ಬಿಹಾರ: ಸರಕಾರ ರಚನೆಯ ವಿಶ್ವಾಸ ಕಳೆದುಕೊಳ್ಳದ ಆರ್‌ಜೆಡಿ, ಸಣ್ಣಪುಟ್ಟ ಪಕ್ಷಗಳೊಂದಿಗೆ ಸಂಪರ್ಕ

Update: 2020-11-12 08:06 GMT

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಒಟ್ಟು 125 ಸ್ಥಾನಗಳನ್ನು ಗೆದ್ದುಕೊಂಡು ಸ್ಪಷ್ಟಬಹುಮತ ಪಡೆದಿದೆ. ಮತ್ತೊಂದೆಡೆ ಆರ್‌ಜೆಡಿ ನೇತೃತ್ವದ ಮಹಾಘಟಬಂಧನವು ಸರಕಾರ ರಚನೆಯ ವಿಶ್ವಾಸವನ್ನು ಕಳೆದುಕೊಳ್ಳದೇ ಇದೀಗ ಎನ್‌ಡಿಎ ಪಾಳಯದಲ್ಲಿರುವ ತನ್ನ ಮಾಜಿ ಮೈತ್ರಿಕೂಟ ಪಕ್ಷಗಳೊಂದಿಗೆ ಸಂಪರ್ಕದಲ್ಲಿದೆ ಎಂದು 'ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿದೆ.
ಆರ್‌ಜೆಡಿ ಒಟ್ಟು 110 ಸ್ಥಾನಗಳನ್ನು ಗೆದ್ದುಕೊಂಡಿದ್ದು, ಅಸೆಂಬ್ಲಿಯಲ್ಲಿ ಸರಳ ಬಹುಮತಕ್ಕೆ ಇನ್ನೂ 12 ಸೀಟುಗಳ ಅಗತ್ಯವಿದೆ. ಎಐಎಂಐಎಂ(ಐದು ಸೀಟುಗಳು), ಮಾಜಿ ಸಿಎಂ ಜಿತನ್ ರಾಮ್ ಮಂಜಿ ಅವರ ಹಿಂದೂಸ್ತಾನಿ ಅವಾಮ್ ಮೋರ್ಚಾ(ಜಾತ್ಯತೀತ) ಹಾಗೂ ಮುಕೇಶ್ ಸಹಾನಿ ನೇತೃತ್ವದ ವಿಕಾಸಶೀಲ ಇನ್ಸಾನ್ ಪಾರ್ಟಿ(ವಿಐಪಿ)ಪಕ್ಷಗಳೊಂದಿಗೆ ಆರ್‌ಜೆಡಿ ಸಂಪರ್ಕದಲ್ಲಿದೆ. ಸಹಾನಿ ಸ್ವತಃ ಸೋಲುಂಡಿದ್ದರೂ ವಿಐಪಿ ಪಕ್ಷ ಹಾಗೂ ಎಚ್‌ಎಎಂ(ಎಸ್)ಪಕ್ಷ ತಲಾ ನಾಲ್ಕು ಸೀಟುಗಳನ್ನು ಗೆದ್ದಿವೆ. ಈ ಎರಡು ಪಕ್ಷಗಳು ಈ ಹಿಂದೆ ಮಹಾಘಟಬಂಧನದಲ್ಲಿದ್ದವು. ಚುನಾವಣೆಗೆ ಮೊದಲು ಎನ್‌ಡಿಎಗೆ ಸೇರಿದ್ದವು.
ಸರಕಾರ ರಚನೆಯ ಪ್ರಯತ್ನ ನಡೆಸುವುದರಲ್ಲಿ ಹಾನಿ ಏನಿದೆ?ಒಂದು ವೇಳೆ ವಿಐಪಿ ಹಾಗೂ ಎಚ್‌ಎಎಂ(ಎಸ್)ನಮ್ಮಂದಿಗೆ ಕೈಜೋಡಿಸಿದರೆ ಎನ್‌ಡಿಎಗಿಂತ ನಾವು ಉತ್ತಮ ಸ್ಥಾನಮಾನ ನೀಡುತ್ತೇವೆ. ಎಐಎಂಐಎಂ ಯಾವುದೇ ಸಂದರ್ಭದಲ್ಲಿ ನಮಗೆ ಬೆಂಬಲಿಸಲು ಸಿದ್ಧವಿದೆ ಎಂದು ಆರ್‌ಜೆಡಿ ತಿಳಿಸಿದೆ.
ಆದಾಗ್ಯೂ ಯಾವ ಪಕ್ಷಗಳು ಈ ತನಕ ಸಕಾರಾತ್ಮಕ ಪ್ರತಿಕ್ರಿಯೆ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ. ನಮ್ಮ ಬಾಗಿಲು ಸದಾ ತೆರೆದಿರುತ್ತದೆ. ಮುಕೇಶ್ ಸಹಾನಿಯವರನ್ನು ನಾವು ಉಪಮುಖ್ಯಮಂತ್ರಿಮಾಡಲು ಸಿದ್ಧವಿದ್ದೇವೆ ಎಂದು ಆರ್‌ಜೆಡಿ ಹೇಳಿದೆ. ಆರ್‌ಜೆಡಿಯ ಆಫರ್‌ನ್ನು ವಿಐಪಿ ಪಕ್ಷ ಖಚಿತಪಡಿಸಿದೆ. ಆದರೆ ತಾನು ಎನ್‌ಡಿಎಯೊಂದಿಗೆ ನಿಷ್ಠೆ ಬದಲಾಯಿಸುವುದಿಲ್ಲ ಎಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News