ಮೈಸೂರು ಮೇಯರ್ ಆಯ್ಕೆ ಬೆನ್ನಲ್ಲೆ ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಭಿನ್ನಮತ: ನಾಯಕರ ನಡುವೆ ಜಟಾಪಟಿ
ಮೈಸೂರು,ಫೆ.27: ಮೈಸೂರು ಮಹಾನಗರ ಪಾಲಿಕೆ ಮೇಯರ್- ಉಪಮೇಯರ್ ಆಯ್ಕೆ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು ಶಾಸಕ ತನ್ವೀರ್ ಸೇಠ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬೆಂಬಲಿಗರ ನಡುವೆ ವಾಗ್ವಾದ ಏರ್ಪಟ್ಟಿದೆ.
ಮೈಸೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯೊಂದಿಗೆ ಜೆಡಿಎಸ್ ಪಕ್ಷ ಅಧಿಕಾರ ಹಿಡಿದಿದ್ದು ಸಿದ್ದರಾಮಯ್ಯ ಅವರ ಶಕ್ತಿಯನ್ನು ಕುಂದಿಸಲು ನಡೆದ ಸಂಚು ಎಂದು ಹೇಳಲಾಗುತ್ತಿದೆ.
ಅತಂತ್ರ ಸ್ಥಿತಿಯನ್ನು ಹೊಂದಿರುವ ಪಾಲಿಕೆಯಲ್ಲಿ ಮೇಯರ್ ಸ್ಥಾನವನ್ನು ಕಾಂಗ್ರೆಸ್ ಗೆ ಬಿಟ್ಟುಕೊಡುವುದಾದರೆ ಜೆಡಿಎಸ್ ನೊಂದಿಗೆ ಮೈತ್ರಿ ಮುಂದುವರಿಸಿ ಎಂದಿದ್ದ ಸಿದ್ದರಾಮಯ್ಯ ಅವರ ಸೂಚನೆಯನ್ನು ಶಾಸಕ ತನ್ವೀರ್ ಸೇಠ್ ಧಿಕ್ಕರಿಸಿ ಜೆಡಿಎಸ್ ಪಕ್ಷದವರಿಗೆ ಮೇಯರ್ ಸ್ಥಾನ ಬಿಟ್ಟುಕೊಟ್ಟಿದ್ದಾರೆ ಎಂಬ ಆಕ್ರೋಶ ಕಾಂಗ್ರೆಸ್ ಪಕ್ಷದಲ್ಲಿ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಸಿದ್ದರಾಮಯ್ಯ ಅವರ ಆದೇಶವನ್ನು ಧಿಕ್ಕರಿಸಿದ್ದಾರೆನ್ನಲಾದ ಶಾಸಕ ತನ್ವೀರ್ ಸೇಠ್ ನಡೆಗೆ ಕಾಂಗ್ರೆಸ್ ನ ಹಿರಿಯ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದು, ಶಾಸಕಾಂಗ ಪಕ್ಷದ ನಾಯಕರ ಆದೇಶವನ್ನು ಧಿಕ್ಕರಿಸುತ್ತಾರೆ ಎಂದರೆ ಹೇಗೆ ? ಅವರ ಮೇಲೆ ಶಿಸ್ತುಕ್ರಮ ಜರುಗಿಸಬೇಕು ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಸುರೇಶ್ ಕುಮಾರ್ ಹಾಗೂ ಕೃಷ್ಣಭೈರೇಗೌಡ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ಈ ಹಿನ್ನಲೆಯಲ್ಲಿ ಶಾಸಕ ತನ್ವೀರ್ ಸೇಠ್ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.
ಶಾಸಕ ತನ್ವೀರ್ ಸೇಠ್ ಗೆ ನೋಟಿಸ್ ಜಾರಿಯಾದ ತಕ್ಷಣ ಅವರ ಅಭಿಮಾನಿಗಳು ತನ್ವೀರ್ ಸೇಠ್ ಮನೆ ಮುಂಭಾಗ ಸಿದ್ದರಾಮಯ್ಯ ವಿರುದ್ಧ ಶುಕ್ರವಾರ ಧಿಕ್ಕಾರ ಕೂಗಿದ್ದಾರೆ.
ಇದಕ್ಕೆ ಆಕ್ರೋಶಿತರಾದ ಸಿದ್ದರಾಮಯ್ಯ ಬೆಂಬಲಿಗ, ಮಾಜಿ ಮೇಯರ್ ಹಾಗೂ ಹಾಲಿ ನಗರ ಪಾಲಿಕೆ ಸದಸ್ಯ ಆರಿಫ್ ಹುಸೇನ್ ಮತ್ತು ಅಯೂಬ್ ಖಾನ್ ಎಂಬವರು ಪತ್ರಿಕಾಗೋಷ್ಠಿ ನಡೆಸಿ ಶಾಸಕ ತನ್ವೀರ್ ಸೇಠ್ ವಿರುದ್ಧ ಹರಿಹಾಯ್ದಿದ್ದಾರೆ.
ಶಾಸಕ ತನ್ವೀರ್ ಸೇಠ್ ಜೆಡಿಎಸ್ ಪಕ್ಷದೊಂದಿಗೆ ಡೀಲ್ ಮಾಡಿದ್ದಾರೆ. ಪಕ್ಷದ ಆದೇಶವಾಗಿದೆ, ಹಾಗಾಗಿ ಜೆಡಿಎಸ್ ಗೆ ಬೆಂಬಲ ನೀಡುವಂತೆ ನಗರಪಾಲಿಕೆ ಸದಸ್ಯರನ್ನು ದಿಕ್ಕು ತಪ್ಪಿಸಿದರು. ಹಾಗಾಗಿ ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಸಂಬಂಧ ಶಾಸಕ ತನ್ವೀರ್ ಸೇಠ್ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿ, ಪಕ್ಷದ ಆದೇಶದಂತೆ ನಾನು ನಡೆದುಕೊಂಡಿದ್ದೇನೆ. ನನ್ನ ವಿರುದ್ಧ ಕ್ರಮ ಕೈಗೊಳ್ಳುವುದಾದರೆ ಎದುರಿಸಲು ಸಿದ್ಧ. ನಾನು ವ್ಯಕ್ತಿ ಪೂಜೆ ಮಾಡುವುದಿಲ್ಲ ಎಂದು ಸಿದ್ದರಾಮಯ್ಯ ಬೆಂಬಲಿಗರಿಗೆ ತಿರುಗೇಟು ನೀಡಿದ್ದಾರೆ.
ಮತ್ತೊಂದೆಡೆ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ಮೇಯರ್ ಆಯ್ಕೆ ವಿಚಾರವನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಅವರ ಹೆಗಲಿಗೆ ವಹಿಸಲಾಗಿತ್ತು, ಆದರೆ ಯಾಕೆ ಹೀಗೆ ಆಯಿತು ಎಂದು ಗೊತ್ತಾಗುತ್ತಿಲ್ಲ. ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾಹಿತಿಯನ್ನು ಪಡೆಯಲಿದ್ದಾರೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರು ಈ ನಾಡು ಕಂಡ ಶ್ರೇಷ್ಠ ರಾಜಕಾರಣಿ. ಅವರ ವಿರುದ್ಧ ಘೋಷಣೆ ಕೂಗಿದ್ದು ಖಂಡನೀಯ. ಆನೆ ಹೋಗುತ್ತಿರುತ್ತೆ, ನಾಯಿ ಬೊಗಳುತ್ತಿದ್ದರೆ ವರ್ಚಸ್ಸು ಹಾಳಾಗಲು ಸಾಧ್ಯವೆ? ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಟ ಮಾಡಿದ ಮಹಾನ್ ನಾಯಕರ ವಿರುದ್ಧವೇ ಘೋಷಣೆ ಕೂಗಿದ್ದರು. ಅವರ ವರ್ಚಸ್ಸಿಗೆ ಏನಾದರೂ ಧಕ್ಕೆಯಾಯಿತಾ? ಚರಿತ್ರೆಯಲ್ಲಿ ಅವರ ಹೆಸರು ಮಸಕು ಆಯಿತಾ. ಅದೇ ರೀತಿ ಸಿದ್ದರಾಮಯ್ಯ ಅವರೂ ಕೂಡ. ಘೋಷಣೆ ಕೂಗುವುದರಿಂದ ಏನೂ ಆಗುವುದಿಲ್ಲ. ಸಿದ್ದರಾಮಯ್ಯ ಅವರ ವ್ಯಕ್ತಿತ್ವದ ಬಗ್ಗೆ ಎಲ್ಲರಿಗೂ ಗೊತ್ತಿದೆ
-ಡಾ.ಎಚ್.ಸಿ.ಮಹದೇವಪ್ಪ, ಮಾಜಿ ಸಚಿವ
ನಾನು ಯಾರನ್ನು ಪ್ರತಿಭಟನೆ ಮಾಡಿ ಎಂದು ಕರೆದಿರಲಿಲ್ಲ. ನನಗೆ ಪಕ್ಷದಿಂದ ನೋಟಿಸ್ ನೀಡಲಾಗಿದೆ ಎಂದು ಬೆಂಬಲಿಗರು ಧಿಕ್ಕಾರ ಕೂಗಿದ್ದಾರೆ. ಇದರಿಂದ ನನಗೂ ಬೇಸರವಾಗಿದೆ. ನಾಯಕರಿಗೆ ಬೆಂಬಲಿಗರು ಇದ್ದಾರೆ. ನನಗೇನು ಕತ್ತೆಗಳು ಇದ್ದಾರ ? ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಿ ಎಂದು ಹೇಳಿದ್ದೇ ಸಿದ್ದರಾಮಯ್ಯ. ಗಂಡು ಮಗು ಹಾಗಿಲ್ಲ, ಹೆಣ್ಣು ಮಗು ಆಗಿದೆ ಅಷ್ಟೆ. ಗಂಡು ಮಗು ಆದರೆ ಓಕೆ ಹೆಣ್ಣು ಮಗು ಬೇಡ ಅಂದರೆ ಹೇಗೆ ?. ಮೇಯರ್ ಆಯ್ಕೆ ವಿಚಾರದಲ್ಲಿ ಪಕ್ಷದ ಸೂಚನೆಯಂತೆ ನಾನು ಕೆಲಸ ಮಾಡಿದ್ದೇನೆ. ನಮ್ಮದು ವ್ಯಕ್ತಿ ಪೂಜೆ ಮಾಡುವ ಪರಂಪರೆಯಲ್ಲ
-ಶಾಸಕ ತನ್ವೀರ್ ಸೇಠ್