ಆ್ಯಕ್ಟ್-1978: ಭ್ರಷ್ಟರ ವಿರುದ್ಧದ 'ಗೀತೋಪದೇಶ'

Update: 2020-11-21 19:30 GMT

ಹೊಟ್ಟೆಯ ಬಳಿ ಬಾಂಬ್ ಅಡಗಿಸಿಟ್ಟುಕೊಂಡ ಹೆಂಗಸೊಬ್ಬಳು ಸರಕಾರಿ ಕಚೇರಿಯ ಮೇಲೆ ದಾಳಿ ನಡೆಸುವ ಸನ್ನಿವೇಶವನ್ನು ನಾವೆಲ್ಲ ಈಗಾಗಲೇ 'ಆ್ಯಕ್ಟ್-1978' ಟ್ರೇಲರಲ್ಲಿ ನೋಡಿರುತ್ತೇವೆ. ಆದರೆ ಆ ಸಂದರ್ಭ ಆಕೆಗೆ ಯಾಕೆ ಬಂತು ಎನ್ನುವುದನ್ನು ಚಿತ್ರ ತಿಳಿಸುತ್ತದೆ. ಮಾತ್ರವಲ್ಲ, ತಂದೆ ಮತ್ತು ಪತಿಯನ್ನು ಅಪಘಾತಗಳಲ್ಲಿ ಕಳೆದುಕೊಂಡಿರುವ ಗರ್ಭಿಣಿ ಮಹಿಳೆಯ ಬಗ್ಗೆ ಕನಿಕರ ತೋರಿಸದ ವ್ಯವಸ್ಥೆ ಎಷ್ಟು ಕೆಟ್ಟದಾಗಿದೆ ಎನ್ನುವುದನ್ನು ಚಿತ್ರವು ಬಿಡಿಸಿಡುತ್ತಾ ಹೋಗುತ್ತದೆ.

ಚಿತ್ರದ ಶೀರ್ಷಿಕೆಯೇ ಹೇಳುವಂತೆ ಇದು ಒಂದು ಕಾಯ್ದೆಯ ಪರಿಣಾಮದ ಬಗ್ಗೆ ಹೇಳುವ ಚಿತ್ರ. ಸರಕಾರಿ ನೌಕರರು ಅದೆಷ್ಟೇ ಭ್ರಷ್ಟರಾಗಿದ್ದರೂ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದು ಎಷ್ಟು ಕಷ್ಟ ಎನ್ನುವುದನ್ನು ನಿಯಮಾವಳಿಗಳ ವಿವರದೊಂದಿಗೆ ನಮ್ಮ ಮುಂದಿಡುತ್ತದೆ ಚಿತ್ರ. ಹಾಗಂತ ಎಲ್ಲಿಯೂ ಇದು ಒಂದು ಪ್ರಕರಣದ ತನಿಖೆಯಂತೆ ಭಾಸವಾಗುವುದಿಲ್ಲ. ಬದಲಾಗಿ ಅಧಿಕಾರಿ ವರ್ಗದ ಸಣ್ಣದೊಂದು ನಿರ್ಲಕ್ಷ ಬಡವರ ಪ್ರಾಣಕ್ಕೆ ಅಪಾಯ ತರುವಂತಿರುವುದನ್ನು ಮನತಟ್ಟುವಂತೆ ಹೇಳಲಾಗಿದೆ. ಚಿತ್ರದಲ್ಲಿ ಯಜ್ಞಾ ಶೆಟ್ಟಿ ನಿರ್ವಹಿಸಿರುವ ಪಾತ್ರದ ಹೆಸರು ಗೀತಾ. ಆಕೆ ಬಡವರ ಮನೆಯ ಹೆಣ್ಣು ಮಗಳು. ಆಕೆಯ ತಂದೆ ರಾಜಣ್ಣ ತೆಂಗಿನ ಮರದಿಂದ ಬಿದ್ದು ಸಾವು ಕಂಡಂತಹ ರೈತ. ಗಂಡ ಕೂಡ ಅಪಘಾತದಲ್ಲಿ ತೀರಿಕೊಂಡಿದ್ದಾನೆ. ಗರ್ಭಿಣಿ ಗೀತಾ ಸಿಗಬೇಕಾದ ಪರಿಹಾರಕ್ಕಾಗಿ ಸರಕಾರಿ ಕಚೇರಿ ಅಲೆಯಲು ಶುರು ಮಾಡಿದ್ದಾಳೆ. ಎಲ್ಲ ದಾಖಲೆಗಳು ಸರಿಯಾಗಿಯೇ ಇದ್ದರೂ ಸರಕಾರದ ಪರಿಹಾರ ಆಕೆಯ ಕೈಗೆ ಸೇರುವುದೇ ಇಲ್ಲ. ತುಂಬಿದ ಬಸುರಿ ಒಂದು ಪ್ರತೀಕಾರದ ತೀರ್ಮಾನ ತೆಗೆದುಕೊಳ್ಳುತ್ತಾಳೆ. ಆಕೆಗೆ ಕೈ ಜೋಡಿಸುವ ತಾತನಾಗಿ ಬಿ. ಸುರೇಶ್ ನಟಿಸಿದ್ದಾರೆ. ಆಕೆಯ ಪ್ರತಿಕಾರ ಏನು? ಕೊನೆಗೂ ಆಕೆಗೆ ನ್ಯಾಯ ಸಿಗುತ್ತಾ ಎನ್ನುವುದನ್ನು ಚಿತ್ರ ಮಂದಿರದಲ್ಲೇ ನೋಡಿದರೆ ಚಂದ. ಯಾಕೆಂದರೆ ಇದೊಂದು ಜನಪರ ಕಾಳಜಿಯ ಚಿತ್ರ ಮಾತ್ರವಲ್ಲ, ಸಸ್ಪೆನ್ಸ್ ಥ್ರಿಲ್ಲರ್ ಕತೆಯನ್ನು ಹೊಂದಿರುವ ಸಿನೆಮಾ ಕೂಡ ಹೌದು.

ಮನದೊಳಗೆ ಪ್ರತೀಕಾರ ಇದ್ದರೂ ನಿರ್ಲಿಪ್ತವಾಗಿ ಮಾತನಾಡುವ ಯಜ್ಞಾ ಶೆಟ್ಟಿಯವರ ಶೈಲಿ, ಅದೇ ಹೆಣ್ಣು ಸಿನೆಮಾದ ಮಧ್ಯಂತರದ ಬಳಿಕದ ದೃಶ್ಯಗಳಲ್ಲಿ ಹೆರಿಗೆಯ ನೋವು ಕಾಡುವಾಗ ವರ್ತಿಸುವ ರೀತಿ, ಹೊಟ್ಟೆಯೊಳಗಿರುವ ಮಗುವಿನ ಬಗೆಗಿನ ಅಕ್ಕರೆ ಎಲ್ಲವನ್ನೂ ವ್ಯಕ್ತಪಡಿಸಿರುವ ಶೈಲಿಯನ್ನು ವರ್ಣಿಸಲು ಪದಗಳಿಲ್ಲ. ತುಂಬಿದ ಬಸುರಿ ಎತ್ತಿಡುವ ಒಂದೊಂದು ಹೆಜ್ಜೆಯಲ್ಲೂ ಎಷ್ಟೊಂದು ಕಷ್ಟ ಇದೆ ಎನ್ನುವುದು ಪ್ರೇಕ್ಷಕರ ಮನದೊಳಗೆ ದಾಟಿಸಿ ಬಿಡುವಂತಹ ನಟನೆ ಅವರದ್ದು. ಯಜ್ಞಾ ಶೆಟ್ಟಿಯ ಫ್ಲ್ಯಾಶ್‌ಬ್ಯಾಕ್ ಕತೆಯಲ್ಲಿ ಅವರ ಕಾಲೇಜು ದಿನಗಳ ಪಾತ್ರದಲ್ಲಿ ಕಾಣಿಸಿಕೊಂಡಿರುವ ವಿನ್ಯಾ ಶೆಟ್ಟಿ ಕೂಡ ನಿಜಕ್ಕೂ ಯಜ್ಞಾರಂತೆ ಕಾಣುವ ಉತ್ತಮ ಆಯ್ಕೆ. ತಾತನ ಪಾತ್ರದಲ್ಲಿರುವ ಭಯೋತ್ಪಾದಕನಾಗಿ ಚಿತ್ರ ಪೂರ್ತಿ ಸಂಭಾಷಣೆಯೇ ಇರದಿದ್ದರೂ ಸೋಡಾಬುಡ್ಡಿ ಕನ್ನಡಕದ ಕಣ್ಣೋಟದಲ್ಲೇ ನೂರು ಮಾತುಗಳನ್ನಾಡಿದ್ದಾರೆ ಬಿ. ಸುರೇಶ್. ಮಧ್ಯಂತರದ ಬಳಿಕ ಅರ್ಧ ಗಂಟೆ ಕಳೆದ ಮೇಲೆ ಎಂಟ್ರಿ ನೀಡುವ ಪಾತ್ರ ಸಂಚಾರಿ ವಿಜಯ್ ಅವರದ್ದು. ಆದರೆ ಎಂಟ್ರಿಯಾದ ಕೆಲವು ನಿಮಿಷಗಳ ಕಾಲ ಅವರದೇ ಮಿಂಚಿನ ಸಂಚಾರ. ನ್ಯಾಶನಲ್ ಸೆಕ್ಯುರಿಟಿ ಗಾರ್ಡ್ ವಿಭಾಗದ ಮುಖ್ಯಸ್ಥನಾಗಿ ವಿಜಯ್ ಪಾತ್ರ ಸೇರಿದಂತೆ ಚಿತ್ರದ ಪ್ರಮುಖ ಪಾತ್ರಗಳ ಎಂಟ್ರಿಗೆ ನೀಡಲಾಗಿರುವ ಹಿನ್ನೆಲೆ ಸಂಗೀತ ಮೂಡಿಸುವ ಪರಿಣಾಮ ಕೂಡ ಅಷ್ಟೇ ಗಮನಾರ್ಹ! ಪುಟ್ಟ ಪಾತ್ರವಾದರೂ ಕೂಡ ಹಿರಿಯ ನಟಿ ಶ್ರುತಿ, ಸಬ್ ಇನ್‌ಸ್ಪೆಕ್ಟರ್ ಆಗಿ ಶೋಭರಾಜ್, ದಳವಾಯಿ ಎನ್ನುವ ಭ್ರಷ್ಟ ಅಧಿಕಾರಿಯಾಗಿ ನಂದಗೋಪಾಲ್ ಮೊದಲಾದವರು ತಮ್ಮ ಸಂಭಾಷಣೆ ಮತ್ತು ಮ್ಯಾನರಿಸಮ್‌ಗಳ ಮೂಲಕ ಮನಸ್ಸಲ್ಲೇ ಉಳಿಯುತ್ತಾರೆ.

ಕಚೇರಿಯೊಳಗೆ ಬಂಧಿಸಲ್ಪಡುವ ಸ್ವೀಪರ್ ಪಾತ್ರಧಾರಿ ಕಿರಣ್ ನಾಯಕ್ ಸೇರಿದಂತೆ ಅಷ್ಟು ಮಂದಿ ನೌಕರರು ಮತ್ತು ಅಚಾನಕ್ಕಾಗಿ ಒಳ ಸೇರಿಕೊಂಡಂತಹ ಔಷಧಿ ಮಾರಾಟಗಾರನ ಪಾತ್ರಕ್ಕೂ ಕೂಡ ನಟನೆಯ ಮೂಲಕ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸುವ ಅವಕಾಶ ಇದೆ. ಹೊರಗೆ ಮೌನ ಹೋರಾಟದಲ್ಲಿ ನಿರತನಾದ ಮಹಾತ್ಮನ ವೇಷಧಾರಿ, ಪಿ.ಸಿ.ಯಾಗಿ ಅಶ್ವಿನ್ ಹಾಸನ್, ಗೀತಾಳ ಪರಿಚಿತನಾಗಿ ಕಾಣಿಸುವ ಸಂಪತ್ ಕುಮಾರ್ ಎಲ್ಲರೂ ಇದೇ ಪಟ್ಟಿಯಲ್ಲಿ ಸೇರುತ್ತಾರೆ. ಆದರೆ ಆರ್‌ಜೆ ನೇತ್ರಾ ಪೊಲೀಸ್ ಅಧಿಕಾರಿಯಂತೆ ಕಾಣಿಸಿಕೊಂಡರೂ, ಅವರ ಮಾತಿನ ಶೈಲಿಯಲ್ಲಿನ ಆರ್‌ಜೆ ಇನ್ನೂ ದೂರ ಹೋದಂತಿಲ್ಲ. ಪೊಲೀಸ್ ಕಮಿಷನರ್ ಶಂಕರನಾರಾಯಣ ಎನ್ನುವ ಪಾತ್ರ ಮಾಡಿರುವ ಬಲ ರಾಜ್ ವಾಡಿ ಸೇರಿದಂತೆ ಸುಧಾ ಬೆಳವಾಡಿ, ಕೃಷ್ಣ ಹೆಬ್ಬಾಳೆ, ಎಸಿಪಿ ರಾಮ್ ಗೋಪಾಲ್ ಆಗಿ ಪ್ರಮೋದ್ ಶೆಟ್ಟಿ ಮೊದಲಾದವರು ಈ ಹಿಂದಿನ ಸಿನೆಮಾಗಳಲ್ಲಿನ ತಮ್ಮ ಪಾತ್ರಗಳಿಗಿಂತ ವಿಭಿನ್ನವಾದ ಕ್ಯಾರೆಕ್ಟರ್ ನಿಭಾಯಿಸಿ ಅದರಲ್ಲಿಯೂ ಗೆದ್ದಿದ್ದಾರೆ. ಅಟೆಂಡರ್ ಪಾತ್ರದಲ್ಲಿ ನಿರ್ದೇಶಕನಾಗಿರುವ ರಾಘು ಶಿವಮೊಗ್ಗ ತಾನು ನಿರ್ದೇಶಕನಷ್ಟೇ ಅಲ್ಲ, ನಟನಾಗಿಯೂ ಗೆಲ್ಲಬಲ್ಲೆ ಎಂದು ತೋರಿಸಿಕೊಟ್ಟಿದ್ದಾರೆ.

ಸುಹಾಸಿನಿ ಎನ್ನುವ ಕ್ಲರ್ಕ್ ಪಾತ್ರದಲ್ಲಿ ಉದ್ವೇಗದಿಂದ ಸಂಭಾಷಣೆ ಹೇಳುವ ರೀತಿಯಲ್ಲೇ ನಟಿ ಶರಣ್ಯ ತಾವು ಎಷ್ಟು ಉತ್ತಮ ನಟಿ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ನ್ಯೂಸ್ ರಿಪೋರ್ಟರ್ ಪಲ್ಲವಿ ಕೂಡ ಮನಗೆಲ್ಲುತ್ತಾರೆ. ಗೃಹಮಂತ್ರಿಯಾಗಿ ಅಚ್ಯುತ್ ಕುಮಾರ್, ಮುಖ್ಯಮಂತ್ರಿಯಾಗಿ ಅವಿನಾಶ್, ಅಡ್ವೊಕೇಟ್ ಜನರಲ್ ವೆಂಕಟಾಚಲಯ್ಯನಾಗಿ ದತ್ತಣ್ಣ ಮೊದಲಾದವರದ್ದು ಎಂದಿನ ಶೈಲಿಯ ಲೀಲಾಜಾಲ ನಟನೆ. ಟಿ.ಕೆ. ದಯಾನಂದ್ ಸಂಭಾಷಣೆಗೆ ವಿಶೇಷ ಚಪ್ಪಾಳೆ ಖಚಿತ. ಅಪ್ಪಟ ಸರಕಾರಿ ಕಚೇರಿಯನ್ನು ಕಣ್ಣೆದುರಿಗೆ ಮೂಡಿಸಿರುವ ಕಲಾನಿರ್ದೇಶನ ಮತ್ತು ಸೀಮಿತ ನೆರಳು ಬೆಳಕಲ್ಲೇ ಕತೆ ಹೇಳುವ ಛಾಯಾಗ್ರಹಣ ನೀವು ಮೆಚ್ಚಲೇಬೇಕು. ಹಾಗಂತ ಈ ಚಿತ್ರದಲ್ಲಿ ಮೈನಸ್ ಕಾಣಿಸಲೇ ಇಲ್ಲ ಎಂದು ಹೇಳುವುದಕ್ಕಾಗುವುದಿಲ್ಲ.

ಚಿತ್ರದ ಟ್ರೇಲರ್ ಬಂದಾಗಲೇ ಬಾಲಿವುಡ್ ಚಿತ್ರ 'ವೆನ್ಸ್‌ಡೇ'ಯ ನೆನಪಾಗಿತ್ತು. ಚಿತ್ರ ನೋಡಿದ ಮೇಲೆಯೂ ಕತೆಯೊಳಗೆ ಅದರದೊಂದು ಸಣ್ಣ ಛಾಯೆ ಇರುವಂತೆ ಭಾಸವಾಗುತ್ತದೆ. ಮಾತ್ರವಲ್ಲ, ಸದನದಲ್ಲಿನ ಚರ್ಚೆ ಅದಕ್ಕೆ ಕೋರ್ಟ್ ಮೂಲಕ ತಡೆಯಾಜ್ಞೆ ತರುವುದು ಇವೆಲ್ಲವನ್ನು ಗಮನಿಸಿದರೆ ಇದು ಬರೀ ಒಂದು ದಿನದ ಕತೇನಾ? ಎನ್ನುವ ಸಂದೇಹ ಮೂಡುವುದು ಸಹಜ. ಬಹುಶಃ ಅದೇ ಕಾರಣಕ್ಕೆ ಸಮಯ ತೋರಿಸೋದನ್ನೇ ನಿರ್ದೇಶಕರು ಜಾಣತನದಿಂದ ಅವಾಯ್ಡೆ ಮಾಡಿದ್ದಾರೆ. ಆದರೆ ಅವಕಾಶ ಇದ್ದರೂ ಎಲ್ಲಿಯೂ ತೀರ ಕಮರ್ಷಿಯಲ್ ರೀತಿಗೆ ಕಟ್ಟು ಬೀಳದ ನಿರ್ದೇಶಕ ಮಂಸೋರೆ ಅವರಿಗೆ ಕನ್ನಡದ ಮಟ್ಟಿಗೆ ಇಂಥದೊಂದು ಸಬ್ಜೆಕ್ಟ್ ಆಯ್ದುಕೊಂಡಿರುವುದಕ್ಕೆ ಮತ್ತು ಅದನ್ನು ಇಷ್ಟು ಚೆನ್ನಾಗಿ ಚಿತ್ರೀಕರಿಸಿರುವುದಕ್ಕೆ ಚಿತ್ರತಂಡಕ್ಕೆ ಅಭಿನಂದನೆ ಹೇಳಲೇಬೇಕು.


ತಾರಾಗಣ: ಯಜ್ಞಾ ಶೆಟ್ಟಿ, ಬಿ. ಸುರೇಶ್, ಸಂಚಾರಿ ವಿಜಯ್ ನಿರ್ದೇಶನ: ಮಂಸೋರೆ
ನಿರ್ಮಾಣ: ಆರ್. ದೇವರಾಜ್

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News