ಟಿಎಂಸಿ ಕೋವಿಡ್-19ಗಿಂತ ಅಪಾಯಕಾರಿ ವೈರಸ್: ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಷ್

Update: 2020-12-24 05:46 GMT

ಹೊಸದಿಲ್ಲಿ: ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷ ಮತ್ತು ಭಾರತೀಯ ಜನತಾ ಪಕ್ಷದ ಮುಖಂಡರ ನಡುವೆ ವಾಕ್ಸಮರ ಮುಂದುವರಿದಿದ್ದು, "ಟಿಎಂಸಿ ಕೋವಿಡ್-19ಗಿಂತ ಅಪಾಯಕಾರಿ ವೈರಸ್" ಎಂದು ಬಿಜೆಪಿ ಬಣ್ಣಿಸಿದೆ. ಈ ಮಧ್ಯೆ ಬಂಗಾಳವನ್ನು ಗುಜರಾತ್ ಮಾಡಲು "ಹೊರಗಿನವರಿಗೆ" ಅವಕಾಶ ನೀಡುವುದಿಲ್ಲ ಎಂದು ಮಮತಾ ಹೇಳಿದ್ದಾರೆ.

"ಟಿಎಂಸಿ ಕೋವಿಡ್-19ಗಿಂತ ಅಪಾಯಕಾರಿ ವೈರಸ್. ಮುಂದಿನ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಲಸಿಕೆ ಟಿಎಂಸಿಯನ್ನು ನಿರ್ಮೂಲನೆ ಮಾಡಲಿದೆ" ಎಂದು ಬಂಗಾಳ ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಷ್ ರ್ಯಾಲಿಯೊಂದರಲ್ಲಿ ಹೇಳಿದ್ದಾರೆ.

ಟಿಎಂಸಿಯನ್ನು ಪ್ರಜಾಪ್ರಭುತ್ವವಿಲ್ಲದ ಪಕ್ಷ ಎಂದು ಬಣ್ಣಿಸಿದ ಅವರು, ಟಿಎಂಸಿ ಸರ್ಕಾರ ಕೊನೆಯ ದಿನಗಳನ್ನು ಎಣಿಸುತ್ತಿದ್ದರೂ, ಆಡಳಿತ ಪಕ್ಷದ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರಲ್ಲಿ ’ಭಯ’ ಸೃಷ್ಟಿಸುತ್ತಿದ್ದಾರೆ ಎಂದು ದೂರಿದರು.

ಪಕ್ಷವನ್ನು ಕೊರೋನ ವೈರಸ್‌ಗೆ ಹೋಲಿಸಿದ ಬಗ್ಗೆ ಪ್ರತಿಕ್ರಿಯಿಸಲು ಟಿಎಂಸಿ ನಿರಾಕರಿಸಿದೆ. "ಅಂಥ ಹೇಳಿಕೆಗಳಿಗೆ ನಾವು ಪ್ರತಿಕ್ರಿಯೆ ನೀಡುವುದಿಲ್ಲ. ಅದು ಬಿಜೆಪಿಯ ಮನೋಸ್ಥಿತಿಯನ್ನು ಸೂಚಿಸುತ್ತದೆ. ಇದಕ್ಕೆ ರಾಜ್ಯದ ಜನತೆಯೇ ತಕ್ಕ ಉತ್ತರ ನೀಡಲಿದ್ದಾರೆ" ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಪಾರ್ಥ ಚಟರ್ಜಿ ಹೇಳಿದ್ದಾರೆ.

ಏನತ್ಮಧ್ಯೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, "ಬಂಗಾಳವನ್ನು ಗುಜರಾತ್ ಆಗಿ ಪರಿವರ್ತಿಸಲು ಹೊರಗಿನವರಿಗೆ ಅವಕಾಶ ನೀಡುವುದಿಲ್ಲ. ಬಂಗಾಳ ತನ್ನದೇ ಸಾಮರ್ಥ್ಯದಲ್ಲಿ ಪ್ರಗತಿಯಾಗಲಿದೆ. ಇದನ್ನು ಗುಜರಾತ್ ಆಗಿ ಪರಿವರ್ತಿಸಲು ಅವಕಾಶ ಕೊಡುವುದಿಲ್ಲ" ಎಂದಿದ್ದಾರೆ.

"ಬಂಗಾಳದ ಮಣ್ಣು ಜೀವನಮೂಲ. ಈ ಮಣ್ಣನ್ನು ನಾವು ಸಂರಕ್ಷಿಸಬೇಕು. ಈ ಬಗ್ಗೆ ನಮಗೆ ಹೆಮ್ಮೆ ಬೇಕು. ಹೊರಗಿನವರು ಬಂದು ನಾವಿದನ್ನು ಗುಜರಾತ್ ಮಾಡುತ್ತೇವೆ ಎಂದು ಹೇಳಬೇಕಿಲ್ಲ" ಎಂದು ಚುಚ್ಚಿದರು. "ನಾವು ಎಲ್ಲರಿಗಾಗಿ.. ಸಿಕ್ಖ್, ಜೈನ, ಮುಸ್ಲಿಂ, ಕ್ರಿಶ್ಚಿಯನ್ ಯಾರೇ ಇರಲಿ; ಅವರೆಲ್ಲರಿಗಾಗಿ ನಮ್ಮ ಮಾನವೀಯತೆ ಎನ್ನುವುದು ನಮ್ಮ ಸ್ಪಷ್ಟ ಸಂದೇಶ" ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News