ಬೆಡ್ ಬ್ಲಾಕಿಂಗ್ ಅವ್ಯವಹಾರ: ಆರೋಪಿಗಳನ್ನು ರಕ್ಷಿಸಲು ಸಂಸದರಿಂದ ಕೋಮು ಅಸ್ತ್ರ ಬಳಕೆ; ವ್ಯಾಪಕ ಆಕ್ರೋಶ
ಬೆಂಗಳೂರು, ಮೇ 5: `ಹಾಸಿಗೆ ಬ್ಲಾಕ್ ಅವ್ಯವಹಾರ' ಸಂಬಂಧ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಬಿಜೆಪಿ ಮುಖಂಡರು ಕೋಮುಬಣ್ಣ ನೀಡುತ್ತಿರುವುದು ರಾಜ್ಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, 'ನಿಮ್ಮ ಕೊಳಕು ಬುದ್ಧಿಯನ್ನು ಕೊರೋನ ರೋಗಕ್ಕೂ ಯಾಕೆ ಎಳೆದು ತರ್ತೀರಿ' ಎಂಬ ಪ್ರಶ್ನೆಯನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಜನಸಾಮಾನ್ಯರು ಎತ್ತಿದ್ದಾರೆ.
ಬಿಬಿಎಂಪಿ ದಕ್ಷಿಣ ವಲಯ ವಾರ್ ರೂಂನಲ್ಲಿ 200ಕ್ಕೂ ಹೆಚ್ಚು ಮಂದಿ ಕಾರ್ಯನಿರ್ವಹಿಸುತ್ತಿದ್ದು, ಕೇವಲ ಮುಸ್ಲಿಂ ಸಮುದಾಯದ 17 ಮಂದಿ ಹೆಸರನ್ನಷ್ಟೇ ಉಲ್ಲೇಖಿಸಿ 'ಇವರೆಲ್ಲರೂ ಸರಕಾರಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಬೆಡ್ ಬ್ಲಾಕ್ ದಂಧೆಯಲ್ಲಿ ತೊಡಗಿದ್ದಾರೆ' ಎಂದು ಆರೋಪಿಸಿರುವುದು 'ಸರಕಾರ ಮತ್ತು ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಬೇರೆಯವರತ್ತ ಬೆರಳು ತೋರಿಸುವುದು ಎಷ್ಟು ಸರಿ ಎಂಬುದು ಜನರ ಪ್ರಶ್ನೆಯಾಗಿದೆ.
ಏನಿದು ಬೆಡ್ ಬ್ಲಾಕ್, ಅನ್‍ಬ್ಲಾಕ್: ಯಾವುದೇ ವ್ಯಕ್ತಿಗೆ ಸೋಂಕು ಖಚಿತವಾಗುತ್ತಿದ್ದಂತೆ ಬಿಬಿಎಂಪಿಯಿಂದ ಆತನ ಹೆಸರಿನಲ್ಲಿ `ಬಿಯು' ನಂಬರ್ ಕೊಡಲಾಗುತ್ತದೆ. (ಆ ನಂಬರ್ ಇದ್ದರೆ ಮಾತ್ರವೇ ಹಾಸಿಗೆ ಸಿಗುತ್ತದೆ) ಆ ನಂಬರ್ ವಲಯವಾರು ಸೋಂಕಿತರ ವಿಳಾಸ ಆಧರಿಸಿ ವಾರ್ ರೂಂಗೆ ಬರುತ್ತದೆ. ವಾರ್ ರೂಂನಿಂದ ಸೋಂಕಿತರಿಗೆ ಕರೆ ಮಾಡಿ ಸೋಂಕಿನ ಲಕ್ಷಣಗಳು ಇವೆಯೇ ಎಂದು ವಿಚಾರಿಸಲಾಗುತ್ತದೆ. ಲಕ್ಷಣಗಳಿದ್ದು ಗಂಭೀರ ಸ್ವರೂಪದಲ್ಲಿದ್ದರೆ ಆ ಬಗ್ಗೆ ವಾರ್ ರೂಂನಲ್ಲಿರುವ ವೈದ್ಯರು ನಿರ್ಧರಿಸಿ ಹಾಸಿಗೆ ಬ್ಲಾಕ್ ಮಾಡಿ ಲಭ್ಯತೆ ಆಧರಿಸಿ ಸರಕಾರಿ ಅಥವಾ ಖಾಸಗಿ ಆಸ್ಪತ್ರೆಗೆ ಆ್ಯಂಬುಲನ್ಸ್ ಮೂಲಕ ರೋಗಿಯನ್ನು ಚಿಕಿತ್ಸೆಗೆ ಕಳುಹಿಸಿಕೊಡಲಾಗುತ್ತದೆ.
ವಾರ್ ರೂಂನ ವೆಬ್‍ಸೈಟ್ ಒಂದು ಸಾರ್ವಜನಿಕರಿಗೆ ಮತ್ತೊಂದು ಬಿಬಿಎಂಪಿ, ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಮಾಹಿತಿ, ಖಾಸಗಿ ಏಜೆನ್ಸಿಯ ನಿರ್ವಹಣೆ ಮತ್ತು ದಾಖಲಾತಿ ಸಂಗ್ರಹಿಸಲು ಇಟ್ಟುಕೊಳ್ಳಲಾಗಿದೆ. ಇಲ್ಲಿ ಹಾಸಿಗೆ ವ್ಯವಸ್ಥೆ ಕಲ್ಪಿಸಿದರೆ ಬೆಡ್ ಬ್ಲಾಕ್ ಮಾಡಲಾಗುತ್ತದೆ. ಒಂದು ವೇಳೆ ಸೋಂಕಿತ ಆಸ್ಪತ್ರೆಯಿಂದ ಬಿಡುಗಡೆಯಾದರೆ ಅನ್‍ಬ್ಲಾಕ್(ಹಾಸಿಗೆ ಖಾಲಿ) ಮಾಡಲಾಗುತ್ತದೆ. ಇಲ್ಲಿನ ವ್ಯವಸ್ಥೆ ಸಾಮಾನ್ಯ ಜನರಿಗೆ ಕಾಲ್‍ಸೆಂಟರ್, ವಾರ್ ರೂಂ ವ್ಯವಸ್ಥೆ ಅರ್ಥ ಆಗುವುದು ಕಷ್ಟಸಾಧ್ಯ.
ವಾರ್ ರೂಂನಲ್ಲೇನಿದೆ: ಕ್ರಿಸ್ಟಲ್ ಮತ್ತು ಫ್ಯೂಚರ್ ಇನ್ಫೊಸಿಸ್ಟಮ್ ಅಂಡ್ ಸರ್ವಿಸ್ಸ್ ಎಂಬ ಎರಡು ಸಂಸ್ಥೆ ಬೆಂಗಳೂರು ದಕ್ಷಿಣ ಸೇರಿದಂತೆ ಬಿಬಿಎಂಪಿಯ ವಲಯವಾರು ಕಾಲ್ ಸೆಂಟರ್, ವಾರ್ ರೂಂ ನಿರ್ವಹಿಸುತ್ತಿವೆ. ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಸೇರಿ ಮೂರು ಪಾಳಿಯಲ್ಲಿ ಕಾರ್ಯನಿರ್ವಹಿಸಲಾಗುತ್ತದೆ. ಇಲ್ಲಿ ಎಸೆಸೆಲ್ಸಿ, ಪಿಯುಸಿ, ಬಿಎ, ಬಿಕಾಂ ಉತ್ತೀರ್ಣ-ಅನುತ್ತೀರ್ಣರಾದವರನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗಿದೆ.
ಇವರಿಗೆ 18 ಸಾವಿರ ರೂ. ಮಾಸಿಕ ವೇತನ ನಿಗದಿ ಮಾಡಲಾಗಿದೆ. ಆದರೆ ಅವರಿಗೆ ಕೇವಲ 13 ಸಾವಿರ ರೂ.ಗಳನ್ನು ನೀಡಲಾಗುತ್ತದೆ. ಕಾಲ್ ಸೆಂಟರ್, ವಾರ್ ರೂಂನಲ್ಲಿ ಹೆಲ್ಪ್ ಲೈನ್, ಟೆಲಿಕಾಲರ್, ಡಾಟಾ ಎಂಟ್ರಿ ಆಪರೇಟರ್ಸ್, ಅವರಿಗೆ ಓರ್ವ ಮೇಲ್ವಿಚಾರಕರು ಇರುತ್ತಾರೆ. ಅವರು ನೀಡಿದ ಮಾಹಿತಿಯನ್ನು ವೈದ್ಯರು ದೃಢಪಡಿಸಿದ ಬಳಿಕವಷ್ಟೇ ವೆಬ್‍ಸೈಟ್‍ಗೆ ಎಂಟ್ರಿ ಮಾಡಲಾಗುತ್ತದೆ ಎಂದು ಅಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಯ ಅನಿಸಿಕೆಯಾಗಿದೆ.
ಟೆಲಿಫೋನ್ ಕರೆಗಳ ಒತ್ತಡವನ್ನು ಆಧರಿಸಿ ಒಂದು ಪಾಳಿಯಲ್ಲಿ ಹದಿನೈದರಿಂದ ಇಪ್ಪತ್ತು ಮಂದಿ ಕಾರ್ಯನಿರ್ವಹಿಸುತ್ತಾರೆ. ಇಡೀ ವ್ಯವಸ್ಥೆಯನ್ನು ಖಾಸಗಿ ಏಜೆನ್ಸಿ ನಿರ್ವಹಿಸಿದರೂ, ಬಿಬಿಎಂಪಿ ಹಿರಿಯ ಅಧಿಕಾರಿಗಳು ನಿರಂತರವಾಗಿ ಇದರ ಮೇಲುಸ್ತುವಾರಿ ನೋಡಿಕೊಳ್ಳುತ್ತಾರೆ. ಪಾಲಿಕೆ ಅಧಿಕಾರಿಗಳ ಸೂಚನೆ ಇಲ್ಲದೆ ಇಲ್ಲಿ ಏನು ಮಾಡಲು ಸಾಧ್ಯವಿಲ್ಲ ಎಂಬುದು ಅಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಯ ಸಮಜಾಯಿಷಿ.
ತೇಜಸ್ವಿ ಆರೋಪ: 'ಹೋಂ ಐಸೋಲೆಶನ್', 'ಎ ಸಿಂಪ್ಟಮ್ಯಾಟಿಕ್' ಇರುವ ವ್ಯಕ್ತಿಯ ಹೆಸರಿನಲ್ಲಿ ಬಿಬಿಎಂಪಿ ವಾರ್ ರೂಂನಲ್ಲಿ ಕುಳಿತ ಅಧಿಕಾರಿಗಳು ಬೆಡ್ ಬ್ಲಾಕ್ ಮಾಡುತ್ತಾರೆ. ಆದರೆ, ಸೋಂಕಿತರಿಗೆ ಈ ಬಗ್ಗೆ ಮಾಹಿತಿಯೇ ಇರುವುದಿಲ್ಲ. ಹಾಸಿಗೆ ಕಾಯ್ದಿರಿಸಿದ 12 ಗಂಟೆಯೊಳಗೆ ಯಾರ ಹೆಸರಲ್ಲಿ ಬೆಡ್ ಬುಕ್ ಆಗಿದೆಯೋ ಅವರು ಆಸ್ಪತ್ರೆಗೆ ದಾಖಲಾಗದಿದ್ದರೆ ಆ ಬೆಡ್ ಅವರ ಹೆಸರಿಂದ ಅನ್‍ಬ್ಲಾಕ್ ಆಗುತ್ತದೆ.
ಆದರೆ, 12 ಗಂಟೆಯೊಳಗೆ ವಾರ್ ರೂಂನಲ್ಲಿ ಕುಳಿತವರು ಹೊರಗಿನ ವ್ಯಕ್ತಿಗಳ ಜತೆ ವ್ಯವಹಾರ ಕುದುರಿಸಿ ಅಂತಹವರಿಗೆ ಬೆಡ್ ಒದಗಿಸುತ್ತಾರೆ. ಓರ್ವ ವ್ಯಕ್ತಿಗೆ ಕೊರೋನ ಬಂದು 20 ದಿನಗಳ ನಂತರ 12 ಆಸ್ಪತ್ರೆಗಳಲ್ಲಿ ಬೆಡ್ ಬುಕ್ ಮಾಡಲಾಗಿತ್ತು. ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಮತ್ತು ವಾರ್ ರೂಂ ಏಜೆನ್ಸಿಗಳು ಬೆಂಗಳೂರಿನಲ್ಲಿ ಬೆಡ್‍ಗಳ ಕೃತಕ ಅಭಾವ ಸೃಷ್ಟಿಸಲಾಗುತ್ತಿದೆ ಎಂದು ಸಂಸದ ತೇಜಸ್ವಿ ಸೂರ್ಯ ಆರೋಪ ಮಾಡಿದ್ದರು.
ದಂಧೆ ಹಿಂದಿನ ಅಸಲಿ ಮುಖ: ಹಾಸಿಗೆ ಬ್ಲಾಕ್ ಮತ್ತು ಅನ್‍ಬ್ಲಾಕ್ ದಂಧೆಯನ್ನು ಟೆಲಿಕಾಲರ್, ಡಾಟಾ ಎಂಟ್ರಿ ಆಪರೇಟರ್ ಗಳು, ಹದಿನೈದು ಸಾವಿರ ರೂ.ಗಳಿಗೆ ಕೆಲಸ ಮಾಡುವ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುವ ಸಿಬ್ಬಂದಿ ಮಾಡಲು ಸಾಧ್ಯವೇ ಇಲ್ಲ. ವಾರ್ ರೂಂ ಹಿರಿಯ ಅಧಿಕಾರಿಗಳ ಬೆಂಬಲವಿಲ್ಲದೆ ಹಾಸಿಗೆ ಬ್ಲಾಕ್ ಅವ್ಯವಹಾರ ಸಾಧ್ಯವೇ ಇಲ್ಲ. ಬಿಬಿಎಂಪಿಗೂ ಭ್ರಷ್ಟಾಚಾರಕ್ಕೂ ಬಹಳ ಹಿಂದಿನಿಂದಲೂ ಬಿಡದ ನಂಟಿದೆ. ತನಿಖೆಯಿಂದಲೇ ಎಲ್ಲ ಬಯಲಿಗೆ ಬರಬೇಕಿದೆ' ಎಂದು ಹೆಸರೇಳಲು ಇಚ್ಛಿಸದ ಪಾಲಿಕೆ ಅಧಿಕಾರಿಯ ಅಭಿಪ್ರಾಯವಾಗಿದೆ.
ವಾಸ್ತವದಲ್ಲಿ ವಾರ್ ರೂಂ ಮತ್ತು ಕಾಲ್ ಸೆಂಟರ್ ಗಳ ಮೇಲುಸ್ತುವಾರಿ ನೋಡಿಕೊಳ್ಳಬೇಕಾದ ಬಿಬಿಎಂಪಿಯ ವಲಯ ಆಯುಕ್ತರು ಸೇರಿದಂತೆ ಬಹುತೇಕ ಅಧಿಕಾರಿಗಳು ಕಾರ್ಯ ಒತ್ತಡದಲ್ಲಿದ್ದಾರೆ. ಜೊತೆಗೆ ಕೋವಿಡ್ ಸೋಂಕಿನ ಭೀತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಸೋಂಕಿತರಿಗೆ ಹಾಸಿಗೆ ಹಂಚಿಕೆಯೂ ಗುಪ್ತವಾಗಿಯೇ ನಡೆಯುತ್ತಿದ್ದು, ಕೆಲವರನ್ನು ಇದನ್ನು ದಂಧೆ ಮಾಡಿಕೊಂಡಿರುವ ಸಾಧ್ಯತೆಗಳು ಇವೆ.
ವಾರ್ ರೂಂನಲ್ಲಿ ಕೆಲಸ ಮಾಡುವ ಕೆಲ ವೈದ್ಯರು, ಬಿಬಿಎಂಪಿಯ ಕೆಲ ಅಧಿಕಾರಿಗಳು ಈ ಅವ್ಯವಹಾರದಲ್ಲಿ ತೊಡಗಿದ್ದು, ಹೋಮ್ ಐಸೋಲೆಷನ್ ಮತ್ತು 'ಎ ಸಿಂಪ್ಟಮ್ಯಾಟಿಕ್' ಸೋಂಕಿತರ ಹೆಸರಿನಲ್ಲಿ ಹಾಸಿಗೆ ಬ್ಲಾಕ್ ಮಾಡಿ, ತುರ್ತು ಅಗತ್ಯ ಇರುವ ಸೋಂಕಿತರೊಂದಿಗೆ 25 ಸಾವಿರ ರೂ.ನಿಂದ ಮೂವತ್ತು, ನಲವತ್ತು ಸಾವಿರ ರೂ.ವ್ಯವಹಾರ ಕುದುರಿಸಿ ಹಾಸಿಗೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಹೇಳಲಾಗುತ್ತದೆ.
ಖಾಸಗಿ ಗೋಲ್-ಮಾಲ್: ಕೋವಿಡ್ ಚಿಕಿತ್ಸೆಗೆ ಸರಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಂಖ್ಯೆ ಕಡಿಮೆ. ಹೀಗಾಗಿ ಖಾಸಗಿ ಆಸ್ಪತ್ರೆಗಳ ಶೇ.75ರಷ್ಟು ಹಾಸಿಗೆಗಳನ್ನು ಸರಕಾರ ವಶಕ್ಕೆ ಪಡೆದಿದೆ. ಬಿಬಿಎಂಪಿಯಿಂದ ಹಾಸಿಗೆ ಬ್ಲಾಕ್ ಮೂಲಕ ಸೋಂಕಿತರನ್ನು ಕಳುಹಿಸಿದರೆ ಅವರಿಗೆ ಪಾಲಿಕೆಯೇ ಹಣ ಪಾವತಿ ಮಾಡುತ್ತದೆ. ಅದು ಬಹಳ ವಿಳಂಬವಾಗುತ್ತದೆ. ಹೀಗಾಗಿ ಖಾಸಗಿ ಆಸ್ಪತ್ರೆಗಳು ಹಾಸಿಗೆ ಲಭ್ಯವಿಲ್ಲ ಎಂದು ತೋರಿಸಿ ಹಣ ಮಾಡುವ ದಂಧೆ ಮಾಡಿಕೊಳ್ಳುತ್ತಿರುವುದು ಈ ಹಾಸಿಗೆ ಬ್ಲಾಕ್ ದಂಧೆ ಹಿಂದಿದೆ ಎಂಬ ಮಾತುಗಳು ಕೇಳಿಬರುತ್ತವೆ.
ಕೊರೋನ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೂ ಮಿತಿ ಮೀರುತ್ತಿದೆ. ಸಾವಿನ ಪ್ರಕರಣಗಳೂ ಆತಂಕಕಾರಿ. ನಿನ್ನೆ ಒಂದೇ ದಿನ ಸೋಂಕಿತರ ಸಂಖ್ಯೆ 45 ಸಾವಿರ ಗಡಿಯಲ್ಲಿದ್ದು, ಸಾವಿನ ಸಂಖ್ಯೆ 300ರ ಹೊಸ್ತಿಲಿನಲ್ಲಿದೆ. ಈ ಮಧ್ಯೆ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಸೋಂಕಿತರಿಗೆ ಆಸ್ಪತ್ರೆ, ಹಾಸಿಗೆ, ಆಕ್ಸಿಜನ್ ವ್ಯವಸ್ಥೆ ಸೂಕ್ತ ಸಮಯಕ್ಕೆ ಸಿಗದಿರುವುದು ಜನರನ್ನು ನಿಜಕ್ಕೂ ಕಂಗೆಡಿಸಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಫಲಾಪೇಕ್ಷೆ ಇಲ್ಲದೆ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಧರ್ಮ, ಜಾತಿ, ಕೋಮುಬಣ್ಣ ಹಚ್ಚಿ ತಮ್ಮ ಬೇಳೆ ಬೇಯಿಸಿಕೊಳ್ಳುವುದು ಸರಿಯಲ್ಲ ಎಂಬ ಆಕ್ಷೇಪ ಜನಸಾಮ್ಯಾನರಿಂದ ಕೇಳಿಬಂದಿದೆ.
ಮನಸ್ಸಿಗೆ ಘಾಸಿಯಾಗಿದೆ
'ವಾರ್ ರೂಂ, ಕಾಲ್ ಸೆಂಟರ್ ಗಳಲ್ಲಿ ಡಾಟಾ ಎಂಟ್ರಿ ಆಪರೇಟರ್ ಗಳು, ಟೆಲಿಕಾಲರ್ ಗಳು ತಮ್ಮ ಕೆಲಸವನ್ನೇ ಮಾಡಲು ಸಾಧ್ಯವಿಲ್ಲದ ಒತ್ತಡವಿದೆ. ಇನ್ನು ಬೆಡ್ ಬ್ಲಾಕ್ ದಂಧೆ ಅಸಾಧ್ಯದ ಮಾತು. ಎಲ್ಲದಕ್ಕೂ ಮೇಲುಸ್ತುವಾರಿಗಳಿದ್ದಾರೆ. ವೈದ್ಯರ ಅನುಮೋದನೆ ಇಲ್ಲದೆ ಹೆಸರು ಬದಲಾವಣೆಯನ್ನೂ ಮಾಡುವಂತಿಲ್ಲ. ಬಿಬಿಎಂಪಿ ಅಧಿಕಾರಿಗಳು ನಿತ್ಯ ಪರಿಶೀಲನೆ ನಡೆಸುತ್ತಾರೆ. ಹೀಗಿರುವಾಗ ನಾವು ಅವ್ಯವಹಾರ ನಡೆಸಲು ಹೇಗೆ ಸಾಧ್ಯ? 200ಕ್ಕೂ ಹೆಚ್ಚು ಜನ ದಕ್ಷಿಣ ವಲಯ ವಾರ್ ರೂಂನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮುಸ್ಲಿಂ ಸಮುದಾಯದವರ ಹೆಸರನಷ್ಟೇ ಹೇಳಿ ಸಂಕಷ್ಟದ ಸಂದರ್ಭದಲ್ಲಿ ನಮ್ಮ ಸೇವಾ ಮನೋಭಾವದ ಕಾರ್ಯಕ್ಕೆ ನೋವುಂಟು ಮಾಡಿರುವುದು ಬೇಸರ ತರಿಸಿದೆ. ನಮ್ಮನ್ನು ವಜಾ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಮನಸ್ಸಿಗೆ ಘಾಸಿ ಮಾಡಿಕೊಂಡು ಕೆಲಸ ಮಾಡಲು ಸಾಧ್ಯವಿಲ್ಲ'
-ಸಾಧಿಕ್ ಪಾಷ, ಡಾಟಾ ಎಂಟ್ರಿ ಆಪರೇಟರ್, ಬೆಂಗಳೂರು ದಕ್ಷಿಣ ವಲಯ ವಾರ್ ರೂಂ
ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ
ರಾಜ್ಯದಲ್ಲಿ ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಜಾತಿ, ಧರ್ಮ, ಭಾಷೆಗಳನ್ನು ಮೀರಿ ಸಂಕಷ್ಟದಲ್ಲಿರುವ ಜನರಿಗೆ ನೆರವಾಗುತ್ತಿದ್ದಾರೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಸೇವಾ ಮನೋಭಾವದಿಂದ ಕೊರೋನ ಯೋಧರಾಗಿ ಕೋವಿಡ್ ವಾರ್ ರೂಂ ಮತ್ತು ಕಾಲ್ ಸೆಂಟರ್‍ಗಳ ಸಿಬ್ಬಂದಿ ಹಗಲು-ರಾತ್ರಿಗಳ ಪರಿವೆ ಮರೆತು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಅವರಿಗೆ ಕೋಮುಬಣ್ಣ ಹಚ್ಚುವ ಮೂಲಕ ಜನರಿಗೆ ನೆರವಾಗುತ್ತಿರುವವರ ಆತ್ಮಸ್ಥೈರ್ಯ ಕುಗ್ಗಿಸುವುದು ಸರಿಯಲ್ಲ'
-ಗೋವಿಂದ್, ಚಾಮರಾಜಪೇಟೆ ನಿವಾಸಿ