ಸಚಿವ ಸಿ.ಪಿ.ಯೋಗೇಶ್ವರ್ ಮೈಸೂರಿಗೆ ಪದೇ ಪದೇ ಭೇಟಿ: ಉಸ್ತುವಾರಿ ಸಚಿವ ಸ್ಥಾನದ ಮೇಲೆ ಕಣ್ಣು ?

Update: 2021-03-11 17:48 GMT

ಮೈಸೂರು,ಮಾ.11: ಬಿಜೆಪಿ ಪಕ್ಷದಲ್ಲಿ ತನ್ನದೇ ಪ್ರಾಬಲ್ಯ ಬೆಳೆಸಿಕೊಂಡಿರುವ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಮೈಸೂರು ಜಿಲ್ಲಾ ಉಸ್ತುವಾರಿ ಮೇಲೆ ಕಣ್ಣಿಟ್ಟಿದ್ದಾರೆಯೇ? ಎಂಬ ಮಾತುಗಳು ರಾಜಕೀಯ ವಲಯಗಳಲ್ಲಿ ಕೇಳಿಬರುತ್ತಿವೆ.

ಇದಕ್ಕೆ ಪುಷ್ಠಿ ನೀಡುವಂತೆ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಪದೇ ಪದೇ ಮೈಸೂರಿಗೆ ಭೇಟಿ ನೀಡುವ ಮೂಲಕ ಇಲ್ಲಿಂದಲೇ ಅವರ ಇಲಾಖೆಯ ಕಾರ್ಯಕ್ರಮಗಳಿಗೆ ಚಾಲನೆ ನೀಡುವುದಾಗಿ ಘೋಷಣೆ ಮಾಡುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಸಿ.ಪಿ.ಯೋಗೇಶ್ವರ್ ಸಚಿವರಾದ ಮೇಲೆ ಮೈಸೂರಿಗೆ ನಾಲ್ಕು ಬಾರಿ ಭೇಟಿ ನೀಡಿದ್ದಾರೆ. ಅದರಲ್ಲಿ ಮೂರು ಬಾರಿ ಅಧಿಕೃತ ಭೇಟಿಗಳಾಗಿವೆ. ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿದ್ದ ಅವರು ಚಾಮುಂಡಿ ಬೆಟ್ಟಕ್ಕೆ ತೆರಳಿ ಶ್ರೀ ಚಾಮುಂಡೇಶ್ವರಿ ತಾಯಿ ದರ್ಶನ ಪಡೆದು ಇಲಾಖೆ ವತಿಯಿಂದ ಆಯೋಜಿಸಿದ್ದ ಪ್ರವಾಸಿಗರನ್ನು ಸೆಳೆಯಲು ಲಂಡನ್ ಮಾದರಿಯ ಬಸ್ ಅನ್ನು ಉದ್ಘಾಟಿಸಿ ಹೋಗಿದ್ದರು. ಅಂದೇ ವಾಸ್ತವ್ಯ ಹೂಡಿ ಹೆಲಿ ಟೂರಿಸಂ ಮೈಸೂರಿನಿಂದಲೇ ಪ್ರಾರಂಭ ಮಾಡುವುದಾಗಿ ಘೋಷಣೆ ಮಾಡಿದ್ದರು. ಜೊತೆಗೆ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರನ್ನು ಭೇಟಿ ಮಾಡಿ ಮಾತುಕತೆಯನ್ನು ನಡೆಸಿದ್ದರು. ಹಾಗೆ ಸುತ್ತೂರು ಮಠಕ್ಕೆ ತೆರಳಿ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರನ್ನು ಭೇಟಿ ಮಾಡಿದ್ದರು.

ಇದಾದ ನಂತರ ಈಗ ಕಳೆದ ಮೂರು ದಿನಗಳ ಹಿಂದೆ ಮೈಸೂರಿಗೆ ಆಗಮಿಸಿದ್ದ ಅವರು, ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರನ್ನು ಭೇಟಿ ಮಾಡಿ ಪ್ರವಾಸೋದ್ಯಮದ ಬಗ್ಗೆ ಚರ್ಚೆ ಮಾಡಿರುವುದಾಗಿ ತಿಳಿಸಿದ್ದರು.

ಮಾ.12 ಶುಕ್ರವಾರ ಮತ್ತೆ ಎರಡು ದಿನಗಳ ಮೈಸೂರು ಪ್ರವಾಸ ಹಮ್ಮಿಕೊಂಡಿದ್ದಾರೆ. ಇದರ ಜೊತೆಗೆ ಪತ್ರಕರ್ತರೊಂದಿಗೆ ಮಾಧ್ಯಮ ಸಂವಾದವನ್ನು ನಡೆಸಲಿದ್ದಾರೆ. ಜೊತೆಗೆ ಇಲಾಖೆಯ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಹಿಂದೆಯೇ ಕಣ್ಣಿಟ್ಟಿದ್ದ ಯೋಗೇಶ್ವರ್: ಸಚಿವ ಯೋಗೇಶ್ವರ್ ಈ ಹಿಂದೆಯೇ ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆಮಾಡಲು ಬಯಸಿದ್ದರು. ಎಚ್.ವಿಶ್ವನಾಥ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಬಿಜೆಪಿಯಿಂದ ಸ್ಪರ್ದೆ ಮಾಡಲು ಭಯಸಿದ್ದರಾದರೂ ಅವಕಾಶ ಸಿಗಲಿಲ್ಲ. 
ಈಗ ಮೈಸೂರು ಜಿಲ್ಲಾ ಉಸ್ತುವಾರಿ ಪಡೆದು ಮುಂಬರುವ ಸಾರ್ವತ್ರಿಕ ವಿಧಾಸಭಾ ಚುನಾವಣೆಯಲ್ಲಿ ಹುಣಸೂರಿನಿಂದ ಸ್ಪರ್ಧೆ ಮಾಡುವ ಭಯಕೆಯನ್ನು ಹೊಂದಲಾಗಿದ್ದು, ಅದಕ್ಕಾಗಿ ಈಗಿನಿಂದಲೇ ತಯಾರಿ ಮಾಡಿಕೊಳ್ಳುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ ಎಂದು ತಿಳಿದು ಬಂದಿದೆ. 

ಎಲ್ಲರ ವಿಶ್ವಾಸಕ್ಕೆ ಪ್ರಯತ್ನ: ಸಚಿವ ಸಿ.ಪಿ.ಯೋಗೇಶ್ವರ್ ಮೈಸೂರಿಗೆ ಭೇಟಿ ನೀಡಿದಾಗಲೆಲ್ಲಾ ಬಿಜೆಪಿ ಪಕ್ಷದ ಮುಖಂಡರುಗಳನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ನಂತರ ಮೈಸೂರು ಜಿಲ್ಲಾ ಉಸ್ತುವಾರಿ ಗಿಟ್ಟಿಸಿಕೊಳ್ಳಬೇಕು ಎಂಬ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. 

ನೆಲೆ ಕಲ್ಪಿಸಲು ಯತ್ನ: ಸಚಿವ ಸಿ.ಪಿ.ಯೋಗೇಶ್ವರ್ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಅಸ್ತಿತ್ವಕ್ಕೆ ತರಬೇಕು ಎಂದು ಪಕ್ಷದ ಮುಖಂಡರುಗಳಲ್ಲಿ ಆಗಾಗ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡುವ ವೇಳೆ ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗೆ ನೆಲೆಯಿಲ್ಲ, ಹಾಗಾಗಿ ಪಕ್ಷ ಸಂಘಟನೆಗೆ ಅವಕಾಶ ನೀಡುವಂತೆ ಕೇಳಿಕೊಂಡಿರುವುದಾಗಿ ಹೇಳಿದ್ದರು.

ಮೈಸೂರು ಉಸ್ತುವಾರಿ ಗಿಟ್ಟಿಸಿಕೊಂಡರೆ ಈ ಭಾಗದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟುವ ಜೊತೆಗೆ ಹುಣಸೂರು ಕ್ಷೇತ್ರದಿಂದ ಮುಂಬರು ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಬೇಕು ಎಂಬ ತೀರ್ಮಾನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. 

ಭೇಟಿ ಕಡಿಮೆ ಮಾಡಿದ ಸೋಮಶೇಖರ್: ಅದೇಕೊ ಇತ್ತೀಚೆಗೆ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮೈಸೂರು ಭೇಟಿ ಕಡಿಮೆಗೊಳಿಸಿದ್ದಾರೆ. ಮೈಸೂರಿಗೆ ಎರಡು, ಮೂರು ಅಥವಾ ವಾರಕ್ಕೊಂದು ದಿನವಾದರೂ ಮೈಸೂರು ಪ್ರವಾಸ ಕೈಗೊಳ್ಳುತ್ತಿದ್ದ ಸಚಿವ ಎಸ್.ಟಿ.ಸೋಮಶೇಖರ್ ಮೈಸೂರಿಗೆ ಬರುವುದನ್ನೇ ಕಡಿಮೆ ಮಾಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದರೆ ಸಚಿವ ಸಿ.ಪಿ.ಯೋಗೇಶ್ವರ್ ಮೈಸೂರಿನ ಮೇಲೆ ಕಣ್ಣಿಟ್ಟಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. 

Writer - ನೇರಳೆ ಸತೀಶ್ ಕುಮಾರ್

contributor

Editor - ನೇರಳೆ ಸತೀಶ್ ಕುಮಾರ್

contributor

Similar News