ಮಾದರಿ ಕೃಷಿಕ ನಾರಾಯಣ ರೆಡ್ಡಿ
ಭಾಗ-1
ನಾರಾಯಣ ರೆಡ್ಡಿಯವರ ಹೆಸರು ಕೇಳಿದ ತಕ್ಷಣ ನನಗೆ ನೆನಪಿಗೆ ಬರುವುದು ಒಬ್ಬ ಸಾಮಾನ್ಯ ರೈತ ರಾಸಾಯನಿಕಗಳನ್ನು ಬಳಸದೆ ಕೃಷಿಯಲ್ಲಿ ನೆಮ್ಮದಿಯ ಬದುಕನ್ನು ಹೇಗೆ ಕಟ್ಟಿಕೊಳ್ಳಬಹುದು ಎನ್ನುವುದನ್ನು ಪ್ರಾತ್ಯಕ್ಷಿಕವಾಗಿ ನಿರೂಪಿಸಿದ ಮತ್ತು ಅದನ್ನು ಅನುಷ್ಠಾನಗೊಳಿಸಿದ ಅಸಾಮಾನ್ಯ ರೈತ ಎಂದು. ನನಗೆ ಅವರು ಕೃಷಿಯ ಗಾಂಧಿಯಂತೆ ಕಾಣುತ್ತಾರೆ.
ಕೃಷಿಯ ಬಗ್ಗೆ ನನಗೆ ಗಂಧಗಾಳಿಯಿಲ್ಲದ ಸಮಯ ಅದು. ಕೃಷಿಯನ್ನು ಮಾಡಬೇಕು ಮತ್ತು ಅದರಲ್ಲಿ ಯಶಸ್ಸನ್ನು ಕಾಣಬೇಕು ಎಂದು ತವಕಿಸುತ್ತಿದ್ದ ದಿನಗಳಲ್ಲಿ ನನ್ನಲ್ಲಿದ್ದ ಹತ್ತಾರು ಪ್ರಶ್ನೆಗಳಿಗೆ ಸರಳವಾದ, ಸ್ಪಷ್ಟ ಉತ್ತರವನ್ನು ಕೊಟ್ಟವರು ನಾರಾಯಣ ರೆಡ್ಡಿಯವರು. ರಾಸಾಯನಿಕಗಳನ್ನು ಬಳಸಿ ಬೆಳೆಗಳನ್ನು ಬೆಳೆಯುವುದು ಬಹು ಸುಲಭದ ಕೆಲಸ ಎಂದುಕೊಳ್ಳುತ್ತಿದ್ದ ಕಾಲಮಾನದಲ್ಲಿ ರಾಸಾಯನಿಕಗಳನ್ನು ಬಳಸದೆ ಬೆಳೆಗಳನ್ನು ಬೆಳೆಯಬಹುದು ಎಂದು ಹೇಳುವುದರ ಜೊತೆಯಲ್ಲಿ ಕೃಷಿಯ ವಿಜ್ಞಾನವನ್ನು ಬಹಳ ಸರಳವಾಗಿ ಅರ್ಥಮಾಡಿಸಿ ನನಗೆ ತಿಳಿ ಹೇಳಿ ನಾರಾಯಣ ರೆಡ್ಡಿಯವರು ನನ್ನ ಗುರುಗಳಾಗಿಬಿಟ್ಟರು.
ನಾನು ನಾರಾಯಣ ರೆಡ್ಡಿಯವರಿಂದ ಕಲಿತ ಮತ್ತು ತಿಳಿದ ಕೆಲವೊಂದು ಅನುಭವದ ಸಂಗತಿಗಳನ್ನು ತಿಳಿಸುವ ಒಂದು ಸಣ್ಣ ಪ್ರಯತ್ನ ಇದು.
ಭೂಮಿಯೊಳಗಡೆ ಒಂದು ಅದ್ಭುತವಾದ ಪ್ರಂಪಂಚವಿದೆ, ಅದು ಜೀವಂತವಾಗಿದ್ದರೆ ಭೂಮಿಯ ಮೇಲಿರುವ ಪ್ರಪಂಚವೂ ಸದಾ ಜೀವಂತವಾಗಿರುತ್ತದೆ ಎಂದು ಹೇಳಿದ ಮೊದಲ ವ್ಯಕ್ತಿ ನಾರಾಯಣ ರೆಡ್ಡಿಯವರು. ‘‘ಭೂಮಿಯಲ್ಲಿ ಬೇರುಗಳ ಬೆಳೆಯುವಿಕೆಯಲ್ಲಿ, ಸೂಕ್ಷ್ಮ ಜೀವಾಣುಗಳ ಚಟುವಟಿಕೆ ಅಂದರೆ ಅವು ರಂಧ್ರಗಳನ್ನು ಮಾಡುವುದು, ಓಡಾಡುವುದು... ಭೌತಿಕ ಕ್ರಿಯೆ’’. ‘‘ಬೇರುಗಳ ರಸ ಮತ್ತು ಜೀವಾಣುಗಳು ಬಿಡುವ ಜೊಲ್ಲು... ರಾಸಾಯನಿಕ ಕ್ರಿಯೆ’’. ‘‘ಜೀವಾಣುಗಳು, ಎರೆಹುಳಗಳು, ಕೀಟಗಳು, ಇತ್ಯಾದಿ ಮಣ್ಣಿನಲ್ಲಿ ಸಹಜವಾಗಿ ಸತ್ತರೆ ಅದು ಜೈವಿಕ ಕ್ರಿಯೆ’’ ಎನ್ನುವ ಅವರ ಸರಳ ಅನುಭವದ ಮಾತುಗಳು ಕೃಷಿ ವಿಜ್ಞಾನವನ್ನು ಬಹು ದೊಡ್ಡ ರಾಕೆಟ್ ಸೈನ್ಸ್ ಎಂದು ಬಿಂಬಿಸುವವರಿಗೆ ನಾರಾಯಣ ರೆಡ್ಡಿಯವರ ಇಂತಹ ಸರಳವಾದ ಮಾತುಗಳು ಉತ್ತರವಾಗಿತ್ತು.
ಈ ಮೇಲಿನ ಸಾಲುಗಳ ಅರ್ಥ ಇಷ್ಟೇ- ನಮ್ಮ ಕೃಷಿ ಭೂಮಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ವಿವಿಧ ಜಾತಿಯ ಗಿಡಮರಗಳಿದ್ದರೆ ಅದರ ಬೇರುಗಳು ಭೂಮಿಯನ್ನು ಸದಾ ಜೀವಿಂತವಾಗಿಡುವುದರ ಜೊತೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜೀವಾಣುಗಳನ್ನು ತನ್ನ ಒಡಲಲ್ಲಿ ಬೆಳೆಯುವಂತೆ ಮಾಡುತ್ತವೆ, ಹಾಗೆಯೇ ಜೀವಾಣುಗಳು ಮರಗಿಡಗಳಿಗೆ ಆಹಾರವನ್ನು ಒದಗಿಸುತ್ತಾ ತನಗೆ ಬೇಕಾದ ಆಹಾರವನ್ನು ಬೇರುಗಳಿಂದ ಪಡೆಯುತ್ತವೆ ಎಂದು ತಿಳಿಸುತ್ತಾ, ಹೇಗೆ ಏಕಬೆಳೆ ಪದ್ಧತಿ ಕೃಷಿಗೆ ಮಾರಕ, ಬಹು ಬೆಳೆ ಪದ್ಧತಿ ಕೃಷಿಗೆ ಪೂರಕ ಎನ್ನುವ ಅವರ ಮಾತಗಳು ನನ್ನ ಕಿವಿಯೊಳಗೆ ಈಗಲೂ ರಿಂಗಣಿಸುತ್ತಿವೆ.
ಹ್ಯೂಮಸ್: ನನಗೆ ನೆನಪಿರುವ ಹಾಗೆ ಹ್ಯೂಮಸ್ ಎನ್ನುವ ಪದವನ್ನು ಹಾಗೂ ಹ್ಯೂಮಸ್‌ನಲ್ಲಿರುವ ಅದ್ಭುತವಾದ ಶಕ್ತಿಯನ್ನು ಪರಿಚಯಿಸಿದ್ದೂ ಕೂಡಾ ನಾರಾಯಣ ರೆಡ್ಡಿಯವರೆ. ತಮ್ಮ ಎಲ್ಲಾ ಭಾಷಣಗಳಲ್ಲಿ, ಮಾತುಗಳಲ್ಲಿ ಹ್ಯೂಮಸ್‌ನ ಮಹತ್ವವನ್ನು ಅವರು ಹೇಳುತ್ತಿದ್ದರು. ‘‘ನಮಗೆ ಈ ಸಬ್ಸಿಡಿಗಳು, ಈ ಡ್ಯಾಂಗಳು, ಸಾಲಸೋಲಗಳು ಯಾವುದೂ ಬೇಡ. ಭೂಮಿಯಲ್ಲಿ ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ಹಾಗೆ ಹ್ಯೂಮಸ್ ಉತ್ಪತ್ತಿ ಮಾಡಿ, ಜೀವಾಣುಗಳನ್ನು ಹೆಚ್ಚಿಗೆ ಮಾಡುವ ಹಾಗೆ ಮಣ್ಣಿನಲ್ಲಿ ಸೂಕ್ಷ್ಮವಾತಾವರಣ ಸೃಷ್ಟಿ ಮಾಡುವುದು ಹಾಗೂ ಸಾವಯವ ಇಂಗಾಲವನ್ನು ಶೇ.4ಕ್ಕಿಂತ ಹೆಚ್ಚಾಗುವಂತೆ ಮಾಡುವುದನ್ನು ನಮ್ಮ ರೈತರಿಗೆ ಹೇಳಿಕೊಟ್ಟು ಬಿಟ್ಟರೆ ನೆಮ್ಮದಿಯಿಂದ ಬದುಕುತ್ತಾರೆ’’ಎನ್ನುತ್ತಿದ್ದರು. ಅವರ ಕೃಷಿ ಭೂಮಿಯನ್ನೊಮ್ಮೆ ನೋಡಿದರೆ ಈ ಮಾತುಗಳು ಅರ್ಥವಾಗುತ್ತವೆ.
ಇದು ಅತೀ ಕಡಿಮೆ ಮಳೆ ಬರುವ ಪ್ರದೇಶದಲ್ಲೂ ಕೂಡಾ ಯಶಸ್ಸನ್ನು ಕಂಡಿದೆ. ಹ್ಯೂಮಸ್ ಉಂಟಾಗಲು ಗಿಡಮರಗಳ ತರಗುಗಳು ಅತ್ಯವಶ್ಯಕ. ಪ್ರತಿಯೊಂದು ಎಲೆಯೂ ಒಂದು ರೂಪಾಯಿಗೆ ಸಮ ಎನ್ನುತ್ತಿದ್ದ ಅವರು ತಮ್ಮ ಜಮೀನಿನಲ್ಲಿ ದೊರೆತ ಎಲೆಗಳನ್ನು ಭೂಮಿಗೆ ಮುಚ್ಚಿಗೆಯನ್ನಾಗಿ ಮಾಡುವುದರ ಜೊತೆಯಲ್ಲಿ ಸುತ್ತ ಮುತ್ತಲಲ್ಲಿ ದೊರೆಯುತ್ತಿದ್ದ ಎಲೆತರಗುಗಳನ್ನು ಪ್ರೀತಿಯಿಂದ ಕೊಂಡೊಯ್ಯುತ್ತಿದ್ದರು. ಅದಕ್ಕಾಗಿಯೇ ಅವರ ಜಮೀನಿನಲ್ಲಿ ಸಾವಯವ ಇಂಗಾಲದ ಪ್ರಮಾಣ ಶೇ.4 ಕ್ಕಿಂತ ಹೆಚ್ಚಿತ್ತೆಂದು ಕೇಳಿದ್ದೇನೆ. ಇನ್ನೊಂದು ಬಹಳ ಮುಖ್ಯವಾದ ವಿಷಯ ಎಂದರೆ ರೆಡ್ಡಿಯವರ ಕೃಷಿ ಭೂಮಿಯ ಸುತ್ತ ಮುತ್ತಲ ಪ್ರದೇಶದಲ್ಲಿ ಸುಮಾರು 800 ಅಡಿಗಳಿಂದ 1,000 ಅಡಿಗಳವರೆಗೂ ಬೋರ್ವೆಲ್‌ಗಳನ್ನು ಕೊರೆಸಿದರೂ ನೀರು ಸಿಗದ ಪರಿಸ್ಥಿತಿ. ಆದರೆ ಇವರ ಜಮೀನಿನಲ್ಲಿ ಕೇವಲ 400 ಅಡಿಗಳಲ್ಲಿ ನೀರು ಸಿಗುತ್ತಿರುವುದು ದಾಖಲೆಯೇ ಸರಿ. ಇದಕ್ಕೆ ಕಾರಣ ಮರಗಿಡಗಳನ್ನು ಬೆಳೆಸಿರುವುದು, ಹ್ಯೂಮಸ್ ಹಾಗೂ ಸಾವಯವ ಇಂಗಾಲದ ಪ್ರಮಾಣ ಶೇ.4 ಕ್ಕಿಂತ ಹೆಚ್ಚಿರುವುದು. ಈ ವಿಚಾರವನ್ನು ಅವರು ಬರಿ ಮಾತಲ್ಲಿ ಹೇಳುತ್ತಿರಲಿಲ್ಲ; ಕಣ್ಣಿಗೆ ಕಾಣುವಂತೆ ತೋರಿಸುತ್ತಿದ್ದರು.
ನಾನು ಅವರನ್ನು ಪ್ರತಿ ಭಾರಿಯೂ ಭೇಟಿಯಾದಾಗಲೆಲ್ಲಾ ಒಂದೊಂದು ವಿಷಯದ ಬಗ್ಗೆ ಪ್ರಸ್ತಾಪವಿರುತ್ತಿತ್ತು.
‘ಕೆಲವರು ನಾಟಿ ಹಸು ಇದ್ದರೆ ಮಾತ್ರ ನೈಸರ್ಗಿಕ ಕೃಷಿ ಅಥವಾ ಸಹಜ ಕೃಷಿ ಮಾಡಬಹುದು ಇಲ್ಲದಿದ್ದರೆ ಕೃಷಿ ಮಾಡುವುದಕ್ಕೆ ಆಗುವುದಿಲ್ಲ ಎನ್ನುತ್ತಾರಲ್ಲ ಸರ್’ ಎನ್ನುವ ಪ್ರಶ್ನೆಯನ್ನು ಅವರ ಮುಂದಿಟ್ಟಾಗ - ನಾಟಿ ಹಸು ಕೃಷಿಗೆ ಮೂಲ ನಿಜ. ಬೇರೆ ಜಾತಿಯ ಹಸುವಿಗಿಂತ ಅತೀ ಹೆಚ್ಚಿನ ಶಕ್ತಿಯನ್ನು ಹೊಂದಿದೆ. ಅದರೆ ಇದೇ ಬೇಕು ಅಂದರೆ ರೈತರು ಎಲ್ಲಿಗೆ ಹೋಗಬೇಕು? ಕಷ್ಟ ಆಗುತ್ತಪ್ಪಾ. ಇರುವುದರಲ್ಲೇ ಏನಾದರೂ ಮಾಡಬೇಕು. ಇಲ್ಲಿ ನಾವು ಅರ್ಥಮಾಡಿಕೊಳ್ಳಬೇಕಾಗಿರುವುದು ಒಬ್ಬ ರೈತ ನಾಟಿ ಹಸುವಿನ ಬದಲು ಎಚ್.ಎಫ್, ಜರ್ಸಿಯನ್ನು ಸಾಕಿ, ವರ್ಮಿ ಕಾಂಪೋಸ್ಟ್ ತಯಾರಿಸಿ, ಹೈಬ್ರಿಡ್ ತಳಿಗಳನ್ನು ಬಳಸಿದರೆ ತಪ್ಪೇನು? ಆಯಾ ವಾತಾವರಣಕ್ಕೆ ತಕ್ಕಂತೆ, ಅವನ ಆರ್ಥಿಕ ಪರಿಸ್ಥಿತಿಗೆ ತಕ್ಕಂತೆ, ಕೃಷಿಯಲ್ಲಿ ಅಲ್ಪ ಸ್ವಲ್ಪ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಎನ್ನುವುದು ಅವರ ಉತ್ತರವಾಗಿತ್ತು. ಜೀವನದ ಕಷ್ಟ ಸುಖ, ಏಳುಬೀಳು ಉಂಡವರಂತೆ ಅವರ ಮಾತುಗಳು ಇರುತ್ತಿದ್ದವು.
ನಾಟಿ ಹಸುವಿನ ಸೆಗಣಿ ಮತ್ತು ಗಂಜಳ ಎಷ್ಟೇ ಶ್ರೇಷ್ಠ ಎಂದರೂ ಹೆಚ್ಚು ಹಾಲು ಕೊಡುವುದಿಲ್ಲ ಎನ್ನುವ ವಾದವನ್ನು ಮುಂದಿಟ್ಟು ಹೈಬ್ರಿಡ್ ತಳಿಗಳ ಮೊರೆ ಹೊಗುತ್ತಿದ್ದಾರೆ ನಮ್ಮ ರೈತರು. ಈ ವಿಷಯ ರೈತರ ದೃಷ್ಟಿಯಿಂದ ಸರಿಯಾದದ್ದು. ಎಲ್ಲಿಯವರೆಗೂ ನಾವು ನಾಟಿ ಹಸುವಿನ ತಳಿಗಳ ಬಗ್ಗೆ, ಪಶು ಆಹಾರದ ಬಗ್ಗೆ ಜಾಗೃತಿಯನ್ನು ಮೂಡಿಸಿ, ಹಾಲಿನ ಪ್ರಮಾಣದಲ್ಲಿ ಗಣನೀಯ ಏರಿಕೆಯನ್ನು ತೋರುವುದಿಲ್ಲವೊ ಅಲ್ಲಿಯವರೆಗೂ ನೀನು ಹೀಗೆ ಮಾಡು, ಇದನ್ನೇ ಮಾಡು ಎಂದು ಹೇಳುವುದಕ್ಕಿಂತ ಆಯಾ ರೈತರಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನೆಲ್ಲಾ ಕ್ರೋಡೀಕರಿಸಿ, ಅದರಿಂದಲೇ ಯಶಸ್ಸಿನ ಹಾದಿಯನ್ನು ಕಂಡುಹಿಡಿಯುವಂತಹ ಕೆಲಸಕಾರ್ಯಗಳೂ ಆಗಬೇಕಲ್ಲವೇ? ಇದು ನಾವಿಡುವ ಮೊದಲ ಹೆಚ್ಚೆಯಾಗಬಹುದು.
ನಾವು ಪ್ರಸ್ತುತ ಅಳವಡಿಸಿಕೊಂಡಿರುವ ಹತ್ತಾರು ರಾಸಾಯನಿಕ ಮುಕ್ತ ಕೃಷಿ ಪದ್ಧತಿಗಳ ಬಗ್ಗೆ ಮಾತನಾಡುತ್ತಾ ‘‘ಇಷ್ಟೊಂದು ಪದ್ಧತಿಗಳು ರೈತರಿಗೆ ಕನ್‌ಪ್ಯೂಸ್ ಮಾಡುತ್ತಿವೆ ಸರ್, ಒಬ್ಬರು ಒಂದೊಂದು ತರವಾದ ಪದ್ದತಿಗಳನ್ನು ಅನುಸರಿಸುತ್ತಿದ್ದಾರೆ, ನಾವ್ಯಾಕೆ ಅವರೆಲ್ಲರನ್ನು ಒಟ್ಟುಗೂಡಿಸಿ ಒಂದು ನಿರ್ದಿಷ್ಟವಾದ ಪದ್ಧತಿಯನ್ನು ರೈತರಿಗೆ ಪರಿಚಯಿಸಬಾರದು?’’ ಎಂದು ಕೇಳಿದ್ದೆ.
‘ನನ್ನ ಮಾತು ಯಾರು ಕೇಳುತ್ತಾರಪ್ಪಾ, ನಾನು ಸಾವಯವ ಕೃಷಿ ಅಂತೀನಿ, ಇನ್ನೊಬ್ಬರದು ಇನ್ನೊಂದು ಹೆಸರು, ಯಾಕೆ ನೀವೇ ಬೆಳಕಿನ ಬೇಸಾಯ ಎನ್ನುವುದಿಲ್ಲವೇ. ಹೆಸರಲ್ಲೇನಿದೆ, ಬೇಸಿಕ್ ಸೈನ್ಸ್ ಮರೆಯಬಾರದು. ನಾನು ಹೆಚ್ ಎ್, ಜರ್ಸಿ ಹಸು ಸಾಕಿದರೂ ಪರವಾಗಿಲ್ಲ, ಅಗತ್ಯ ಬಿದ್ದರೆ ಸ್ವಲ್ಪ ಪ್ರಮಾಣದ ರಾಸಾಯನಿಕಗಳನ್ನು ಬಳಸಿ ಎನ್ನುತ್ತೇನೆ, ಉಳುಮೆ ಮಾಡುವುದಾದರೆ 2ರಿಂದ 3 ಇಂಚು ಮಾಡಿ ಎನ್ನುತ್ತೇನೆ, ಅನಿವಾರ್ಯವಾದರೆ ಬೋರ್ವೆಲ್ ಕೊರೆಯಿಸುವುದನ್ನು ಸಮರ್ಥಿಸುತ್ತೇನೆ, ನಾವು ಒಂದೊಂದೆ ಹೆಜ್ಜೆ ಮುಂದಿಡಬೇಕಲ್ಲವೇ? ಎಲ್ಲಿಯವರೆಗೂ ರೈತರ ಕಷ್ಟ, ಸುಖ ಅರ್ಥಮಾಡಿಕೊಂಡು ಅವರ ಬಗ್ಗೆ ಗೌರವ, ಕೃಷಿಯ ಬಗ್ಗೆ ಜ್ಞಾನವನ್ನು ನಾವು ಹೊಂದುವುದಿಲ್ಲವೋ ಅಲ್ಲಿಯವರೆಗೂ ಈ ಪ್ರಶ್ನೆಗೆ ಉತ್ತರ ದೊರಕುವುದಿಲ್ಲ’ ಎಂದರು.
ನಾನು ನನ್ನ ಇನ್ನೊಂದು ಆಂತಕವನ್ನು ಅವರ ಮುಂದಿಟ್ಟೆ ‘‘ಅದು ಹೇಗೆ ಸರ್?, ು ಕುವೊಕಾರವರು, ದಾಭೋಲ್ಕರ್, ಸಾವೆಯವರು, ನೀವು, ಪಾಲೇಕರ್ ರೈತರಿಗಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟು ಕೆಲಸ ಮಾಡಿದವರು. ನಿಮ್ಮ ಮತ್ತು ಅವರೆಲ್ಲರ ಪದ್ಧತಿಯೇ ಅಲ್ಲವಾ ಸರ್ ನಾವೆಲ್ಲ ಅಳವಡಿಸಿಕೊಂಡಿರುವುದು. ಹೆಸರು ಮಾತ್ರ ಬೇರೆ ಬೇರೆ ಇದೆ. ಇವೆಲ್ಲವನ್ನು ಒಟ್ಟುಗೂಡಿಸಿ ನಮ್ಮ ರೈತರಿಗೆ ಯಾಕೆ ಪರಿಚಯಿಸಬಾರದು?’’ ಎಂದೆ. ಈ ಪ್ರಶ್ನೆಗೆ ಅವರು ಉತ್ತರಿಸುತ್ತಾ ‘‘ನಿಜ, ಅವರೆಲ್ಲರೂ ಒಳ್ಳೊಳ್ಳೆಯ ಕೆಲಸ ಮಾಡಿದ್ದಾರೆ. ಲಕ್ಷಾಂತರ ರೈತರಿಗೆ ಅನೂಕೂಲ ಆಗಿದೆ. ಆದರೆ ಏನು ಮಾಡುವುದು ಇವತ್ತು ನಾನು- ಪಾಲೇಕರ್ ಮಾತ್ರ ಇದೀವಿ. ಆ ಪಾಲೇಕರ್‌ಗೆ ಶೂನ್ಯ ಬಂಡವಾಳ ಕೃಷಿನೇ ಗ್ರೇಟ್. ನಮ್ದು ಕೃಷಿ ಪದ್ಧತಿನೇ ಅಲ್ಲ ಅಂತಾರಂತೆ’’ ಅಂದರು. ಅದಕ್ಕೆ ನಾನು - ‘‘ಅದು ಹಾಗೆ ಅಲ್ಲಾ ಸರ್ ನಾನು ಕೇಳಿದ್ದು ಎಲ್ಲರನ್ನೂ ಸೇರಿಸುವ ಪ್ರಯತ್ನ ಅಷ್ಟೆ ಸರ್’’ ಎಂದು ಮಾತನ್ನು ಬದಲಾಯಿಸುತ್ತಾ ‘‘ಸರ್, ಅಲ್ಲಲ್ಲಿ ಗಿಡಗಳ ಪಕ್ಕದಲ್ಲಿ ಚಿಕ್ಕ ಚಿಕ್ಕ ಗುಂಡಿಗಳನ್ನು ಮಾಡಿದ್ದೀರಲ್ಲ ಯಾಕೆ ಸರ್?’’ ಎಂದೆ. ‘‘ಆಯಾ ಗಿಡದ ಕೆನಾಪಿಗೆ ತಕ್ಕಂತೆ ನಾವು ನೀರನ್ನು ಕೊಡಬೇಕು. ಆಗ ಆ ಬೇರುಗಳು ಆ ನೀರಿನ ತೇವಾಂಶವನ್ನು ಹೀರಿಕೊಳ್ಳಲು ಸುಲಭವಾಗುತ್ತದೆ. ಅದಕ್ಕೆ ಅಲ್ಲಲ್ಲಿ ಮಾಡಿದ್ದೇವೆ’’ ಎಂದರು.