ಕೊಳೆಗೇರಿ ‘ಧಾರಾವಿ’ಯನ್ನು ಬೆಳಗಿಸಿದ ಕನ್ನಡ ಸಂಸ್ಥೆಗಳು

Update: 2021-04-08 19:30 GMT

ಮಹಾನಗರವನ್ನು ಪ್ರತಿನಿಧಿಸುವ ಕನ್ನಡಿಗರ ಅಧಿಕೃತ ರಾಯಭಾರಿ ಎಂದು ಕರೆಸಿಕೊಳ್ಳುವ ಕನ್ನಡ ಸಂಸ್ಥೆಗಳಿಗೆ ಧಾರಾವಿಯ ಕನ್ನಡಿಗರು ಕಣ್ಣಿಗೆ ಬಿದ್ದಿಲ್ಲ. ತಮ್ಮಲ್ಲಿ ಸದಸ್ಯತನಕ್ಕೆ ಬಂದ ಇಲ್ಲಿನ ಕೆಲ ಯುವಕರನ್ನು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಹಿಂದೆ ಕಳುಹಿಸಿದೆ. ಯಾರ ಹಂಗು ತಮಗೇಕೆ ಎಂದುಕೊಂಡ ಇವರು, ದಿನದಿಂದ ದಿನಕ್ಕೆ ತಮ್ಮೆಳಗೆ ಸಂಘಟಿತರಾಗುತ್ತಿದ್ದರೂ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಕರ್ನಾಟಕ ಸರಕಾರವೂ ಇವರತ್ತ ಮುಖ ಮಾಡಿ ಇವರು ನಮ್ಮವರೆಂದು ಎಂದೂ ಆದರಿಸಿಲ್ಲ. ಆದರೂ ಇವರು ಈ ಧಾರಾವಿಯಲ್ಲಿ ಒಂದುಗೂಡಿ ನಮ್ಮ ಜನರಾಗಿ, ಕನ್ನಡಿಗರಾಗಿ ಬಾಳುತ್ತಿದ್ದಾರೆ.


ಮುಂಬೈ ಮಹಾನಗರ ಎನ್ನುವ ಮಹಾತಾಯಿಯ ಮಲ ಮಗುವಾಗಿ ಧಾರಾವಿ ಗುರುತಿಸಲ್ಪಡುತ್ತದೆ. ಮುಂಬೈ ಮಹಾನಗರಿ ವಿಶ್ವಮಾನ್ಯವಾಗುತ್ತಿದ್ದಂತೆಯೇ ಏಶ್ಯದ ಅತ್ಯಂತ ದೊಡ್ಡ ಕೊಳೆಗೇರಿ ಎಂಬ ಹಣೆಪಟ್ಟಿಯನ್ನು ಧರಿಸಿಕೊಂಡ ಧಾರಾವಿ ಕೂಡ ವಿಶ್ವದಲ್ಲಿ ಗುರುತಿಸಲ್ಪಟ್ಟಿತು. ಮುಂಬೈಯ ಒಡಲಲ್ಲಿ ಅಭಿವೃದ್ಧಿ ಕಕ್ಕಿದ ಮಾಲಿನ್ಯಗಳನ್ನು ಒಡಲಲ್ಲಿ ಬಚ್ಚಿಟ್ಟುಕೊಂಡ ಈ ಧಾರಾವಿಯ ತುಂಬ ನೋವಿನ, ಅಪಮಾನದ ಕಥೆಗಳಿವೆ; ವ್ಯಥೆಗಳಿವೆ. ಸಯಾನ್, ಕೋಲಿವಾಡ, ಮಾಹಿಮ್, ಕಿಂಗ್ ಸರ್ಕಲ್, ಮಾಟುಂಗ ರೋಡ್, ಲೇಬರ್ ಕ್ಯಾಂಪ್ ಮತ್ತು ಜಿ. ಟಿ. ಬಹದೂರ್ ನಗರವನ್ನು ಆವರಿಸಿಕೊಂಡಿರುವ ಧಾರಾವಿ, ವಿವಿಧ ಜಾತಿ-ಮತ-ಧರ್ಮ-ಭಾಷೆಗಳನ್ನೊಳ ಗೊಂಡ ಮುಂಬೈಯಿಂದ ಬಂಡಾಯವೆದ್ದಂತೆ ಕಾಣುವ ಪುಟ್ಟನಾಡು. ಈ ನಾಡಿನ ಒಳಗೆ ಹರಡಿಕೊಂಡಿರುವ ಕನ್ನಡ ಮನಸ್ಸುಗಳತ್ತ ಇದೊಂದು ಕಿರುನೋಟ:

 ಪ್ರಾರಂಭದ ಹಂತದಲ್ಲಿ ಕೇವಲ ಅರುವತ್ತು ಮಂದಿ ಕೋಲಿಗಳಿದ್ದ ಈ ಪುಟ್ಟ ಊರು ಧಾರಾವಿಗೆ ಹೈದರಾಬಾದ್-ಕರ್ನಾಟಕದ ಮಂದಿ ಬದುಕನ್ನು ಅರಸುತ್ತಾ ಬಂದು ಮುಂಬೈ ಮಹಾನಗರ ಕಟ್ಟುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಪ್ರಾರಂಭದ ಹಂತದ ಇಲ್ಲಿನ ಬೃಹತ್ ಕಟ್ಟಡಗಳ ನಿರ್ಮಾಣ, ರೈಲು ಹಳಿಗಳ ಜೋಡಣೆ, ಸೇತುವೆಗಳ ನಿರ್ಮಾಣ ಹೀಗೆ ಇಡಿಯ ಮುಂಬೈಯನ್ನು ಕಟ್ಟುವಲ್ಲಿ, ಸದೃಢಗೊಳಿಸುವಲ್ಲಿ ಸಿಂಹಪಾಲು ಈ ಕನ್ನಡಿಗರದ್ದೆಂಬುದು ಇತಿಹಾಸ. ಮುಂಬೈಯನ್ನು ಕಟ್ಟಿದ ಈ ಕನ್ನಡದ ಕೂಲಿ ಕಾರ್ಮಿಕರಲ್ಲಿ ಹೆಚ್ಚಿನವರು ತಮ್ಮ ನೆಲೆಯನ್ನಾಗಿಸಿಕೊಂಡದ್ದು ಆ ಪುಟ್ಟ ಊರು ಧಾರಾವಿಯಲ್ಲಿ. ಅಲ್ಲಿನ ಕೋಲಿಗಳೂ ಈ ಪರಿಶ್ರಮಿ ಹೈದರಾಬಾದ್ -ಕರ್ನಾಟಕದ ಜನರನ್ನು ಸ್ವಾಗತಿಸಿ ತಮ್ಮ ಹೃದಯ ವೈಶಾಲ್ಯತೆಯನ್ನು ಮೆರೆದರು. ಅವರ ‘ಜಮೀನ್’ನಲ್ಲಿ ಕರೆದು ಇವರನ್ನು ಕುಳ್ಳಿರಿಸಿದರು. ಸೂರಿಲ್ಲದ ನಮ್ಮವರು ಅವರ ಪ್ರೀತಿ, ಸ್ನೇಹಕ್ಕೆ ಮಣಿದರು. ಅವರೊಂದಿಗೆ ತಾವೂ ಒಂದಾಗಿ ಬದುಕು ಕಟ್ಟುತ್ತ ಸಾಗಿದ ಇಲ್ಲಿನ ಕನ್ನಡಿಗರ ಸಾಧನೆಯ ಇತಿಹಾಸ ಇಂದು ತೆರೆಯ ಮರೆಗೆ ಸರಿಯುತ್ತಿರುವುದು ವಿಷಾದನೀಯ.

ಧಾರಾವಿಯ ಸ್ವಾಭಾವಿಕ ಜಿಗುಟು ಮಣ್ಣಿನ ನೆಲಕ್ಕೆ ಪ್ಲಾಸ್ಟಿಕ್ ಹಾಳೆಗಳನ್ನು ಹಾಸಿ ಸುತ್ತಲೂ ಹಲಗೆಗಳನ್ನು ಜಡಿದು ಅದಕ್ಕೆ ಪ್ಲಾಸ್ಟಿಕ್ ಹೊದ್ದು ಮೇಲ್ಗಡೆ ಡಾವರ್ ಪೇಪರ್ ಹೊದಿಸುವ ಮೂಲಕ ತಮ್ಮ ‘ಮನೆ’ಗಳನ್ನು ನಿರ್ಮಸಿಕೊಂಡ ಈ ಅಸಹಾಯಕ ಜನರು ತಮ್ಮ ನಿತ್ಯಬಾಧೆ ತೀರಿಸಲು ಎದುರಿಗಿದ್ದ ವಿಶಾಲ ಮೈದಾನವನ್ನು ಅವಲಂಬಿಸುತ್ತಿದ್ದರು. ಎರಡು-ಮೂರು ದಿನಗಳಿಗೊಮ್ಮೆ ಸ್ನಾನ ಮಾಡುತ್ತಿದ್ದ ಇವರಿಗೆ ನೀರಿನ ವ್ಯವಸ್ಥೆಯಿಲ್ಲ. ‘ಬಡೇ ಮಸ್ಜಿದ್’ ಎದುರುಗಡೆ ಇದ್ದ ‘ಕುದುರೆ ಕುಡಿಯುವ ನೀರನ್ನು’ ಇವರು ಉಪಯೋಗಿಸುತ್ತಿದ್ದರು. ಹೊಲಸು ನೀರೆಲ್ಲ ಸೇರುತ್ತಿದ್ದ ಧಾರಾವಿ ದೋಬಿಘಾಟ್‌ನಲ್ಲಿ ಅಮ್ಮಂದಿರು ಬಟ್ಟೆ ಒಗೆಯಲೆಂದು ಹೋಗುತ್ತಿದ್ದರೆ, ಸೆರಗಂಚು ಹಿಡಿದು ಹಿಂದೆ ಹೋಗುತ್ತಿದ್ದ ಮಕ್ಕಳು ಅಮ್ಮಂದಿರಿಂದ ಎಷ್ಟೇ ಬೈಸಿಕೊಂಡರೂ ಆ ಹೊಲಸು ನೀರಿನಲ್ಲಿ ಮುಳುಗೆದ್ದು ಖುಷಿ ಪಡುತ್ತಿದ್ದರು. ಹೀಗೆ ಅಸಹನೀಯ ಬದುಕು ಸಾಗುತ್ತಿದ್ದಂತೆಯೇ 1976ರಲ್ಲಿ ‘ಫಟೋ ಕಾಫಿ’ ದೊರೆತು ‘ಅಧಿಕೃತ ಮನೆ’ಯಾಗಿ ಧಾರಾವಿ ಇವರದ್ದಾಯಿತು. ಆನಂತರ ಎಂಬತ್ತು ಮಂದಿಗೆ ಒಂದು ನಲ್ಲಿ ನೀರಿನ ವ್ಯವಸ್ಥೆ ಆರಂಭವಾಯಿತು. ಮುಂದುವರಿದು ಅರುವತ್ತು ಮಂದಿಗೆ ಒಂದು ನಲ್ಲಿ ನೀರಿನ ವ್ಯವಸ್ಥೆಯಾಯಿತು. ಮೆಲ್ಲಮೆಲ್ಲನೆ ಧಾರಾವಿಯಲ್ಲಿ ಚರಂಡಿ ವ್ಯವಸ್ಥೆಯೂ ಬಂತು. ಹತ್ತು-ಹದಿನೈದು ಮಂದಿಗೆ ಒಂದರಂತೆ ಶೌಚಾಲಯವೂ ಹುಟ್ಟಿಕೊಂಡಿತು. ಆದರೆ ಇಂದು ಈ ಶೌಚಾಲಯಗಳು ಗುತ್ತಿಗೆದಾರರಿಗೆ ಹಣ ದೋಚುವ ದಾರಿಯಾಗಿದೆ.

1962ರಲ್ಲಿ ಪ್ರಥಮವಾಗಿ ‘ಕ್ಯಾಬಿನ್ ಸಿಸ್ಟಮ್’ ಮೂಲಕ ಧಾರಾವಿಗೆ ವಿದ್ಯುತ್ ಬೆಳಕಿನ ವ್ಯವಸ್ಥೆ ಬಂತು. ಈ ಕ್ಯಾಬಿನ್ ಸಿಸ್ಟಮ್‌ನಲ್ಲಿ ವಿದ್ಯುತ್ ಪಡೆದುಕೊಳ್ಳಲು ಕ್ಯಾಬಿನ್ ಯಾರ ಹೆಸರಲ್ಲಿ ನೋಂದಾಯಿಸಲ್ಪಟ್ಟಿತ್ತೋ ಅವರಿಗೆ ಹಣ ಕಟ್ಟಬೇಕು. ಅಂತಹ ಧಾರಾವಿ ಬೆಳೆಯುತ್ತ ಬೆಳೆಯುತ್ತ ಕೋಲಿ ಜನಾಂಗದ ಒಟ್ಟೊಟ್ಟಿಗೆ ಕನ್ನಡಿಗರು, ತೆಲುಗರು, ತಮಿಳರು, ಯುಪಿ ಭಯ್ಯಿಗಳು ಮುಂತಾದ ಎಲ್ಲರನ್ನೂ ಸೇರಿಸಿಕೊಂಡು ಲಕ್ಷ್ಯಗಳನ್ನು ಹಿಮ್ಮೆಟ್ಟಿಸುತ್ತಾ ಮುಂದೆ ಸಾಗಿದೆ.

ಧಾರಾವಿಯಲ್ಲಿ ಕನ್ನಡಿಗರು ತಮ್ಮದೇ ಆದ ಅಸ್ತಿತ್ವವನ್ನು ಇನ್ನೂ ಉಳಿಸಿಕೊಂಡಿದ್ದಾರೆ. 1997ರಲ್ಲಿ ಕನ್ನಡಿಗರೇ ಆದ ಹನುಮಂತ ಸಾಯಪ್ಪ ನಂದೇಪಲ್ಲಿ ಅವರು ಪ್ರಥಮ ಕನ್ನಡಿಗ ಧಾರಾವಿ ಕಾರ್ಪೊರೇಟರ್ ಆಗಿ ಆಯ್ಕೆಗೊಂಡಿದ್ದರು. ಅಂದು ಕೇವಲ ಇಬ್ಬರು ಕಾರ್ಪೊರೇಟರ್‌ಗಳನ್ನು ಹೊಂದಿದ್ದ ಧಾರಾವಿ ಇಂದು ಏಳು ಮಂದಿ ಕಾರ್ಪೊರೇಟರ್‌ಗಳನ್ನು ಹೊಂದಿರುವುದು ಧಾರಾವಿ ವಿಸ್ತಾರಗೊಂಡಿರುವುದಕ್ಕೆ ಸಾಕ್ಷಿ. ಹನುಮಂತ ಅವರು ಹೇಳುವಂತೆ ‘‘ಈ ಕೊಳೆಗೇರಿ ಧಾರಾವಿ ಕ್ಯಾನ್ಸರ್‌ನಂತೆ. 2004ರಲ್ಲಿ ನವನಿರ್ಮಾಣ (ರೀಡೆವಲಪ್‌ಮೆಂಟ್) ಮಸೂದೆ ಬಂದಿದ್ದರೂ ಇನ್ನೂ ‘ನವ ನಿರ್ಮಾಣ’ ಆಗಿಲ್ಲ; ಆಗುವಂತೆಯೂ ಇಲ್ಲ.’’ ಸುಮಾರು ಹದಿನೈದು ವರ್ಷ ಕಾರ್ಪೊರೇಟರ್ ಆಗಿ ದಕ್ಷತೆಯಿಂದ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದ್ದ ಹನುಮಂತಪ್ಪ ನಂದೇಪಲ್ಲಿಯವರು, ಹಿರಿಯರಾದ ಚಂದ್ರಪ್ಪಕುಂದುಕ್ಕೋರ್, ದುರ್ಗಪ್ಪಗಣಪುರ, ಕೃಷ್ಣಪ್ಪಮೊದಲಾದವರ ಜೊತೆ ‘ಆಂಧ್ರ-ಕರ್ನಾಟಕ ದಲಿತ ವರ್ಗ ಸಂಘ’ದ ಸ್ಥಾಪನೆಯಲ್ಲೂ ಪ್ರಧಾನ ಪಾತ್ರ ವಹಿಸಿದ್ದವರು.

ಹಿರಿಯರಾಗಿದ್ದ ದುರ್ಗಪ್ಪ ಗಣಪುರ ಆ ಸಂಘದ ಪ್ರಥಮ ಅಧ್ಯಕ್ಷರಾಗಿದ್ದರು. ತಾವು ವಿದ್ಯೆಯಿಂದ ವಂಚಿತರಾದಂತೆ ತಮ್ಮ ಮುಂದಿನ ಪೀಳಿಗೆ ಈ ಸಂಕಷ್ಟಕ್ಕೆ ಗುರಿಯಾಗಬಾರದೆಂದು ಮನಗಂಡು ಆ ಹಿರಿಯರು ಈ ಸಂಸ್ಥೆಯ ಆಸರೆಯಲ್ಲಿ ‘ಭಾರತರತ್ನ ಡಾ. ಬಾಬಾಸಾಹೇಬ್ ಅಂಬೇಡ್ಕರ್ ವಿದ್ಯಾನಿಲಯ’ವನ್ನು 1990ರಲ್ಲೇ ಸ್ಥಾಪಿಸಿದ್ದರು. ಪ್ರಾರಂಭದಲ್ಲಿ ಕೇವಲ ಏಳು ಮಕ್ಕಳನ್ನು ಹೊಂದಿದ್ದು, ಹನುಮಾನ್ ದೇವರ ಜೋಪಡಪಟ್ಟಿ ಗುಡಿಯಲ್ಲಿ ಆರಂಭಗೊಂಡ ಈ ಶಾಲೆಯಲ್ಲಿ, ಇಂದು ಸುಮಾರು ಎರಡು ಸಾವಿರಕ್ಕಿಂತಲೂ ಮೇಲ್ಪಟ್ಟು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಂದು ಬೃಹತ್ ಕಟ್ಟಡವನ್ನು ಹೊಂದಿರುವ ಈ ವಿದ್ಯಾಸಂಸ್ಥೆ 10ನೇ ತರಗತಿವರೆಗೆ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಶಾಲೆ ಹಾಗೂ ಪದವಿಪೂರ್ವ ಕಾಲೇಜನ್ನೂ ಹೊಂದಿದೆ. ಪ್ರಸ್ತುತ ಹರೀಶ್ವರಾನಂದ ಸರಸ್ವತಿ ಗುಂಜನೂರು ಈ ಸಂಸ್ಥೆಯ ಅಧ್ಯಕ್ಷರಾಗಿಯೂ, ನಿರಂಜನ ಹನುಮಂತ ನಂದೇಪಲ್ಲಿ ಅನ್ನುವ ಉತ್ಸಾಹಿ ಕ್ರಿಯಾಶೀಲ ಯುವಕ ಗೌರವ ಕಾರ್ಯದರ್ಶಿಯಾಗಿಯೂ ಸಂಸ್ಥೆಯನ್ನು ಉನ್ನತ ಮಟ್ಟಕ್ಕೇರಿಸಲು ಶ್ರಮಿಸುತ್ತಿದ್ದಾರೆ. ಈ ವಿದ್ಯಾಸಂಸ್ಥೆಯ ಬಗಲಿಗೆ ‘ಸಂತ ಕಕ್ಕಯ್ಯ ಮುನ್ಸಿಪಲ್ ಕನ್ನಡ ಶಾಲೆ’ಯೂ ಇದೆ. ಇದರಲ್ಲೂ ಬಹಳಷ್ಟು ಕನ್ನಡದ ವಿದ್ಯಾರ್ಥಿಗಳಿದ್ದಾರೆ.

ವಿದ್ಯಾದಾನಕ್ಕೆ ‘ಜ್ಞಾನಜ್ಯೋತಿ ಸಾವಿತ್ರಿಬಾಯಿ ಫುಲೆ ಹೈಸ್ಕೂಲ್’ (2006) ಹಾಗೂ ಸಭಾಗೃಹವನ್ನೂ, ಧಾರ್ಮಿಕ ಕಾರ್ಯಕ್ರಮಕ್ಕೆ ಹನುಮಾನ್ ಗುಡಿಯನ್ನೂ ಕಟ್ಟಿಕೊಂಡು ಪರಿಸರದಲ್ಲಿ ಜನಾನುರಾಗಿ ಆಗಿರುವ ಸಂಸ್ಥೆ ‘ಶ್ರೀ ಸಂತ ಚೆನ್ನಯ್ಯ ಮಾದಿಗ ಸಮಾಜ ಸೇವಾ ಸಂಘ’ (1973). ಯೋಗ್ಯ ಶಿಕ್ಷಣದ ಮೂಲಕ ತಾವೂ ಸಮಾಜದಲ್ಲಿ ಮುಂದೆ ಬರಬೇಕು ಎಂಬ ಆಶಯವನ್ನಿಟ್ಟುಕೊಂಡು ಈ ಸಂಸ್ಥೆಯು ನಡೆಸುತ್ತಿರುವ ಶಾಲೆಯಲ್ಲಿ ಸುಮಾರು 400 ವಿದ್ಯಾರ್ಥಿಗಳು ಆಂಗ್ಲ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸಾಮಾಜಿಕ ಕೈಂಕರ್ಯದ ಜೊತೆಗೆ ಸಾಂಸ್ಕೃತಿಕವಾಗಿಯೂ, ಧಾರ್ಮಿಕವಾಗಿಯೂ ಈ ಸಂಸ್ಥೆ ಕೆಲಸ ಮಾಡುತ್ತಿದೆ. ಆ ಮೂಲಕ ಸಮಾಜವನ್ನು ಉನ್ನತಿಗೆ ತರುವುದು ಈ ಸಂಸ್ಥೆಯ ಉದ್ದೇಶ. ಪ್ರತಿವರ್ಷ ಹನುಮಾನ್ ಜಯಂತಿ ಸಂದರ್ಭ ‘ಕೈ ಕುಸ್ತಿ’ಯ ಅಖಾಡವನ್ನು ನಡೆಸುವ ಇವರು, ಊರಿನಿಂದ ವಿವಿಧ ಆಟಗಳ ತಂಡಗಳನ್ನು ಕರೆಸಿ ಧಾರ್ಮಿಕ ಉತ್ಸವವನ್ನು ಅರ್ಥಪೂರ್ಣವಾಗಿ ನಡೆಸುತ್ತಾ ಬರುತ್ತಿದ್ದಾರೆ. ಪ್ರಸಕ್ತ ನಾರಾಯಣ ಕಾಕಾ(ಅಧ್ಯಕ್ಷರು), ಕೃಷ್ಣ ಸಜ್ಜನ್(ಗೌ.ಕಾರ್ಯದರ್ಶಿ), ನರೇಶ್ ಕಾಕಾ (ಖಜಾಂಚಿ) ಇವರನ್ನೊಳಗೊಂಡ ಆಡಳಿತ ಮಂಡಳಿಯು ಸೇವಾನಿರತವಾಗಿದೆ.

ತಮ್ಮವರು ಚದುರಿ ಹೋಗಬಾರದು, ಅವರಿಗೂ ಈ ಮಹಾನಗರದಲ್ಲಿ ಒಂದು ಅಸ್ತಿತ್ವ ಬೇಕು ಎಂಬ ನಿಟ್ಟಿನಲ್ಲಿ ಅಂಬಿಗರ ಚೌಡಯ್ಯ ತತ್ವದಡಿ ಹುಟ್ಟಿಕೊಂಡ ಸಂಸ್ಥೆ ‘ಗಂಗಾಮಾತಾ ಕೋಳಿ ಸಮಾಜ’. ಪ್ರಾರಂಭದ ಎರಡು ವರ್ಷಗಳಲ್ಲಿ ತಮ್ಮವರ ಮನೆಗಳ ಹುಡುಕಾಟದಲ್ಲಿ ತೊಡಗಿದ್ದ ಇವರಿಗೆ ಸುಮಾರು ಇನ್ನೂರು ಮನೆಗಳು ಸಿಕ್ಕವು. ಆಗ ಹುಟ್ಟಿಕೊಂಡ ಈ ಸಂಸ್ಥೆ ತನ್ನ ಚಿಕ್ಕ ಹಾಗೂ ಮಹತ್ವದ ಆರು ವರ್ಷಗಳ ಪಯಣದಲ್ಲಿ ಬಹಳಷ್ಟನ್ನು ಸಾಧಿಸಿದೆ. ತಮ್ಮ ಸಮಾಜದ ಜತೆಗೆ ಇತರರಿಗೂ ನೆರವಾಗುವಂತಹ ಒಂದು ವಿದ್ಯಾಸಂಸ್ಥೆಯ ಕನಸನ್ನು ಕಾಣುತ್ತಿದೆ. ಈ ಸಮಾಜದ ಹಿರಿಯರೆಲ್ಲ ಸೇರಿ ಕಟ್ಟಿದ ‘ಮಹಾತ್ಮಾ ಗಾಂಧಿ ಕೋ. ಆಪ್. ಹೌಸಿಂಗ್ ಸೊಸೈಟಿ’ ಮೂರು ಕಟ್ಟಡಗಳನ್ನೊಳಗೊಂಡ ಹೌಸಿಂಗ್ ಕಾಲನಿ. ಇದು ಇವರ ಮುಂದಾಲೋಚನೆಗೆ ಉತ್ತಮ ಉದಾಹರಣೆ. ತಮ್ಮ ಸಮಾಜದ ಮದುವೆಗೆ ಸಿದ್ಧರಾದ ವಧು-ವರರನ್ನು ಹೊಂದಿಸಿ ಅವರಿಗೆ ಮದುವೆ ಮಾಡಲು ಸಹಕರಿಸುವ ಈ ಸಂಸ್ಥೆ ಧಾರಾವಿಯಲ್ಲಿ ಈಗಾಗಲೇ ತನ್ನ ಅಸ್ತಿತ್ವವನ್ನು ಎತ್ತಿ ತೋರಿಸಿದೆ. ಅನಸೂಯಾ ಕೋಳಿ-ಅಧ್ಯಕ್ಷರು, ರವಿ ಕುಮಾರ್ ಕಟ್ಟೇಲ್-ಗೌ.ಕಾರ್ಯದರ್ಶಿ ಹಾಗೂ ಭೀಮಪ್ಪಪೋತುಲ್ಕರ್ ಖಜಾಂಚಿಯಾಗಿರುವ ಈ ಸಂಸ್ಥೆಯ ಆಡಳಿತ ಮಂಡಳಿಯಲ್ಲಿ ಹಿರಿಕಿರಿಯರೆನ್ನದೆ ಜೊತೆಯಾಗಿ ಸೇರಿ ಕೆಲಸ ಮಾಡುತ್ತಿದ್ದಾರೆ.

ಮುಂಬೈಯ ಈ ಧಾರಾವಿಯಲ್ಲಿ ಪ್ರಮುಖ ಈ ಮೂರು ಸಂಸ್ಥೆಗಳಲ್ಲದೆ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕವಾಗಿ ಮುಂಚೂಣಿಯಲ್ಲಿರುವ ಎರಡು ಮಠಗಳೂ ಇವೆ. ಇದರಲ್ಲಿ 1979ರಲ್ಲಿ ಸ್ಥಾಪನೆಗೊಂಡ ಶ್ರೀ ಚನ್ನಬಸವೇಶ್ವರ ಸಂಘದ ‘ಸದಾಶಿವ ಮಠ’ ಒಂದು. ಇದರ ವತಿಯಿಂದ ಈಗಾಗಲೇ ಮಕ್ಕಳ ಬಾಲವಾಡಿ ತೆರೆಯುವ ಕಾರ್ಯವು ಕೊರೋನ ಕಾಟದಿಂದಾಗಿ ಕುಂಠಿತಗೊಂಡಿದೆ. ಮಠದಲ್ಲಿ ನಿಯಮಿತವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಪ್ರವಚನಗಳು ನಡೆಯುತ್ತವೆ. ಚಂದ್ರಪ್ಪಅಲ್ಲೂರ್ ಅಧ್ಯಕ್ಷರಾಗಿರುವ ಈ ಸಂಸ್ಥೆಯ ಗೌ. ಕಾರ್ಯ ದರ್ಶಿ ಶಾಹಪುರ್ ಹನುಮಂತ ಹಾಗೂ ಖಜಾಂಚಿ ಗುಂಜನೂರು ನಾಗೇಶ್ ‘ಶ್ರೀ ಸ್ವಾಮಿ ಹರೀಶ್ವರಾನಂದ ಸರಸ್ವತಿ ಮಠ’ವೂ ಈ ಪರಿಸರದಲ್ಲಿ ಕ್ರಿಯಾಶೀಲವಾಗಿದ್ದು ಧಾರ್ಮಿಕ ಸಾಮಾಜಿಕ ಕೈಂಕರ್ಯದಲ್ಲಿ ತೊಡಗಿದೆ. ಇದರ ಶಾಖೆ ಕರ್ನಾಟಕದಲ್ಲೂ ಇದ್ದು ಈಗ ಮಠಾಧೀಶರಾದ ಹರೀಶ್ವರಾನಂದ ಸರಸ್ವತಿ ಗುಂಜನೂರು ಮಠದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

 ಇಲ್ಲಿ ಉಲ್ಲೇಖಿಸಲೇಬೇಕಾದ ಎರಡು ಅತಿಮುಖ್ಯ ಸಂಸ್ಥೆಗಳು ‘ಹೋಪ್ ಫೌಂಡೇಶನ್’ ಹಾಗೂ ‘ಧಾರಾವಿ ಕರ್ನಾಟಕ ಯುವ ಸಂಘ’ ಎಂಬ ಒಂದು ವಾಟ್ಸ್‌ಆ್ಯಪ್ ಗ್ರೂಪ್. 2018ರ ಜನವರಿ 12ರಂದು ವಿವೇಕಾನಂದ ಜಯಂತಿ ಆಚರಿಸುವ ಉದ್ದೇಶದಿಂದ ಒಟ್ಟುಸೇರಿದ ಧಾರಾವಿಯ ಯುವಕರು ಅಂದು ಸಂಘವೊಂದನ್ನು ಕಟ್ಟುವ ಕನಸು ‘ಹೋಪ್ ಫೌಂಡೇಶನ್’ ಮೂಲಕ ಸಾಕಾರಗೊಂಡಿತ್ತು. ಈಗಾಗಲೇ ಕಾರ್ಯಚಟುವಟಿಕೆಯಲ್ಲಿ ತೊಡಗಿರುವ ಈ ಸಂಸ್ಥೆ ಧಾರಾವಿಯಲ್ಲಿನ 10ನೇ ತರಗತಿಯ ಮಕ್ಕಳಿಗೆ, ತಮ್ಮ ಕೈಯಿಂದಲೇ ಹಣ ಹಾಕಿ ನುರಿತ ಅಧ್ಯಾಪಕರನ್ನು ನೇಮಿಸಿ ವಿಶೇಷ ತರಗತಿಗಳನ್ನು ನಡೆಸುತ್ತಾ ಬಂದಿದೆ. ಕೊರೋನ ಸಂದರ್ಭ ಜಾತಿ-ಮತ-ಭೇದ ಎಣಿಸದೆ ಅಲ್ಲಿನ ಜನರಿಗೆ ತಮ್ಮಿಂದಾದಷ್ಟು ದವಸ ಧಾನ್ಯ, ತರಕಾರಿ ಖರೀದಿಸಿ ಹಂಚುವ ಕಾರ್ಯ ಮಾಡಿದೆ. ಇತ್ತೀಚೆಗೆ ಜನ್ಮತಾಳಿದ ‘ಧಾರಾವಿ ಕರ್ನಾಟಕ ಯುವ ಸಂಘ’ ವಾಟ್ಸ್‌ಆ್ಯಪ್ ಗ್ರೂಪ್ ಇಲ್ಲಿನ ಜನರಿಗೆ ಸದಾ ನೆರವಿಗೆ ನಿಂತಿದೆ. ಪ್ರತಿ ವರ್ಷ ರಕ್ತದಾನ ಶಿಬಿರ ನಡೆಸುತ್ತಾ ಬಂದಿದೆ. ಯಾದಗಿರಿ, ರಾಯಚೂರು, ಕಲಬುರಗಿ ಮೊದಲಾದೆಡೆಗಳಿಂದ ಮಣ್ಣಿನ ಕೆಲಸಕ್ಕಾಗಿ ಬಂದು ಇಲ್ಲಿ ನೆಲೆನಿಂತ ಹಿಂದುಳಿದ ವರ್ಗವಾದ ಮಾದಿಗ, ಕೋಲಿ, ಮಡಿವಾಳ ಜನಾಂಗವಲ್ಲದೆ ಲಿಂಗಾಯತರು ತಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳಲು ನಡೆಸಿದ ಹೋರಾಟ ವಿಸ್ಮಯ ಹುಟ್ಟಿಸುವಂತಹದು.

ಸುಮಾರು ಒಂದು ಲಕ್ಷದ ಗಡಿಯನ್ನು ದಾಟಿರುವ ಈ ಧಾರಾವಿ ಕನ್ನಡಿಗರು ಶ್ರಮಜೀವಿಗಳು. ‘‘ಗುಡಿಸಲಲ್ಲಿರಲಿ, ಮಹಲಿನಲ್ಲಿರಲಿ ನಮ್ಮಲ್ಲಿ ಮುಖ್ಯವಾಗಿ ನಿಯತ್ತಿರಬೇಕು, ಪ್ರಾಮಾಣಿಕತೆ ಇರಬೇಕು. ಹಾಗಾದಾಗ ಮಾತ್ರ ನಾವು ಎಲ್ಲೂ ಬದುಕನ್ನು ಹಸನುಗೊಳಿಸಬಹುದು’’ ಎಂಬ ಹಿರಿಜೀವ ಭೀಮ್ ಶಾಪ್ ಚಿಲ್ಕ ಅವರ ಮಾತು ಒಟ್ಟು ಧಾರಾವಿ ಕನ್ನಡಿಗರಿಗೆ ಬರೆದ ಭಾಷ್ಯದಂತಿದೆ. ಈಗ ಬಹಳಷ್ಟು ಮಂದಿ ರೈಲ್ವೆ ಮುನ್ಸಿಪಲ್ ಕಚೇರಿಗಳಲ್ಲಿ ದುಡಿಯುತ್ತಿದ್ದಾರೆ. ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ತಾವು ಪಟ್ಟ ಪಾಡು ತಮಗಿರಲಿ, ಮುಂದಿನ ತಲೆಮಾರಿಗೆ ಆ ತಾಪ ತಟ್ಟದಿರಲಿ ಎಂಬ ಎಚ್ಚರಿಕೆಯಿಂದ ಧಾರಾವಿ ಕನ್ನಡಿಗರು ಇಲ್ಲಿ ಸಂಘಟಿತರಾಗಿದ್ದಾರೆ. ಇಲ್ಲಿ ಕನ್ನಡಿಗ ವೈದ್ಯರಿದ್ದಾರೆ, ವಕೀಲರಿದ್ದಾರೆ, ಇಂಜಿನಿಯರ್‌ಗಳಿದ್ದಾರೆ, ಶಿಕ್ಷಕರಿದ್ದಾರೆ. ಎಲ್ಲಮ್ಮನ ಗುಡಿಯಲ್ಲಿ ಎಲ್ಲಮ್ಮ ಜಾತ್ರೆ, ಹನುಮ ಜಯಂತಿಯಂದು ಮಂದಿರದ ಜಾತ್ರೆ ಮೊದಲಾದ ವೈವಿಧ್ಯಮಯ ಜಾತ್ರೆಗಳನ್ನು ನಡೆಸುವ ಧಾರಾವಿಯಲ್ಲಿ ಕನ್ನಡಿಗರದ್ದೇ ಆದ ಮೂರು ಚರ್ಚುಗಳೂ ಇವೆ. ಇಲ್ಲಿ ಕನ್ನಡದಲ್ಲೇ ಪ್ರಾರ್ಥನೆ ನಡೆಯುತ್ತಿವೆ. ಇಲ್ಲಿಂದ ಉಪನಗರಗಳತ್ತ ಮುಖ ಮಾಡಿದವರೂ ಇಂದು ಹಬ್ಬ ಜಾತ್ರೆಗಳ ದಿನಗಳಲ್ಲಿ ಬಂದು ಒಟ್ಟು ಸೇರುತ್ತಾರೆ.

ಆದರೆ ಮಹಾನಗರವನ್ನು ಪ್ರತಿನಿಧಿಸುವ ಕನ್ನಡಿಗರ ಅಧಿಕೃತ ರಾಯಭಾರಿ ಎಂದು ಕರೆಸಿಕೊಳ್ಳುವ ಕನ್ನಡ ಸಂಸ್ಥೆಗಳಿಗೆ ಧಾರಾವಿಯ ಕನ್ನಡಿಗರು ಕಣ್ಣಿಗೆ ಬಿದ್ದಿಲ್ಲ. ತಮ್ಮಲ್ಲಿ ಸದಸ್ಯತನಕ್ಕೆ ಬಂದ ಇಲ್ಲಿನ ಕೆಲ ಯುವಕರನ್ನು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಹಿಂದೆ ಕಳುಹಿಸಿದೆ. ಯಾರ ಹಂಗು ತಮಗೇಕೆ ಎಂದು ಕೊಂಡ ಇವರು, ದಿನದಿಂದ ದಿನಕ್ಕೆ ತಮ್ಮೆಳಗೆ ಸಂಘಟಿತರಾಗುತ್ತಿದ್ದರೂ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಕರ್ನಾಟಕ ಸರಕಾರವೂ ಇವರತ್ತ ಮುಖ ಮಾಡಿ ಇವರು ನಮ್ಮವರೆಂದು ಎಂದೂ ಆದರಿಸಿಲ್ಲ. ಆದರೂ ಇವರು ಈ ಧಾರಾವಿಯಲ್ಲಿ ಒಂದುಗೂಡಿ ನಮ್ಮ ಜನರಾಗಿ, ಕನ್ನಡಿಗರಾಗಿ ಬಾಳುತ್ತಿದ್ದಾರೆ.

Writer - ದಯಾನಂದ ಸಾಲ್ಯಾನ್

contributor

Editor - ದಯಾನಂದ ಸಾಲ್ಯಾನ್

contributor

Similar News

ಸಂವಿಧಾನ -75