ಸಾಗಾಟ ಮಾಡುತ್ತಿದ್ದ ವೇಳೆ ಎರಡು ಕೋಣಗಳನ್ನು ಅಪಹರಿಸಿ 50,000 ರೂ. ಬೇಡಿಕೆಯಿಟ್ಟ ಗುಂಪು

Update: 2020-12-27 07:54 GMT
ಸಾಂದರ್ಭಿಕ ಚಿತ್ರ

ಭೋಪಾಲ,ಡಿ.27: ಕೋಣಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ಅವುಗಳನ್ನು ಅಪಹರಿಸಿ, ಬಳಿಕ 50,000ರೂ. ನೀಡಬೇಕೆಂದು ಬೇಡಿಕೆಯಿಟ್ಟ ಘಟನೆಯು ಭೋಪಾಲ್ ನ ಬೇತುಲ್ ಜಿಲ್ಲೆಯಲ್ಲಿ ನಡೆದಿದೆ. ಸದ್ಯ ಪೊಲೀಸರು ಒಂದು ಕೋಣವನ್ನು ಪತ್ತೆ ಹಚ್ಚಿ ರೈತನಿಗೆ ತಲುಪಿಸಿದ್ದಾರೆ ಎಂದು ತಿಳಿದು ಬಂದಿದೆ.

ಒಂದು ವಾರದ ಹಿಂದೆ ಅಮರ್ ಚಂದ್ ಪಟೇಲ್ ಎಂಬ ರೈತ ಪಿಕ್-ಅಪ್ ವಾಹನದ ಮೂಲಕ ಎರಡು ಕೋಣಗಳನ್ನು ಸಾಗಿಸುತ್ತಿದ್ದ. ಈ ವೇಳೆ ಆರೋಪಿ ದೀಪಚಂದ್ ಎಂಬಾದ ವಾಹನವನ್ನು ಪಾವೇಲ್ ಗ್ರಾಮದ ಬಳಿ ತಡೆದು ನಿಲ್ಲಿಸಿ ಬಲವಂತವಾಗಿ ಎರಡು ಕೋಣಗಳನ್ನು ಹೊತ್ತೊಯ್ದಿದ್ದಾನೆ ಎಂದು ಮುಲ್ತಾಯಿ ಪೊಲೀಸ್ ಠಾಣೆಯ ಮುಖ್ಯಸ್ಥ ಸುರೇಶ್ ಸೋಲಂಕಿ ತಿಳಿಸಿದ್ದಾರೆ ಎಂದು timesofindia.com ವರದಿ ಮಾಡಿದೆ.

ಸ್ವಲ್ಪ ಸಮಯದ ಬಳಿಕ ರೈತನಿಗೆ ಕರೆ ಮಾಡಿದ ಆರೋಪಿಯು, ಕೋಣಗಳನ್ನು ಮರಳಿ ನೀಡಬೇಕಾದರೆ 50,000ರೂ. ಕೊಡಬೇಕೆಂದು ಹೇಳಿಕೆ ನೀಡಿದ್ದು, ಕೂಡಲೇ ರೈತ ಪ್ರಭಾತ್ ಪಟ್ಟಣ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾನೆ ಎಂದು ತಿಳಿದು ಬಂದಿದೆ. ಡಿ.23 ರಂದು ಪ್ರಮುಖ ಆರೋಪಿ ದೀಪಚಂದ್ ಎಂಬಾತನನ್ನು ಬಂಧಿಸಲಾಗಿದೆ. ಒಂದು ಕೋಣವನ್ನು ಪತ್ತೆ ಹಚ್ಚಿ ರೈತನಿಗೆ ಒಪ್ಪಿಸಲಾಗಿದೆ. ಇನ್ನೂ ಐವರು ಆರೋಪಿಗಳು ತಲೆ ಮರೆಸಿಕೊಂಡಿದ್ದು, ಇನ್ನೊಂದು ಕೋಣವು ಅವರ ವಶದಲ್ಲಿದೆ. ನಾವು ತನಿಖೆ ನಡೆಸುತ್ತಿದ್ದೇವೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿ ಹೇಳಿಕೆ ನೀಡಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News