ಕರಾಚಿ ಬೇಕರಿ ಹೆಸರು ಬದಲಿಸುವ ಬೇಡಿಕೆ ಪಕ್ಷದ ಅಧಿಕೃತ ನಿಲುವಲ್ಲ: ಶಿವಸೇನೆ

Update: 2020-11-19 17:00 GMT

ಹೊಸದಿಲ್ಲಿ: ಕರಾಚಿ ಬೇಕರಿ ಹೆಸರನ್ನು ಬದಲಿಸುವ ಬೇಡಿಕೆಯು ಪಕ್ಷದ ಅಧಿಕೃತ ನಿಲುವಲ್ಲ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಗುರುವಾರ ಟ್ವೀಟಿಸಿದ್ದಾರೆ.

ಶಿವಸೇನೆಯ ನಾಯಕ ನಿತಿನ್ ನಂದಗಾಂವ್ಕರ್ ಬಾಂದ್ರಾ ಪಶ್ಚಿಮದಲ್ಲಿರುವ ಕರಾಚಿ ಸ್ವೀಟ್ಸ್ ಅಂಗಡಿಯ ಮಾಲಕನಿಗೆ ಅಂಗಡಿಯ ಹೆಸರು ಬದಲಿಸುವಂತೆ ಹೇಳುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ ಕೆಲವೇ ಘಂಟೆಗಳಲ್ಲಿ ರಾವತ್ ಸ್ಪಷ್ಟನೆ ನೀಡಿದ್ದಾರೆ.

ಕರಾಚಿ ಬೇಕರಿ ಹಾಗೂ ಕರಾಚಿ ಸ್ವೀಟ್ಸ್ ಗೆ ಬೆಂಬಲ ವ್ಯಕ್ತಪಡಿಸಿರುವ ರಾವತ್, "ಈ ಬೇಕರಿಯು ಕಳೆದ 60 ವರ್ಷಗಳಿಂದ ಮುಂಬೈನಲ್ಲಿದೆ. ಈ ಬೇಕರಿಗೂ ಪಾಕಿಸ್ತಾನಕ್ಕೂ ಯಾವ ಸಂಬಂಧವೂ ಇಲ್ಲ. ಈಗ ಬೇಕರಿಯ ಹೆಸರನ್ನು ಬದಲಿಸುವಂತೆ ಹೇಳುವುದು ಮೂರ್ಖತನವಾಗುತ್ತದೆ'' ಎಂದು ರಾವತ್ ಟ್ವೀಟಿಸಿದರು.

ನೀವು ಇದನ್ನು ಮಾಡಲೇಬೇಕು. ನಿಮಗೆ ನಾವು ಸಮಯ ನೀಡುತ್ತೇವೆ. ಕರಾಚಿಯ ಹೆಸರು ಬದಲಿಸಿ ಮರಾಠಿಯಲ್ಲಿ ಏನಾದರೂ ಹೆಸರಿಡಿ ಎಂದು ನಿತಿನ್,  ಬೇಕರಿಯ ಮಾಲಕರಿಗೆ ಹೇಳುತ್ತಿರುವ ವೀಡಿಯೊ ವೈರಲ್ ಆಗಿದೆ. ಶಿವಸೇನೆಯ ನಾಯಕನ ಎಚ್ಚರಿಕೆಯ ಬಳಿಕ ಬೇಕರಿಯ 'ಕರಾಚಿ' ಹೆಸರನ್ನು ದಿನಪತ್ರಿಕೆಗಳಿಂದ ಮರೆ ಮಾಡಲಾಗಿದೆ.

ದೇಶ ವಿಭಜನೆಯಾದ ಸಂದರ್ಭದಲ್ಲಿ ಪಾಕಿಸ್ತಾನದಿಂದ ವಲಸೆ ಬಂದಿದ್ದ ಸಿಂಧಿ ಸಮುದಾಯದ ಶ್ರೀ ಖಾನ್ ಚಂದ್ ರಾಮ್ ನಾನಿ ಹೈದರಾಬಾದ್ ನಲ್ಲಿ ಕರಾಚಿ ಬೇಕರಿ ಆರಂಭಿಸಿದ್ದರು. ಈ ಬೇಕರಿಯು ಈಗ ದಿಲ್ಲಿ, ಬೆಂಗಳೂರು, ಚೆನ್ನೈ, ಹೈದರಾಬಾದ್ ಹಾಗೂ ಮುಂಬೈ ಸಹಿತ 5 ನಗರಗಳಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News