‘ಇನ್‌ಸ್ಪೆಕ್ಟರ್ ವಿಕ್ರಂ’ : ಎಣಿಕೆ ಮೀರಿಸುವ ತನಿಖೆಯ ಚಿತ್ರ
ಅದೊಂದು ಮಳೆ ತುಂಬಿದ ಕರಾಳ ರಾತ್ರಿ. ಆ ರಾತ್ರಿ ಮಾಧ್ಯಮದ ವ್ಯಕ್ತಿಯೋರ್ವರ ಕುಟುಂಬದ ಮಾರಣ ಹೋಮವಾಗುತ್ತದೆ. ವಿಚಿತ್ರ ಎಂದರೆ ಶಾರ್ಪ್ ಶೂಟರ್ ಜೊತೆಗೆ ಬಂದು ಆ ಕೊಲೆಗೆ ಕಾರಣನಾದವನೇ ಮರುದಿನ ಅದರ ತನಿಖೆಗೆ ಆಗಮಿಸುವ ಮೇಲಧಿಕಾರಿಯಾಗಿರುತ್ತಾನೆ. ಹೀಗೆ ಶಾಕಿಂಗ್ ದೃಶ್ಯದೊಂದಿಗೆ ಆರಂಭವಾಗುವ ಚಿತ್ರದಲ್ಲಿ ಕೊಲೆಗಾರ ಪೊಲೀಸ್ ಅಧಿಕಾರಿಯಾಗಿ ರಘು ಮುಖರ್ಜಿ ನಟಿಸಿದ್ದಾರೆ. ಡ್ರಗ್ಸ್ ದಂಧೆಯ ವಿರುದ್ಧ ಹೋರಾಡುವ ನಾಯಕ ಇನ್‌ಸ್ಪೆಕ್ಟರ್ ವಿಕ್ರಂಗೆ ತನ್ನದೇ ಇಲಾಖೆಯ ಅಧಿಕಾರಿ ದಂಧೆಯಲ್ಲಿ ಪಾಲುದಾರ ಎನ್ನುವ ಸತ್ಯದ ಅರಿವೇ ಇರುವುದಿಲ್ಲ. ಹಾಗಾದರೆ ನಾಯಕನ ಹೋರಾಟ ಎಷ್ಟು ರೋಚಕವಾಗಿರುತ್ತದೆ ಎನ್ನುವುದನ್ನು ಆಸಕ್ತಿಯಿಂದ ನೋಡುವಂತೆ ಮಾಡುವ ಚಿತ್ರ ‘ಇನ್‌ಸ್ಪೆಕ್ಟರ್ ವಿಕ್ರಂ’.
ಮಾದಕ ಚಟುವಟಿಕೆಗಳ ವಿರುದ್ಧ ವಿಶೇಷ ಕಾರ್ಯಾಚರಣೆಗಾಗಿ ಮಣಿಪಾಲಕ್ಕೆ ವರ್ಗವಾಗುತ್ತಾರೆ ನಾಯಕ ಇನ್‌ಸ್ಪೆಕ್ಟರ್ ವಿಕ್ರಂ. ಅಲ್ಲಿ ವೃತ್ತಿಯಲ್ಲಿದ್ದಾಗಲೇ ಭಾವನಾ ಎನ್ನುವ ಯುವತಿಯ ಪರಿಚಯವಾಗುತ್ತದೆ. ಪ್ರಥಮ ನೋಟದಲ್ಲೇ ವಿಕ್ರಂಗೆ ಭಾವನಾ ಮೇಲೆ ಪ್ರೇಮವಾಗುತ್ತದೆ. ಆದರೆ ಭಾವನಾ ಒಪ್ಪುತ್ತಾಳೆಯೇ? ನಿಜಕ್ಕೂ ಭಾವನಾಗೂ ಡ್ರಗ್ಸ್ ದಂಧೆಗೂ ಇರುವ ಸಂಬಂಧವೇನು? ಎನ್ನುವ ಪ್ರಶ್ನೆಗಳಿಗೆಲ್ಲ ಉತ್ತರ ನೀಡುವ ಸನ್ನಿವೇಶ ಗಳನ್ನು ಚಿತ್ರದಲ್ಲೇ ನೋಡುವುದು ಉತ್ತಮ. ಒಟ್ಟಿನಲ್ಲಿ ನಾಯಕನಿಗೆ ಪೊಲೀಸ್ ವೃತ್ತಿಯಲ್ಲಾಗಲಿ ಅಥವಾ ಪ್ರೇಮದಲ್ಲಾಗಲೀ ಪದೇ ಪದೇ ಆಘಾತಕಾರಿ ತಿರುವುಗಳು ಎರಗುತ್ತವೆ. ಆದರೆ ವಿಕ್ರಂ ಅವೆಲ್ಲವನ್ನು ಹೇಗೆ ಸಲೀಸಾಗಿ ಎದುರಿಸುತ್ತಾನೆ ಎನ್ನುವುದೇ ಚಿತ್ರವನ್ನು ಒಂದು ರೊಮ್ಯಾಂಟಿಕ್ ಕಾಮಿಡಿ ಥ್ರಿಲ್ಲರ್ ಆಗಿಸಿದೆ. ಖಳನಾಯಕನಾಗಿ ರಘು ಮುಖರ್ಜಿಯ ಹೊಸ ಮುಖ ಇಷ್ಟವಾಗುತ್ತದೆ. ಆದರೆ ಸ್ವತಃ ಚಿತ್ರದ ನಾಯಕನೇ ಹೇಳುವಂತೆ ಮಾಡಿದ ‘ತಪ್ಪು’ಗಳಿಗೆ ಏನೇ ಸಮರ್ಥನೆ ಇದ್ದರೂ ಅವುಗಳು ‘ಸರಿ’ಗಳಾಗದು. ತಪ್ಪುಯಾರೇ ಮಾಡಿದರೂ ತಪ್ಪೇ. ಹಾಗಾಗಿ ಫ್ಲ್ಯಾಷ್‌ಬ್ಯಾಕ್ ಸ್ಟೋರಿ ಮೂಲಕ ರಘು ಮುಖರ್ಜಿ ಪಾತ್ರದ ಸಮರ್ಥನೆಯ ದೃಶ್ಯ ಕೂಡ ಅನಗತ್ಯವೆನಿಸುತ್ತದೆ. ಅಲ್ಲಿಯೂ ಆ ಪಾತ್ರದ ಬಗ್ಗೆ ಸಿಂಪಥಿ ಮೂಡದು. ಹಾಗಾಗಿ ಖಳನಟನ ಇಮೇಜ್‌ನಲ್ಲಿ ರಘು ಯಶಸ್ವಿಯಾಗಿದ್ದಾರೆ ಎನ್ನಬಹುದು! ಒಂದು ರೀತಿಯಲ್ಲಿ ತಮಿಳು ಚಿತ್ರ ‘ತನಿ ಒರುವನ್’ನಲ್ಲಿ ಅರವಿಂದ ಸ್ವಾಮಿ ಮಾಡಿದ ಪಾತ್ರವನ್ನು ಇದು ನೆನಪಿಸುತ್ತದೆ. ನಾಯಕನಾಗಿ ಪ್ರಜ್ವಲ್ ದೇವರಾಜ್ ಪೊಲೀಸ್ ಪಾತ್ರಕ್ಕೆ ಒಪ್ಪುವ ದೇಹ ಪ್ರಕೃತಿಯ ಮೂಲಕ ಗಮನ ಸೆಳೆಯುತ್ತಾರೆ. ಪ್ರೀತಿ, ಹಾಸ್ಯವನ್ನು ಸಮತೂಕದಲ್ಲಿ ನೀಡಿ ಗೆದ್ದಿದ್ದಾರೆ. ರಘು ಮುಖರ್ಜಿಯ ಇನ್ನೊಂದು ಮುಖದ ಅರಿವಾದಾಗ ಅದನ್ನು ನೋಟದಲ್ಲೇ ತೋರಿಸುವ ಪ್ರಜ್ವಲ್ ಅಭಿನಯ ಅಮೋಘ. ಸಾಹಸ ದೃಶ್ಯಗಳು ಕೂಡ ಚೆನ್ನಾಗಿವೆ. ದರ್ಶನ್ ಅವರು ‘ಚಾಲೆಂಜಿಂಗ್ ಸ್ಟಾರ್ ದರ್ಶನ್’ ಆಗಿಯೇ ಚಿತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಅತಿಥಿ ಪಾತ್ರ ಮಾಡಿದ್ದಾರೆಂದು ಮೊದಲೇ ಸುದ್ದಿಯಾಗಿದ್ದರೂ, ಮೂರು ಪ್ರತ್ಯೇಕ ದೃಶ್ಯಗಳಲ್ಲಿ ಪರದೆಯ ಮೇಲೆ ಕಾಣಿಸಿಕೊಂಡು ಅಭಿಮಾನಿಗಳಿಗೆ ಸಂತೃಪ್ತಿ ನೀಡಿದ್ದಾರೆ ದರ್ಶನ್. ಅವರಿಗೆ ತಮ್ಮ ಮೊದಲ ದೃಶ್ಯದಲ್ಲಿ ಸಂದೇಶ, ಎರಡನೆಯ ದೃಶ್ಯದಲ್ಲಿ ಹೊಡೆದಾಟ ಮೂರನೆಯ ದೃಶ್ಯದಲ್ಲಿ ಸ್ನೇಹವನ್ನು ತೋರುವಂತಹ ಅಪರೂಪದ ಸಂದರ್ಭಗಳನ್ನು ಚಿತ್ರ ನೀಡಿದೆ. ಎಲ್ಲಕ್ಕಿಂತ ಮುಖ್ಯವಾಗಿ ಖಳನಾಯಕ ಸೇರಿದಂತೆ ಎಲ್ಲರ ಮಾತುಗಳಿಗೂ ಪ್ರೇಕ್ಷಕರು ಚಪ್ಪಾಳೆ ತಟ್ಟುವಂತೆ ಮಾಡುವಲ್ಲಿ ಸಂಭಾಷಣೆಕಾರ ಗುರು ಕಶ್ಯಪ್ ಪಾತ್ರ ಪ್ರಮುಖವಾಗಿದೆ. ಪ್ರಾಸ ಹೆಚ್ಚೇ ಆಯಿತು ಎನ್ನುವುದನ್ನು ಬಿಟ್ಟರೆ ಆಕರ್ಷಕ ಮಾತುಗಳು ಚಿತ್ರದ ಹೈಲೈಟ್ ಎನ್ನಬಹುದು.
ನಾಯಕಿಯಾಗಿ ಭಾವನಾ ಎಂದಿನಂತೆ ತಮಗೆ ಪ್ರಾಧಾನ್ಯತೆ ಇರುವ ಪಾತ್ರವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಒಂದು ಹಂತದಲ್ಲಿ ನಾಯಕನನ್ನು ಮೀರಿಸುವ ನಾಯಕಿಯಾಗಿಯೂ ಗೋಚರಿಸುತ್ತಾರೆ. ಆದರೆ ಪೊಲೀಸ್ ಯೂನಿಫಾರ್ಮ್ ದೃಶ್ಯಗಳು ಭಾವನಾಗೆ ಹೊಂದಿಕೊಂಡಂತಿಲ್ಲ. ಮಾತ್ರವಲ್ಲ ಅನಿವಾರ್ಯ ಸಂದರ್ಭ ಎನ್ನುವಂತಹ ದೃಶ್ಯದಲ್ಲಿಯೂ ಆಕೆಯನ್ನು ಸಾಹಸ ಸನ್ನಿವೇಶದಲ್ಲಿ ತೋರಿಸಿಲ್ಲ ಎನ್ನುವುದು ವಿಪರ್ಯಾಸ. ಹಿರಿಯ ಪೊಲೀಸ್ ಅಧಿಕಾರಿಯಾಗಿ ಅವಿನಾಶ್ ಎಂದಿನಂತೆ ಉತ್ಸಾಹದ ನಟನೆ ನೀಡಿದ್ದಾರೆ. ನಾಯಕನೊಂದಿಗೆ ಚಿತ್ರದುದ್ದಕ್ಕೂ ಇರುವ ಪೊಲೀಸ್ ಪೇದೆ ಬಸವನಾಗಿ ಧರ್ಮಣ್ಣ ಕಡೂರ್, ಕೆಲವೇ ದೃಶ್ಯಗಳಲ್ಲಿ ಬಂದರೂ ಫುಲ್ ಸ್ಕೋರ್ ಮಾಡುವ ಶೋಭರಾಜ್ ನಗು ಮೂಡಿಸುತ್ತಾರೆ. ಅನೂಪ್ ಸೀಳಿನ್ ಸಂಗೀತದಲ್ಲಿನ ಹಾಡುಗಳು ಗುನುಗುವಂತಿವೆ. ಹಿನ್ನೆಲೆ ಸಂಗೀತ ಕೂಡ ಆಕರ್ಷಕವಾಗಿದೆ. ಅದರಲ್ಲಿಯೂ ಹೊಡೆದಾಟದ ದೃಶ್ಯವನ್ನು ಕೂಡ ಮಧುರ ಸಂಗೀತಮಯಗೊಳಿಸಿರುವುದು ಅವರು ಹಂಸಲೇಖ ಶಿಷ್ಯ ಎನ್ನುವುದನ್ನು ಮತ್ತೊಮ್ಮೆ ನೆನಪಿಸುವಂತೆ ಮಾಡುತ್ತದೆ. ಒಟ್ಟಿನಲ್ಲಿ ಮೊದಲ ಪ್ರಯತ್ನದಲ್ಲೇ ಇಂತಹದ್ದೊಂದು ಉತ್ತಮ ಸಿನೆಮಾ ನೀಡಿರುವುದಕ್ಕೆ ನಿರ್ದೇಶಕ ಶ್ರೀನರಸಿಂಹ ಅಭಿನಂದನಾರ್ಹರು.
ತಾರಾಗಣ: ಪ್ರಜ್ವಲ್ ದೇವರಾಜ್, ದರ್ಶನ್, ಭಾವನಾ, ರಘು ಮುಖರ್ಜಿ
ನಿರ್ದೇಶನ: ಶ್ರೀನರಸಿಂಹ
ನಿರ್ಮಾಣ: ವಿಖ್ಯಾತ್ ಚಿತ್ರ