ಉತ್ತರಾಖಂಡ: ಬಿಜೆಪಿ ಶಾಸಕನ ವಿರುದ್ಧದ ಅತ್ಯಾಚಾರ ಪ್ರಕರಣ ಡೆಹ್ರಾಡೂನ್‌ನಿಂದ ಪೌಡಿ ಜಿಲ್ಲೆಗೆ ವರ್ಗಾವಣೆ

Update: 2020-11-18 15:49 GMT

ಡೆಹ್ರಾಡೂನ್,ನ.18: ಅಲ್ಮೋರಾ ಜಿಲ್ಲೆಯ ದ್ವಾರಾಹಾಟ್‌ನ ಬಿಜೆಪಿ ಶಾಸಕ ಮಹೇಶ ನೇಗಿ ವಿರುದ್ಧದ ಅತ್ಯಾಚಾರ ಪ್ರಕರಣದ ತನಿಖೆಯನ್ನು ಡೆಹ್ರಾಡೂನ್‌ನಿಂದ ಪೌಡಿ ಜಿಲ್ಲೆಗೆ ವರ್ಗಾಯಿಸಲಾಗಿದ್ದು,ನ್ಯಾಯಪರತೆ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸುವುದು ಈ ಕ್ರಮದ ಉದ್ದೇಶವಾಗಿದೆ ಎಂದು ಗಡ್ವಾಲ್ ವಲಯದ ಐಜಿಪಿ ಅಭಿನವ ಕುಮಾರ್ ಅವರು ಬುಧವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ನೇಗಿ ವಿರುದ್ಧ ಅತ್ಯಾಚಾರದ ಆರೋಪವನ್ನು ಮಾಡಿರುವ ಮಹಿಳೆಯ ವಿರುದ್ಧ ಬ್ಲಾಕ್‌ಮೇಲ್ ಆರೋಪಗಳ ತನಿಖೆಯನ್ನೂ ಪೌಡಿಗೆ ವರ್ಗಾಯಿಸಲಾಗಿದೆ ಎಂದರು.

ಮಹಿಳೆಯ ಕೋರಿಕೆ ಮತ್ತು ವಿಷಯದ ಸೂಕ್ಷ್ಮತೆಯ ಹಿನ್ನೆಲೆಯಲ್ಲಿ ಡೆಹ್ರಾಡೂನ್ ಎಸ್‌ಎಸ್‌ಪಿಯವರ ಶಿಫಾರಸಿನ ಮೇರೆಗೆ ಪ್ರಕರಣಗಳನ್ನು ವರ್ಗಾಯಿಸಲಾಗಿದೆ ಎಂದರು. ಕಳೆದ ಸೆಪ್ಟಂಬರ್‌ನಲ್ಲಿ ನೇಗಿ ವಿರುದ್ಧ ಅತ್ಯಾಚಾರದ ದೂರನ್ನು ಸಲ್ಲಿಸಿದ್ದ ಮಹಿಳೆ,ಅವರು ತನಗೆ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿದ್ದಾಳೆ. ಶಾಸಕ ತನ್ನ ಮಗುವಿನ ತಂದೆಯಾಗಿದ್ದಾರೆ ಎಂದು ತಿಳಿಸಿರುವ ಆಕೆ ಡಿಎನ್‌ಎ ಪರೀಕ್ಷೆಗೆ ಆಗ್ರಹಿಸಿದ್ದಾಳೆ.

 ಮಹಿಳೆಯ ವಿರುದ್ಧ ದೂರು ಸಲ್ಲಿಸಿದ್ದ ಶಾಸಕರ ಪತ್ನಿ ರೀಟಾ ನೇಗಿ,ಪ್ರಕರಣವನ್ನು ಮುಚ್ಚಿಹಾಕಲು ಮಹಿಳೆ ತನ್ನ ಪತಿಯಿಂದ ಐದು ಕೋ.ರೂ.ಗಳನ್ನು ಕೇಳಿದ್ದಳು ಎಂದು ಆರೋಪಿಸಿದ್ದಾರೆ.

ಈವರೆಗೆ ಡೆಹ್ರಾಡೂನ್‌ನ ನೆಹರು ಕಾಲನಿ ಪೊಲೀಸರು ಎರಡೂ ಪ್ರಕರಣಗಳ ತನಿಖೆ ನಡೆಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News