ಖಾಲಿ ನಿವೇಶನದ ನಕಲಿ ದಾಖಲೆ ಸೃಷ್ಟಿಸುತ್ತಿದ್ದ ಐವರ ಬಂಧನ: ಚಿನ್ನಾಭರಣ, ಮೂರು ಕಾರುಗಳ ವಶ
ಬೆಂಗಳೂರು, ಜ.20: ಖಾಲಿ ನಿವೇಶನದ ನಕಲಿ ದಾಖಲೆಗಳನ್ನು ಸೃಷ್ಟಿಸಿ ವಂಚಿಸುತ್ತಿದ್ದ ಮಹಿಳೆ ಸೇರಿ ಐವರು ಆರೋಪಿಗಳನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಜೆಪಿ ನಗರದ ಕೀರ್ತನಾ(29), ಶೇಖರ್(36), ಕೆಂಗೇರಿಯ ಪವನ್‍ಕುಮಾರ್(36), ಸರ್ಜಾಪುರದ ಉಮಾಮಹೇಶರಾವ್(41), ತಮಿಳುನಾಡು ಮೂಲದ ಜಯಪ್ರಕಾಶ್(39) ಎಂದು ಗುರುತಿಸಲಾಗಿದೆ.
ಬಂಧಿತರಿಂದ 16 ಲಕ್ಷ 83 ಸಾವಿರ ಮೌಲ್ಯದ ಚಿನ್ನಾಭರಣ, 35 ಲಕ್ಷ ರೂ. ಮೌಲ್ಯದ 3 ಕಾರುಗಳು ಹಾಗೂ ಒಂದು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಗಳು ಗೊಟ್ಟಿಗೆರೆಯ ಭಾಗ್ಯ ನಗರದ ಮಾರಾಟಕ್ಕಿದ್ದ ನಿವೇಶನವನ್ನು ಮೈಕಲ್ ಡಿಸೋಜಾ ಎಂಬವರ ನಿವೇಶನ ಎಂದು ನಂಬಿಸಿ ಚಕ್ರವರ್ತಿ ಪಾಂಡು ದಂಪತಿಯಿಂದ 1 ಕೋಟಿ ರೂ.ಗೆ ಖರೀದಿ ಮಾತುಕತೆ ನಡೆಸಿದ್ದರು. ಬಳಿಕ ಐಸಿಐಸಿಐ ಬ್ಯಾಂಕ್ ಸಹಕಾರ ನಗರ ಶಾಖೆಯಲ್ಲಿ 69 ಲಕ್ಷ 62 ಸಾವಿರ ಸಾಲ ಪಡೆದು ಬೊಮ್ಮನಹಳ್ಳಿಯ ಉಪ ನೋಂದಣಾಧಿಕಾರಿಗಳ ಕಚೇರಿಗೆ ಕರೆದುಕೊಂಡು ಹೋಗಿ ಸಾಲದ ಮೊತ್ತವನ್ನು ಡಿಡಿ ಪಡೆದು ಮ್ಯಾಥ್ಯು ಎಂಬುವರನ್ನು ಮೈಕಲ್ ಡಿಸೋಜಾ ಎಂದು ನಂಬಿಸಿ ಶುದ್ಧಕ್ರಯಪತ್ರ ನೋಂದಣಿ ಮಾಡಿಸಿದ್ದರು ಎನ್ನಲಾಗಿದೆ.
ನಂತರ ಡಿಡಿಯನ್ನು ಮಲ್ಲೇಶ್ವರಂನ ಬಂಧನ್ ಬ್ಯಾಂಕ್ ಶಾಖೆಯಲ್ಲಿ ತೆರೆದಿದ್ದ ಬೇನಾಮಿ ಖಾತೆಯಲ್ಲಿ ಜಮಾವಣೆ ಮಾಡಿಕೊಂಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿ ಪೊಲೀಸರು ಆರೋಪಿಗಳನ್ನು ಬಂಧಿಸಿ ಮೂರು ಕಾರು, ಒಂದು ದ್ವಿಚಕ್ರ ವಾಹನ, 362 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.