ರೈತರ ಹೋರಾಟ ಮತ್ತಷ್ಟು ತೀವ್ರ: ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಮತ್ತೆ 10 ಸಾವಿರ ರೈತರು

Update: 2020-12-14 03:36 GMT

ಹೊಸದಿಲ್ಲಿ, ಡಿ.14: ಕೇಂದ್ರದ ಹೊಸ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ತೀವ್ರಗೊಳಿಸಲು ರೈತ ಸಂಘಟನೆಗಳು ನಿರ್ಧರಿಸಿದ್ದು, ಸೋಮವಾರ ಮತ್ತೆ 10 ಸಾವಿರ ರೈತರು ಪ್ರತಿಭಟನೆ ಸೇರಿಕೊಳ್ಳುವ ನಿರೀಕ್ಷೆ ಇದೆ. ಇದರಿಂದ ದಿಲ್ಲಿಯ ಸಿಂಘು ಗಡಿ ಮತ್ತೆ ರೈತರ ಶಕ್ತಿಪ್ರದರ್ಶನಕ್ಕೆ ವೇದಿಕೆಯಾಗಲಿದೆ.

ಹೊಸದಾಗಿ 10 ಸಾವಿರ ಮಂದಿ ಈಗಾಗಲೇ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದಾರೆ ಎನ್ನಲಾಗಿದ್ದು, ರಾಜಸ್ಥಾನದಿಂದಲೂ ರೈತರು ದೊಡ್ಡ ಸಂಖ್ಯೆಯಲ್ಲಿ ರಾಜಧಾನಿಯತ್ತ ಧಾವಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ರವಿವಾರ ಮಧ್ಯಾಹ್ನ 1:45ರ ವೇಳೆಗೆ ದಿಲ್ಲಿ- ಜೈಪುರ ರಾಷ್ಟ್ರೀಯ ಹೆದ್ದಾರಿಯ ಜೈಸಿಂಗ್ ಖೇರಾ ಬಳಿ ನೂರಾರು ರೈತರನ್ನು ಪೊಲೀಸರು ತಡೆದ ಹಿನ್ನೆಲೆಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.

ಈ ಕಾರಣದಿಂದ ಅಲ್ವರ್ ಜಿಲ್ಲಾಡಳಿತ ಬೆಹ್ರೋರ್-ತತ್ರಾಪುರ-ಖೈರತಾಲ್ ಪರ್ಯಾಯ ಮಾರ್ಗದ ಮೂಲಕ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಿತ್ತು. 10 ಕಿಲೋಮೀಟರ್ ಉದ್ದದ ವಾಹನಗಳ ಸಾಲು ಹೆದ್ದಾರಿಯಲ್ಲಿ ಕಂಡುಬಂತು. ಮೂರೂವರೆ ಗಂಟೆ ಬಳಿಕ ಹೆದ್ದಾರಿ ತೆರವು ಮಾಡಲಾಯಿತು.

"ನಾವು ಹೆದ್ದಾರಿ ತಡೆ ನಡೆಸಿಲ್ಲ. ಪೊಲೀಸರೇ ಬ್ಯಾರಿಕೇಡ್‌ಗಳನ್ನು ಹಾಕಿ ತಡೆ ವಿಧಿಸಿದ್ದಾರೆ. ಸರಕಾರ ನಮ್ಮತ್ತ ಆಲಿಸಬೇಕು ಎಂಬ ಒತ್ತಡ ತರಲು ನಾವು  ದಿಲ್ಲಿಯತ್ತ ಹೋಗುತ್ತಿದ್ದೇವೆ" ಎಂದು ರಾಜಸ್ಥಾನದ ರೈತ ಹೋರಾಟಗಾರ ಅಮ್ರಾ ರಾಮ್ ಹೇಳಿದರು.

ಸಿಂಘು ಗಡಿಯಲ್ಲಿ ಉದ್ವಿಗ್ನ ವಾತಾವರಣವಿದೆ. "ಎಷ್ಟು ತಿಂಗಳು ಅಗತ್ಯವಾದರೂ ನಾವಿಲ್ಲಿ ಉಳಿಯಲು ಸಿದ್ಧರಿದ್ದೇವೆ. ನಾವು ಹಸಿವಿನಿಂದ ಇಲ್ಲೇ ಸಾಯಬೇಕು ಎಂದು ಸರಕಾರ ಬಯಸಿದರೆ ತಪ್ಪು. ನಾವು ಪ್ರತಿಯೊಬ್ಬರೂ ಯೋಧರು. ಒಂದಾಗಿ ಹೋರಾಟ ನಡೆಸಲಿದ್ದೇವೆ" ಎಂದು ಗುರ್ನಮ್ ಸಿಂಗ್ ವಿವರಿಸಿದರು.

ಕನಿಷ್ಠ 2,000 ಟ್ರ್ಯಾಕ್ಟರ್ ಟ್ರಾಲಿಗಳು ಸಿಂಘು ಗಡಿಯತ್ತ ಮುಖ ಮಾಡಿವೆ. ಪ್ರತಿಯೊಂದರಲ್ಲಿ ಕನಿಷ್ಠ ನಾಲ್ಕು ಮಂದಿ ರೈತರಿದ್ದಾರೆ ಎಂದು ಗಂಗನ್‌ಪ್ರೀತ್ ಸಿಂಗ್ ಎಂಬ ರೈತ ನುಡಿದರು. ಇವರು ಮೊದಲ ದಿನದಿಂದಲೇ ಪ್ರತಿಭಟನೆಯಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News