ಬೆಳಗಾವಿ ಸಹಿತ ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆ: ರವಿವಾರ ಮತ ಎಣಿಕೆ
ಬೆಂಗಳೂರು, ಎ. 30: ರಾಜ್ಯದ ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ನಡುವೆ ತೀವ್ರ ಪ್ರತಿಷ್ಠೆ ಮತ್ತು ಪೈಪೋಟಿ ಸೃಷ್ಟಿಸಿರುವ ಬೆಳಗಾವಿ ಲೋಕಸಭಾ ಕ್ಷೇತ್ರ, ಬೀದರ್ ಜಿಲ್ಲೆಯ ಬಸವಕಲ್ಯಾಣ ಹಾಗೂ ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣಾ ಮತ ಎಣಿಕೆ ಕಾರ್ಯ ರವಿವಾರ(ಮೇ 2) ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದ್ದು, ಮಧ್ಯಾಹ್ನದ ವೇಳೆ ಫಲಿತಾಂಶ ಬಹಿರಂಗಗೊಳ್ಳುವ ಸಾಧ್ಯತೆಗಳಿವೆ.
ಕೋವಿಡ್ ಮಾರ್ಗಸೂಚಿ ಪಾಲಿಸಿ ಮತ ಎಣಿಕೆ ಮಾಡಲಾಗುತ್ತಿದ್ದು, ಮತ ಎಣಿಕೆ ಸಿಬ್ಬಂದಿ, ಎಜೆಂಟರ್ ಗಳು, ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ ಎಣಿಕೆ ಕೇಂದ್ರ ಪ್ರವೇಶಿಸುವ ಪ್ರತಿಯೊಬ್ಬರು ಕೋವಿಡ್ ನೆಗೆಟಿವ್ ವರದಿ ಹೊಂದಿರುವುದು ಕಡ್ಡಾಯ. ಗೆದ್ದ ಅಭ್ಯರ್ಥಿಗಳ ವಿಜಯೋತ್ಸವ-ಸಂಭ್ರಮಾಚರಣೆಗೆ ಚುನಾವಣಾ ನಿರ್ಬಂಧ ಹೇರಿದೆ. ಮೂರು ಜಿಲ್ಲಾ ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಸುಗಮ ಮತದಾನಕ್ಕೆ ಆಯೋಗ ಈಗಾಗಲೇ ಸಕಲ ಸಿದ್ದತೆ ಮಾಡಿಕೊಂಡಿದೆ.
ಬೆಳಗಾವಿ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯವು ಜಿಲ್ಲೆಯ ತಿಲಕವಾಡಿ ಆರ್‍ಪಿಡಿ ಮಹಾ ವಿದ್ಯಾಲಯದಲ್ಲಿ ನಡೆಯಲಿದೆ. ಚುನಾವಣಾ ಆಯೋಗದ ನಿರ್ದೇಶನ ಮತ್ತು ಕೋವಿಡ್ ಮಾರ್ಗಸೂಚಿ ಅನುಸರಿಸಿ ಮತ ಎಣಿಕೆ ಕಾರ್ಯ ನಡೆಸಲಾಗುತ್ತಿದ್ದು, ಮೊದಲಿಗೆ ಪೋಸ್ಟಲ್ ಬ್ಯಾಲೆಟ್ ಎಣಿಕೆ ನಡೆಯಲಿದ್ದು, ಆ ಬಳಿಕ ವಿದ್ಯುನ್ಮಾನ ಮತ ಯಂತ್ರಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ಒಟ್ಟು 17 ಕೊಠಡಿಗಳಲ್ಲಿ ಪ್ರತಿ ಕೊಠಡಿಗೆ ಎರಡು ಟೇಬಲ್‍ಗಳಂತೆ ಒಟ್ಟು 34 ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಬಸವಕಲ್ಯಾಣ ಮತ್ತು ಮಸ್ಕಿ ಕ್ಷೇತ್ರಗಳಲ್ಲಿಯೂ ತಲಾ ಮೂರು ಕೊಠಡಿಯಲ್ಲಿ ನಾಲ್ಕು ಟೇಬಲ್‍ಗಳಂತೆ ಒಟ್ಟು ಪ್ರತಿ ಕ್ಷೇತ್ರದಲ್ಲಿ 12 ಟೇಬಲ್ ವ್ಯವಸ್ಥೆ ಮಾಡಿದ್ದು, ಮತ ಎಣಿಕೆ ಕಾರ್ಯ ನಡೆಯಲಿದೆ.
ಬೆಳಗಾವಿಯಲ್ಲಿ ಬಿಜೆಪಿಯ ಮಂಗಳಾ ಅಂಗಡಿ, ಕಾಂಗ್ರೆಸ್‍ನ ಸತೀಶ್ ಜಾರಕಿಹೊಳಿ, ಬಸವಕಲ್ಯಾಣ ಕ್ಷೇತ್ರದಲ್ಲಿ ನಾರಾಯಣರಾವ್ ಅವರ ಪತ್ನಿ ಕಾಂಗ್ರೆಸ್‍ನ ಮಾಲಾ, ಬಿಜೆಪಿಯ ಶರಣು ಸಲಗರ್, ಜೆಡಿಎಸ್‍ನ ಸೈಯದ್ ಯಸ್ರಬ್ ಆಲಿ, ಮಸ್ಕಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಪ್ರತಾಪಗೌಡ ಪಾಟೀಲ್, ಕಾಂಗ್ರೆಸ್‍ನ ಬಸನಗೌಡ ಪಾಟೀಲ್ ತುರ್ವಿಹಾಳ ಕಣದಲ್ಲಿದ್ದು, ಯಾರಿಗೆ ವಿಜಯಮಾಲೆ ಎಂಬುದು ರವಿವಾರ(ಮೇ2) ಮಧ್ಯಾಹ್ನದ ವೇಳೆ ಗೊತ್ತಾಗಲಿದೆ.