ರಾಜತಂತ್ರ: ಭ್ರಷ್ಟ ವ್ಯವಸ್ಥೆಯ ವಿರುದ್ಧದ ತಂತ್ರ

Update: 2021-01-02 19:30 GMT

ಚಿತ್ರರಂಗಕ್ಕೆ ಮರುಪ್ರವೇಶ ಮಾಡಿದ ಬಳಿಕ ತಮ್ಮ ಪರಿಮಿತಿಯನ್ನು ಅರ್ಥ ಮಾಡಿಕೊಂಡು ಪಾತ್ರಗಳನ್ನು ಆಯ್ಕೆ ಮಾಡುತ್ತಿರುವ ಕಲಾವಿದ ರಾಘವೇಂದ್ರ ರಾಜ್ ಕುಮಾರ್, ಅಂತಹ ಆಯ್ಕೆಯಲ್ಲಿ ಅವರು ಎಷ್ಟೊಂದು ಬುದ್ಧಿವಂತರೆನ್ನುವುದನ್ನು ಸಾಬೀತುಪಡಿಸುವ ಚಿತ್ರವೇ ರಾಜತಂತ್ರ. ಆದರೆ ಪಾತ್ರ ಮತ್ತು ಕತೆಯ ಆಯ್ಕೆಯಲ್ಲಿರುವ ಈ ಜಾಣ್ಮೆ ಚಿತ್ರದ ಇತರ ವಿಭಾಗಕ್ಕೂ ಅನ್ವಯಿಸುತ್ತದೆಯೇ ಎಂದರೆ ಒಪ್ಪುವುದು ಕಷ್ಟ.

ಚಿತ್ರದ ಕತೆಯಲ್ಲಿ ರಾಜಾರಾಮ್ ಓರ್ವ ನಿವೃತ್ತ ಸೈನಿಕ. ದೇಶ ಸೇವೆಯಲ್ಲಿ ಹೆಸರು ಮಾಡಿ, ಶತ್ರುಗಳ ವಿರುದ್ಧ ಹೊಡೆದಾಡಿ ಕಾಲಿಗೇಟು ಮಾಡಿಕೊಂಡ ಆತನದು ಈಗ ನಿವೃತ್ತ ಬದುಕು. ಆದರೆ ಅಲ್ಲಿಯೂ ದೇಶ ಸೇವೆಯದೇ ಕನಸು. ಹಾಗಾಗಿ ಸಮಾಜದಲ್ಲಿನ ಅಪರಾಧ ಕೃತ್ಯಗಳ ಬಗ್ಗೆ ಅರಿತುಕೊಂಡು, ಅನೈತಿಕ ಪೊಲೀಸ್‌ಗಿರಿಗೆ ಗುರುವಾಗಿರುತ್ತಾನೆ. ಅಂತಹ ಸಂದರ್ಭದಲ್ಲಿ ತನ್ನ ಸ್ವಂತ ಮನೆಕೆಲಸದಾಕೆಯ ಮಗನೇ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದಾನೆ ಎನ್ನುವ ಸತ್ಯ ಆತನಿಗೆ ಅರಿವಾಗುತ್ತದೆ. ಅದಕ್ಕೆ ರಾಜಾರಾಮ್‌ನ ಪ್ರತಿಕ್ರಿಯೆ ಏನಿರುತ್ತದೆ? ಈ ಡ್ರಗ್ಸ್ ದಂಧೆಯಲ್ಲಿ ರಾಜಕಾರಣಿಗಳ ಕೈವಾಡ ಹೇಗೆ ಮತ್ತು ಅದನ್ನು ಮಟ್ಟಹಾಕಲು ರಾಜಾರಾಮ್‌ನ ಪ್ರಯತ್ನವೇನು ಎನ್ನುವ ಆಸಕ್ತಿಕರ ವಿಚಾರಗಳನ್ನು ಸರಳ ರೀತಿಯಲ್ಲಿ ಹೇಳಲಾಗಿರುವ ಚಿತ್ರವೇ ರಾಜತಂತ್ರ.

ಮೊದಲೇ ಹೇಳಿದಂತೆ ರಾಜಾರಾಮ್‌ನ ಪಾತ್ರವನ್ನು ಚಿತ್ರದ ನಾಯಕನಿಗೆ ಹೊಂದಾಣಿಕೆಯಾಗುವಂತೆ ಹೆಣೆದಿರುವುದರಲ್ಲಿ ಚಿತ್ರಕ್ಕೆ ಕತೆ, ಸಂಭಾಷಣೆ ರಚಿಸಿರುವ ಜೆ.ಎಂ ಪ್ರಹ್ಲಾದ್ ಅವರ ಸ್ಥಾನ ದೊಡ್ಡದು. ಆದರೆ ಅದಕ್ಕೆ ಜೀವಂತಿಕೆ ನೀಡಬೇಕಾಗಿದ್ದ ರಾಘವೇಂದ್ರ ರಾಜ್ ಕುಮಾರ್ ಅವರು ಸಂಭಾಷಣೆಯನ್ನು ಓದಿದಂತೆ ಭಾಸವಾಗುವುದು ವಿಪರ್ಯಾಸ. ಡಾ.ರಾಜ್ ಕುಮಾರ್ ಪುತ್ರ ಮತ್ತು ಸ್ವತಃ ರಾಜ್ಯ ಪ್ರಶಸ್ತಿ ವಿಜೇತ ನಟ ಎನ್ನುವ ಕಾರಣಕ್ಕೆ ರಾಘವೇಂದ್ರ ರಾಜ್ ಕುಮಾರ್ ಅವರ ಬಗ್ಗೆ ಅತಿಯಾದ ನಿರೀಕ್ಷೆ ಇರಿಸಿಕೊಂಡು ಚಿತ್ರ ನೋಡಿದರೆ, ಸಂಭಾಷಣೆಯನ್ನು ಪ್ರಸ್ತುತಗೊಳಿಸಿರುವ ವಿಚಾರದಲ್ಲಿ ನಿರಾಶೆಯಾಗುವುದು ಖಚಿತ. ಆದರೆ ತಮ್ಮ ಪರಿಮಿತಿಯೊಳಗೆ ಕೂಡ ಉತ್ಸಾಹದಿಂದ ಒಳ್ಳೆಯ ಪಾತ್ರವೊಂದನ್ನು ಅಭಿಮಾನಿಗಳಿಗೆ ನೀಡಲು ಮುಂದಾಗಿರುವ ರಾಘಣ್ಣನ ಪ್ರಯತ್ನವನ್ನು ಖಂಡಿತವಾಗಿ ಮೆಚ್ಚಲೇಬೇಕು. ಜೊತೆಗೆ ಅವರಿಗೆ ನೀಡಲಾಗಿರುವ ಕಾಸ್ಟ್ಯೂಮ್ಸ್ ಕೂಡ ಪಾತ್ರಕ್ಕೆ ಆಕರ್ಷಣೆ ತುಂಬುವಲ್ಲಿ ಸಹಕಾರಿಯಾಗಿದೆ.

ಉಳಿದಂತೆ ಚಿತ್ರದಲ್ಲಿ ಮತ್ತೊಂದು ಪ್ರಧಾನ ಪಾತ್ರವಾದ ವಿಜಯ್ ಶುಂಠಿಕೊಪ್ಪ ಎನ್ನುವ ಪೊಲೀಸ್ ಅಧಿಕಾರಿಯಾಗಿ ಯುವನಟ ರಂಜನ್ ಹಾಸನ್ ಗಮನಾರ್ಹವಾಗಿ ನಟಿಸಿದ್ದಾರೆ. ಪೊಲೀಸ್ ಪಾತ್ರಕ್ಕೆ ಹೇಳಿ ಮಾಡಿಸಿದ ಮೈಕಟ್ಟು, ಯುವ ಪೊಲೀಸ್ ಅಧಿಕಾರಿಯ ಉತ್ಸುಕತೆ, ಹೊಡೆದಾಟದ ದೃಶ್ಯಗಳಲ್ಲಿನ ಪಾಲ್ಗೊಳ್ಳುವಿಕೆ ಎಲ್ಲದರಲ್ಲಿಯೂ ಭರವಸೆ ಮೂಡಿಸುತ್ತಾರೆ. ಭರವಸೆ ಮೂಡಿಸುವ ನಟರ ಪಟ್ಟಿಯಲ್ಲಿ ಚಿತ್ರದ ಪ್ರಮುಖ ಖಳನಟ ಕೋಬ್ರ ಪಾತ್ರಧಾರಿಯನ್ನು ಕೂಡ ಸೇರಿಸಬಹುದು. ಚಿತ್ರದಲ್ಲಿ ಹಿರಿಯ ನಟಿ ಭವ್ಯಾ ಅವರು ರಾಜಾರಾಮ್‌ನ ಮನೆ ಕೆಲಸದಾಕೆ ಗೌರಮ್ಮನ ಪಾತ್ರ ನಿಭಾಯಿಸಿದ್ದಾರೆ. ಅವರಿಗೆ ಚಿತ್ರದಲ್ಲಿ ನಟನೆಗೆ ಹೇಳಿಕೊಳ್ಳುವಂತಹ ಅವಕಾಶಗಳಿಲ್ಲ. ಆದರೆ ಒಂದೇ ಓಘದಲ್ಲಿ ಸಾಗುವ ಚಿತ್ರಕ್ಕೆ ನವರಸಗಳೊಂದಿಗೆ ಆಗಮಿಸುವ ನಟ ದೊಡ್ಡಣ್ಣ ಲವಲವಿಕೆ ತುಂಬುತ್ತಾರೆ.

ಹಾಸ್ಯ ಮತ್ತು ಖಳಛಾಯೆ ಎರಡನ್ನು ನಿಭಾಯಿಸಬಲ್ಲ ಅವರ ಪ್ರತಿಭೆಗೆ ಇಲ್ಲಿ ಗೃಹಮಂತ್ರಿ ಬೆಟ್ಟಯ್ಯನ ಪಾತ್ರದ ಮೂಲಕ ಅಪರೂಪದಲ್ಲಿ ಒಂದು ಉತ್ತಮ ಅವಕಾಶವೇ ದೊರಕಿದೆ. ಶ್ರೀನಿವಾಸ ಮೂರ್ತಿಯವರದು ಅಮಾಯಕ ಮುಖ್ಯಮಂತ್ರಿಯ ಪಾತ್ರ. ಲೇವಾದೇವಿ ವ್ಯವಹಾರಸ್ಥ ಗುಪ್ತನಾಗಿ ನೀನಾಸಂ ಅಶ್ವಥ್ ಅವರಿಂದ ಎಂದಿನಂತೆ ಸಂತೃಪ್ತ ಅಭಿನಯ. ಚಿತ್ರದಲ್ಲೊಂದು ಕ್ಷಣ ಡಾ.ರಾಜ್ ಕುಮಾರ್ ಅವರ ಸಿನೆಮಾ ದೃಶ್ಯ ಕೂಡ ಮಿಂಚಿ ಮಾಯವಾಗುತ್ತದೆ. ಅದು ಯಾವ ಸಿನೆಮಾ ಮತ್ತು ಏನು ಕಾರಣ ಎನ್ನುವುದನ್ನು ಅಭಿಮಾನಿ ವೀಕ್ಷಕರು ಚಿತ್ರಮಂದಿರದಲ್ಲಿ ನೋಡಿ ಖುಷಿ ಪಡಬಹುದು.

ಡ್ರಗ್ಸ್ ವಿಚಾರದಲ್ಲಿ ಭ್ರಷ್ಟ ರಾಜಕಾರಣ ಕೊಂಡಿಯಂತೆ ಹೇಗೆ ಬೇರೂರಿದೆ ಎಂದು ತೋರಿಸಿರುವುದಕ್ಕೆ ಪ್ರಶಂಸಿಸಬಹುದು. ಆದರೆ ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿಸದಿರುವುದು ನಿರಾಶೆಯನ್ನೂ ಮೂಡಿಸಬಹುದು. ಒಟ್ಟಿನಲ್ಲಿ ಛಾಯಾಗ್ರಾಹಕ ಪಿವಿಆರ್ ಸ್ವಾಮಿಯವರಿಗೆ ನಿರ್ದೇಶಕರಾಗಿ ಇದು ಮೊದಲ ಚಿತ್ರ. ಆರಂಭದಲ್ಲೇ ಒಂದೊಳ್ಳೆಯ ಸಂದೇಶ ಸಾರುವ ಕತೆಯನ್ನು ಆಯ್ದುಕೊಂಡಿದ್ದಕ್ಕಾಗಿ ಮೆಚ್ಚಿ ನೋಡುವುದರಿಂದ ತಪ್ಪೇನಿಲ್ಲ.

ತಾರಾಗಣ: ರಾಘವೇಂದ್ರ ರಾಜ್ ಕುಮಾರ್, ಭವ್ಯಾ, ರಂಜನ್ ಹಾಸನ್
ನಿರ್ದೇಶನ: ಪಿವಿಆರ್ ಸ್ವಾಮಿ
ನಿರ್ಮಾಣ: ವಿಶ್ವಂ ಡಿಜಿಟಲ್ ಮೀಡಿಯಾ ಪ್ರೈ. ಲಿಮಿಟೆಡ್

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News