ಪಶ್ಚಿಮಬಂಗಾಳ ಚುನಾವಣೆ ಹಿನ್ನೆಲೆ: ಮುಂದಿನ ವರ್ಷ ಸಿಎಎ ಜಾರಿಯಾಗಬಹುದು ಎಂದ ಬಿಜೆಪಿ

Update: 2020-12-06 06:56 GMT

 ಕೋಲ್ಕತಾ: ಮುಂದಿನ ವರ್ಷದ ಜನವರಿಯಲ್ಲಿ ಪೌರತ್ವ(ತಿದ್ದುಪಡಿ)ಕಾಯ್ದೆ(ಸಿಎಎ)ಜಾರಿಯಾಗುವ ಸಾಧ್ಯತೆಯಿದೆ ಎಂದು ಹಿರಿಯ ಬಿಜೆಪಿ ನಾಯಕ ಹಾಗೂ ಪಶ್ಚಿಮಬಂಗಾಳದ ಉಸ್ತುವಾರಿ ಕೈಲಾಶ್ ವಿಜಯವರ್ಗೀಯ ಹೇಳಿದ್ದಾರೆ.

ಪಶ್ಚಿಮಬಂಗಾಳದಲ್ಲಿ ಮುಂದಿನ ಆರು ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಪ.ಬಂಗಾಳದ ಹೆಚ್ಚಿನ ನಿರಾಶ್ರಿತರಿಗೆ ಪೌರತ್ವ ನೀಡಲು ಉತ್ಸುಕವಾಗಿದೆ. ಉತ್ತರ 24 ಪರಗಣ ಜಿಲ್ಲೆಯಲ್ಲಿ ಶನಿವಾರ ಪಕ್ಷದ ವತಿಯಿಂದ ನೋ ಮೋರ್ ಜಸ್ಟಿಸ್ ಅಭಿಯಾನಕ್ಕೆ ಚಾಲನೆ ನೀಡಿದ ವಿಜಯವರ್ಗೀಯ, "ಸಿಎಎ ಅಡಿಯಲ್ಲಿ ನಿರಾಶ್ರಿತರಿಗೆ ಪೌರತ್ವ ನೀಡುವ ಪ್ರಕ್ರಿಯೆಯು ಮುಂದಿನ ವರ್ಷ ಜನವರಿಯಿಂದ ಪ್ರಾರಂಭವಾಗಲಿದೆ ಎಂದು ನಾವು ಭಾವಿಸುತ್ತೇವೆ'' ಎಂದರು.

ವಿಜಯವರ್ಗೀಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಟಿಎಂಸಿಯ ಹಿರಿಯ ಮುಖಂಡ ಹಾಗೂ ರಾಜ್ಯ ಸಚಿವ ಫಿರ್ಹಾದ್ ಹಕೀಮ್, "ಪಶ್ಚಿಮಬಂಗಾಳದ ಜನರನ್ನು ಮೋಸಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. "1950ರಲ್ಲಿ ಪೂರ್ವ ಪಾಕಿಸ್ತಾನ(ಈಗಿನ ಬಾಂಗ್ಲಾದೇಶ)ದಿಂದ ಪಶ್ಚಿಮಬಂಗಾಳಕ್ಕೆ ವಲಸೆ ಬರಲು ಆರಂಭಿಸಿದವರು ನಾಗರಿಕರಲ್ಲವೇ. ಅವರು ಹೇಗೆ ಪ್ರತಿವರ್ಷ ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ಮತ ಚಲಾಯಿಸುತ್ತಾರೆ?  ಪಶ್ಚಿಮಬಂಗಾಳದ ಜನರನ್ನು ಮೂರ್ಖರನ್ನಾಗಿಸುವುದನ್ನು ಬಿಜೆಪಿ ಮೊದಲು ನಿಲ್ಲಿಸಬೇಕು'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News