ಚೀನಾದೊಂದಿಗಿನ ಬಿಕ್ಕಟ್ಟಿನ ನಡುವೆ ‘ಫೈರ್ ಆ್ಯಂಡ್ ಫ್ಯೂರಿ ಕಾರ್ಪ್ಸ್’ ಅನ್ನು ಭೇಟಿಯಾದ ಸೇನಾ ವರಿಷ್ಠ

Update: 2020-12-23 16:29 GMT

ಹೊಸದಿಲ್ಲಿ, ಡಿ. 23: ಸೇನಾ ವರಿಷ್ಠ ಜನರಲ್ ಎಂ.ಎಂ. ನರವಣೆ ಬುಧವಾರ ಪೂರ್ವ ಲಡಾಖ್‌ನ ಎತ್ತರದ ವಿವಿಧ ಮುಂಚೂಣಿ ಪ್ರದೇಶಕ್ಕೆ ಭೇಟಿ ನೀಡಿದರು ಹಾಗೂ ಕಳೆದ 7 ತಿಂಗಳಿಂದ ಚೀನಾದೊಂದಿಗಿನ ಗಡಿ ಬಿಕ್ಕಟ್ಟು ಇರುವ ಈ ವಲಯದಲ್ಲಿ ಸೇನಾ ಸಿದ್ಧತೆಯನ್ನು ಪರಿಶೀಲಿಸಿದರು.

ಜನರಲ್ ನರವಣೆ ಅವರು ರೆಚಿನ್ ಲಾ ಸೇರಿದಂತೆ ವಿವಿಧ ಮುಂಚೂಣಿ ಪ್ರದೇಶಗಳಿಗೆ ಭೇಟಿ ನೀಡಿದರು ಹಾಗೂ ಲಡಾಖ್‌ನ ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿನ ಪರಿಸ್ಥಿತಿಯ ನೇರ ಮೌಲ್ಯಮಾಪನ ಮಾಡಿದರು ಎಂದು ಸೇನಾ ಮೂಲಗಳು ತಿಳಿಸಿವೆ. ಮೈನಸ್ 0 ಉಷ್ಣಾಂಶ ಇರುವ ಪೂರ್ವ ಲಡಾಖ್‌ನ ವಿವಿಧ ಪರ್ವತಮಯ ಪ್ರದೇಶಗಳಲ್ಲಿ ಯುದ್ಧಕ್ಕೆ ಸನ್ನದ್ಧವಾಗಿರುವ ಸುಮಾರು 50 ಸಾವಿರ ಯೋಧರನ್ನು ನಿಯೋಜಿಸಲಾಗಿದೆ.

ಚೀನಾ ಕೂಡ ಇದೇ ಸಂಖ್ಯೆಯಲ್ಲಿ ಯೋಧರನ್ನು ನಿಯೋಜಿಸಿದೆ ಎಂದು ಅದು ತಿಳಿಸಿದೆ. ‘ಫಯರ್ ಆ್ಯಂಡ್ ಫ್ಯೂರಿ (ಬೆಂಕಿ ಮತ್ತು ಆಕ್ರೋಶ) ಕಾರ್ಪ್ಸ್’ ಎಂದೇ ಜನಪ್ರಿಯವಾಗಿರುವ ಲೇಹ್ ಮೂಲದ 14 ಕಾರ್ಪ್ಸ್‌ನ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಪಿಜಿಕೆ ಮೆನನ್ ಪೂರ್ವ ಲಡಾಖ್ ‌ನ ಪರಿಸ್ಥಿತಿಯ ವಿವಿಧ ಆಯಾಮಗಳ ಬಗ್ಗೆ ಸೇನಾ ವರಿಷ್ಠರಿಗೆ ವಿವರಿಸಿದರು. ತೀವ್ರ ಚಳಿ ಇರುವ ಈ ವಲಯದಲ್ಲಿ ತಳಮಟ್ಟದ ಪರಿಸ್ಥಿತಿ ಪರಿಶೀಲಿಸುವ ಉದ್ದೇಶದೊಂದಿಗೆ ಒಂದು ದಿನದ ಭೇಟಿಗಾಗಿ ಜನರಲ್ ನರವಣೆ ಅವರು ಲಡಾಖ್‌ಗೆ ಬೆಳಗ್ಗೆ 8.30ಕ್ಕೆ ತಲುಪಿದರು ಎಂದು ಮೂಲಗಳು ತಿಳಿಸಿವೆ. ‘‘ವಾಸ್ತವ ನಿಯಂತ್ರಣ ರೇಖೆಯ ಪರಿಸ್ಥಿತಿಯನ್ನು ನೇರವಾಗಿ ಮೌಲ್ಯಮಾಪನ ಮಾಡಲು ರೆಚಿನ್ ಲಾ ಸೇರಿದಂತೆ ‘ಫಯರ್ ಆ್ಯಂಡ್ ಫರಿ ಕಾರ್ಪ್ಸ್’ನ ಮುಂಚೂಣಿ ಪ್ರದೇಶಕ್ಕೆ ಸೇನಾ ವರಿಷ್ಠ ಜನರಲ್ ಎಂ.ಎಂ. ನರವಣೆ ಭೇಟಿ ನೀಡಿದರು. ನಾಲ್ಕು ಪಡೆಗಳು ಕಾರ್ಯಾಚರಣೆಗೆ ಸಿದ್ಧವಾಗಿರುವ ಬಗ್ಗೆ ಅವರಿಗೆ ‘ಫಯರ್ ಆ್ಯಂಡ್ ಫ್ಯೂರಿ ಕಾರ್ಪ್ಸ್’ನ ಕಮಾಂಡರ್ ಹಾಗೂ ಸ್ಥಳೀಯ ಕಮಾಂಡರ್‌ಗಳು ಮಾಹಿತಿ ನೀಡಿದರು’’

ಮುಂಚೂಣಿ ಪ್ರದೇಶದಲ್ಲಿ ನಿಯೋಜಿತ ಪಡೆಗಳೊಂದಿಗೆ ಜನರಲ್ ನರವಣೆ ಅವರು ಸಂವಹನ ನಡೆಸಿದರು ಹಾಗೂ ಮೊದಲಿನ ಉತ್ಸಾಹದಿಂದ ಕಾರ್ಯಾಚರಣೆ ಮುಂದುವರಿಸುವಂತೆ ಅವರಿಗೆ ಸೂಚಿಸಿದರು ಎಂದು ಸೇನೆ ತಿಳಿಸಿದೆ. ಕ್ರಿಸ್ಮಸ್ ಹಿನ್ನೆಲೆಯಲ್ಲಿ ಅವರು ಯೋಧರಿಗೆ ಸಿಹಿ ತಿಂಡಿ ಹಾಗೂ ಕೇಕ್‌ಗಳನ್ನು ವಿತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News