ಮೇ ಮಧ್ಯಭಾಗದಲ್ಲಿ ಕೋವಿಡ್-19 ಉತ್ತುಂಗಕ್ಕೇರುವ ಬಗ್ಗೆ ಕೇಂದ್ರಕ್ಕೆ ಎಚ್ಚರಿಕೆ ನೀಡಲಾಗಿತ್ತು:ತಜ್ಞರ ಸಮಿತಿಯ ಮುಖ್ಯಸ್ಥ

Update: 2021-05-04 15:06 GMT

ಹೊಸದಿಲ್ಲಿ,ಮೇ 4: ಭಾರತದಲ್ಲಿ ಮೇ 15ರಿಂದ 22ರ ನಡುವೆ ಕೊರೋನವೈರಸ್ ಪ್ರಕರಣಗಳು ಉತ್ತುಂಗಕ್ಕೇರಲಿವೆ ಎಂದು ಕೋವಿಡ್-19 ಕುರಿತು ತಜ್ಞರ ಸಮಿತಿಯು ಕೇಂದ್ರ ಸರಕಾರಕ್ಕೆ ಎಪ್ರಿಲ್ ಆರಂಭದಲ್ಲಿಯೇ ಎಚ್ಚರಿಕೆ ನೀಡಿತ್ತು ಎಂದು ಸಮಿತಿಯ ಮುಖ್ಯಸ್ಥರಾಗಿರುವ ಹಿರಿಯ ವಿಜ್ಞಾನಿ ಎಂ.ವಿದ್ಯಾಸಾಗರ ಅವರು ಸುದ್ದಿವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಬಹಿರಂಗಗೊಳಿಸಿದ್ದಾರೆ.

ಈ ಅವಧಿಯಲ್ಲಿ ಭಾರತದಲ್ಲಿ ಹೊಸ ದೈನಂದಿನ ಪ್ರಕರಣಗಳ ಸಂಖ್ಯೆ 1.20 ಲಕ್ಷಕ್ಕೇರಲಿದೆ ಎಂದು ಸಮಿತಿಯು ಎ.2ರಂದು ಕೇಂದ್ರಕ್ಕೆ ತಿಳಿಸಿತ್ತು ಎಂದು ಐಐಟಿ-ಹೈದರಾಬಾದ್‌ನಲ್ಲಿ ಪ್ರೊಫೆಸರ್ ಆಗಿರುವ ವಿದ್ಯಾಸಾಗರ ಹೇಳಿದರು. ಸಮಿತಿಯು ಅಂದಾಜಿಸಿದ್ದ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿತ್ತು ಎನ್ನುವುದನ್ನು ಅವರು ಒಪ್ಪಿಕೊಂಡರಾದರೂ,ಸಮಿತಿಯು ಉಲ್ಲೇಖಿಸಿದ್ದ ಸಮಯದಲ್ಲಿಯೇ ಪ್ರಕರಣಗಳ ಸಂಖ್ಯೆ ಉತ್ತುಂಗಕ್ಕೇರುತ್ತಿದ್ದು,ಇದು ಹೆಚ್ಚು ಮುಖ್ಯವಾಗಿದೆ ಎಂದರು.

ಕೇಂದ್ರವು ಕಳೆದ ವರ್ಷದ ಜುಲೈನಿಂದ ಕೇವಲ 3-4 ಸಲ ಮಾಹಿತಿಗಳಿಗಾಗಿ ಸಮಿತಿಯನ್ನು ಸಂಪರ್ಕಿಸಿತ್ತು ಮತ್ತು ಕೊನೆಯ ಬಾರಿ ಎ.2ರಂದು ಸಂಪರ್ಕಿಸಿತ್ತು ಎಂದು ವಿದ್ಯಾಸಾಗರ ಎ.30ರಂದು ಟ್ವೀಟ್‌ನಲ್ಲಿ ತಿಳಿಸಿದ್ದರು.

ಕೇಂದ್ರ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು ಕಳೆದ ವರ್ಷ ಕೊರೋನವೈರಸ್‌ನ ಪ್ರಾದೇಶಿಕ ಮತ್ತು ತಾತ್ಕಾಲಿಕ ಹರಡುವಿಕೆಯನ್ನು ಅಂದಾಜಿಸಲು ವಿದ್ಯಾಸಾಗರ ನೇತೃತ್ವದಲ್ಲಿ ರಾಷ್ಟ್ರೀಯ ಕೋವಿಡ್-19 ಸೂಪರ್‌ಮಾಡೆಲ್ ಸಮಿತಿಯನ್ನು ರಚಿಸಿತ್ತು.

 ವಿದ್ಯಾಸಾಗರ ಅವರು ಸಂದರ್ಶನದಲ್ಲಿ ಸಮಿತಿಯ ಸದಸ್ಯರೂ ಆಗಿರುವ ಕಾನ್ಪುರ ಐಐಟಿಯ ಪ್ರೊಫೆಸರ್ ಮಣೀಂದ್ರ ಅಗರವಾಲ್ ಅವರು ನಡೆಸಿದ್ದ ಅಧ್ಯಯನವನ್ನು ಪ್ರಸ್ತಾಪಿಸಿದರು. ದೇಶದಲ್ಲಿ ಮೇ 14ರಿಂದ 18ರ ನಡುವೆ ಕೊರೋನವೈರಸ್ ಸಕ್ರಿಯ ಪ್ರಕರಣಗಳು ಮತ್ತು ಮೇ 4ರಿಂದ 8ರ ನಡುವಿನ ಅವಧಿಯಲ್ಲಿ ಹೊಸ ಪ್ರಕರಣಗಳು ಉತ್ತುಂಗಕ್ಕೇರಲಿವೆ ಎನ್ನುವುದನ್ನು ಅಧ್ಯಯನವು ತೋರಿಸಿದೆ ಎಂದು ಅಗರವಾಲ್ ಎ.25ರಂದು ಟ್ವೀಟಿಸಿದ್ದರು. ಸಕ್ರಿಯ ಪ್ರಕರಣಗಳ ಸಂಖ್ಯೆ 48 ಲಕ್ಷದವರೆಗೆ ಮತ್ತು ದೈನಂದಿನ ಹೊಸ ಪ್ರಕರಣಗಳ ಸಂಖ್ಯೆ 4.4 ಲಕ್ಷಕ್ಕೆ ಏರಬಹುದು ಎಂದು ಅವರು ಅಂದಾಜಿಸಿದ್ದರು.

ಪ್ರಕರಣಗಳಲ್ಲಿ ಸಂಭಾವ್ಯ ಏರಿಕೆಯ ಬಗ್ಗೆ ಕೇಂದ್ರಕ್ಕೆ ಅರಿವಿತ್ತೇ ಮತ್ತು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತೇ ಎಂಬ ಪ್ರಶ್ನೆಗೆ ವಿದ್ಯಾಸಾಗರ,ಮೇ ಮಧ್ಯದ ವೇಳೆಗೆ ಸಾಂಕ್ರಾಮಿಕವು ಉತ್ತುಂಗಕ್ಕೇರಲಿದೆ ಎಂದು ಸಮಿತಿಯು ಎಪ್ರಿಲ್‌ನಲ್ಲಿ ಅಂದಾಜಿಸಿತ್ತು. ಸರಕಾರದ ಕೆಲವು ಕ್ರಮಗಳು ಫಲ ನೀಡಲು ಮೂರರಿಂದ ನಾಲ್ಕು ತಿಂಗಳು ಸಮಯವನ್ನು ತೆಗೆದುಕೊಳ್ಳಬಹುದಿತ್ತು ಮತ್ತು ಅಷ್ಟೊಂದು ಸಮಯವಿಲ್ಲ ಎಂದು ಸಮಿತಿಯು ತಿಳಿಸಿತ್ತು ಎಂದು ಉತ್ತರಿಸಿದರು.

ಕೊರೋನವೈರಸ್ ಎರಡನೇ ಅಲೆಯ ಸಾಧ್ಯತೆಯನ್ನು ಸರಕಾರವು ನಿರಾಕರಿಸಿರಲಿಲ್ಲವಾದರೂ ಇಷ್ಟೊಂದು ಭೀಕರವಾಗಿರುತ್ತದೆ ಎಂದು ಅದು ಊಹಿಸಿರಲಿಲ್ಲ ಎಂದು ವಿದ್ಯಾಸಾಗರ ಸುದ್ದಿ ಜಾಲತಾಣವೊಂದಕ್ಕೆ ನೀಡಿದ್ದ ಪ್ರತ್ಯೇಕ ಸಂದರ್ಶನದಲ್ಲಿ ಹೇಳಿದ್ದರು.

ಸಮಿತಿಯಲ್ಲಿಯೇ ದೋಷಗಳು:

ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಅಥವಾ ವೈರಾಣು ತಜ್ಞರು ಸೂಪರ್‌ಮಾಡೆಲ್ ಸಮಿತಿಯಲ್ಲಿ ಇಲ್ಲದಿರುವುದನ್ನು ಆರೋಗ್ಯ ತಜ್ಞರು ಟೀಕಿಸಿದ್ದಾರೆ. ಈ ವರ್ಷದ ಫೆಬ್ರವರಿಯ ವೇಳೆಗೆ ಸಾಂಕ್ರಾಮಿಕದ ಹಾವಳಿಗೆ ತೆರೆ ಬೀಳಲಿದೆ ಎಂದು ಕಳೆದ ವರ್ಷ ಸಮಿತಿಯು ವ್ಯಕ್ತಪಡಿಸಿದ್ದ ಅಭಿಪ್ರಾಯಗಳನ್ನೂ ಪ್ರಶ್ನಿಸಲಾಗಿತ್ತು. ಸಾಂಕ್ರಾಮಿಕದ ಎರಡನೇ ಅಲೆ ಇರುವುದಿಲ್ಲ ಎಂದು ಸಮಿಯು ಭವಿಷ್ಯ ನುಡಿದಿತ್ತು ಮತ್ತು ತನ್ನ ಅಂದಾಜುಗಳನ್ನು ಅದು ಆಗಾಗ್ಗೆ ಬದಲಿಸುತ್ತಲೇ ಬಂದಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಬಯಾಲಾಜಿಕಲ್ ಸೈನ್ಸ್‌ಸ್‌ನ ಮುಕುಂದ ಥತ್ತೈ ಅವರು ಬೆಟ್ಟು ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News