ಮುಂದಿನ 2 ತಿಂಗಳವರೆಗೆ 80 ಕೋಟಿ ಬಡವರಿಗೆ 5 ಕೆಜಿ ಉಚಿತ ಆಹಾರ ಧಾನ್ಯ: ಪ್ರಧಾನಿ ಮೋದಿ

Update: 2021-04-23 13:20 GMT

ಹೊಸದಿಲ್ಲಿ: ಮುಂದಿನ ಎರಡು ತಿಂಗಳು (ಮೇ ಮತ್ತು ಜೂನ್) ಕೇಂದ್ರ ಸರಕಾರವು ಸುಮಾರು 80 ಕೋಟಿ ಜನರಿಗೆ ಉಚಿತ ಆಹಾರ ಧಾನ್ಯವನ್ನು ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಪ್ರಕಟಿಸಿದರು. ಪಿಎಂ ಗರಿಬ್ ಕಲ್ಯಾಣ್ ಅನ್ನ  ಯೋಜನೆಯ ಮೂಲಕ ಇದನ್ನು ನೀಡಲಾಗುತ್ತದೆ.

ಯೋಜನೆಯ ಪ್ರಕಾರ ಕೇಂದ್ರ ಸರಕಾರವು 5 ಕೆಜಿ ಉಚಿತ ಆಹಾರ ಧಾನ್ಯವನ್ನು ಫಲಾನುಭವಿಗಳಿಗೆ ನೀಡಲಿದೆ. ಇದಕ್ಕಾಗಿ 26,000 ಕೋಟಿ ರೂ. ವ್ಯಯಿಸಲಾಗುತ್ತಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.

ದೇಶವು ಕೋವಿಡ್ -19 ರ ಎರಡನೇ ಅಲೆಯನ್ನು ಎದುರಿಸುತ್ತಿರುವ ಸಮಯದಲ್ಲಿ ಬಡವರಿಗೆ ಪೌಷ್ಠಿಕಾಂಶ ದೊರೆಯುವುದು ಮುಖ್ಯ ಎಂದು ನರೇಂದ್ರ ಮೋದಿ ಒತ್ತಿ ಹೇಳಿದರು.

ಮೇ ಮತ್ತು ಜೂನ್‌ನಲ್ಲಿ ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್ ಅನ್ನ ಯೋಜನೆ ಅಡಿಯಲ್ಲಿ ಎನ್‌ಎಫ್‌ಎಸ್‌ಎ (ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ) ಫಲಾನುಭವಿಗಳಿಗೆ ಹೆಚ್ಚುವರಿ ಉಚಿತ ಆಹಾರ ಧಾನ್ಯಗಳನ್ನು ವಿತರಿಸಲಾಗುವುದು ಎಂದು ಸರಕಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಕಳೆದ ವರ್ಷ ಮಾರ್ಚ್‌ನಲ್ಲಿ ಪಿಎಂ ಗರಿಬ್ ಕಲ್ಯಾಣ್ ಅನ್ನ  ಯೋಜನೆಯನ್ನು  ಸರಕಾರ ಮೊದಲ ಬಾರಿ ಘೋಷಿಸಿತ್ತು. ಈ ಯೋಜನೆ ಅಡಿಯಲ್ಲಿ ಆರಂಭದಲ್ಲಿ ಮೂರು ತಿಂಗಳವರೆಗೆ (ಎಪ್ರಿಲ್-ಜೂನ್) ಬಡವರಿಗೆ ಉಚಿತ ಆಹಾರ ಧಾನ್ಯವನ್ನು ಒದಗಿಸಿತು. ನಂತರ ಈ ಯೋಜನೆಯನ್ನು ನವೆಂಬರ್ ತನಕ ವಿಸ್ತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News