ಇಬ್ಬರು ಮಕ್ಕಳು ಮಾತ್ರ ಇರಬೇಕು ಎನ್ನುವಂತಹ ನಿಯಮಗಳಿಂದ ಹಾನಿಯೇ ಹೆಚ್ಚು

Update: 2020-12-13 14:37 GMT

ಹೊಸದಿಲ್ಲಿ,ಡಿ.13: ಇಂತಿಷ್ಟೇ ಸಂಖ್ಯೆಯ ಮಕ್ಕಳನ್ನು ಹೊಂದಿರುವಂತೆ ಜನರನ್ನು ಬಲವಂತಗೊಳಿಸುವುದರಿಂದ ಹಾನಿಯೇ ಹೆಚ್ಚು ಮತ್ತು ಅದು ಜನಸಂಖ್ಯಾ ಸ್ವರೂಪದ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ ಎಂದು ಕೇಂದ್ರ ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ನಿವೇದಿಸಿಕೊಂಡಿದೆ.

1994ರ ಜನಸಂಖ್ಯೆ ಮತ್ತು ಅಭಿವೃದ್ಧಿ ಕುರಿತ ಅಂತರ್ ರಾಷ್ಟ್ರೀಯ ಸಮ್ಮೇಳನದ ಕ್ರಿಯಾ ಯೋಜನೆಗೆ ಭಾರತವು ಸಹಿ ಹಾಕಿದ್ದು,ಬಲವಂತದಿಂದ ಕುಟುಂಬ ಯೋಜನೆಯನ್ನು ಜಾರಿಗೊಳಿಸಬಾರದು ಎಂದು ಅದರಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ ಎಂದು ಆರೋಗ್ಯ ಸಚಿವಾಲಯವು ಡಿ.7ರಂದು ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಿಳಿಸಿದೆ.

ಬಲವಂತದಿಂದ ಕುಟುಂಬ ಯೋಜನೆ ಜಾರಿಯು ಹಾನಿಯನ್ನುಂಟು ಮಾಡುತ್ತದೆ ಮತ್ತು ಜನಸಂಖ್ಯಾ ಸ್ವರೂಪದ ಮೇಲೆ ದುಷ್ಪರಿಣಾಮವನ್ನುಂಟು ಮಾಡುತ್ತದೆ ಎನ್ನುವುದು ಜಾಗತಿಕ ಅನುಭವವಾಗಿದೆ. ಭಾರತದಲ್ಲಿ ಕುಟುಂಬ ಕಲ್ಯಾಣ ಕಾರ್ಯಕ್ರಮವು ಸ್ವಯಂಪ್ರೇರಿತವಾಗಿದ್ದು,ತಮ್ಮ ಕುಟುಂಬದ ಗಾತ್ರವನ್ನು ನಿರ್ಧರಿಸುವ ಮತ್ತು ತಮಗೆ ಅನುಕೂಲವಾದ ಕುಟುಂಬ ಯೋಜನೆ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಸ್ವಾತಂತ್ರ್ಯವನ್ನು ದಂಪತಿಗಳು ಹೊಂದಿದ್ದಾರೆ ಎಂದು ಅದು ತಿಳಿಸಿದೆ.

ದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸಲು ಇಬ್ಬರು ಮಕ್ಕಳ ನಿಯಮ ಸೇರಿದಂತೆ ಕೆಲವು ಕ್ರಮಗಳನ್ನು ಕೈಗೊಳ್ಳಬೇಕೆಂದು ಕೋರಿದ್ದ ಅರ್ಜಿಯನ್ನು ದಿಲ್ಲಿ ಉಚ್ಚ ನ್ಯಾಯಾಲಯವು ವಜಾಗೊಳಿಸಿದ್ದನ್ನು ಪ್ರಶ್ನಿಸಿ ಬಿಜೆಪಿ ನಾಯಕ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಉತ್ತರವಾಗಿ ಕೇಂದ್ರವು ಈ ಅಫಿಡವಿಟ್ ಅನ್ನು ಸಲ್ಲಿಸಿದೆ.

ಸಾರ್ವಜನಿಕ ಆರೋಗ್ಯವು ರಾಜ್ಯಗಳಿಗೆ ಸಂಬಂಧಿಸಿದ ವಿಷಯವಾಗಿದೆ ಮತ್ತು ಸೂಕ್ತ ಹಾಗೂ ಸುಸ್ಥಿರ ರೀತಿಯಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಸುಧಾರಣಾ ಪ್ರಕ್ರಿಯೆಗಳು ರಾಜ್ಯ ಸರಕಾರಗಳ ನೇತೃತ್ವದಲ್ಲಿಯೇ ನಡೆಯಬೇಕು ಎಂದು ಬೆಟ್ಟು ಮಾಡಿರುವ ಆರೋಗ್ಯ ಸಚಿವಾಲಯವು,ರಾಜ್ಯಗಳಿಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳು ಮತ್ತು ಯೋಜನೆಗಳ ಜಾರಿಯ ಮೇಲೆ ಕೇಂದ್ರವು ನೇರವಾದ ನಿಯಂತ್ರಣವನ್ನು ಹೊಂದಿಲ್ಲ ಎಂದಿದೆ.

ಭಾರತದಲ್ಲಿ ಒಟ್ಟು ಫಲವಂತಿಕೆ ದರ (ಟಿಎಫ್‌ಆರ್)ವು ನಿರಂತರವಾಗಿ ಕಡಿಮೆಯಾಗುತ್ತಿದೆ. 2000ರಲ್ಲಿ ರಾಷ್ಟ್ರೀಯ ಜನಸಂಖ್ಯಾ ನೀತಿಯನ್ನು ಅಳವಡಿಸಿಕೊಂಡ ಸಂದರ್ಭದಲ್ಲಿ 3.2ರಷ್ಟಿದ್ದ ಟಿಎಫ್‌ಆರ್ ಈಗ 2.2ಕ್ಕೆ ಕುಸಿದಿದೆ ಎಂದೂ ಆರೋಗ್ಯ ಸಚಿವಾಲಯವು ತಿಳಿಸಿದೆ.

ಆಹಾರ,ಭೂಮಿ ಮತ್ತು ಕುಡಿಯುವ ನೀರು,ಬಟ್ಟೆಗಳ ಕೊರತೆ ಸೇರಿದಂತೆ ದೇಶದ ಹೆಚ್ಚಿನ ಸಮಸ್ಯೆಗಳಿಗೆ ಮತ್ತು ಬಡತನಕ್ಕೆ ಜನಸಂಖ್ಯಾ ಸ್ಫೋಟವೇ ಮೂಲ ಕಾರಣವಾಗಿದೆ ಎಂದು ಉಪಾಧ್ಯಾಯ ತನ್ನ ಅರ್ಜಿಯಲ್ಲಿ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News