ಉತ್ತರ ಪ್ರದೇಶ: ಮತಾಂತರ ತಡೆ ಕಾಯಿದೆ - ಒಬ್ಬೊಬ್ಬರಿಗೆ ಒಂದೊಂದು ರೀತಿ?

Update: 2020-12-08 09:38 GMT
ಸಾಂದರ್ಭಿಕ ಚಿತ್ರ

ಲಕ್ನೋ: ಅಂತರ-ಧರ್ಮೀಯ ವಿವಾಹಗಳಿಗೆ ಕಠಿಣ ಷರತ್ತುಗಳನ್ನು ವಿಧಿಸುವ ಉತ್ತರ ಪ್ರದೇಶದ ಮತಾಂತರ ತಡೆ ಕಾಯಿದೆ ಜಾರಿಗೊಂಡ ಆರಂಭದಿಂದ ಒಂಬತ್ತು ದಿನಗಳ ಅವಧಿಯಲ್ಲಿ ಪೊಲೀಸರು ಐದು ಪ್ರಕರಣ ದಾಖಲಿಸಿದ್ದಾರೆ. ಆದರೆ ಈ ಐದು ಪ್ರಕರಣಗಳ ಪೈಕಿ  24 ಗಂಟೆಗಳ ಅವಧಿಯಲ್ಲಿ ದಾಖಲಾದ ಎರಡು ಪ್ರಕರಣಗಳು ವೈರುದ್ಧ್ಯಗಳಿಂದ ಕೂಡಿದ್ದು ಪೊಲೀಸರು ಹೊಸ ಕಾನೂನನ್ನು ಜಾರಿಗೊಳಿಸುವ ವೇಳೆ ಹೇಗೆ ಕೆಲವೊಂದು ನಿರ್ದಿಷ್ಟ ಪ್ರಕರಣಗಳನ್ನು ಗುರಿಯಾಗಿಸಿದ್ದಾರೆಂಬುದನ್ನು ಪ್ರತಿಫಲಿಸುತ್ತದೆ ಎಂದು indianexpress.com ವರದಿ ಮಾಡಿದೆ.

ತನ್ನ ಪುತ್ರಿ ಮತಾಂತರಗೊಂಡು ಹಿಂದು ಧರ್ಮದವನನ್ನು ವಿವಾಹವಾಗಿದ್ದಾಳೆ ಎಂದು ಬರೇಲಿಯಲ್ಲಿ ಶನಿವಾರ ವ್ಯಕ್ತಿಯೊಬ್ಬರು ನೀಡಿದ್ದ ದೂರನ್ನು ಪೊಲೀಸರು ಸ್ವೀಕರಿಸಿರಲಿಲ್ಲ. ತಾನು ಈ ಕಾನೂನು ಜಾರಿಗೊಳ್ಳುವ ಮುನ್ನ ಸೆಪ್ಟೆಂಬರ್ ತಿಂಗಳಲ್ಲಿಯೇ ವಿವಾಹವಾಗಿದ್ದಾಗಿ ಮಹಿಳೆ ನೀಡಿದ ಹೇಳಿಕೆಯನ್ನು ಒಪ್ಪಿಕೊಂಡು ಪೊಲೀಸರು ಪ್ರಕರಣ ದಾಖಲಿಸಿಲ್ಲ. ಆದರೆ ರವಿವಾರ  ಇನ್ನೊಂದು ಪ್ರಕರಣದಲ್ಲಿ ಇದೇ ಕಾನೂನಿನಡಿ ಪೊಲೀಸರು ಮೊರಾದಾಬಾದ್‍ನಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ತಮ್ಮ ವಿವಾಹ ಜುಲೈ ತಿಂಗಳಲ್ಲಿ ನಡೆದಿದೆ ಎಂದು ಆತನ ಪತ್ನಿ ಹೇಳಿರುವುದರ ಹೊರತಾಗಿಯೂ ಬಂಧನ ನಡೆದಿದ್ದು ವ್ಯಕ್ತಿಯ ತಮ್ಮನನ್ನೂ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. 

ಬರೇಲಿ ಪ್ರಕರಣದಲ್ಲಿ ಮಹಿಳೆಯನ್ನು ಆಕೆಯ ಪತಿ ಮನೆಯಲ್ಲಿಯೇ ಬಿಟ್ಟಿದ್ದಾಗಿ ಹೇಳಿದ ಪೊಲೀಸರು, ಮೊರಾದಾಬಾದ್ ಪ್ರಕರಣದಲ್ಲಿ ಮಹಿಳೆಯನ್ನು ರಾಜ್ಯ ಮಹಿಳೆಯರ ಆಶ್ರಯತಾಣದಲ್ಲಿರಿಸಿದೆ.

ಶನಿವಾರ 22 ವರ್ಷದ ಆಲಿಶಾ ಎಂಬ ಯುವತಿಯ ತಂದೆ ಶಾಹಿದ್ ಮಿಯಾ ಬರೇಲಿಯ ಪ್ರೇಮ್ ನಗರ್ ಠಾಣೆಯಲ್ಲಿ ದೂರು ದಾಖಲಿಸಿ ಪುತ್ರಿಯನ್ನು ಆಕೆ ಕೆಲಸ ಮಾಡುವ ಸಂಸ್ಥೆಯ ಮಾಲಕ ಸಹಿತ ಮೂವರು ಅಪಹರಿಸಿದ್ದಾರೆಂದು ದೂರಿದ್ದರು. ಎಫ್‍ಐಆರ್ ನಲ್ಲಿ ಆಲಿಶಾಳನ್ನು ವಿವಾಹವಾಗಿದ್ದ ಸಿದ್ಧಾರ್ಥ್ ಸಕ್ಸೇನಾ ಅಲಿಯಾಸ್ ಅಮನ್ (24) ಆತನ ಸೋದರಿ ಹಾಗೂ ಆಲಿಷಾ ಸಹೋದ್ಯೋಗಿ ಚಂಚಲ್, ಸಂಸ್ಥೆಯ ಮಾಲಕ ಮನೋಜ್ ಕುಮಾರ ಸಕ್ಸೇನಾ ಹೆಸರುಗಳು ಉಲ್ಲೇಖವಾಗಿದ್ದವು.

ಡಿಸೆಂಬರ್ 1ರಂದು ಮನೆಯಿಂದ ತೆರಳಿದ್ದ ಪುತ್ರಿ ವಾಪಸಾಗಿಲ್ಲ. ಆಕೆಗೆ ಬಲವಂತವಾಗಿ ಮದುವೆ ಮಾಡಲಾಗಿದೆ, ಮನೋಜ್ ಮತ್ತು ಆಂಚಲ್ ವಿವಾಹವಾಗುವಂತೆ ಬಲವಂತ ಪಡಿಸುತ್ತಿದ್ದುದರಿಂದ ಆಕೆ ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿದ್ದಳು ಎಂದು ದೂರಲಾಗಿದೆ.

ಆದರೆ ಆಕೆ ವಯಸ್ಕಳಾಗಿರುವುದು ಹಾಗೂ ಅಪಹರಣ ಆರೋಪ ನಿರಾಕರಿಸಿರುವುದು ಮತ್ತು ಅಮನ್ ಜತೆ ಸ್ವಇಚ್ಛೆಯಿಂದ ಹೋಗಿದ್ದಾಗಿ ಹೇಳಿದ್ದರಿಂದ  ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಆದರೆ ರವಿವಾರ ಕಂತ್ ಪ್ರದೇಶದ ರಶೀದ್ ಅಲಿ (22) ಎಂಬ ಯುವಕನನ್ನು ಮೊರಾದಾಬಾದ್‍ನಲ್ಲಿ ಬಂಧಿಸಲಾಗಿದೆ  ಆತ ವಿವಾಹ ನೋಂದಣಿಗಾಗಿ ಪಿಂಕಿ (22) ಎಂಬ ಯುವತಿ ಜತೆ ತೆರಳುತ್ತಿದ್ದಾಗ ಆತನನ್ನು ಹಾಗೂ ಆತನ ಸೋದರ ಸಲೀಂ ಅಲಿ (25) ಎಂಬಾತನನ್ನೂ ಬಂಧಿಸಲಾಗಿದೆ.

ಪಿಂಕಿಯನ್ನು ಬಲವಂತವಾಗಿ ಮತಾಂತರಿಸಲಾಗಿದೆ ಎಂದು ಆಕೆಯ ಕುಟುಂಬ ನೀಡಿದ ದೂರಿನಲ್ಲಿ ಆರೋಪಿಸಲಾಗಿದ್ದರೆ, ಪಿಂಕಿ ಮಾತ್ರ ತಾನು ರಶೀದ್‍ನನ್ನು ಜುಲೈ 24ರಂದು ವಿವಾಹವಾಗಿದ್ದಾಗಿ ಹಾಗೂ ತಾನು ವಯಸ್ಕಳಾಗಿರುವುದರಿಂದ ಸ್ವಇಚ್ಛೆಯಿಂದ ಆತನನ್ನು ವರಿಸಿದ್ದಾಗಿ ಹೇಳಿದ್ದರೂ ಆಕೆಯ ತಾಯಿಯ ಹೇಳಿಕೆಯ ಆಧಾರದಲ್ಲಿ ರಶೀದ್‍ನನ್ನು ಬಂಧಿಸಲಾಗಿದೆ. ತನ್ನ ವಿವಾಹ ಕುರಿತಾದ ದಾಖಲೆಗಳನ್ನೂ ಆಕೆ ಒದಗಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಯಾವ ಪರಿಸ್ಥಿತಿಯಲ್ಲಿ ಬಂಧನ ನಡೆಸಲಾಗಿದೆ ಎಂದು ಪರಾಮರ್ಶಿಸಲಾಗುವುದು ಎಂದು ಬರೇಲಿ ಎಡಿಜಿಪಿ ಅವಿನಾಶ್ ಚಂದ್ರ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News