'ಕನ್ನಡ ರಾಜಕಾರಣ' ದ ಸಾಧ್ಯತೆ, ಸವಾಲುಗಳನ್ನು ಧ್ಯಾನಿಸುತ್ತಾ…
ನಟರಾಜು ವಿ.
ಕನ್ನಡ ಪತ್ರಿಕೋದ್ಯಮದಲ್ಲಿ ಕಳೆದ ಹದಿನೈದು ವರ್ಷಗಳಿಂದ ತೊಡಗಿಸಿಕೊಂಡಿರುವ ನಟರಾಜು ವಿ. ಅವರು ಪತ್ರಕರ್ತ, ಅಂಕಣ ಬರಹಗಾರರಾಗಿ ತಮ್ಮ ಚಿಂತನಾಪರತೆಯಿಂದ ಗುರುತಿಸಿಕೊಂಡವರು. ಸೃಜನಶೀಲ ಬರವಣಿಗೆ, ಅನುವಾದ, ಸಾಮಾಜಿಕ ಮಾಧ್ಯಮಗಳ ನಿರ್ವಹಣೆಯ ಮೂಲಕ ಗಮನ ಸೆಳೆದವರು. ಡಿಜಿಟಲ್ ಯುಗದಲ್ಲಿ ಕನ್ನಡ ಪತ್ರಿಕೋದ್ಯಮದ ಹೊಸ ಸಾಧ್ಯತೆಗಳ ಬಗ್ಗೆ ಉತ್ಸಾಹದಿಂದ ಅನ್ವೇಷಿಸುತ್ತಿರುವವರು. ಪ್ರಸ್ತುತ ಕನ್ನಡದ ಮೊಟ್ಟಮೊದಲ ಕಾನೂನು ಸುದ್ದಿ ತಾಣವಾದ kannada.barandbench.com ಡಿಜಿಟಲ್ ಮಾಧ್ಯಮದ ಉಸ್ತುವಾರಿ ಹೊತ್ತಿದ್ದಾರೆ.
ಹಿಂದೆಂದಿಗಿಂತಲೂ ಇಂದು ಪ್ರಾದೇಶಿಕ ಅಸ್ಮಿತೆಯ ರಾಜಕಾರಣದ ಜರೂರತ್ತು ಹೆಚ್ಚಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅದರಲ್ಲಿಯೂ ರಾಷ್ಟ್ರಪ್ರೇಮ ಮತ್ತು ಹಿಂದುತ್ವವನ್ನು ಬೆಸೆದು ರಾಜಕಾರಣವನ್ನು ಮಾಡುತ್ತಿರುವ ಅಧಿಕಾರರೂಢ ಬಿಜೆಪಿಯು ಹಿಂದುತ್ವವೆಂದರೆ, ದೇಶಪ್ರೇಮವೆನ್ನುವ ಸಂಕಥನವನ್ನು ಬಹುಸಂಖ್ಯಾತರಲ್ಲಿ ಸುಪ್ತವಾಗಿ ಕಟ್ಟಿದೆ. ಈ ಹೊತ್ತಿನಲ್ಲಿ ಸಹಜವಾಗಿಯೇ, ಬಹುಸಂಖ್ಯಾತರನ್ನು ಇಂತಹ ಕಣ್ಕಟ್ಟಿನಿಂದ ವಿಮುಖವಾಗಿಸಿ, ಭಾಷಾ ಪ್ರೇಮ, ನೆಲ-ಜಲದ ವಿಷಯಗಳನ್ನು ಮುಂದಿರಿಸಿಕೊಂಡು ಪ್ರಾದೇಶಿಕ ಅಸ್ಮಿತೆಯಡಿ ತರುವ ಮೂಲಕ, ಎಲ್ಲರನ್ನೂ ಒಳಗೊಳ್ಳುವ ರಾಜಕಾರಣವನ್ನು ಮಾಡುವುದು ಉತ್ತಮ ಪರ್ಯಾಯವಾಗಬಹುದು ಎನ್ನುವ ಅನಿಸಿಕೆ ಅನೇಕರಲ್ಲಿ ಮೂಡಿದೆ. ರಾಷ್ಟ್ರೀಯತೆ ಮತ್ತು ಹಿಂದುತ್ವವಾದದ ಎದುರಿಗೆ ಮಾತೃಭಾಷೆ ಅಥವಾ ಪ್ರಾಂತೀಯ ಭಾಷೆ ಹಾಗೂ ಪ್ರಾದೇಶಿಕ ಅಸ್ಮಿತೆಯ ಸುತ್ತ ಕಟ್ಟುವ ರಾಜಕಾರಣ ಪ್ರಬಲ ಪೈಪೋಟಿಯನ್ನೊಡ್ಡಬಲ್ಲದು, ಬಹುತ್ವವನ್ನು ಕಾಪಾಡುವ ಸಂವಿಧಾನದ ಆಶಯವನ್ನೂ ಎತ್ತಿಹಿಡಿಯಬಲ್ಲದು ಎನ್ನುವ ಅನಿಸಿಕೆಗಳೂ ದಟ್ಟವಾಗಿವೆ.
ಇಪ್ಪತ್ತೊಂದನೇ ಶತಮಾನ ಎರಡು ದಶಕಗಳನ್ನು ಪೂರೈಸಿರುವ ಹೊತ್ತಿದು. ನಾವು ಎದುರುಗೊಳ್ಳಲಿರುವ ಈ ಶತಮಾನದ ಮೂರನೆಯ ದಶಕವು ಜಾಗತಿಕವಾಗಿ, ರಾಷ್ಟ್ರೀಯವಾಗಿ, ಪ್ರಾಂತೀಯವಾಗಿ ಅತ್ಯಂತ ದೊಡ್ಡ ತಿರುವನ್ನು ನೀಡುವ ದಶಕವಾಗುವುದರಲ್ಲಿ ಸಂಶಯವಿಲ್ಲ. ರಾಜಕಾರಣ, ವಿಜ್ಞಾನ-ತಂತ್ರಜ್ಞಾನ, ವಿತ್ತೀಯ ಮಾರುಕಟ್ಟೆಯ ಸ್ವರೂಪಗಳು, ಸಂಸ್ಕೃತಿ ಮತ್ತು ಜನಾಂಗೀಯತೆಯ ಚಹರೆಗಳು, ಸಾಮಾಜಿಕ ಸನ್ನಿವೇಶಗಳು ಇವೆಲ್ಲದರಲ್ಲಿಯೂ ಮಹತ್ತರವಾದ ಪಲ್ಲಟಗಳು, ಹೊರಳುಗಳು, ಜಿಗಿತಗಳು ಈ ದಶಕದಲ್ಲಿ ದಾಖಲಾಗಲಿವೆ. ವಿಜ್ಞಾನ-ತಂತ್ರಜ್ಞಾನ, ಆರೋಗ್ಯ, ಸಂವಹನ, ಕೃತಕ ಬುದ್ಧಿಮತ್ತೆ, ದತ್ತಾಂಶ ವಿಶ್ಲೇಷಣೆ, ಆಧುನಿಕ ತಂತ್ರಜ್ಞಾನದ ಮೂಲಕ ಅಂತರ್ಜೋಡಣೆಗೊಂಡ ಸಾರಿಗೆ ಮತ್ತು ಅತ್ಯಾಧುನಿಕ ವಸಾಹತುಗಳು ಇವೆಲ್ಲವೂ ಕನಸಿನಿಂದೆದ್ದು ಬಂದಂತೆ ಬರುವ ದಿನಗಳಲ್ಲಿ ನಮ್ಮ ಮುಂದೆ ನಿಲ್ಲುವ ಸಾಧ್ಯತೆಗಳು ನಿಚ್ಚಳವಾಗಿವೆ. ಅದೇ ವೇಳೆ, ಇದಕ್ಕೆ ಸಂಪೂರ್ಣವಾದ ವಿರುದ್ಧ ದಿಕ್ಕಿನಲ್ಲಿ ಬೃಹತ್ ಆರ್ಥಿಕ ಕಂದರಗಳು, ಜನಾಂಗೀಯ ವಾದಗಳು, ಮೂಲಭೂತವಾದದ ಬೇರುಗಳು ಆಳವಾಗುವುದರೊಟ್ಟಿಗೇ, ಆಘಾತಕಾರಿ ಸ್ವರೂಪ ಪಡೆಯುವ ಸೂಚನೆಗಳೂ ಸಿಕ್ಕಿವೆ. ಸಾಗಿ ಬಂದ ಹಿಂದಿನ ದಶಕದೆಡೆಗೆ ತಿರುಗಿ ನೋಡಿದಾಗ ತಂತ್ರಜ್ಞಾನ ಮತ್ತು ಸಂವಹನವು ಸಮಾಜವನ್ನು ಆವರಿಸಿಕೊಂಡ ರೀತಿ, ಅತ್ಯಂತ ಕ್ಷಿಪ್ರವಾಗಿ ಜೀವನದ ಎಲ್ಲ ಪಥಗಳಲ್ಲಿಯೂ ಹಾಸುಹೊಕ್ಕಾದ ಬಗೆ ನಮ್ಮನ್ನು ಅಚ್ಚರಿಸಿಗೊಳಿಸುತ್ತದೆ. ಅಷ್ಟೇ ಅಲ್ಲದೆ, ತಂತ್ರಜ್ಞಾನ ಮತ್ತು ಸಂವಹನವನ್ನು ಆಧರಿಸಿ ಬೆರಳಂಚಿನಲ್ಲಿ, ಮನೆಬಾಗಿಲಿಗೆ ಸವಲತ್ತು, ಸೌಕರ್ಯಗಳನ್ನು ಪೂರೈಸುವ ಉದ್ಯಮಶೀಲತೆ ಊಹಿಸಲಸಾಧ್ಯವಾದ ವೇಗದಲ್ಲಿ ವಿಕಸನಗೊಂಡಿದೆ. ಈ ಹಿಂದೆಲ್ಲಾ, ಮೂರ್ನಾಲ್ಕು ದಶಕಗಳಲ್ಲಿ ಸಂಭವಿಸುತ್ತಿದ್ದ ಪಲ್ಲಟಗಳು, ಈಗ ಅತ್ಯಂತ ಸಿನಿಮೀಯವಾಗಿ ಒಂದು ದಶಕದ ಅವಧಿಯಲ್ಲಿಯೇ ಸಂಭವಿಸಿದೆ. ವಿಪರ್ಯಾಸವೆಂದರೆ, ನಮ್ಮನ್ನು ಆವರಿಸಿಕೊಂಡ ತಂತ್ರಜ್ಞಾನಕ್ಕೆ ನಮ್ಮನ್ನು ಹೆಚ್ಚು ವಿಚಾರಶೀಲರನ್ನಾಗಿಸಲು ಸಾಧ್ಯವಾಗಲಿಲ್ಲ. ಬದಲಿಗೆ, ಜಾಗತಿಕವಾಗಿ ದೇಶ, ಸಮುದಾಯಗಳನ್ನು ಹೆಚ್ಚೆಚ್ಚು ಸಾಂಪ್ರದಾಯಿಕವಾಗಿ ಆಲೋಚಿಸಲು, ಪೂರ್ವಗ್ರಹ ಪೀಡಿತವಾಗಲು, ಮೂಲಭೂತವಾದಗಳಿಗೆ ಇಂಬುಕೊಡಲು, ವಿಚಾರಶಕ್ತಿಯನ್ನು ಕುಂದಿಸಲು ತಂತ್ರಜ್ಞಾನ ಮತ್ತು ಸಂವಹನದ ಬಳಕೆಯಾದದ್ದು ಸಾಗಿಹೋದ ದಶಕದ ದೊಡ್ಡ ನ್ಯೂನತೆಯು ಕೂಡ. ಢಾಳಾದ ಅಪನಂಬಿಕೆ, ದಟ್ಟ ಪೂರ್ವಗ್ರಹ, ಅಸಹನೆ, ಅಸಹಿಷ್ಣುತೆಗಳು ಇಂದು ಸಮಾಜವನ್ನು ಹಿರಿದಾಗಿ ವ್ಯಾಪಿಸಿವೆ. ಬಹುಮುಖ್ಯವಾಗಿ ಇವೆಲ್ಲವೂ ಇಂದಿನ ರಾಜಕಾರಣದ ಹೆಗ್ಗುರುತುಗಳಾಗಿವೆ. ಇಂದಿನ ರಾಜಕಾರಣದ ಈ ಚಹರೆಯನ್ನು ನಮಗೆ ಸ್ಪಷ್ಟವಾಗಿ ಗುರುತಿಸಿಕೊಳ್ಳಲು ಸಾಧ್ಯವಾದಾಗ ಮಾತ್ರವೇ ಭವಿಷ್ಯದ ರಾಜಕಾರಣದ ರೂಹುಗಳ ಬಗ್ಗೆ ಎಚ್ಚರಿಕೆಯಿಂದ ಆಲೋಚಿಸಲು ಸಾಧ್ಯ.
ಪ್ರಜಾಪ್ರಭುತ್ವವೆನ್ನುವುದು ಇಂದು ಬಹುಸಂಖ್ಯೆ, ಬಹುಮತದ ಕೈವಶವಾಗಿದೆ. ಸಂವಿಧಾನದ ಆಶಯಗಳಿಗೆ ವಿರುದ್ಧವಾದ ಚಿಂತನೆಗಳಿಗೆ ಬಹುಸಂಖ್ಯೆಯ ಸಹಮತವನ್ನು ಗಳಿಸುವ ಕುಟಿಲತೆ, ಅದನ್ನೇ ಪ್ರಜೆಗಳ ಆದೇಶವೆಂದು ನಿರ್ಲಜ್ಜವಾಗಿ ಬಳಸುವ ಕುತ್ಸಿತತೆ ರಾಜಕಾರಣದ ಪ್ರಧಾನ ಭೂಮಿಕೆಯಲ್ಲಿ ಆರಾಮವಾಗಿ ಆಸೀನವಾಗಿದೆ. ಒಳಗೊಳ್ಳುವ, ಬಹುತ್ವದ ರಾಜಕಾರಣ ಸೋತು, ಸೊರಗಿ, ಹೊರಗಿಡುವ ಅಪಾಯಕಾರಿ, ದ್ವೇಷದ ರಾಜಕಾರಣ ಪ್ರಬಲಗೊಂಡಿದೆ. ಪ್ರಜಾಪ್ರಭುತ್ವವೆನ್ನುವುದು ‘ಹೌದಪ್ಪಗಳ’ ಬಹುಮತದ ರಾಜಕಾರಣದ ಔಪಚಾರಿಕತೆಗೆ ಕುಸಿದಿದೆ. ಪ್ರಜಾಪ್ರಭುತ್ವವನ್ನೇ ಬಳಸಿಕೊಂಡು ಅದರ ಆಶಯಕ್ಕೆ ವಿರುದ್ಧವಾದ ಸರ್ವಾಧಿಕಾರತ್ವದ ಮೋಹಕ್ಕೆ ಜನತೆಯ ಸಹಮತವನ್ನು ಗಿಟ್ಟಿಸುವ ಭಾವಾವೇಷದ, ಕುಟಿಲ ತಂತ್ರದ ಪಾಶವೀ ರಾಜಕಾರಣ ಸಂವಿಧಾನವನ್ನು ಗಟ್ಟಿಯಾಗಿ ಬಿಗಿಯತೊಡಗಿದೆ.
ಹೀಗೆ, ಸಾರ್ವಜನಿಕ ಬದುಕಿನೆಲ್ಲೆಡೆ ವೈರುಧ್ಯದ ಸಂಘರ್ಷಗಳು ದಟ್ಟೈಸಿರುವ ಕಾಲಮಾನದ ನವೆಂಬರ್ ತಿಂಗಳಿನ ಚಳಿಗಾಲವೊಂದರಲ್ಲಿ ಕೂತು, ಒಂದೆಡೆ ದೂರದ ದಿಲ್ಲಿಗೆ ಮುತ್ತಿಗೆ ಹಾಕಲು ಮುಗಿಬಿದ್ದಿರುವ ರೈತರೊಂದಿಗೆ ಚೆಲ್ಲಾಟವಾಡುತ್ತಿರುವ ಕೇಂದ್ರ ಸರಕಾರವನ್ನೂ, ಮತ್ತೊಂದೆಡೆ ‘ಒಂದು ದೇಶ, ಒಂದು ಚುನಾವಣೆ’ ಎಂದು ಫರ್ಮಾನು ಹೊರಡಿಸುತ್ತಿರುವ ಪ್ರಧಾನಿಯವರನ್ನೂ ನೋಡುವಾಗ, ಪ್ರತಿ ಬಾರಿಗಿಂತ ಕೊಂಚ ಜೋರಾಗಿಯೇ ಈ ಬಾರಿಯ ನವೆಂಬರ್‌ನಲ್ಲಿ ಕೇಳಿಬರುತ್ತಿರುವ ‘ಕನ್ನಡದ ರಾಜಕಾರಣ’ದ ಬಗೆಗಿನ ಚರ್ಚೆ ತುಸು ಪುಳಕ ಹುಟ್ಟಿಸುತ್ತಿರುವುದು ಸುಳ್ಳಲ್ಲ. ಆರಾಮ ಕುರ್ಚಿಯಲ್ಲಿ ಕೂತು, ಬಿಸಿಯಾದ ಕಾಫಿಯನ್ನು ಹೀರುತ್ತಾ ಗಂಭೀರ ವದನರಾಗಿ ಚರ್ಚಿಸಲು ಹೇಳಿಮಾಡಿಸಿದಂತಹ ಅರ್ಹ ವಿಷಯವಿದು ಎನ್ನಲಡ್ಡಿಯಿಲ್ಲ! ಆದರೆ, ಅದರಾಚೆಗೆ, ಇಂದಿನ ಸವಾಲುಗಳಿಗೆ ಈ ರಾಜಕಾರಣ ಪರಿಹಾರವಾಗಬಲ್ಲುದೇ ಎಂದು ಗಮನಿಸಿದರೆ, ಅಲ್ಲಿ ಉತ್ತರಕ್ಕಿಂತ, ಪ್ರಶ್ನೆಗಳೇ ಹೆಚ್ಚು ಉಳಿಯುತ್ತವೆ.
ಬಹುತ್ವದ ರಾಜಕಾರಣವೋ, ಬಹುಸಂಖ್ಯಾತರ ರಾಜಕಾರಣವೋ?!
ಹಿಂದೆಂದಿಗಿಂತಲೂ ಇಂದು ಪ್ರಾದೇಶಿಕ ಅಸ್ಮಿತೆಯ ರಾಜಕಾರಣದ ಜರೂರತ್ತು ಹೆಚ್ಚಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅದರಲ್ಲಿಯೂ ರಾಷ್ಟ್ರಪ್ರೇಮ ಮತ್ತು ಹಿಂದುತ್ವವನ್ನು ಬೆಸೆದು ರಾಜಕಾರಣವನ್ನು ಮಾಡುತ್ತಿರುವ ಅಧಿಕಾರರೂಢ ಬಿಜೆಪಿಯು ಹಿಂದುತ್ವವೆಂದರೆ, ದೇಶಪ್ರೇಮವೆನ್ನುವ ಸಂಕಥನವನ್ನು ಬಹುಸಂಖ್ಯಾತರಲ್ಲಿ ಸುಪ್ತವಾಗಿ ಕಟ್ಟಿದೆ. ಈ ಹೊತ್ತಿನಲ್ಲಿ ಸಹಜವಾಗಿಯೇ, ಬಹುಸಂಖ್ಯಾತರನ್ನು ಇಂತಹ ಕಣ್ಕಟ್ಟಿನಿಂದ ವಿಮುಖವಾಗಿಸಿ, ಭಾಷಾ ಪ್ರೇಮ, ನೆಲ-ಜಲದ ವಿಷಯಗಳನ್ನು ಮುಂದಿರಿಸಿಕೊಂಡು ಪ್ರಾದೇಶಿಕ ಅಸ್ಮಿತೆಯಡಿ ತರುವ ಮೂಲಕ, ಎಲ್ಲರನ್ನೂ ಒಳಗೊಳ್ಳುವ ರಾಜಕಾರಣವನ್ನು ಮಾಡುವುದು ಉತ್ತಮ ಪರ್ಯಾಯವಾಗಬಹುದು ಎನ್ನುವ ಅನಿಸಿಕೆ ಅನೇಕರಲ್ಲಿ ಮೂಡಿದೆ. ರಾಷ್ಟ್ರೀಯತೆ ಮತ್ತು ಹಿಂದುತ್ವವಾದದ ಎದುರಿಗೆ ಮಾತೃಭಾಷೆ ಅಥವಾ ಪ್ರಾಂತೀಯ ಭಾಷೆ ಹಾಗೂ ಪ್ರಾದೇಶಿಕ ಅಸ್ಮಿತೆಯ ಸುತ್ತ ಕಟ್ಟುವ ರಾಜಕಾರಣ ಪ್ರಬಲ ಪೈಪೋಟಿಯನ್ನೊಡ್ಡಬಲ್ಲದು, ಬಹುತ್ವವನ್ನು ಕಾಪಾಡುವ ಸಂವಿಧಾನದ ಆಶಯವನ್ನೂ ಎತ್ತಿಹಿಡಿಯಬಲ್ಲದು ಎನ್ನುವ ಅನಿಸಿಕೆಗಳೂ ದಟ್ಟವಾಗಿವೆ. ಆದರೆ, ಇದೆಲ್ಲ, ಆಶಯಾತ್ಮಕವಾಗಿ ಕಾಣುವಷ್ಟು ಸರಳವಲ್ಲ, ಸಂಕೀರ್ಣ ಒಳಸುಳಿಗಳನ್ನು ಹೊಂದಿರುವಂಥದ್ದು; ಈ ಹಾದಿ ಅಧಿಕಾರ ರಾಜಕಾರಣದ ಮತ್ತೊಂದು ಹಾದಿಯಾಗಬಹುದೇನೋ, ಆದರೆ, ಇದು ಖಂಡಿತವಾಗಿಯೂ ಹಿಂದುತ್ವದ ರಾಜಕಾರಣಕ್ಕೆ ಪರ್ಯಾಯವಾಗುವುದು ಅನುಮಾನ; ಬದಲಿಗೆ ಅದಕ್ಕೆ ಸಂವಾದಿಯಾಗಿ ಅದರ ಬಗಲಿನಲ್ಲಿಯೇ ಸಾಗಿಬಿಡುವ ಸಾಧ್ಯತೆಯೇ ಹೆಚ್ಚು. ಇದು ಒಳಗೊಳ್ಳುವ ರಾಜಕಾರಣವಾಗುವುದಕ್ಕಿಂತ ಸುಲಭದಲ್ಲಿಯೇ ವಿವಿಧ ಭಾಷಿಕ ಸಮುದಾಯಗಳನ್ನು ಹೊರಗಿಡುವ, ‘ಅನ್ಯತೆ’ಯನ್ನು ಕಿವಿಗಳಿಂದ ಗ್ರಹಿಸಿ, ಬಲುಬೇಗನೆ ಅಸಹನೆಯ ರಾಜಕಾರಣಕ್ಕೆ ವಾಲಿಕೊಂಡುಬಿಡುವ ಅಪಾಯ ಗಾಢವಾಗಿಯೇ ಇದೆ. ಭಾವಾವೇಷದ, ಬಲಪ್ರಯೋಗದ ರಾಜಕಾರಣವಾಗಿ ಇದು ಸಲೀಸಾಗಿ ಮಾರ್ಪಡುತ್ತದೆ ಕೂಡ. ಭಾರತದ ಇತಿಹಾಸದಲ್ಲಿ ಭಾಷಿಕ ರಾಜಕಾರಣಗಳು ಸಾಂವಿಧಾನಿಕ ತತ್ವಾದರ್ಶಗಳಲ್ಲಿ ರೂಹು ಪಡೆದದ್ದು ಕಡಿಮೆಯೆ.
ಭಾಷಿಕ ರಾಜಕಾರಣ, ಅಸ್ಮಿತೆಯ ರಾಜಕಾರಣದ ಮೊದಲ ಬೇರುಗಳು ನಮಗೆ ಗೋಚರಿಸುವುದು ಸ್ವಾತಂತ್ರ್ಯಪೂರ್ವದ ಬಂಗಾಳದ ರಾಜಕಾರಣದಲ್ಲಿ. ಬ್ರಿಟಿಷರು ಬಂಗಾಳದ ಮೂಲಕ ಭಾರತದ ಮೇಲೆ ಹಿಡಿತ ಪಡೆಯಲು ಆರಂಭಿಸಿದ ಆದಿಭಾಗದಲ್ಲಿಯೇ ಬಂಗಾಳಿ ಹಿಂದುತ್ವವಾದಿ ಮನಸ್ಸುಗಳು ಮುಸ್ಲಿಮ್ ಅರಸನಿಂದ ದೊರೆಯುವ ವಿಮೋಚನೆಯ ಹಾದಿಯನ್ನಾಗಿ ಬ್ರಿಟಿಷರ ಆಗಮನವನ್ನು ಕಂಡರು. ಆ ಕಾಲಘಟ್ಟದ ಅಭೀಪ್ಸೆಯನ್ನು ಪ್ರತಿನಿಧಿಸುವಂತೆ ಬಂಕಿಮಚಂದ್ರರ ‘ಆನಂದಮಠ’ ಕೃತಿಯಲ್ಲಿ ‘ಭಾಷೆ, ಧರ್ಮ, ದೇವಿ’ಯನ್ನು ಬೆಸೆದ ಧಾರ್ಮಿಕ-ಸಾಂಸ್ಕೃತಿಕ ರಾಜಕಾರಣದ ಗಾಢ ಘಮಲನ್ನು ನಾವು ಕಾಣುತ್ತೇವೆ. ಅಲ್ಲಿನ ‘ವಂದೇ ಮಾತರಂ’ ಜಯಘೋಷವು ಏಕಕಾಲಕ್ಕೆ ಬಂಗಾಳಿ ಅಸ್ಮಿತೆಯಾಗಿ, ರಾಷ್ಟ್ರಭಕ್ತಿಯಾಗಿ, ಭಾಷಾಭಿಮಾನವಾಗಿ, ಧರ್ಮ ಕ್ರಾಂತಿಯ ಯುದ್ಧಘೋಷವಾಗಿ ವ್ಯಾಪಿಸಿಕೊಳ್ಳುತ್ತಾ ಹೋದದ್ದನ್ನು ಕಾಣುತ್ತೇವೆ. ಆ ಕಾಲಘಟ್ಟದ ಬಂಗಾಳಿ ಅಸ್ಮಿತೆಯ ರಾಜಕಾರಣದಿಂದ ಹಿಡಿದು ಇಂದಿನ ಶಿವಸೇನೆಯ ರಾಜಕಾರಣದವರೆಗೆ ಭಾಷಾ ರಾಜಕಾರಣವೆನ್ನುವುದು ಸುಲಭಕ್ಕೆ ಬಹುಸಂಖ್ಯಾತರ ಧಾರ್ಮಿಕ ರಾಜಕಾರಣದ ತೆಕ್ಕೆಗೆ ಸಿಲುಕಿದೆ. ಜನಾಂಗೀಯವಾದವು ಕಣ್ಣುಗಳ ಮೂಲಕ ಅನ್ಯತೆಯನ್ನು ಗ್ರಹಿಸಿದರೆ, ಭಾಷಾವಾದವು ಕಿವಿಗಳ ಮೂಲಕ ‘ಅನ್ಯತೆ’ಯನ್ನು ಗ್ರಹಿಸುವ ರಾಜಕಾರಣದ ಭಾಗವಾಗಿದ್ದೇ ಹೆಚ್ಚು. ಹಾಗಾಗಿ, ಭಾಷಿಕ ರಾಜಕಾರಣದ ಮೂಲಕ ‘ಅನನ್ಯತೆ’ಯ ರಾಜಕಾರಣವನ್ನು ಸಾಧಿಸಲು ಹೊರಡಬಯಸುವವರು ಅದು ಸುಲಭಕ್ಕೆ ‘ಅನ್ಯತೆ’ಯ ಹಾದಿಗೆ ತಮ್ಮನ್ನು ಎಳೆದೊಯ್ಯುವ ಸಾಧ್ಯತೆಗಳನ್ನು ಗಮನಿಸಬೇಕು.
ಹೀಗಾಗಲು ಕಾರಣ ಸರಳಗೋಚರ. ಭಾಷಾವಾದವು ಬಹುಸಂಖ್ಯಾತರ ಆಶ್ರಯದಲ್ಲಿ ಮುಪ್ಪರಿಗೊಳ್ಳುತ್ತದೆ. ಸಹಜವಾಗಿಯೇ ಬಹುಸಂಖ್ಯಾತರ ಧರ್ಮ, ಸಂಸ್ಕೃತಿ, ಚಹರೆಗಳಲ್ಲಿ ಸಿಂಗಾರಗೊಂಡು ಬಿಡುತ್ತದೆ. ಭಾಷೆಯೆನ್ನುವುದು ಜ್ಞಾನ ಮತ್ತು ವಿವೇಕದ ಬೆಳಕಿನಲ್ಲಿ, ವೈಚಾರಿಕತೆಯ ತೊಡುಗೆಯಲ್ಲಿ ಇದ್ದಾಗ ಮಾತ್ರವೇ ಅದು ತನ್ನನ್ನು ಮೂಲಭೂತವಾದದಿಂದ ರಕ್ಷಿಸಿಕೊಳ್ಳಲು ಸಾಧ್ಯ. ಹಾಗಾಗಿಯೇ, ಭಾಷಾವಾದವು ತನಗೆ ಬೇಕಾದ ಶಕ್ತಿ, ಕಸುವನ್ನು ಸಂವಿಧಾನದೊಳಗಿನ ಬಹುತ್ವದಿಂದ ಪಡೆದಾಗ ಮಾತ್ರವೇ ಅದು ಬಹುತ್ವದ ರಾಜಕಾರಣಕ್ಕೆ ವೇದಿಕೆಯಾಗಬಲ್ಲದು. ಆದರೆ, ಸ್ವಲ್ಪವೇ ಅತ್ತಿತ್ತ ಜರುಗಿದರೂ ಕಡೆಗದು ವಿಜೃಂಭಿಸುವುದು ಮೂಲಭೂತವಾದದ ಪೋಷಾಕಿನಲ್ಲಿಯೇ. ಜಾಗತಿಕವಾಗಿ ಗಮನಿಸುವುದಾದರೆ, ಇಂತಹ ಅಪಾಯಗಳಿಂದ ಭಾಷೆಗಳು ತಪ್ಪಿಸಿಕೊಂಡಿದ್ದು ಕಡಿಮೆಯೆ.
ಇಂಗ್ಲಿಷ್‌ನಂತಹ ಜಾಗತಿಕ ಭಾಷೆಯೂ ವಸಾಹತುಶಾಹಿ ಶೋಷಣೆಯ ಸಂಕೇತವಾಗಿ, ಯಾಜಮಾನ್ಯದ ದರ್ಪದ ಭಾಷೆಯಾಗಿ, ಆಳುವ ವರ್ಗದ ಭಾಷೆಯಾಗಿ ಮನುಕುಲದ ಮೇಲೆ ಪ್ರಹಾರ ಮಾಡಿದ ನಂತರವೇ ಜ್ಞಾನದ ಭಾಷೆಯಾಗಿ, ಸಂಹವನದ ಭಾಷೆಯಾಗಿ, ಅವಕಾಶದ ಭಾಷೆಯಾಗಿ, ಶೋಷಿತರ ಬಾಯಲ್ಲಿ ಶೋಷಕರನ್ನು ಪ್ರಶ್ನಿಸುವ ಭಾಷೆಯಾಗಿ ವಿಸ್ತರಿಸಿಕೊಂಡದ್ದು. ಹಾಗಾಗಿ, ಭಾಷಿಕ ರಾಜಕಾರಣದ ಬಗ್ಗೆ ಮಾತನಾಡುವಾಗ ಅದು ಭಾವಾವೇಷದ ರಾಜಕಾರಣವಾಗದಂತೆ, ಬಹುಸಂಖ್ಯಾತರ, ಪ್ರಬಲರ ರಾಜಕಾರಣವಾಗದಂತೆ, ಮತೀಯವಾದದ ರಾಜಕಾರಣವಾಗದಂತೆ ದಕ್ಕಿಸಿಕೊಳ್ಳಲು ಸಾಧ್ಯವೇ ಎನ್ನುವ ಪ್ರಶ್ನೆ ಸುಲಭಕ್ಕಂತೂ ಬಗೆಹರಿಯುವುದಿಲ್ಲ. ಭಾಷೆ ಎನ್ನುವುದು ಬುದ್ಧಿಗಿಂತ ಭಾವಕ್ಕೆ ಸುಲಭವಾಗಿ ದಕ್ಕುವುದರಿಂದ ಅದರ ಈ ನ್ಯೂನತೆಯನ್ನು ಬಳಸಿ ತಿರುಚಿಬಿಡುವುದು ಸುಲಭ. ಅಧಿಕಾರ ರಾಜಕಾರಣದಲ್ಲಿ ಪಳಗಿದ ಮನಸ್ಸುಗಳು ಈ ಕೆಲಸವನ್ನು ಸಲೀಸಾಗಿ ಮಾಡಿಬಿಡುತ್ತವೆ.
ಆರಾಧನೆಯ ರಾಜಕಾರಣ, ಬಲಪಂಥೀಯ ರಾಜಕಾರಣದ ಸುಳಿಯಲ್ಲಿ
ತಾತ್ವಿಕ ವಿಷಯಗಳಾಯಿತು. ಈಗ ಅಧಿಕಾರ ರಾಜಕಾರಣದ ವರಸೆಗಳನ್ನು ಗಮನಿಸಿಯೇ ಹೇಳುವುದಾದರೆ, ಭಾಷಿಕ ಅಥವಾ ಪ್ರಾಂತೀಯ ರಾಜಕಾರಣವು ತಮ್ಮ ಕಸುವನ್ನು ಪಡೆದುಕೊಳ್ಳಲು ಭಾಷಾಭಿಮಾನದೊಟ್ಟಿಗೆ ಐಕಾನ್‌ಗಳು ಕೂಡ ಬಹುಮುಖ್ಯವಾಗುತ್ತಾರೆ. ದ್ರಾವಿಡ ರಾಜಕಾರಣವು ತನ್ನ ಕಸುವನ್ನು ಪೆರಿಯಾರ್ ಅವರಿಂದ ಪಡೆದುಕೊಂಡರೂ ಅದು ಅಧಿಕಾರ ರಾಜಕಾರಣದ ಭಾಗವಾಗಿ ಮುಂದುವರಿಯಲು ಅಣ್ಣಾದೊರೈ, ಎಂ.ಜಿ. ರಾಮಚಂದ್ರನ್, ಕರುಣಾನಿಧಿಯವರಂತಹ ಮುಖಗಳು ಅಗತ್ಯವಾಗಿಯೇ ಬೇಕಾದವು. ಅಬ್ರಾಹ್ಮಣ ದ್ರಾವಿಡವಾದ, ಹಿಂದಿ ವಿರೋಧ, ಜನಪ್ರಿಯತೆಯ ಉತ್ತುಂಗದಲ್ಲಿದ್ದ ವರ್ಚಸ್ವಿ ನಾಯಕರ ಸೂಜಿಗಲ್ಲಿನ ಸೆಳೆತ ಎಲ್ಲವೂ ಒಳಗೊಂಡೇ ಆ ರಾಜಕಾರಣ ಬೆಳೆಯಲು ಸಾಧ್ಯವಾಗಿದ್ದು. ಆದರೆ, ಇಂದು ದ್ರಾವಿಡ ರಾಜಕಾರಣ ತನ್ನ ಬೇರುಗಳ ಅರಿವಿಲ್ಲದೆಯೇ ಸಾಗಿ ಅಧಿಕಾರ ರಾಜಕಾರಣದ ಚದುರಂಗದಾಟಗಳಲ್ಲಿ, ರಾಜಕೀಯ ನಡೆಗಳಲ್ಲಿ ಮಿತಿಗೊಂಡಿದೆ.
ಕೇಂದ್ರದಲ್ಲಿ ಸಮ್ಮಿಶ್ರ ಸರಕಾರಗಳ ಪರ್ವ ಆರಂಭವಾದ ನಂತರ ಕೇಂದ್ರದೊಂದಿಗೆ ರಾಜಕೀಯ ಚೌಕಾಸಿ ನಡೆಸುವ ನಿಟ್ಟಿನಲ್ಲಿ ಡಿಎಂಕೆ, ಎಐಎಡಿಎಂಕೆ ಪಕ್ಷಗಳಿಗೆ ತಮ್ಮ ಸಂಖ್ಯಾಬಲ ಅಗತ್ಯವಾಗಿ ಶಕ್ತಿಯನ್ನು ತುಂಬಿದೆ. ಅದರೊಟ್ಟಿಗೇ, ಪ್ರಾಂತೀಯ ಆಶಯಗಳೂ ಸಹ ತಕ್ಕ ಮಟ್ಟಿಗೆ ಈಡೇರಿವೆ. ಹಾಗೆಂದು, ದ್ರಾವಿಡ ರಾಜಕಾರಣದ ಒಟ್ಟು ಅಭೀಪ್ಸೆಯ ಹಿನ್ನೆಲೆಯಲ್ಲಿ ಈ ಸಂಗತಿಗಳನ್ನು ಗಮನಿಸಿದಾಗ ಈ ಸಾಧನೆಗಳು ಕೇವಲ ಬಾಯುಪಚಾರದ ಕ್ರಮಗಳು ಮಾತ್ರವೇ ಆಗುತ್ತವೆ. ದ್ರಾವಿಡ ಅಸ್ಮಿತೆಯ ರಾಜಕಾರಣದ ಆಶಯಗಳಾದ ಅವೈದಿಕ ಚಿಂತನಾಕ್ರಮಗಳನ್ನು ನೆಲೆಗೊಳಿಸುವುದು, ವರ್ಣ, ವರ್ಗ ಅಸಮಾನತೆಯ ಕಂದರವನ್ನು ನಿವಾರಿಸುವುದರಲ್ಲಿ ಗಣನೀಯ ಸಾಧನೆಯನ್ನೇನೂ ಮಾಡಿಲ್ಲದೆ ಇರುವುದು ಕಣ್ಣಿಗೆ ರಾಚುತ್ತದೆ. ಹಾಗೆ ನೋಡಿದರೆ, ತಮಿಳುನಾಡಿನ ಸಾಮಾಜಿಕ ಪರಿಸರವು ಪ್ರಬಲ ಜಾತಿಗಳ ಕೈವಶವಾಗಿರುವುದು, ಊಳಿಗಮಾನ್ಯ ಚಿಂತನೆಗಳ ಆಡುಂಬೊಲವಾಗಿರುವುದನ್ನು ಕಾಣುತ್ತೇವೆ. ಅದೇ ರೀತಿ ವಿಚಾರಶೀಲತೆಯ ರಾಜಕಾರಣದ ಬದಲಿಗೆ, ಸರ್ವಾಧಿಕಾರತ್ವದ ಚಹರೆಗಳು, ಅಧಿಕಾರ ಹಾಗೂ ಸಂಪತ್ತಿನ ಮೇರೆಮೀರಿದ ಕ್ರೋಡೀಕರಣವನ್ನು ಕಾಣುತ್ತೇವೆ. ಪೆರಿಯಾರರ ವೈಚಾರಿಕತೆಯನ್ನು ಆಪೋಷನ ತೆಗೆದುಕೊಂಡ ಅಂಧಾಭಿಮಾನ, ಅರಾಜಕ ಆರಾಧನಾ ಮನೋಭಾವಗಳು ಇಂದು ತಮಿಳು ರಾಜಕಾರಣದಲ್ಲಿ ಆಳವಾಗಿ ಬೇರಿಳಿಸಿಕೊಂಡಿವೆ. ಅದುವೇ ತಮಿಳುನಾಡಿನ ರಾಜಕಾರಣದ ಚಹರೆಯಾಗಿಯೂ ಹೊರಹೊಮ್ಮಿವೆ. ಮೂಲದಲ್ಲಿ ವೈಚಾರಿಕ ಗಾಢತೆಯಿದ್ದ ಸಾಂಸ್ಕೃತಿಕ ರಾಜಕಾರಣದ ಪರಿಸ್ಥಿತಿಯೇ ಹೀಗಿರುವಾಗ, ತೆಳುವಾದ, ಕೇವಲ ‘ಆತ್ಮಾಭಿಮಾನ’ದಂತಹ ಭಾವಾವೇಶದ, ಭಾಷಾ ಅಸ್ಮಿತೆಯ ರಾಜಕಾರಣಗಳ ಪರಿಸ್ಥಿತಿಯ ಬಗ್ಗೆ ಹೆಚ್ಚು ವಿವರಿಸುವ ಅಗತ್ಯ ಬೀಳುವುದಿಲ್ಲ. ಇವು ಜನಸಮುದಾಯವನ್ನು ಪೊರೆದದ್ದಕ್ಕಿಂತ ಹೆಚ್ಚಾಗಿ ಬಲುಬೇಗನೇ ಅಧಿಕಾರ ರಾಜಕಾರಣದ ಮಾರ್ಗವಾಗಿ ಮಾತ್ರವೇ ಮಿತಿಗೊಂಡವು.
ಅಷ್ಟೇ ಅಲ್ಲ, ಯಾವುದೇ ಮುಜುಗರವಿಲ್ಲದೆ ಹಿಂದುತ್ವದ ಸುಪರ್ದಿನ ರಾಜಕಾರಣಕ್ಕೆ ತಮ್ಮನ್ನು ಒಗ್ಗಿಸಿಕೊಂಡವು. ಅಧಿಕಾರ ರಾಜಕಾರಣಕ್ಕೆ ಬೇಕಾದಂತೆ ಸಿದ್ಧಾಂತಗಳನ್ನು ಬಾಗಿಸುತ್ತಾ ಕೇಂದ್ರದಲ್ಲಿ ಅಧಿಕಾರದಲ್ಲಿರುವ ರಾಷ್ಟ್ರೀಯ ಪಕ್ಷಗಳೊಂದಿಗೆ ಚೌಕಾಸಿಗಿಳಿದವು. ತೆಲುಗುದೇಶಂ, ಶಿವಸೇನೆ ಈ ಕ್ರಮಕ್ಕೆ ನಿಚ್ಚಳ ಉದಾಹರಣೆ. ಹಿಂದುತ್ವ ರಾಜಕಾರಣದ ಚಹರೆಯಾದ ಬಿಜೆಪಿಯೊಂದಿಗಿನ ಇವುಗಳ ಮುನಿಸು ಆರಂಭವಾಗಿದ್ದು, ಬಿಜೆಪಿ ಇವುಗಳದ್ದೇ ನೆಲದಲ್ಲಿ ಇವುಗಳ ಅಸ್ತಿತ್ವಕ್ಕೆ ಸಂಚಕಾರ ತರುವ ಪ್ರಯತ್ನ ಮಾಡಿದ ನಂತರವೇ. ಶಿವಾಜಿಯ ಸೇನೆಯೆಂದು ತನ್ನನ್ನು ಕರೆದುಕೊಂಡ ‘ಶಿವಸೇನೆ’ಯೂ ನಾಚುವಂತೆ ಶಿವಾಜಿಯನ್ನು ಬಿಜೆಪಿ ಹಿಂದುತ್ವದ ಉಗ್ರಮುಖವಾಗಿ ತನ್ನ ತಲೆಯಮೇಲೆ ಹೊತ್ತು ಮೊೆಯಿತು; ಬಿಜೆಪಿಯ ಈ ವರಸೆಯಿಂದ ಶಿವಾಜಿ ಮರಾಠರಿಗೆ ಸಂದದ್ದಕ್ಕಿಂತ ಹಿಂದುತ್ವಕ್ಕೆ ಸಂದದ್ದೇ ಹೆಚ್ಚಾಯಿತು! ಇದೆಲ್ಲದರ ಫಲ ಮರಾಠಿಗರು ಮರಾಠಾ ರಾಜಕಾರಣದೊಟ್ಟಿಗೆ ಹಿಂದುತ್ವದ ರಾಜಕಾರಣವನ್ನೂ ಕಲೆಸಿಕೊಂಡು ಗೊಂದಲಕ್ಕೀಡಾಗಿಬಿಟ್ಟರು. ಹೀಗೆ ತನ್ನ ಬುಡವೇ ಅಲ್ಲಾಡಿ, ರಾಷ್ಟ್ರ ಮಟ್ಟದಲ್ಲಿ ಹೋಗಲಿ, ಕನಿಷ್ಠ ಮಹಾರಾಷ್ಟ್ರದ ಮಟ್ಟಿಗೂ ಬಿಜೆಪಿಗೆ ತನ್ನ ಅವಶ್ಯಕತೆ ಬೀಳುತ್ತಿಲ್ಲ ಎನ್ನುವ ಜ್ಞಾನೋದಯವಾದ ನಂತರವೇ ಶಿವಸೇನೆ ರಾಜಕೀಯ ಚಾಲಾಕಿತನ ತೋರಿಸಲು ಮುಂದಾಗಿದ್ದು. ಇನ್ನು ತೆಲುಗರ ಆತ್ಮಾಭಿಮಾನದ ಪ್ರಶ್ನೆಯಾಗಿ ಮೂಡಿದ ತೆಲುಗುದೇಶಂ ತನ್ನ ಕರ್ತವ್ಯವನ್ನು ಸಮರ್ಥವಾಗಿ ಈಡೇರಿಸಿದ್ದರೆ ತೆಲಂಗಾಣ ಹುಟ್ಟುತ್ತಿತ್ತೇ? ಟಿಆರ್‌ಎಸ್ ಅಧಿಕಾರ ಹಿಡಿಯುತ್ತಿತ್ತೇ? ಆಂಧ್ರದಲ್ಲಿ ನಕ್ಸಲ್ ಚಳವಳಿ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿತ್ತೇ?.
ಭಾಷಾ ರಾಜಕಾರಣ ಮತ್ತು ಪ್ರಾದೇಶಿಕ ರಾಜಕಾರಣ
ಇದೇ ಗುಕ್ಕಿನಲ್ಲಿಯೇ ಗಮನಿಸಬೇಕಾದ ಮತ್ತೊಂದು ಪ್ರಧಾನ ಅಂಶವೆಂದರೆ, ಈ ಪಕ್ಷಗಳಿಗೆ ಯಜಮಾನಿಕೆಯ ಭಾಷೆಯಾಚೆಗಿನ ಶೋಷಿತರ ಭಾಷೆ ಅಪರಿಚಿತವಾಗಿಯೇ ಇತ್ತು ಎನ್ನುವುದು. ಭಾಷಾ ರಾಜಕಾರಣವೆನ್ನುವುದು ಒಳಗೊಳ್ಳುವ ರಾಜಕಾರಣವಾಗಿದ್ದರೆ ತಮಿಳುನಾಡು, ಆಂಧ್ರ, ಮಹಾರಾಷ್ಟ್ರದ ರಾಜಕಾರಣ ಹಾಗೂ ಸಾಮಾಜಿಕ ಪರಿಸ್ಥಿತಿಗಳು ಇಂದು ತುಂಬಾ ಉತ್ತಮ ಸ್ಥಿತಿಯಲ್ಲಿರಬೇಕಿತ್ತು. ಆದರೆ, ಹಾಗಾಗಲಿಲ್ಲ. ಹೌದು, ಭಾಷಾ ರಾಜಕಾರಣ ಈ ಪಕ್ಷಗಳಿಗೆ ಕೇಂದ್ರದೊಂದಿಗೆ ಚೌಕಾಸಿ ನಡೆಸಲು ತಕ್ಕಮಟ್ಟಿಗಿನ ಶಕ್ತಿಯನ್ನೇನೋ ನೀಡಿತು. ಆದರೆ, ಇದಕ್ಕಿಂತ ಉತ್ತಮ ಚೌಕಾಸಿಯನ್ನು ಭಾಷಾ ರಾಜಕಾರಣದ ಹೆಸರೆತ್ತದೆ ಬಹುತೇಕ ಸಂದರ್ಭಗಳಲ್ಲಿ ವಿವಿಧ ಪ್ರಾದೇಶಿಕ ಪಕ್ಷಗಳು ಮಾಡಿವೆ ಎನ್ನುವುದನ್ನು ಮರೆಯಬಾರದು. ಆರ್‌ಜೆಡಿ, ಎನ್‌ಸಿಪಿ, ಬಿಜೆಡಿ, ಜೆಡಿಯು, ಜೆಎಂಎಂ, ಅಕಾಲಿದಳ, ವೈಎಸ್‌ಆರ್ ಕಾಂಗ್ರೆಸ್ ಹಾಗೂ ಈ ಹಿಂದೆ ಜನತಾ ಪರಿವಾರದ ಅಧಿಕಾರ ರಾಜಕಾರಣದ ವರಸೆಗಳನ್ನು ಇಲ್ಲಿ ನೆನೆಯಬಹುದು ಹಾಗೂ ಈ ಪಟ್ಟಿಯನ್ನು ಮತ್ತೂ ವಿಸ್ತರಿಸಬಹುದು. ಇವುಗಳ ಈ ವರಸೆಯಿಂದ ಆಯಾ ರಾಜ್ಯಗಳಿಗೆ ಎಷ್ಟು ಮಹದುಪಕಾರವಾಗಿದೆಯೋ, ಇಲ್ಲವೋ; ಆದರೆ, ಕೇಂದ್ರದೊಂದಿಗೆ ತಮಗ