ಗುಂಪಾಗಿ ಪಾಕಿಸ್ತಾನಕ್ಕೆ ಹೊರಡುವಾಗ ಮೌಲಾನಾ ಅಕ್ಷರಶಃ ಅಳುತ್ತಿದ್ದರು. ದೇಶ ವಿಭಜನೆಯ ನೋವು ತಾಳಲಾರದೇ ಮೌಲಾನಾ ದಿಲ್ಲಿಯ ಜುಮಾ ಮಸೀದಿಯಲ್ಲಿ 1947ರಲ್ಲಿ ಮಾಡಿದ ಐತಿಹಾಸಿಕ ಭಾಷಣದಲ್ಲಿ ಮುಸ್ಲಿಮರನ್ನುದ್ದೇಶಿಸಿ ''ದಯವಿಟ್ಟು ಯಾರೂ ದೇಶಬಿಟ್ಟು ಹೋಗದಿರಿ'' ಎಂದು ಪರಿಪರಿಯಾಗಿ ಬೇಡಿಕೊಂಡಿದ್ದರು.
ಆ ಭಾಷಣದ ಮುಖ್ಯಾಂಶ ಹೀಗಿದೆ...
"ಬ್ರಿಟಿಷರ ಆಡಳಿತದಲ್ಲಿ ನೀವು ಮಾಡಿದಂತೆ ಭಿಕ್ಷಾಪಾತ್ರೆ ಹಿಡಿದು ಜೀವನ ನಡೆಸಿರೆಂದು ನಾನು ಹೇಳುತ್ತಿಲ್ಲ. ನಿಮ್ಮ ಸಂಸ್ಕೃತಿಯ ಬೇರುಗಳನ್ನು ನೀವು ಭದ್ರವಾಗಿ ಹಿಡಿದಿಟ್ಟುಕೊಳ್ಳಿ. ಅದೇ ನಮ್ಮ ಆಸ್ತಿ. ನೀವು ಓಡಿಹೋಗಲು ಇಚ್ಛಿಸದಿದ್ದರೆ ನಮ್ಮನ್ನು ಯಾರೂ ಓಡಿಸಲಾರರು ಎಂಬುವುದನ್ನು ನೆನಪಿಟ್ಟುಕೊಳ್ಳಿ. ಈ ದೇಶ ನಮ್ಮದೇ ಎಂದು ಪ್ರತಿಜ್ಞೆ ಕೈಗೊಳ್ಳಿ. ಈ ದೇಶ ನಮ್ಮದು, ನಮ್ಮ ಸ್ವರವಿಲ್ಲದೆ ದೇಶದ ಪ್ರಗತಿಗೀತೆ ಅರ್ಥ ಕಳೆದುಕೊಳ್ಳುತ್ತದೆ ಎಂಬ ಪ್ರತಿಜ್ಞೆ ನಮ್ಮದಾಗಲಿ.
ಹೌದು ಇಂದು ರಕ್ತಪಾತವಾಗುತ್ತಿದೆ. ಆ ನೋವು ಸಹಿಸಲಸಾಧ್ಯ. ನಾವದನ್ನು ಮೆಟ್ಟಿ ನಿಂತು ರಾಷ್ಟ್ರ ಕಟ್ಟಬೇಕು. ಇಂದು ನೀವು ಚಂಡಮಾರುತಗಳನ್ನು ಕಂಡು ಹೆದರುತ್ತಿದ್ದೀರಿ. ನೀವೇ ಒಂದು ಕಾಲದಲ್ಲಿ ಬ್ರಿಟಿಷರ ಪಾಲಿಗೆ ಚಂಡಮಾರುತವಾಗಿರಲಿಲ್ಲವೇ..? ಇಂದು ನೀವು ಕತ್ತಲಿಗೆ ಹೆದರುತ್ತಿದ್ದೀರಿ. ಒಂದೊಮ್ಮೆ ಈ ನೆಲದಲ್ಲಿ ನಮ್ಮ ಧೀರೋದಾತ್ತ ಹೋರಾಟವೇ ಬೆಳಕಾಗಿರಲಿಲ್ಲವೇ...? ನೀವು ಜಡಿಮಳೆಗೆ ಹೆದರುತ್ತಿದ್ದೀರಿ. ನಿಮ್ಮ ಪೂರ್ವಜರು ಸಮುದ್ರಕ್ಕೇ ಇಳಿದಿದ್ದರು. ಬೆಟ್ಟ, ಕುಟ್ಟಿ ಪುಡಿ ಮಾಡಿದವರು, ಗುಡುಗು ಮಿಂಚುಗಳಿಗೆ ಮುಗುಳ್ನಗೆಯ ಉತ್ತರ ಕೊಟ್ಟವರು. ಬಿರುಗಾಳಿಯೆದ್ದಾಗ ಅದು ದಾರಿ ತಪ್ಪಿ ಬಂದಿದೆ ಎಂದು ಅದರ ದಿಕ್ಕನ್ನೇ ಬದಲಾಯಿಸಿದವರು ನೀವು. ಇದು ವಿಶ್ವಾಸ ಕಳೆದುಕೊಳ್ಳುತ್ತಿರುವ ಸೂಚನೆ.ಅಲ್ಲಾಹನಲ್ಲಿ ಹಿಂದೆಂದೂ ನಂಬಿಕೆ ಇರಲಿಲ್ಲವೆಂಬ ಮಟ್ಟಿಗೆ ನೀವು ವಿಶ್ವಾಸ ಕಳೆದುಕೊಂಡಿದ್ದೀರಿ.
ಮಿತ್ರರೇ, ನನ್ನಲ್ಲಿ ನಿಮಗೆ ಯಾವ ಹೊಸ ಸೂತ್ರವೂ ಇಲ್ಲ. ನನ್ನಲ್ಲಿರುವುದು ಹದಿನಾಲ್ಕು ಶತಮಾನಗಳ ಹಿಂದೆ ಪೈಗಂಬರ್ (ಸ.)ರು ರಚಿಸಿದ ಸೂತ್ರ. ಮಾನವ ಇತಿಹಾಸದ ಅತ್ಯಂತ ದೊಡ್ಡ ದಯಾಮಯಿ ನಮಗೆ ದಯಪಾಲಿಸಿದ ಸೂತ್ರ.. ಅದರಲ್ಲಿ ಅಚಲವಾದ ನಂಬಿಕೆಯಿಡಿ.. ದಯವಿಟ್ಟು ದೇಶ ತೊರೆಯುವ ಯೋಚನೆ ಯಾರೂ ಮಾಡದಿರಿ.."
ಹಿಂದೂ-ಮುಸ್ಲಿಂ ಐಕ್ಯದ ಪರಮ ಪ್ರತಿಪಾದಕರಾಗಿದ್ದ ಮೌಲಾನಾ 1911ರಲ್ಲಿ ಮಾಡಿದ ಭಾಷಣವೊಂದರಲ್ಲಿ ಹೀಗಂದಿದ್ದರು " ಭಾರತ ದೇಶಕ್ಕೆ ಸ್ವರಾಜ್ಯ ನೀಡಲು ಹಿಂದೂ-ಮುಸ್ಲಿಂ ಐಕ್ಯ ಮುರಿಯಬೇಕೆಂದರೆ ನಾನು ಅಂತಹ ಸ್ವರಾಜ್ಯ ಬಯಸಲಾರೆ. ಈ ನೆಲದಲ್ಲಿ ಎಲ್ಲಕ್ಕಿಂತಲೂ ಹಿಂದೂ- ಮುಸ್ಲಿಂ ಐಕ್ಯ ಬಹು ಅಗತ್ಯವಾದುದು. ಸ್ವರಾಜ್ಯ ಹೋರಾಟದಲ್ಲಿ ನಾನು ನಿಧನನಾದರೆ ಅದರಿಂದ ಭಾರತಕ್ಕೆ ಮಾತ್ರ ನಷ್ಟ. ಹಿಂದೂ-ಮುಸ್ಲಿಂ ಸೌಹಾರ್ದ ನಷ್ಟವಾದರೆ ಅದರಿಂದ ಮನುಷ್ಯ ಕುಲಕ್ಕೆ ನಷ್ಟ" ಎಂದಿದ್ದರು.
ಮೌಲಾನಾ ಬಹುಭಾಷಾ ಪ್ರವೀಣರೂ, ಪ್ರಖಾಂಡ ಕುರ್‌ಆನ್ ವಿದ್ವಾಂಸರೂ ಆಗಿದ್ದರು. ಪತ್ರಕರ್ತರಾಗಿದ್ದ ಅವರ ಪತ್ರಿಕಾ ಬದುಕಿನ ಕುರಿತಾಗಿ ನನ್ನ ಓದು ಮತ್ತು ಅರಿವಿನ ಮಿತಿಯಲ್ಲಿ ಸಂಕ್ಷಿಪ್ತವಾಗಿ ಬರೆಯಬೇಕೆಂದರೂ ಪ್ರತ್ಯೇಕವಾದ ಒಂದು ಸುದೀರ್ಘ ಲೇಖನವನ್ನೇ ಬರೆಯಬೇಕಾಗುತ್ತದೆ.
ಶ್ರೇಷ್ಠ ಶಿಕ್ಷಣ ತಜ್ಞರಾಗಿದ್ದ ಮೌಲಾನಾ ಮೊದ ಮೊದಲು ಅಧಿಕಾರ ರಾಜಕೀಯದಿಂದ ಅಂತರ ಕಾಪಾಡಿಕೊಂಡಿದ್ದರು.1946ರಲ್ಲಿ ಸ್ವಾತಂತ್ರ್ಯ ಪೂರ್ವ ಸರಕಾರದಲ್ಲಿ ಸೇರಿಕೊಳ್ಳುವಂತೆ ಗಾಂಧೀಜಿ ಒತ್ತಾಯಿಸಿದರೂ ಮೌಲಾನಾ ನಯವಾಗಿ ನಿರಾಕರಿಸುತ್ತಲೇ ಬಂದರು. ಮುಸ್ಲಿಂ ಪ್ರತಿನಿಧಿಯ ಅಗತ್ಯ ಬಿದ್ದಾಗ ಗಾಂಧೀಜಿಯ ಒತ್ತಡ ಹೆಚ್ಚಾಯಿತು. ಆಗ ಅವರು ಆಸಫ್ ಅಲಿಯವರ ಹೆಸರನ್ನು ಸೂಚಿಸಿದರು.1947ರಲ್ಲಿ ಬಾಬು ರಾಜೇಂದ್ರ ಪ್ರಸಾದರನ್ನು ಸಂವಿಧಾನಸಭೆಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದ್ದರಿಂದ ಅವರಿಂದ ತೆರವಾದ ಸ್ಥಾನಕ್ಕೆ ಮೌಲಾನಾ ಸೇರುವುದು ಅನಿವಾರ್ಯವಾಯಿತು. ಸ್ವಾತಂತ್ರ್ಯ ಸಿಕ್ಕಾಗ ಸ್ಥಾಪನೆಯಾದ ಹೊಸ ಸರಕಾರದಲ್ಲಿ ರಾಜಗೋಪಾಲಾಚಾರಿಯವರಿಂದ ತೆರವಾದ ಶಿಕ್ಷಣ ಸಚಿವ ಹುದ್ದೆಗೆ ಮೌಲಾನಾ ಸರ್ವಾನುಮತದ ಆಯ್ಕೆಯಾಗಿದ್ದರು. ಅವರಲ್ಲಿದ್ದ ವಿದ್ವತ್ತು, ವೈಚಾರಿಕತೆ, ದೂರದೃಷ್ಟಿಯ ಕಾರಣಕ್ಕಾಗಿ ನೆಹರೂ ಅವರನ್ನು ಶಿಕ್ಷಣ ಸಚಿವರನ್ನಾಗಿ ಆಯ್ಕೆ ಮಾಡಿದರು. 1947ರಿಂದ 1958ರವರೆಗೆ ಅಂದರೆ ಮರಣದವರೆಗೂ ಅವರು ಶಿಕ್ಷಣ ಸಚಿವರಾಗಿದ್ದರು. ಭಾರತದ ಆಧುನಿಕ ಶಿಕ್ಷಣ ವ್ಯವಸ್ಥೆಗೆ ಭದ್ರ ಬುನಾದಿ ಹಾಕಿದವರು ಮೌಲಾನಾ. ವಿಶ್ವವಿದ್ಯಾನಿಲಯ ಅನುದಾನ ಆಯೋಗ ವನ್ನು ರಚಿಸಿದವರು ಮೌಲಾನಾ. ಆದರೆ ಇಂದು ಹೆಚ್ಚಿನ ಯಾವ ವಿಶ್ವವಿದ್ಯಾನಿಲಯಗಳೂ ಅವರನ್ನು ಸ್ಮರಿಸುವ ಕೆಲಸ ಮಾಡದಿರುವುದು ದುರದೃಷ್ಟಕರ.
ಸೆಕೆಂಡರಿ ಎಜುಕೇಶನ್ ಕಮಿಷನನ್ನು ಮೌಲಾನಾರೇ ಸ್ಥಾಪಿಸಿದ್ದರು.
1951ರ ಅಗಸ್ಟ್ 18ರಂದು ಇಂದಿನ ಖರಗ್‌ಪುರ್ ಇನ್ ಸ್ಟಿಟ್ಯೂಟನ್ನು ಉದ್ಘಾಟಿಸಿ ಮಾಡಿದ ಭಾಷಣದಲ್ಲಿ "ನಮ್ಮ ಯುವಕರು ತಾಂತ್ರಿಕ ಶಿಕ್ಷಣ ಪಡೆಯಲು ಹೊರದೇಶಕ್ಕೆ ಹೋಗುವುದನ್ನು ತಡೆಗಟ್ಟಲು ನಮ್ಮ ತಾಂತ್ರಿಕ ಶಿಕ್ಷಣದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟವನ್ನು ತರಬೇಕು. ಹೊರದೇಶಗಳಿಂದ ನಮ್ಮಲ್ಲಿಗೆ ತಾಂತ್ರಿಕ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳು ಬರುವಂತಾಗಬೇಕು" ಎಂದು ಹೇಳಿದ್ದರು.
1948ರಲ್ಲಿ ಶಾಂತಿ ಸ್ವರೂಪ್ ಭಟ್ನಾಗರ್ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸಿದರು. ಆ ಸಮಿತಿಯ ಮೂಲ ಉದ್ದೇಶ ವಿಜ್ಞಾನದ ಯಾವುದೇ ಶಾಖೆಯಲ್ಲಿ ಸಂಶೋಧನೆ ನಡೆಸುವ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಅನುಕೂಲಗಳನ್ನು ಮಾಡಿಕೊಡುವ ಮೂಲಕ ಸಂಶೋಧನೆಗಳನ್ನು ಪ್ರೋತ್ಸಾಹಿಸುವುದಾಗಿತ್ತು. ಶೈಕ್ಷಣಿಕ ಸಮಸ್ಯೆಗಳ ಪರಿಹಾರವು ಕೇಂದ್ರ ಮತ್ತು ರಾಜ್ಯ ಸರಕಾರಗಳ ಪರಸ್ಪರ ಸಹಕಾರವಿಲ್ಲದೇ ಅಸಾಧ್ಯ ಎಂದು ಅವರು ಕಂಡುಕೊಂಡಿದ್ದರು. ರಾಜ್ಯಗಳಲ್ಲಿ ಶಿಕ್ಷಣ ಆಯಾ ರಾಜ್ಯಗಳ ಹೊಣೆಯಾಗಿರುತ್ತದೆ, ಆದರೆ ಕೇಂದ್ರದ ಸಹಾಯ ರಾಜ್ಯಕ್ಕೆ ಅವಶ್ಯವಾಗಿರುತ್ತದೆ ಎನ್ನುವುದು ಮೌಲಾನಾರ ಬಲವಾದ ಅಭಿಪ್ರಾಯವಾಗಿತ್ತು.
ಮೌಲಾನಾ ಮೊದಲ ಬಜೆಟ್‌ನಲ್ಲಿ ಶಿಕ್ಷಣಕ್ಕಾಗಿ ಎರಡು ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದ್ದರು. ನಂತರ ಅದನ್ನು ಮೂವತ್ತು ಕೋಟಿಗಳಿಗೆ ಏರಿಸಿದ್ದರು. ಪಂಚ ವಾರ್ಷಿಕ ಯೋಜನೆಗಳಲ್ಲಿ ಉತ್ಪಾದನೆಗೆ ಮಹತ್ವ ನೀಡಿದಷ್ಟೇ ದೇಶದ ಯುವಜನತೆಯ ಶಿಕ್ಷಣಕ್ಕೂ ಮಹತ್ವ ನೀಡಬೇಕೆಂಬುವುದು ಮೌಲಾನಾರ ವಾದವಾಗಿತ್ತು. ಶಿಕ್ಷಣದಲ್ಲಿ ಪ್ರಗತಿ ಸಾಧಿಸದಿದ್ದರೆ ಬೇರೆ ಯಾವ ಕ್ಷೇತ್ರದಲ್ಲೂ ಪ್ರಗತಿ ಸಾಧ್ಯವಿಲ್ಲ ಎಂದು ಅವರು ಹೇಳುತ್ತಿದ್ದರು.
ಅಧ್ಯಾಪಕರ ಕಲ್ಯಾಣವಾಗದೇ ಶಿಕ್ಷಣದ ಅಭಿವೃದ್ಧಿ ಸಾಧ್ಯವಾಗದು ಎಂದು ವಾದಿಸುತ್ತಿದ್ದ ಮೌಲಾನಾ ಆ ಕಾಲದಲ್ಲಿ ಅತ್ಯಂತ ಚಿಕ್ಕಮಟ್ಟಕ್ಕಿದ್ದ ವೇತನವನ್ನು ಒಳ್ಳೆಯ ಮಟ್ಟಕ್ಕೇರಿಸಿದರು.
ಮೌಲಾನಾರು ಸಂಗೀತ ಪ್ರೇಮಿಯಾಗಿದ್ದರು. ಲಲಿತ ಕಲಾ ಅಕಾಡಮಿ, ಸಂಗೀತ ನಾಟಕ ಅಕಾಡಮಿ ಇವೆಲ್ಲವೂ ಮೌಲಾನಾರ ಕೊಡುಗೆಯೆನ್ನುವುದು ಈ ತಲೆಮಾರಿನ ಹೆಚ್ಚಿನವರಿಗೆ ತಿಳಿದಿರಲಾರದು.
ನವೆಂಬರ್ 11 ಮೌಲಾನಾರ ಹುಟ್ಟಿದ ದಿನ. ಈ ದಿನವನ್ನು ರಾಷ್ಟ್ರೀಯ ಶಿಕ್ಷಣ ದಿನವೆಂದು ಆಚರಿಸಲಾಗುತ್ತದೆ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವಾದ ಸೆಪ್ಟಂಬರ್ ಐದನ್ನು ಶಿಕ್ಷಕರ ದಿನವನ್ನಾಗಿ ಭಾರತದಾದ್ಯಂತ ಪ್ರತಿ ವರ್ಷ ತಪ್ಪದೇ ಆಚರಿಸಲಾಗುತ್ತದೆ. ಆದರೆ ಸ್ವತಂತ್ರ ಭಾರತದ ಮೊದಲ ಶಿಕ್ಷಣ ಸಚಿವ, ಭಾರತದ ಆಧುನಿಕ ಶಿಕ್ಷಣ ವ್ಯವಸ್ಥೆಗೆ ಭದ್ರ ಬುನಾದಿ ಹಾಕಿದ ಮೌಲಾನಾ ಅಬುಲ್ ಕಲಾಂ ಆಝಾದರು ಹುಟ್ಟಿದ ದಿನದ ಬಗ್ಗೆ ದಿವ್ಯ ನಿರ್ಲಕ್ಷ್ಯ ತಾಳಲಾಗುತ್ತಿರುವುದು ದುರದೃಷ್ಟಕರ.