ಅವಹೇಳನಕಾರಿ ಟ್ವೀಟ್‌ಗೆ ‘ವೃತ್ತಿಪರ ಟ್ವೀಟರ್’ ವಿರುದ್ಧ ಕ್ರಮ ಕೈಗೊಳ್ಳಬೇಕು

Update: 2020-12-22 15:43 GMT

ಹೊಸದಿಲ್ಲಿ, ಡಿ. 22: ಅವಹೇಳನಕಾರಿ ಟ್ವೀಟ್ ಪೋಸ್ಟ್ ಮಾಡಿದ ಆರೋಪಕ್ಕೆ ಒಳಗಾಗಿರುವ ಮುಂಬೈಯ ನಿವಾಸಿ ಸುನೈನಾ ಹೋಲೆ ಅವರನ್ನು ಸಾಮಾಜಿಕ ಜಾಲ ತಾಣದ ‘ಪ್ರಭಾವಶಾಲಿ’ ಅಥವಾ ‘ವೃತ್ತಿಪರ ಟ್ವೀಟರ್’ ಎಂದು ಪರಿಗಣಿಸಬಹುದು. ಅಲ್ಲದೆ, ಅಪಮಾನಕರ ಟ್ವೀಟ್‌ಗಾಗಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಹಾರಾಷ್ಟ್ರ ಸರಕಾರ ಬಾಂಬೆ ಉಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಅವರ ಪುತ್ರ ಹಾಗೂ ರಾಜ್ಯ ಸಚಿವ ಆದಿತ್ಯ ಠಾಕ್ರೆ ಕುರಿತು ಟ್ವಿಟರ್‌ನಲ್ಲಿ ಜುಲೈಯಲ್ಲಿ ಅಪಮಾನಕಾರಿ ಹೇಳಿಕೆ ನೀಡಿದ್ದ ಆರೋಪಕ್ಕೆ ಸಂಬಂಧಿಸಿ ತನ್ನ ವಿರುದ್ಧ ದಾಖಲಿಸಲಾದ ಮೂರು ಪ್ರಕರಣಗಳನ್ನು ರದ್ದುಗೊಳಿಸುವಂತೆ ಕೋರಿ ಹೋಲೆ ಸಲ್ಲಿಸಿದ ಮನವಿಯನ್ನು ಬಾಂಬೆ ನ್ಯಾಯಾಲಯ ವಿಚಾರಣೆ ನಡೆಸಿತು. ಜನವರಿ 12ರ ವರೆಗೆ ಹೋಲೆ ವಿರುದ್ಧದ ಯಾವುದೇ ಪ್ರಕರಣದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸದಂತೆ ಹಾಗೂ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದಂತೆ ಮಹಾರಾಷ್ಟ್ರ ಸರಕಾರಕ್ಕೆ ಹಾಗೂ ಪೊಲೀಸರಿಗೆ ಬಾಂಬೆ ಉಚ್ಚ ನ್ಯಾಯಾಲಯ ಡಿಸೆಂಬರ್ 18ರಂದು ನಿರ್ದೇಶಿಸಿತ್ತು.

 ತನ್ನ ಟ್ವೀಟ್‌ಗಳ ಮೂಲಕ ದೊಡ್ಡ ಸಂಖ್ಯೆಯ ಜನರನ್ನು ಪ್ರಭಾವಿಸುವ ಸಾಮರ್ಥ್ಯ ಹೊಂದಿರುವ ಸಾರ್ವಜನಿಕ ವ್ಯಕ್ತಿ ಅವರಲ್ಲ ಎಂದು ಹೋಲೆ ಅವರ ಪರ ನ್ಯಾಯವಾದಿ ಅಭಿನವ್ ಚಂದ್ರಚೂಡ ಈ ಹಿಂದಿನ ವಿಚಾರಣೆ ಸಂದರ್ಭ ವಾದಿಸಿದ್ದರು ಹಾಗೂ ಪ್ರಕರಣವನ್ನು ರದ್ದುಗೊಳಿಸುವಂತೆ ಮನವಿ ಮಾಡಿದ್ದರು. ಹೋಲೆ ಅವರು ತನ್ನ ಟ್ವೀಟ್‌ನಲ್ಲಿ ಯಾವುದೇ ನಿರ್ದಿಷ್ಟ ಸಮುದಾಯವನ್ನು ಉಲ್ಲೇಖಸಿಲ್ಲ. ಆದುದರಿಂದ ಅವರ ವಿರುದ್ಧ ಯಾವುದೇ ಅಪರಾಧದ ಆರೋಪ ಹೊರಿಸುವಂತಿಲ್ಲ ಎಂದು ಅವರು ಹೇಳಿದ್ದರು. ಮಹಾರಾಷ್ಟ್ರ ಸರಕಾರದ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಮನೋಜ್ ಮೋಹಿತೆ ಪ್ರತಿವಾದ ಮಂಡಿಸಿ, ಹೋಲೆ ಅವರು ಸಾಮಾನ್ಯ ವ್ಯಕ್ತಿ. ಗಣ್ಯ ವ್ಯಕ್ತಿ ಅಲ್ಲ. ಶೇ. 0.2ಕ್ಕಿಂತ ಕಡಿಮೆ ಇರುವ ಟ್ವಿಟ್ಟರ್ ಬಳಕೆದಾರರಿಗೆ 20,000 ಹಿಂಬಾಲಕರು ಇದ್ದಾರೆ. ಸಾಮಾಜಿಕ ಮಾಧ್ಯಮ ತಪ್ಪು ಮಾಹಿತಿಯನ್ನು ಹರಡಿದೆ ಎಂಬುದು ಸ್ಪಷ್ಟವಾಗಿ ಕಂಡು ಬಂದಿದೆ ಎಂದು ಪ್ರತಿಪಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News