ಭಗಿನಿ ಅಭಯಾ ಕೊಲೆ ಪ್ರಕರಣ: 28 ವರ್ಷಗಳ ಬಳಿಕ ಕೊನೆಗೂ ನಾಳೆ ತೀರ್ಪು ಪ್ರಕಟ

Update: 2020-12-21 17:42 GMT

ತಿರುವನಂತಪುರ,ಡಿ.21: ಇಲ್ಲಿಯ ಸಿಬಿಐ ನ್ಯಾಯಾಲಯವು 1992ರಲ್ಲಿ ಕೊಟ್ಟಾಯಮ್‌ನ ಕಾನ್ವೆಂಟೊಂದರಲ್ಲಿ ಸಂಭವಿಸಿದ್ದ ಭಗಿನಿ ಅಭಯಾ ಶಂಕಾಸ್ಪದ ಸಾವಿನ ಕುರಿತಂತೆ ತೀರ್ಪನ್ನು 28 ವರ್ಷಗಳ ಕಾಯುವಿಕೆಯ ಬಳಿಕ ಕೊನೆಗೂ ಮಂಗಳವಾರ ಪ್ರಕಟಿಸಲಿದೆ.

ಸೋಮವಾರ ಮಲಯಾಳಂ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಪ್ರಕರಣದ ಮುಖ್ಯ ಸಾಕ್ಷಿ ಕೆ.ರಾಜಾವು ಅಲಿಯಾಸ್ ಅಡಕ್ಕ ರಾಜು, ಅಭಯಾ ಕೊಲೆಯನ್ನು ಮಾಡಿದ್ದಾಗಿ ಒಪ್ಪಿಕೊಳ್ಳುವಂತೆ ಪೊಲೀಸರು ತನಗೆ ಚಿತ್ರಹಿಂಸೆ ನೀಡಿದ್ದರು ಎಂದು ತಿಳಿಸಿದ.

ಚಿಲ್ಲರೆ ಕಳ್ಳನಾಗಿರುವ ರಾಜು ಘಟನೆ ನಡೆದಾಗ ಕಾನ್ವೆಂಟ್ ಆವರಣದಲ್ಲಿದ್ದ.

ಕಾನ್ವೆಂಟ್‌ನಲ್ಲಿ ಇಬ್ಬರು ಪಾದ್ರಿಗಳು ಮತ್ತು ಓರ್ವ ನನ್ ಅನ್ನು ನಿಗೂಢ ಸನ್ನಿವೇಶದಲ್ಲಿ ತಾನು ಕಂಡಿದ್ದೆ ಎಂದು ರಾಜು ನಂತರ ಸಿಬಿಐ ಅಧಿಕಾರಿಗಳಿಗೆ ತಿಳಿಸಿದ್ದ.

ತಾನು ಬಹಳಷ್ಟು ಅನುಭವಿಸಿದ್ದೇನೆ. ಅಪರಾಧವನ್ನು ಒಪ್ಪಿಕೊಳ್ಳುವಂತೆ ತನಗೆ ಭಾರೀ ಆಮಿಷಗಳನ್ನು ಒಡ್ಡಲಾಗಿತ್ತು,ಆದರೆ ಅದಕ್ಕೆ ಮಣಿಯಲು ತಾನು ನಿರಾಕರಿಸಿದ್ದೆ. ಸತ್ಯ ಹೊರಗೆ ಬರಬೇಕು ಎಂದು ತಾನು ಬಯಸಿದ್ದೆ ಎಂದು ರಾಜು ಸುದ್ದಿವಾಹಿನಿಗೆ ತಿಳಿಸಿದ.

ಸಿಬಿಐ ಪ್ರಕರಣದಲ್ಲಿ ಕೆಥೋಲಿಕ್ ಧರ್ಮಗುರು ಫಾ.ಥಾಮಸ್ ಕೋಟೂರ ಮತ್ತು ಸಿಸೆಫಿ ಅವರ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿತ್ತು. ಅವರ ವಿರುದ್ಧ ಕೊಲೆ, ಸಾಕ್ಷ್ಯನಾಶ,ಕ್ರಿಮಿನಲ್ ಒಳಸಂಚು ಮತ್ತು ಇತರ ಆರೋಪಗಳನ್ನು ಹೊರಿಸಲಾಗಿತ್ತು. ಇನ್ನೋರ್ವ ಆರೋಪಿ ಫಾ.ಜೋಸ್ ಪೂತ್ರುಕಾಯಿಲ್ ಅವರು ಸಾಕ್ಷಾಧಾರಗಳ ಕೊರತೆಯಿಂದ ಕಳೆದ ವರ್ಷ ನ್ಯಾಯಾಲಯದಿಂದ ಖುಲಾಸೆಗೊಂಡಿದ್ದರು.

12ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದ ಅಭಯಾ ಕೊಟ್ಟಾಯಮ್‌ನ ಪಿಯುಸ್ ಕಾನ್ವೆಂಟ್‌ನ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಆರಂಭದಲ್ಲಿ ರಾಜ್ಯ ಪೊಲೀಸರು ಮತ್ತು ಕ್ರೈಂ ಬ್ರಾಂಚ್ ಇದೊಂದು ಆತ್ಮಹತ್ಯೆ ಪ್ರಕರಣವೆಂದು ಹೇಳಿದ್ದರು,ಬಳಿಕ ಸಿಬಿಐ ಅದು ಕೊಲೆ ಎಂಬ ನಿರ್ಧಾರಕ್ಕೆ ಬಂದಿತ್ತು. ಹಲವಾರು ಸಾಕ್ಷಿಗಳು ತಿರುಗಿಬಿದ್ದಿದ್ದು ಮತ್ತು ವಿವಿಧ ನ್ಯಾಯಾಲಯಗಳಲ್ಲಿ ಹಲವಾರು ಅರ್ಜಿಗಳು ದಾಖಲಾಗಿದ್ದು,ಪ್ರಕರಣದ ಕಲಾಪಗಳನ್ನು ವಿಳಂಬಗೊಳಿಸಿತ್ತು.

ಘಟನೆಯ ದಿನ ಓದಿಕೊಳ್ಳಲೆಂದು ನಸುಕಿಗೆ ಎದ್ದಿದ್ದ ಅಭಯಾ ಮುಖ ತೊಳೆದುಕೊಳ್ಳಲೆಂದು ಅಡಿಗೆಮನೆಗೆ ತೆರಳಿದ್ದರು. ಅಲ್ಲಿ ಓರ್ವ ನನ್ ಮತ್ತು ಇಬ್ಬರು ಪಾದ್ರಿಗಳನ್ನು ನೋಡಬಾರದ ಸ್ಥಿತಿಯಲ್ಲಿ ನೋಡಿದ್ದರು. ಅಭಯಾ ತಮ್ಮ ವಿಷಯವನ್ನು ಇತರರಿಗೆ ತಿಳಿಸಬಹುದು ಎಂಬ ಭೀತಿಯಿಂದ ಆರೋಪಿಗಳು ಆಕೆಯನ್ನು ಮೊದಲು ಕೊಡಲಿಯಿಂದ ಹೊಡೆದು,ನಂತರ ಬಾವಿಯಲ್ಲಿ ಎಸೆದಿದ್ದರು ಎಂದು ಸಿಬಿಐ ತನ್ನ ದೋಷಾರೋಪಣೆ ಪಟ್ಟಿಯಲ್ಲಿ ಹೇಳಿತ್ತು.

ಪ್ರಕರಣವು ಸಾಕಷ್ಟು ಕಾವನ್ನು ಮೂಡಿಸಿದ್ದರೂ ಆರೋಪಿಗಳ ಬೆನ್ನಿಗೆ ನಿಂತಿದ್ದ ಚರ್ಚ್, ಅವರು ಅಮಾಯಕರಾಗಿದ್ದಾರೆ ಎಂದು ಹೇಳಿತ್ತು.

ಪ್ರಕರಣದಲ್ಲಿ ಮೊದಲು ತನಿಖೆಯನ್ನು ನಡೆಸಿದ್ದ ಕೇರಳ ಪೊಲೀಸರು ಆತ್ಮಹತ್ಯೆ ಎಂದು ನಿರ್ಧರಿಸಿದ್ದರು. ಬಳಿಕ ಕ್ರೈಂ ಬ್ರಾಂಚ್ ಪೊಲೀಸರು ಸಹ ಇದೇ ತೀರ್ಮಾನಕ್ಕೆ ಬಂದಿದ್ದರು. ಭಾರೀ ಸಾರ್ವಜನಿಕ ಆಕ್ರೋಶದ ಬಳಿಕ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಗಿತ್ತು.

ಸಿಬಿಐ ಪ್ರಕರಣದಲ್ಲಿ ಮೂರು ವರದಿಗಳನ್ನು ಸಲ್ಲಿಸಿತ್ತು. ತನ್ನ ಮೊದಲ ವರದಿಯಲ್ಲಿ ಅದು ಅಭಯರ ಸಾವನ್ನು ‘ನರಹತ್ಯೆಗೆ ಸಮಾನವಾದ ಆತ್ಮಹತ್ಯೆ ’ಎಂದು ಬಣ್ಣಿಸಿತ್ತು. ಇದನ್ನು ತಿರಸ್ಕರಿಸಿದ್ದ ನ್ಯಾಯಾಲಯವು ಪ್ರಕರಣದಲ್ಲಿ ಹೊಸದಾಗಿ ತನಿಖೆ ನಡೆಸುವಂತೆ ಆದೇಶಿಸಿತ್ತು. ತನ್ನ ಎರಡನೇ ವರದಿಯಲ್ಲಿ ಸಿಬಿಐ ಇದು ಆತ್ಮಹತ್ಯೆಯೋ ಕೊಲೆಯೋ ಎನ್ನುವುದನ್ನು ಸಂಶಯಾತೀತವಾಗಿ ಸಿದ್ಧಗೊಳಿಸಲು ತನಗೆ ಸಾಧ್ಯವಿಲ್ಲ ಎಂದು ತಿಳಿಸಿತ್ತು. 2008ರಲ್ಲಿ ಸಲ್ಲಿಸಿದ್ದ ತನ್ನ ಅಂತಿಮ ವರದಿಯಲ್ಲಿ ಅಭಯಾರನ್ನು ಕೊಲೆ ಮಾಡಲಾಗಿತ್ತು ಎಂದು ತಿಳಿಸಿದ್ದ ಸಿಬಿಐ ಇಬ್ಬರು ಪಾದ್ರಿಗಳು ಮತ್ತು ಓರ್ವ ನನ್ ಸೇರಿದಂತೆ ಮೂವರನ್ನು ಬಂಧಿಸಿತ್ತು.

ನ್ಯಾಯಾಲಯವು ಕೊಲೆ ಪ್ರಕರಣದ ತೀರ್ಪಿನ ಜೊತೆ ಪ್ರತಿಕೂಲ ಹೇಳಿಕೆ ನೀಡಿದ ಕೆಲವು ಸಾಕ್ಷಿಗಳ ಕುರಿತೂ ತನ್ನ ತೀರ್ಪನ್ನು ಪ್ರಕಟಿಸಲಿದೆ.

ಪ್ರಕರಣವು ವಿವಿಧ ನ್ಯಾಯಾಲಯಗಳಲ್ಲಿ ಸುತ್ತಾಡಿದ್ದರಿಂದ ವಿಚಾರಣೆಯಲ್ಲಿ ಅಸಾಮಾನ್ಯ ವಿಳಂಬವಾಗಿತ್ತು.

ಪ್ರಕರಣದ ತನಿಖೆ ನಡೆಸುತ್ತಿದ್ದ ಸಿಬಿಐ ಎಸ್‌ಪಿ ನಂದಕುಮಾರ ನಾಯರ್ ಅವರ ಸೇವಾವಧಿಯನ್ನು ಕೇಂದ್ರ ಸರಕಾರವು ಕಳೆದ ವರ್ಷ ವಿಸ್ತರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News