ವಿವಿಧ ಅರಣ್ಯ ಯೋಜನೆಗಳಿಂದ ಅತಂತ್ರರಾಗುವ ಭೀತಿ: ಗ್ರಾಪಂ ಚುನಾವಣಾ ಬಹಿಷ್ಕಾರಕ್ಕೆ ಮುಂದಾದ ಜನತೆ
ಚಿಕ್ಕಮಗಳೂರು, ಡಿ.4: ಪಂಚಾಯತ್ ರಾಜ್ಯ ವ್ಯವಸ್ಥೆಯ ಆಧಾರ ಸ್ಥಂಭವಾಗಿರುವ ಗ್ರಾಮ ಪಂಚಾಯತ್ ಚುನಾವಣೆಗೆ ರಾಜ್ಯ ಚುನಾವಣೆಗೆ ಗ್ರೀನ್ ಸಿಗ್ನಲ್ ನೀಡುತ್ತಿದ್ದಂತೆಯೇ ಜಿಲ್ಲೆಯಲ್ಲಿ ಹಳ್ಳಿ ಫೈಟ್‍ಗೆ ಅಖಾಡ ಸಿದ್ಧವಾಗಿದೆ. ಆದರೆ ಈ ಬಾರಿ ಜಿಲ್ಲೆಯಲ್ಲಿ ನಡೆಯುವ ಗ್ರಾಪಂ ಚುನಾವಣೆಗೆ ಸರಕಾರಗಳು ಮಲೆನಾಡಿನಲ್ಲಿ ಜಾರಿ ಮಾಡಲು ಉದ್ದೇಶಿಸಿರುವ ಅರಣ್ಯ ಯೋಜನೆಗಳೇ ಸವಾಲಾಗಿದ್ದು, ಈ ಯೋಜನೆಗಳಿಂದ ಕಂಗಾಲಾಗಿರುವ ಜನರಿಂದ ಗ್ರಾಪಂ ಚುನಾವಣೆಗಳನ್ನು ಬಹಿಷ್ಕರಿಸುವ ಕೂಗು ಕೇಳಿ ಬರುತ್ತಿವೆ.
ಕೋವಿಡ್-19ನಿಂದಾಗಿ ಜಿಲ್ಲೆಯಲ್ಲಿ ಬಹುತೇಕ ಎಲ್ಲ ರೀತಿಯ ಚಟವಟಿಕೆಗಳಿಗೆ ಗ್ರಹಣ ಬಡಿದಂತಾಗಿತ್ತು. ಆದರೆ ಲಾಕ್ಡೌನ್ ಸಡಿಲಿಕೆ ಬಳಿಕ ಗ್ರಾಮೀಣ ಜನಜೀವನ ಸಹಜ ಸ್ಥಿತಿಯತ್ತ ಮರುಳಿದ್ದು, ರಾಜ್ಯ ಚುನಾವಣಾ ಆಯೋಗ ನೆನೆಗುದಿಗೆ ಬಿದ್ದಿದ್ದ ಗ್ರಾಪಂ ಚುನಾವಣೆಗೆ ದಿನಾಂಕ ಗೊತ್ತು ಮಾಡಿ ಗ್ರೀನ್‍ಸಿಗ್ನಲ್ ನೀಡಿರುವುದರಿಂದ ಜಿಲ್ಲೆಯಲ್ಲಿ ಹಳ್ಳಿ ರಾಜಕೀಯ ರಂಗೇರುವಂತಾಗಿದ್ದು, ಗ್ರಾಪಂ ಚುನಾವಣಾ ಕಣ ರಂಗೇರುತ್ತಿದೆಯಾದರೂ ಜಿಲ್ಲೆಯ ಮಲೆನಾಡು ಭಾಗದಲ್ಲಿ ರಾಜಕೀಯ ಪಕ್ಷಗಳೂ ಸೇರಿದಂತೆ ಸಾರ್ವಜನಿಕರಿಂದ ಚುನಾವಣೆ ಬಹಿಷ್ಕರಿಸುವ ಕೂಗು ಕೇಳಿಬಂದಿರುವುದರಿಂದ ಜನಪ್ರತಿನಿಧಿಗಳು, ಜಿಲ್ಲಾಡಳಿತ ಹಾಗೂ ಸರಕಾರಕ್ಕೆ ಹೊಸ ತಲೆನೋವು ಆರಂಭವಾಗಿದೆ.
ಚಿಕ್ಕಮಗಳೂರು ಜಿಲ್ಲೆ ಬೌಗೋಳಿಕವಾಗಿ ಮಲೆನಾಡು ಹಾಗೂ ಬಯಲುಭಾಗ ಎಂದು ವಿಂಗಡಣೆಗೊಂಡಿರುವ ಜಿಲ್ಲೆಯಾಗಿದೆ. ಜಿಲ್ಲೆಯ ಮಲೆನಾಡು ಭಾಗ ದಟ್ಟ ಅರಣ್ಯ, ಕಾಫಿ, ಅಡಿಕೆ ತೋಟಗಳಿಂದ ಸಮೃದ್ಧಿಯಾಗಿದ್ದರೆ, ಬಯಲು ಭಾಗದ ಕೃಷಿ ಸೂಕ್ತ ನೀರಾವರಿ ಯೋಜನೆಗಳಿಲ್ಲದೇ ಜನರು ಕೃಷಿಯಿಂದ ವಿಮುಖರಾಗುವಂತಾಗಿದೆ. ಮಲೆನಾಡು ಭಾಗದಲ್ಲಿ ಕಾಫಿ, ಅಡಿಕೆ ತೋಟ, ಭತ್ತದ ಕೃಷಿಯಿಂದ ನೆಮ್ಮದಿಯಿಂದ ಜನರ ಪಾಲಿಗೆ ಸರಕಾರಗಳು ಜಾರಿ ಮಾಡಲು ಮುಂದಾಗಿರುವ ಅರಣ್ಯ ಯೋಜನೆಗಳು ತೂಗುಕತ್ತಿಯಾಗಿ ಪರಿಣಮಿಸಿದ್ದು, ಒಂದು ಅರಣ್ಯ ಯೋಜನೆಯ ತೂಗು ಕತ್ತಿಯಿಂದ ಪಾರಾದೆವು ಎಂದು ಮಲೆನಾಡಿನ ಜನತೆ ಅಂದುಕೊಳ್ಳುವಷ್ಟರಲ್ಲಿ ಮತ್ತೊಂದು ಅರಣ್ಯ ಯೋಜನೆಗೆ ತೂಗುಕತ್ತಿ ಮಲೆನಾಡಿಗರ ನಿದ್ದೆಗೆಡಿಸುತ್ತಿದ್ದು, ಈ ಯೋಜನೆಗಳಿಂದ ಬೇಸತ್ತಿರುವ ಜನರು ಇದೀಗ ಗ್ರಾಮ ಪಂಚಾಯತ್ ಚುನಾವಣೆ ಬಹಿಷ್ಕರಿಸಲು ಒಮ್ಮತದಿಂದ ನಿರ್ಣಯ ಕೈಗೊಂಡು ಹಳ್ಳಿಹಳ್ಳಿಗಳಲ್ಲಿ ಚುನಾವಣಾ ಬಹಿಷ್ಕಾರದ ಬ್ಯಾನರ್ ಕಟ್ಟುತ್ತಿದ್ದಾರೆ.
ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಮೊದಲ ಬಾರಿಗೆ ಮಲೆನಾಡಿನ ಜನರ ಸ್ವಚ್ಛಂಧ ಬದುಕನ್ನು ಅತಂತ್ರಗೊಳಿಸಿದ್ದು, ಅಲ್ಲಿಂದ ಇದುವರೆಗೆ ಹತ್ತು ಹಲವು ಅರಣ್ಯ ಯೋಜನೆಗಳು ಮಲೆನಾಡಿನ ಜನರೂ ಸೇರಿದಂತೆ ಕೃಷಿಕರು ಮತ್ತು ಕೃಷಿ ಕಾರ್ಮಿಕರನ್ನು ಅಭದ್ರತೆಯನ್ನು ಸೃಷ್ಟಿಸಿವೆ. ಮಲೆನಾಡಿನಲ್ಲಿರುವ ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆ ಹೆಸರಿನಲ್ಲಿ ನ್ಯಾಯಾಲಯದ ಆದೇಶವನ್ನು ಜಾರಿ ಮಾಡಲು ರಾಜ್ಯ ಹಾಗೂ ಕೇಂದ್ರ ಸರಕಾರಗಳು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ, ಕೊಪ್ಪ, ಶೃಂಗೇರಿ ತಾಲೂಕು ವ್ಯಾಪ್ತಿಯಲ್ಲಿ ಭದ್ರಾ ಹುಲಿಯೋಜನೆಯ ಬಫರ್ ಜೋನ್, ಪರಿಸರ ಸೂಕ್ಷ್ಮ ವಲಯ ಜಾರಿಗೆ ಮುಂದಾಗಿದ್ದರೆ, ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನ ಗಿರಿ ವ್ಯಾಪ್ತಿಯಲ್ಲಿ ಮುಳ್ಳಯ್ಯನ ಗಿರಿ ಸಂರಕ್ಷಿತ ರಣ್ಯ ಪ್ರದೇಶ ಘೋಷಣೆಗೆ ಮುಂದಾಗಿವೆ. ಇನ್ನು ಜಿಲ್ಲೆಯಲ್ಲಿ ಅತೀ ಹೆಚ್ಚು ಕಾಫಿ ಬೆಳೆಯುವ ಮೂಡಿಗೆರೆ ತಾಲೂಕು ವ್ಯಾಪ್ತಿಯಲ್ಲಿ ಕಸ್ತೂರಿರಂಗನ್ ವರದಿ ಜಾರಿಗೆ ಸರಕಾರಗಳಿಗೆ ನ್ಯಾಯಾಲಯ ಡಿಸೆಂಬರ್ ತಿಂಗಳ ಗಡುವು ನೀಡಿದೆ.
ಈ ಅರಣ್ಯ ಯೋಜನೆಗಳನ್ನು ಅರಣ್ಯ ಇಲಾಖೆ ಜನಾಭಿಪ್ರಾಯ ಸಂಗ್ರಹಿಸದೇ, ಕಂದಾಯ ಅರಣ್ಯ ಇಲಾಖೆ ಜಂಟಿ ಸರ್ವೆ ಮಾಡದೇ ಜನವಸತಿ, ಕೃಷಿ ಭೂಮಿಗಳನ್ನು ಗಣನೆಗೆ ಪಡೆಯದೇ ಜಾರಿ ಮಾಡಲು ಮುಂದಾಗಿವೆ ಎಂದು ಈ ಯೋಜನೆಗಳನ್ನು ವಿರೋಧಿಸಿ ಹೋರಾಟಕ್ಕೆ ಧುಮುಕಿರುವ ಹೋರಾಟ ವೇದಿಕೆ ಮುಖಂಡರು ಆರೋಪಿಸಿದ್ದು, ಈ ಯೋಜನೆಗಳ ಜಾರಿ ತಡೆಯಬೇಕಿದ್ದ ಸರಕಾರಗಳು ಜನರ ಬದುಕಿನ ಪ್ರಶ್ನೆ ಸಂಬಂಧ ನಿರ್ಲಕ್ಷ್ಯ ವಹಿಸಿದ್ದಾರೆಂದು ಆರೋಪಿಸಿ ಗ್ರಾಪಂ ಚುನಾವಣೆಗಳನ್ನು ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದಾರೆ.
ಈ ಎಚ್ಚರಿಕೆ ಬೆನ್ನಲ್ಲೇ ಭದ್ರಾ ಹುಲಿ ಯೋಜನೆಯ ಬಫರ್ ಜೋನ್, ಪರಿಸರ ಸೂಕ್ಷ್ಮ ವಲಯ ಜಾರಿ ವಿರೋಧಿಸಿ ಎನ್.ಆರ್.ಪುರ ತಾಲೂಕಿನ ಖಾಂಡ್ಯ ಹೋಬಳಿಯ 4 ಗ್ರಾಮ ಪಂಚಾಯತ್‍ಗಳ ವ್ಯಾಪ್ತಿಯಲ್ಲಿ ಹೋರಾಟಗಾರರು ಚುನಾವಣೆ ಬಹಿಷ್ಕರಿಸುವ ಬೆದರಿಕೆ ಹಾಕಿದ್ದು, ಈ ಸಂಬಂಧ ವಿವಿಧ ಗ್ರಾಮಗಳ ವ್ಯಾಪ್ತಿಯಲ್ಲಿ ಚುನಾವಣೆ ಬಹಿಷ್ಕರಿಸುವ ಬ್ಯಾನರ್ ಕಟ್ಟಿದ್ದಾರೆ. ಚುನಾವಣೆ ಬಹಿಷ್ಕಾರದ ಕರೆ ಧಿಕ್ಕರಿಸಿ ಚುನಾವಣೆಗೆ ನಾಮಪತ್ರ ಸಲ್ಲಿಸುವ ಅಭ್ಯರ್ಥಿ ಮನೆ ಮುಂದೆ ಧರಣಿ ನಡೆಸುವ ಎಚ್ಚರಿಕೆಯನ್ನೂ ನೀಡಿದ್ದಾರೆ.
ಇನ್ನು ಮೂಡಿಗೆರೆ, ಚಿಕ್ಕಮಗಳೂರು ತಾಲೂಕುಗಳ ವ್ಯಾಪ್ತಿಯಲ್ಲಿ ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಹೋರಾಟ ಸಮಿತಿ ಇತ್ತೀಚೆಗೆ ನಡೆಸಿದ ಸರ್ವಪಕ್ಷಗಳ ಸಭೆಯಲ್ಲಿ ಗ್ರಾಪಂ ಚುನಾವಣೆ ಬಹಿಷ್ಕರಿಸಲು ಒಮ್ಮತದ ನಿರ್ಣಯಕೈಗೊಂಡಿದ್ದು, ಈ ಸಭೆಯಲ್ಲಿ ಆಡಳಿತರೂಢ ಬಿಜೆಪಿ ಸೇರಿದಂತೆ ಕಾಂಗ್ರೆಸ್, ಜೆಡಿಎಸ್, ಸಿಪಿಐ, ಬಿಎಸ್ಪಿ ಪಕ್ಷಗಳ ಜಿಲ್ಲಾ ಮುಖಂಡರೂ ಭಾಗವಹಿಸಿ ಹೋರಾಟ ಸಮಿತಿಯ ನಿರ್ಣಯಕ್ಕೆ ಬೆಂಬಲ ಸೂಚಿಸಿದ್ದು, ವರದಿ ಜಾರಿ ತಡೆಯಲು ಜನಪ್ರತಿನಿಧಿಗಳು ರಾಜ್ಯ ಸರಕಾರದ ಮೇಲೆ ಒತ್ತಡ ಹೇರಬೇಕು. ಕೇಂದ್ರ ಸರಕಾರ ಡಿ.28ರೊಳಗೆ ನ್ಯಾಯಾಲಯಕ್ಕೆ ವರದಿ ಜಾರಿ ತಡೆಯಲು ಅಫಿಡವಿಟ್ ಸಲ್ಲಿಸಬೇಕು. ತಪ್ಪಿದಲ್ಲಿ ಚುನಾವಣೆ ಯೋಜನೆ ವ್ಯಾಪ್ತಿಯ ಎಲ್ಲ ಗ್ರಾಪಂ ಚುನಾವಣೆ ಬಹಿಷ್ಕಾರ ನಿಶ್ಚಿತ ಎಂದು ಮುಖಂಡರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.
ಈ ಅರಣ್ಯ ಯೋಜನೆಗಳಲ್ಲೇ ಮೂಡಿಗೆರೆ ತಾಲೂಕಿನ ಕಳಸ ಹೋಬಳಿ ಕೇಂದ್ರವನ್ನು ತಾಲೂಕು ಕೇಂದ್ರವನ್ನಾಗಿ ಹಿಂದಿನ ಸಮ್ಮಿಶ್ರ ಸರಕಾರ ಘೋಷಿಸಿದ್ದು, ಹಾಲಿ ಬಿಜೆಪಿ ಸರಕಾರ ಕಳಸ ತಾಲೂಕು ಕೇಂದ್ರದ ಅನುಷ್ಠಾನಕ್ಕೆ ಕಳೆದೊಂದು ವರ್ಷದಿಂದ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿ ಕಳಸ ಹೋಬಳಿ ವ್ಯಾಪ್ತಿಯ ಐದು ಗ್ರಾಪಂ ಚುನಾವಣೆ ಬಹಿಷ್ಕರಿಸುವ ನಿರ್ಣಯವನ್ನು ಕಳಸ ತಾಲೂಕು ಹೋರಾಟ ವೇದಿಕೆ ಮುಖಂಡರು ಇತ್ತೀಚೆಗೆ ಕೈಗೊಂಡಿದ್ದಾರೆ.
ಜಿಲ್ಲೆಯಲ್ಲಿ ಅರಣ್ಯ ಯೋಜನೆಗಳು, ತಾಲೂಕು ಕೇಂದ್ರದ ಸಮಸ್ಯೆಗಳಿಂದ ಬೇಸತ್ತಿರುವ ಜನರು ಗ್ರಾಪಂ ಚುನಾವಣೆ ಬಹಿಷ್ಕರಿಸುವ ಬೆದರಿಕೆಯನ್ನೂ ಒಡ್ಡಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಸರಕಾರಕ್ಕೆ ಹೊಸ ತಲೆನೋವು ಎದುರಾಗಿದ್ದು, ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿರುವವರ ಮನವೊಲಿಕೆ ಜಿಲ್ಲಾಡಳಿತ ಮುಂದಾಗಿದೆಯಾದರೂ ಜನರ ಬದುಕಿನ ಪ್ರಶ್ನೆ ಹಿನ್ನೆಲೆಯಲ್ಲಿ ಬಹಿಷ್ಕಾರದ ಕರೆಗೆ ವ್ಯಾಪಕ ಜನಬೆಂಬಲ ವ್ಯಕ್ತವಾಗುತ್ತಿರುವುದರಿಂದ ಈ ಸಮಸ್ಯೆಯನ್ನು ಜಿಲ್ಲಾಡಳಿತ ಹಾಗೂ ಸರಕಾರ ಹೇಗೆ ನಿಭಾಯಿಸುತ್ತದೆ ಎಂಬುದು ಸದ್ಯದ ಕುತೂಹಲವಾಗಿದೆ.