ದುರಿತ ಸಮಯದಲ್ಲಿ ದೂರ ದೂಡಿದರು...
ಸಾವಿರಾರು ಹೊಟೇಲ್‌ಗಳ ಗೋಡೌನ್ ಅಥವಾ ಹತ್ತು ಅಡಿ ಉದ್ದ, ಹತ್ತು ಅಡಿ ಅಗಲವಿರುವ ಕಾರ್ಮಿಕರ ಕೊಠಡಿಯಲ್ಲಿ ಉಸಿರುಗಟ್ಟಿ, ಮುದುಡಿ ಕುಳಿತು ಶೂನ್ಯ ದೃಷ್ಟಿಯಿಂದ ಬೀರುವ ನೋಟ; ಚಿಕ್ಕಪುಟ್ಟ ಚಾಲ್ ಮನೆಗಳಲ್ಲಿ, ಅಪಾರ್ಟ್‌ಮೆಂಟ್‌ಗಳಲ್ಲಿ ಆಕಾಶವೇ ಕಳಚಿ ಬಿದ್ದಂತೆ ಕುಳಿತಿರುವವರು; ಒಳಗಿನ ರೇಶನ್ ಇತ್ಯಾದಿ ಮುಗಿದಿದೆ, ಇನ್ನಾರು ನಮಗೆ ಗತಿಯೆನ್ನುವ ಆತಂಕ; ಒಂದಿಷ್ಟು ಹಣ ಬ್ಯಾಂಕಿನಲ್ಲಿ ಇದ್ದವರೂ ಅದು ದಿನದಿಂದ ದಿನಕ್ಕೆ ಮಾಯವಾಗುವ ಪರಿಗೆ ಹತಾಶೆಯ ಕೂಪಕ್ಕೆ ಇಳಿಯುವ ಸಂದರ್ಭ... ಒಟ್ಟಾರೆ ಮುಗಿಯದೆನ್ನುವ ಸಂಕಟ.
ಕಳೆದ ವರ್ಷದಲ್ಲಿ ನಡೆದ ಘಟನೆಗಳನ್ನು ಮುಂಬೈ ತುಳು-ಕನ್ನಡಿಗರು ಎಂದೂ ಮನಃಪಟಲದಿಂದ ಅಳಿಸಲಾರದ ನೆನಪುಗಳನ್ನಾಗಿ ಜೋಪಾನವಾಗಿ ಇಟ್ಟುಕೊಂಡಿದ್ದಾರೆ. ಪ್ರತಿಯೋರ್ವ ಮುಂಬೈ ಕನ್ನಡಿಗರನ್ನು ಮರುಚಿಂತಿಸುವಂತೆ ಪ್ರೇರೇಪಿಸಿದ, ಬಹಳಷ್ಟು ಜೀವನ ಪಾಠವನ್ನು ಕಲಿಸಿದ ವರ್ಷವದು. ಸರಿಸುಮಾರು ಒಂದು ವರ್ಷದ ಹಿಂದೆ ಸುನಾಮಿಯಂತೆ ಕೊರೋನ ಅಲೆಗಳು ಮುಂಬೈಗೂ ಬಂದಪ್ಪಳಿಸಿದಾಗ ಎಲ್ಲರಂತೆ ತುಳು-ಕನ್ನಡಿಗರೂ ಭಯಗ್ರಸ್ಥರಾದರು; ಕಂಗೆಟ್ಟರು. ಆಗ ವಿವಿಧ ರಾಜ್ಯಗಳಿಂದ ಬಂದು ಇಲ್ಲಿ ನೆಲೆ ನಿಂತಿದ್ದ ಜನ ಪ್ರತಿದಿನ ಸಾವಿರಗಟ್ಟಲೆ, ಲಕ್ಷಗಟ್ಟಲೆ ಎಂಬಂತೆ ಇಲ್ಲಿಂದ ಪಲಾಯನಗೆಯ್ಯಲು ಪ್ರಾರಂಭಿಸಿದರು. ಆಯಾ ರಾಜ್ಯಗಳಲ್ಲಿ ನೆಲೆಸಿರುವ ಅವರ ಸಂಬಂಧಿಕರು ಅಲ್ಲಿ ಕಾಲ್ತುದಿಯಲ್ಲಿ ಇವರಿಗಾಗಿ ಕಾದು ನಿಂತರು. ರಾಜಕಾರಣಿಗಳು ಅವರ ಸ್ವಾಗತಕ್ಕಾಗಿ ವಿವಿಧ ಕಾರ್ಯ ಹಮ್ಮಿಕೊಂಡರು. ಕರ್ನಾಟಕದ ಕಲಬುರಗಿ, ರಾಯಚೂರು, ವಿಜಯಪುರದ ಜನರೂ ತಮ್ಮ ಮಾತೃ ನೆಲದತ್ತ ಮುಖಮಾಡಿದರು. ಅಲ್ಲಿಗೂ ‘ಶ್ರಮಿಕ್’ ರೈಲು ಆರಂಭವಾಯಿತು. ಆದರೆ ತುಳು ಕನ್ನಡಿಗರು.. ಅದರಲ್ಲೂ ಹೊಟೇಲ್ ಕಾರ್ಮಿಕರು! ಇಲ್ಲಿನ ಅಧಿಕಾರಿಗಳಿಗೆ, ರಾಜಕಾರಣಿಗಳನ್ನು ಸಂಪರ್ಕಿಸಿ ನಮಗೇಕೆ ಈ ಸಂಪರ್ಕ ಇಲ್ಲ ಎಂದು ಕೇಳಿದರೆ ‘‘ಅಲ್ಲಿಂದ ನಮಗೆ ಯಾವುದೇ ಬೇಡಿಕೆಯೂ ಬಂದಿಲ್ಲ’’ ಎಂಬ ಉತ್ತರ ನಮ್ಮವರನ್ನು ಇಲ್ಲಿ ಅಧೀರರನ್ನಾಗಿಸಿತು.
ವಾರ, ತಿಂಗಳುಗಳು ಉರುಳುತ್ತಿದ್ದಂತೆ ಇಲ್ಲಿನ ಬೇರೆ ರಾಜ್ಯಗಳ ಜನ ಖಾಲಿಯಾಗತೊಡಗಿದರು. ಆದರೆ ಅವಿಭಜಿತ ದಕ್ಷಿಣ ಕನ್ನಡದವರ ಹೆಚ್ಚಿನ ಮನೆಗಳಿಂದ ‘‘ನಿಕ್ಲು ಇತ್ತೆ ಬರೊಡ್ಚಿ’’ (ನೀವು ಈಗ ಬರಬೇಡಿ) ಎಂಬ ನುಡಿಯೊಂದಿಗೆ ಫೋನ್ ಕಟ್. ಸಾವಿರಾರು ಹೊಟೇಲ್‌ಗಳ ಗೋಡೌನ್ ಅಥವಾ ಹತ್ತು ಅಡಿ ಉದ್ದ, ಹತ್ತು ಅಡಿ ಅಗಲವಿರುವ ಕಾರ್ಮಿಕರ ಕೊಠಡಿಯಲ್ಲಿ ಉಸಿರುಗಟ್ಟಿ, ಮುದುಡಿ ಕುಳಿತು ಶೂನ್ಯ ದೃಷ್ಟಿಯಿಂದ ಬೀರುವ ನೋಟ; ಚಿಕ್ಕಪುಟ್ಟ ಚಾಲ್ ಮನೆಗಳಲ್ಲಿ, ಅಪಾರ್ಟ್‌ಮೆಂಟ್‌ಗಳಲ್ಲಿ ಆಕಾಶವೇ ಕಳಚಿ ಬಿದ್ದಂತೆ ಕುಳಿತಿರುವವರು; ಒಳಗಿನ ರೇಶನ್ ಇತ್ಯಾದಿ ಮುಗಿದಿದೆ, ಇನ್ನಾರು ನಮಗೆ ಗತಿಯೆನ್ನುವ ಆತಂಕ; ಒಂದಿಷ್ಟು ಹಣ ಬ್ಯಾಂಕಿನಲ್ಲಿ ಇದ್ದವರೂ ಅದು ದಿನದಿಂದ ದಿನಕ್ಕೆ ಮಾಯವಾಗುವ ಪರಿಗೆ ಹತಾಶೆಯ ಕೂಪಕ್ಕೆ ಇಳಿಯುವ ಸಂದರ್ಭ... ಒಟ್ಟಾರೆ ಮುಗಿಯದೆನ್ನುವ ಸಂಕಟ. ಈ ಸಂದರ್ಭದಲ್ಲಿ ಊರಿನ ಕೆಲವು ಹಿರಿಯರು, ರಾಜಕೀಯ ನಾಯಕರು, ಅಧಿಕಾರಿಗಳು ಮುಂಬೈ ಕನ್ನಡಿಗ-ತುಳುವರನ್ನು ನಡೆಸಿಕೊಂಡ ರೀತಿಯನ್ನು ಎಂದೂ ಮರೆಯಲಾಗದು. ಇತ್ತೀಚೆಗೆ ಓರ್ವ ರಾಜಕಾರಣಿ ಹೇಳಿದ ‘‘ಮುಂಬೈಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇದೆ, ಅದಕ್ಕೆ ಮಹಾರಾಷ್ಟ್ರ ಸರಕಾರ ಹತ್ತು ಕೋಟಿ ರೂ. ಅನುದಾನ ನೀಡುತ್ತಿದೆ’’ ಎಂಬ ಹೇಳಿಕೆ ಕಪೋಲಕಲ್ಪಿತ ಕಥೆ. ಮಹಾರಾಷ್ಟ್ರ ಸರಕಾರದಿಂದ ಕರ್ನಾಟಕ ಭವನಕ್ಕಾಗಿ ದೊರೆತ ಜಾಗ ನನೆಗುದಿಗೆ ಬಿದ್ದು, ಕೊನೆಗೆ ಇಲ್ಲಿನವರ ಪ್ರಾಮಾಣಿಕ ಪ್ರಯತ್ನದಿಂದ ಎಚ್ಚೆತ್ತ ಕರ್ನಾಟಕ ಸರಕಾರ ಭವನ ನಿರ್ಮಿಸಿದರೂ ಮುಂಬೈ ಕನ್ನಡಿಗರಿಗೆ ಇದು ಯಾವುದೇ ಉಪಯೋಗಕ್ಕೆ ಬಾರದೆ ಇರುವಂತಹ ಸಂದರ್ಭದಲ್ಲಿ ‘ಸಾಗರೋತ್ತರ ಕನ್ನಡಿಗರ ಹದಿನೇಳನೇ ಸಂವಾದ’ದಲ್ಲಿ ನಮ್ಮ ಪರಿಷತ್ತಿನ ಅಧ್ಯಕ್ಷ ಮಹೋದಯರು ‘‘ಸ್ಥಳಾವಕಾಶ ಒದಗಿಸಿದರೆ ವಿದೇಶಗಳಲ್ಲಿ ಕನ್ನಡ ಭವನ ಸ್ಥಾಪಿಸಲು ಸಿದ್ಧ’’ ಎಂಬ ಹೇಳಿಕೆ ಕೊಟ್ಟಿರುವುದು ಗಮನಿಸಿದರೆ ಅಯ್ಯೋ ಅನ್ನಿಸುತ್ತದೆ. ವಿದೇಶದಲ್ಲಿ ಕನ್ನಡ ಭವನ ನಂತರದ ಪ್ರಶ್ನೆ, ಹೊರ ರಾಜ್ಯದಲ್ಲೊಂದು ಕರ್ನಾಟಕ ಭವನ ಇದೆ ಅದರ ಉಪಯೋಗ ಒಂದಿಷ್ಟಾದರೂ ಆಗಬೇಕೆಂಬ ಪ್ರಾರಂಭಿಕ ಜ್ಞಾನವೂ ನಮ್ಮ ರಾಜಕಾರಣಿಗಳಿಗೆ ಬಿಡಿ ನಮ್ಮ ಅಧಿಕಾರಿಗಳಿಗೂ ಇಲ್ಲವಲ್ಲ!.
ಕೊರೋನ ಸಂದರ್ಭದಲ್ಲಿ ಯಾವುದೇ ರೀತಿಯಿಂದಲೂ ಊರಿಗೆ ಹೋಗುವ ದಾರಿಯಿಲ್ಲ ಎಂದರಿತ ಇಲ್ಲಿನ ತುಳು ಕನ್ನಡಿಗರು ನಿರಾಶೆ, ಕ್ರೋಧ ಗೊಂಡಿರುವುದು ನಿಜ, ಹತಾಶರಾದದ್ದು ನಿಜ. ಆದರೆ ಇಲ್ಲಿನ ಮನಸ್ಸುಗಳು ದೊಡ್ಡವು. ಹಣಕಾಸಿನಲ್ಲಿ ಚಿಕ್ಕದಾದ ಅಭಿನಯ ಮಂಟಪದಿಂದ ಹಿಡಿದು, ಡೊಂಬಿವಲಿ ಕರ್ನಾಟಕ ಸಂಘ, ಗೋರೆಗಾಂವ್ ಕರ್ನಾಟಕ ಸಂಘಗಳಂತಹ ದೊಡ್ಡ ಸಂಸ್ಥೆಗಳು, ನೆರೂಲ್ ಶನಿಮಂದಿರ ಒಳಗೊಂಡು ಚಿಕ್ಕ-ದೊಡ್ಡ ಹಲವಾರು ಮಂದಿರಗಳು, ಇಲ್ಲಿನ ಪೇಜಾವರ, ಅದಮಾರು ಮಠ ಇತ್ಯಾದಿ ಎಲ್ಲವೂ ಎಲ್ಲ ರೀತಿಯಿಂದಲೂ ಸಹಾಯ ಹಸ್ತ ನೀಡಲು ಮುಂದಾದವು. ಉರಿಗೆ ಹೋಗಲಾರದೆ ಇಲ್ಲಿಯೇ ಬಾಕಿಯಾಗಿದ್ದ ಅದೆಷ್ಟೋ ಗರ್ಭಿಣಿಯರ ಸುರಕ್ಷಿತ ಹೆರಿಗೆಗಾಗಿ ಹಲವು ಅಧಿಕಾರಿಗಳನ್ನು ಸಂಪರ್ಕಿಸಿ ಹಲವು ರೀತಿಯ ಸೌಲಭ್ಯ ಲಭ್ಯವಾಗುವಂತೆ ಹಾಗೂ ಕೆಲವೊಂದು ವಿಶಿಷ್ಟ ರೀತಿಯ ಕಾಯಿಲೆಗಳಿಗೆ ಎಲ್ಲಾ ಕಡೆ ಸಿಗದಂತಹ ಔಷಧಿಗಳ ಪೂರೈಕೆಯಲ್ಲಿ ರೋನ್ಸ್ ಬಂಟ್ವಾಳ, ಎರ್ಮಾಳ್ ಹರೀಶ್ ಶೆಟ್ಟಿ, ಇಂದ್ರಾಳಿ ದಿವಾಕರ ಶೆಟ್ಟಿ ಮೊದಲಾದವರು ಮುಂಚೂಣಿಯಲ್ಲಿ ನಿಂತರು. ವಸಾಯಿಯ ರುದ್ರ ಶೆಟ್ಟರ್ ಗ್ರೂಪ್ ಮತ್ತು ಫಾರ್ಮ್ ಹೌಸ್ ಗ್ರೂಪ್ ಆಫ್ ಹೊಟೇಲ್ಸ್ ಮಾತ್ರವಲ್ಲದೆ ಇನ್ನಿತರ ಸಂಸ್ಥೆಗಳು ಇಲ್ಲಿ ಮಾಡಿದ ಸಹಾಯ ಸಹಕಾರ ಮಹತ್ತರವಾದುದು.
ಸಂಸದ ಗೋಪಾಲ್ ಶೆಟ್ಟಿ, ಬಿ. ಆರ್. ಶೆಟ್ಟಿ (ಬೈಲೂರು ಉಡುಪಿ), ಎರ್ಮಾಳ್ ಹರೀಶ್ ಶೆಟ್ಟಿ, ಐಕಳ ಹರೀಶ್ ಶೆಟ್ಟಿ, ಡಾ. ಆರ್. ಕೆ. ಶೆಟ್ಟಿ, ರೋನ್ಸ್ ಬಂಟ್ವಾಳ, ಅನೂಪ್ ಶೆಟ್ಟಿ, ಸಚ್ಚಿದಾನಂದ ಶೆಟ್ಟಿ, ಮಾಟುಂಗ, ನಿತೀಶ್ ಶೆಟ್ಟಿ, ಡಾ. ಸುನೀತಾ ಎಂ. ಶೆಟ್ಟಿ, ಗಿರೀಶ್ ಮಹೇಶ್ ಶೆಟ್ಟಿ ತೆಲ್ಲಾರ್, ಅನಿಲ್ ಹೆಗ್ಡೆ, ಇಂದ್ರಾಳಿ ದಿವಾಕರ ಶೆಟ್ಟಿ, ಡಾ. ಶಿವ ಮೂಡಿಗೆರೆ, ಧನಂಜಯ ಕಾಂತಿ, ನಿತ್ಯಾನಂದ ಕೋಟ್ಯಾನ್, ಸುನಿಲ್ ಪಾಯ್ಸಾ (ಕೆನರಾ ಪಿಂಟೋ), ವಿಶ್ರಾಂತ್ ಎರ್ಮಾಳು, ವಿ. ಕೆ. ಸುವರ್ಣ, ಸತೀಶ್ ಎರ್ಮಾಳ್, ಸಿಂಧೂರ್ ರಾಜೇಶ್ ಗೌಡ, ಅಶೋಕ್ ಸುವರ್ಣ -ಹೀಗೆ ಇಲ್ಲಿನ ಶ್ರೀಮಂತ ಮನಸ್ಸುಗಳ ಪಟ್ಟಿ ಇನ್ನೂ ನೂರಾರಿವೆ. ಇಲ್ಲಿನ ಚಿಕ್ಕಪುಟ್ಟ ಜಾತಿ ಸಂಘ ಸಂಸ್ಥೆಗಳಿಂದ ಮೊದಲುಗೊಂಡು, ಬಂಟರ ಸಂಘ, ಮುಂಬೈ ಮೊಗವೀರ ವ್ಯವಸ್ಥಾಪನಾ ಮಂಡಳಿ, ಬಿಲ್ಲವರ ಅಸೋಸಿಯೇಶನ್ ಎಲ್ಲವೂ ಜಾತಿ, ಮತ ಭೇದ ಮರೆತು ತಮ್ಮವರ ಸಹಾಯ ಹಸ್ತಕ್ಕೆ ಕೈ ಚಾಚಿ ಮುಂದೆ ಬಂದವು. ರೋನ್ಸ್ ಬಂಟ್ವಾಳ್, ಎರ್ಮಾಳ್ ಹರೀಶ್ ಶೆಟ್ಟಿ ಮೊದಲಾದವರು ಸರಿಯಾದ ಜನರಿಗೆ ತಲುಪಬೇಕಾದ ಸಾಮಗ್ರಿ ತಲುಪುವಂತೆ ಸಂಘ ಸಂಸ್ಥೆಗಳಿಗೆ ನೆರವಾದರು. ಹಾಂ! ಕೆಲವೊಂದು ಸಂಸ್ಥೆಗಳು; ತಾವೇ ಇಲ್ಲಿ ಎಲ್ಲವೂ, ತಾವೇ ಇಲ್ಲಿನ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂದು ಹೇಳಿಕೊಳ್ಳುತ್ತಾ ಎರಡೂ ಸರಕಾರಗಳಿಂದ ಬಾಚಿಕೊಳ್ಳುವ ಸಂಸ್ಥೆಗಳು ಮಾತ್ರ ಈ ಸಂದರ್ಭದಲ್ಲಿ ಯಾರದ್ದೇ ಕೆಲಸಕ್ಕೆ ಬಾರದ್ದು ವಿಪರ್ಯಾಸಗಳಲ್ಲಿ ಒಂದು.
ಇಲ್ಲಿಂದ ಸುರಕ್ಷಿತವಾಗಿ ಹೊರಟು ಊರಿಗೆ ಬರುತ್ತಿದ್ದ ಮಂದಿಗೆ ಅಲ್ಲಿ ಕೊರೋನ ಪಾಸಿಟಿವ್ ಆಗುತ್ತಿದ್ದ ಕಾರಣದ ಬಗ್ಗೆ ಅಲ್ಲಿನ ರಾಜಕೀಯ ಮುಖಂಡರು, ಅಧಿಕಾರಿಗಳು ಚಿಂತಿಸಿದ್ದಾರೆಯೇ? ಮಹಾರಾಷ್ಟ್ರ-ಕರ್ನಾಟಕ ಗಡಿ ಭಾಗದ ನಿಪ್ಪಾಣಿಯಲ್ಲಿನ ಭಾಗ ಕೊರೋನ ಹಾಟ್‌ಸ್ಪಾಟ್. ಅಲ್ಲಿ ಪ್ರಯಾಣಿಕರನ್ನು ತಪಾಸಣೆಗೊಳಿಸುವ ನೆಪದಲ್ಲಿ ಆರೇಳು ಗಂಟೆ ಬಸ್‌ಗಳನ್ನು ನಿಲ್ಲಿಸಲಾಗುತ್ತಿತ್ತು. ಅಲ್ಲಿ ಆಗುತ್ತಿದ್ದ ಜನಸಂದಣಿಯ ಅವ್ಯವಸ್ಥೆಯಿಂದ ಕೆಲವರಿಗೆ ಕೊರೋನ ಬಂದಿರುವ ಸಾಧ್ಯತೆಯಿರಬಹುದು. ಮೇ 18ರಂದು ಮುಂಬೈಯಿಂದ ಮೂವತ್ತು ಮಂದಿ ಪ್ರಯಾಣಿಕರನ್ನು ಹೊತ್ತುಕೊಂಡು ಹೊರಟ ಬಸ್ಸು ನಿಪ್ಪಾಣಿಗಿಂತ ಹದಿನೇಳು ಕಿಲೋಮೀಟರ್ ದೂರದ ಕಾಗಲ್‌ನಲ್ಲಿ ನಿಲ್ಲಿಸಲಾಯಿತು. ಅದರಲ್ಲಿ ಒಬ್ಬಾಕೆ ತುಂಬು ಗರ್ಭಿಣಿಯೂ ಇದ್ದರು.
ಇಲ್ಲಿಂದ ಊರಿಗೆ ಮೋಜು-ಮಜಾ ಮಾಡುವುದಕ್ಕಾಗಿ ಜನರ ಹೋಗುತ್ತಿಲ್ಲ. ಅವರಿಗೆ ಅವರದೇ ಆದ ಅನಿವಾರ್ಯ ಕಾರಣಗಳಿವೆ. ಕೆಲವರು ವೃದ್ಧ ತಂದೆತಾಯಿಯಂದಿರನ್ನು, ಹಿರಿಯರನ್ನು ಕಾಣುವುದಕ್ಕೆಂದು 3-4ತಿಂಗಳಿಗೊಮ್ಮೆ ಎರಡು ದಿನಗಳ ಮಟ್ಟಿಗೆ ಹೋಗಿ ಬರುವವರಿದ್ದಾರೆ. ವಸಂತ ಸುವರ್ಣ, ಉಮೇಶ್ ಸುವರ್ಣ ಮೊದಲಾದ ನೂರಾರು ಮಂದಿ ಊರಿನಲ್ಲಿರುವ ತಮ್ಮ ಮನೆ, ಕುಟುಂಬದ ದೈವಗಳ ವಾರ್ಷಿಕ ತಂಬಿಲಕ್ಕಾಗಿ ಕುಟುಂಬಿಕರ ಪರವಾಗಿ ಅವರೇ ಹೋಗಿ ಮಾಡಬೇಕಾಗುತ್ತದೆ. ಕೆಲವರು ತಮ್ಮ ರೋಗಗ್ರಸ್ತ ದೇಹಕ್ಕೆ ಊರಿನ ನಾಟಿ ವೈದ್ಯರಿಂದ ಶುಶ್ರೂಷೆಗಾಗಿ.. ಹೀಗೆ ಹತ್ತು ಹಲವು ಕಾರಣಗಳಿಂದಾಗಿ ಊರಿಗೆ ಹೋಗಲೇ ಬೇಕಾದ ಅನಿವಾರ್ಯಗಳಿವೆ.
ಊರಿನಲ್ಲಿರುವ ಮಠ-ಮಂದಿರ, ಶಾಲೆ, ಕಾಲೇಜುಗಳಲ್ಲಿ, ಹಾಸ್ಟೆಲ್‌ಗಳಲ್ಲಿ ಎಲ್ಲಿಯಾದರೂ ಇವರಿಗೆ 15-20 ದಿನ (ಕ್ವಾರಂಟೈನ್) ಉಳಿದುಕೊಳ್ಳುವ ವ್ಯವಸ್ಥೆ ನೋಡಿಕೊಂಡಿದ್ದರೆ, ಊರಿಗೆ ಬರುವ ಬಸ್ಸಿನ ವ್ಯವಸ್ಥೆ, ಅಲ್ಲಿನ ಅಷ್ಟೂ ದಿನಗಳ ಊಟದ ವ್ಯವಸ್ಥೆ... ಎಲ್ಲವನ್ನೂ ನಿಭಾಯಿಸಲು ಕಟಿಬದ್ಧರಾಗಿದ್ದರು ಇಲ್ಲಿನ ವಿಶಾಲ ಮನಸ್ಸಿನ ಜನ. ಡಾ. ಬಿ. ಎಂ. ಹೆಗ್ಡೆ ಕೊರೋನ ಸಂದರ್ಭ ಹೇಳಿದ್ದ: ‘‘ಕೊರೋನಾದಿಂದ ಭಯಬೇಡ.... ರೋಗದಿಂದ ದೂರವಿರಿ, ರೋಗಿಯಿಂದಲ್ಲ’’ ಎಂಬ ಮಾತಾಗಲಿ, ತೆಲಂಗಾಣದ ಮುಖ್ಯಮಂತ್ರಿ ತಮ್ಮ ರಾಜ್ಯದ ಜನ ಎಲ್ಲೇ ಇರಲಿ, ಹೇಗೂ ಇರಲಿ ಅವರನ್ನು ಸ್ವಾಗತಿಸುತ್ತೇವೆ, ಎಲ್ಲಾ ಸೌಕರ್ಯ ಒದಗಿಸುತ್ತೇವೆ ಎಂಬ ಮಾತನ್ನಾಗಲಿ ನಮ್ಮ ರಾಜಕಾರಣಿಗಳು ಕೇಳಬೇಕಿತ್ತು. ಕೇಳಿದರೆ ಅವರಿಗೆ ಆ ಮಾತುಗಳೆಲ್ಲ ಅರ್ಥವಾಗುತ್ತಿತ್ತು.
ಭಾಷೆ ಸದಾ ಹರಿವ ನೀರಿನಂತೆ. ಒಂದಿಷ್ಟು ಕಿಲೋಮಿಟರ್ ದೂರದ ನಂತರ ಭಾಷೆಯಲ್ಲಿ ಬದಲಾವಣೆ ಗಮನಿಸಬಹುದು ಅಂತಹದ್ದರಲ್ಲಿ ಕೊರೋನ ಪ್ರಾರಂಭಗೊಂಡಾಗ ಇಲ್ಲಿನ ಭಾಷೆಯ ಬಗ್ಗೆ ಕೆಟ್ಟದಾಗಿ ಬಿಂಬಿಸುವ ವಾಟ್ಸ್‌ಆ್ಯಪ್ ಪ್ರಚಾರ ನಡೆಯಿತು. ಅಂತಹವರಿಗೆ ತಾವು ಒಂದು ಕಡೆ ‘ಬಡ್ತುನು’ ಎಂದು ಹೇಳಿದರೆ ಅದೇ ತುಳುನಾಡಿನಲ್ಲಿ ಇನ್ನೊಂದೆಡೆ ‘ಮಿತರುನು’ ಎನ್ನುವ ಶಬ್ದಗಳನ್ನು ಹೇಳುತ್ತಾರೆ. ಅಲ್ಲಿ ಯಾರಾದರೂ ಗೇಲಿ ಮಾಡಿದ್ದಿದೆಯೇ? ಮುಂಬೈ ಕನ್ನಡಿಗರು ಪರಭಾಷೆಯ ನಡುವೆ ಜೀವಿಸುತ್ತ ತಮ್ಮ ಭಾಷೆಯನ್ನು ಜೀವಂತ ಇಡಲಿಲ್ಲವೇ? ಒಂದು ವರ್ಷ ಕಳೆಯಿತು. ಜೀವನ ಇನ್ನೇನು ಒಂದು ದಾರಿ ಹಿಡಿಯುತ್ತಿದೆ ಅನ್ನುತ್ತಿರುವಾಗ ಇದೀಗ ಮತ್ತೆ ಕೊರೋನ ಅಬ್ಬರ ಹೆಚ್ಚಾಗುತ್ತಿದೆ. ಕೆಲವೊಂದು ಕಟ್ಟಡಗಳನ್ನು ಸೀಲ್‌ಡೌನ್ ಮಾಡಿದ್ದಾರೆ. ಕೆಲವೆಡೆ ರಾತ್ರಿ ಏಳರ ನಂತರ ಬೆಳಗ್ಗಿನ ವರೆಗೆ ಅಂಗಡಿಗಳನ್ನು ಮುಚ್ಚಲು ಆದೇಶ ಬರುತ್ತಿದೆ. ಇನ್ನೇನು ಎನ್ನುವಾಗ ಊರು ನೆನಪಾಗುತ್ತದೆ ಆಗ ಊರಿನ ಕೆಲವರ ಮಾತು ನಮ್ಮಲ್ಲಿ ಮಾರ್ದನಿಸುತ್ತದೆ. ಕೊನೆಗೊಂದು ಮಾತು. ನಮ್ಮಲ್ಲಿ ಧೀಮಂತರು, ವಿಶಾಲ ಹೃದಯಿಗಳು ಇನ್ನೂ ಇದ್ದಾರೆ ಎನ್ನುವುದಕ್ಕೆ ಒಂದು ಉದಾಹರಣೆ ಇಲ್ಲಿದೆ.
ಮನೋಹರ್ ಶೆಟ್ಟಿ ನಂದಳಿಕೆ ಅನ್ನುವ ಪ್ರತಿಭಾವಂತ, ಗುಣವಂತ ರಂಗನಟ, ನಿರ್ದೇಶಕ ಓರ್ವ ಹೊಟೇಲ್ ಉದ್ಯಮಿಯೂ ಹೌದು. ನಾಟಕದ ಸೆಟ್ಟಿಂಗ್ ತಂಡದ ಜತೆಗಿದ್ದ ಕಿರಣ್ ಶೆಟ್ಟಿ ಅನ್ನುವ ವ್ಯಕ್ತಿಯ ಪರಿಚಯ ಇವರಿಗೆ ಬಹಳಷ್ಟು ಹಿಂದೆಯೇ ಆಗಿತ್ತು. ಆ ವ್ಯಕ್ತಿ ಎಷ್ಟೋ ವರ್ಷಗಳ ಬಳಿಕ ಇವರಲ್ಲಿ ಬಂದು ಹೊಟೇಲ್ ಕಾರ್ಮಿಕರ ಕೊಠಡಿಯೊಂದರಲ್ಲಿ ತಮಗೆ ಉಳಿದುಕೊಳ್ಳಲು ಜಾಗ ನೀಡಬೇಕೆಂದು ವಿನಂತಿಸಿದಾಗ ಕೇವಲ ಮಾನವೀಯ ದೃಷ್ಟಿಯಿಂದಷ್ಟೇ ಅವರನ್ನು ತಮ್ಮ ಕಾರ್ಮಿಕರ ಜತೆ ಉಳಿದುಕೊಳ್ಳುವ ವ್ಯವಸ್ಥೆ ಮಾಡಿದ್ದರು. ಕಳೆದ ಮೂರು ವರ್ಷಗಳಿಂದ ಆ ವ್ಯಕ್ತಿ ಅಲ್ಲಿ ವಾಸಕ್ಕಿದ್ದರು. ಇತ್ತೀಚೆಗೆ ಅವರು ಅನಾರೋಗ್ಯಕ್ಕೀಡಾದಾಗ ನಂದಳಿಕೆಯವರು ಅವರನ್ನು ಆಸ್ಪತ್ರೆಗೆ ಸೇರಿಸಿ ಎಲ್ಲ ರೀತಿಯ ಸಹಾಯ ಹಸ್ತ ನೀಡಿದರು. ಆದರೆ ಕಿರಣ್ ಶೆಟ್ಟಿಯ ಆರೋಗ್ಯ ಹದಗೆಟ್ಟು ಇತ್ತೀಚೆಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಎಷ್ಟು ಪ್ರಯತ್ನಿಸಿದರೂ ಕಿರಣ್ ಶೆಟ್ಟಿಯ ಬಂಧುಮಿತ್ರರ ವಿಳಾಸ ಸೂಚನೆಗಳಿಲ್ಲ. ಕೊನೆಗೆ ಕಿರಣ್ ಶೆಟ್ಟಿ ಹಾಸನದ ಓರ್ವರಿಗೆ ಹಣ ಕಳುಹಿಸಿದ್ದ ರಶೀದಿ ಸಿಕ್ಕಿ ಆ ಮೂಲಕ ಆ ವ್ಯಕ್ತಿಯನ್ನು ಸಂಪರ್ಕಿಸಿದಾಗ ದೊರೆತ ಮಾಹಿತಿಯಂತೆ ಕಿರಣ್ ಶೆಟ್ಟಿಯ ಬಂಧು ಮಿತ್ರರ ಸಂಪರ್ಕ ಅವರಿಗೂ ಇಲ್ಲವಂತೆ. ಈತ ಎಲ್ಲಿಯವರೆಂದು ಅವರಿಗೂ ಸ್ಪಷ್ಟವಿಲ್ಲ. ಕೊನೆಗೆ ಈತ ಕಿರಣ್ ಶೆಟ್ಟಿ ಅಲ್ಲ, ಕಿರಣ್ ಆಚಾರ್ಯ ಕಲ್ಲಡ್ಕದವರು ಎಂಬ ಊಹಾಪೋಹದ ಮಾಹಿತಿಯಷ್ಟೇ ಲಭ್ಯ. ಈಗ ಮೃತದೇಹ ರಾಜವಾಡೆ ಆಸ್ಪತ್ರೆಯ ಶೈತ್ಯಾಗಾರದಲ್ಲಿ ಇಡಲಾಗಿದೆ. ಇನ್ನು ನಾಲ್ಕೈದು ದಿನಗಳಲ್ಲಿ (ಈಗಾಗಲೇ ಹತ್ತು ದಿನಗಳು ಕಳೆದಿವೆ) ಪೋಲಿಸರಿಂದ ಶವ ಸಂಸ್ಕಾರವಾಗುತ್ತದೆ. ಈವರೆಗಿನ ಎಲ್ಲಾ ಖರ್ಚನ್ನು ನೋಡಿಕೊಂಡಿದ್ದ ನಂದಳಿಕೆ ಮನೋಹರ್ ಶೆಟ್ಟಿ ಈಗ ಶವವನ್ನು ಆಸ್ಪತ್ರೆಯ ಶೀತಲ ಕೊಠಡಿಯಲ್ಲಿರಿಸಿದ್ದ ಖರ್ಚನ್ನೂ ಭರಿಸಬೇಕಾಗಿದೆ; ಭರಿಸುತ್ತಾರೆ. ಆನಂತರ ನಡೆಯಲಿರುವ ಶವಸಂಸ್ಕಾರದ ಖರ್ಚನ್ನೂ ಅವರೇ ಭರಿಸುತ್ತಾರೆ. ಹೌದು ಮುಂಬೈಯಲ್ಲಿ ಮನೋಹರ್ ಶೆಟ್ಟಿ ನಂದಳಿಕೆಯಂತಹ ಮಾನವೀಯ ಮನಸ್ಸುಗಳು ಇರುವತನಕ ಮುಂಬೈ ಕನ್ನಡಿಗರು ಅನಾಥರಾಗುವುದಿಲ್ಲ ನಾನು ಮೇಲೆ ಉಲ್ಲೇಖಿಸಿದಂತೆ ಕೊರೋನ ಇಲ್ಲಿನವರ ಚಿಂತನೆಯನ್ನು ಬದಲಾಯಿಸಿದೆ. ದೇವರನ್ನು ಕಾಣುವುದಕ್ಕೆ ಗುಡಿ-ಗೋಪುರಕ್ಕೆ ಹೋಗಬೇಕೆಂದಿಲ್ಲ. ನಮ್ಮೆದುರು ನಿಲ್ಲುವ ವ್ಯಕ್ತಿಯ ಅಂತರಾತ್ಮದಲ್ಲಿ ದೇವರಿದ್ದಾನೆ ಎಂಬ ಸತ್ಯದ ಅರಿವು ಇಲ್ಲಿನವರಿಗೆ ಆಗಿದೆ.