ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣವಾಗಿ ಬಿಜೆಪಿ ಸೇರಿದ್ದ ಎಚ್.ವಿಶ್ವನಾಥ್ ಮತ್ತೆ ಜೆಡಿಎಸ್ ನತ್ತ ?
ಮೈಸೂರು: ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನವಾಗಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾಗಿದ್ದ ಪ್ರಮುಖರಲ್ಲೊಬ್ಬರಾದ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಚಿತ್ತ ಜೆಡಿಎಸ್ ನತ್ತ ಹರಿದಿದ್ದು, ಮತ್ತೆ ಜೆಡಿಎಸ್ ಪಕ್ಷದ ಬಾಗಿಲು ತಟ್ಟುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರನ್ನು ಸಂಪರ್ಕಿಸಿರುವ ವಿಶ್ವನಾಥ್, ಜೆಡಿಎಸ್ ಪಕ್ಷಕ್ಕೆ ಸೇರಿಸಿಕೊಳ್ಳುವಂತೆ ದುಂಬಾಲು ಬಿದ್ದಿದ್ದಾರೆ ಎನ್ನಲಾಗಿದೆ. ಬಿಜೆಪಿ ಪಕ್ಷದಲ್ಲಿ ಅವರು ಅಂದುಕೊಂಡಂತೆ ಮಂತ್ರಿ ಸ್ಥಾನ ಸಿಗದೆ ಇರುವುದರಿಂದ ಸಿಟ್ಟಿಗೆದ್ದಿರುವ 'ಹಳ್ಳಿ ಹಕ್ಕಿ' ವಿಶ್ವನಾಥ್, ಮತ್ತೆ ಜೆಡಿಎಸ್ ಪಕ್ಷ ಸೇರಲು ಮುಂದಾಗಿದ್ದಾರೆ ಎಂದು ಗೊತ್ತಾಗಿದೆ.
ಒಂದು ವೇಳೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಗ್ರೀನ್ ಸಿಗ್ನಲ್ ನೀಡಿದರೆ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಿಂದ ಅವರ ಪುತ್ರ ಅಮಿತ್ ದೇವರಹಟ್ಟಿ ಅವರನ್ನು ಜೆಡಿಎಸ್ ಪಕ್ಷದಿಂದ ಕಣಕ್ಕಿಳಿಸಿ ಶಾಸಕರನ್ನಾಗಿ ಮಾಡಬೇಕು ಎಂಬ ಇಂಗಿತ ಅವರಲ್ಲಿದೆ ಎಂದು ತಿಳಿದು ಬಂದಿದೆ.
ಈಗಾಗಲೇ ದೇವೇಗೌಡರನ್ನು ಒಂದೆರಡು ಬಾರಿ ದೂರವಾಣಿ ಮೂಲಕ ಸಂಪರ್ಕ ಮಾಡಿದ್ದಾರೆ ಎಂದು ತಿಳಿದು ಬಂದಿದ್ದು, ನನ್ನೆಲ್ಲಾ ತಪ್ಪುಗಳನ್ನು ಹೊಟ್ಟೆಗೆ ಹಾಕಿಕೊಳ್ಳುವಂತೆ ಮನವಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೆ ದೇವೇಗೌಡರು ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸಮಯ ನೋಡಿ ಎಚ್.ಡಿ.ಕುಮಾರಸ್ವಾಮಿ ಜೊತೆ ಮಾತನಾಡುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ಮೈಸೂರು ಭಾಗದಲ್ಲಿ ತನ್ನ ಪ್ರಭಾವ ಉಳಿಸಿಕೊಂಡಿರುವ ಜೆಡಿಎಸ್ ಪಕ್ಷಕ್ಕೆ ಹಿಂದುಳಿದ ವರ್ಗಗಳ ನಾಯಕರ ಕೊರತೆ ಇದ್ದು, ವಿಶ್ವನಾಥ್ ಸೇರ್ಪಡೆಯಿಂದ ಪಕ್ಷಕ್ಕೆ ಸ್ವಲ್ಪ ಮಟ್ಟಿಗಾದರೂ ಬಲಬರಲಿದೆ ಎಂಬ ಲೆಕ್ಕಾಚಾರ ಕೂಡ ದೇವೇಗೌಡರಲ್ಲಿ ಇದೆ. ಹಾಗಾಗಿಯೇ ಅವರು ಸಕಾರಾತ್ಮಕವಾಗಿ ವಿಶ್ವನಾಥ್ ಜೊತೆ ಮಾತನಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿಶ್ವನಾಥ್ ಜೆಡಿಎಸ್ ಪಕ್ಷಕ್ಕೆ ಸೇರಲಿದ್ದಾರೆ ಎಂಬುದಕ್ಕೆ ಪುಷ್ಠಿ ನೀಡುವಂತೆ ಇತ್ತೀಚೆಗೆ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ವಿಶ್ವನಾಥ್, ನಾನು ಬಿಜೆಪಿಯವರ ಮುಲಾಜಿನಲ್ಲಿ ಇಲ್ಲ, ನನ್ನ ಮುಲಾಜಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದ್ದಾರೆ. ನಾನು ಮಾಜಿ ಮುಖ್ಯಮಂತ್ರಿ ದಿ. ಡಿ.ದೇವರಾಜ ಅರಸು ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಮುಲಾಜಿನಲ್ಲಿ ಇದ್ದೇನೆ ಎಂದು ಹೇಳಿದ್ದಾರೆ.
ಅವರ ರಾಜಕೀಯ ಎದುರಾಳಿ ಸಾ.ರಾ.ಮಹೇಶ್ ವಿರುದ್ಧ ದೊಡ್ಡ ಮಟ್ಟದಲ್ಲೇ ಆರೋಪ ಪ್ರತ್ಯಾರೋಪ ಮಾಡಿ ಚಾಮುಂಡಿ ಬೆಟ್ಟದ ಶ್ರೀಚಾಮುಂಡೇಶ್ವರಿ ಸನ್ನಿಧಿಯಲ್ಲಿ ಆಣೆ ಪ್ರಮಾಣಕ್ಕೆ ಮುಂದಾಗಿದ್ದ ವಿಶ್ವನಾಥ್, ಇದೀಗ ಮೊನ್ನೆ ಕೆ.ಆರ್.ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಶಾಸಕ ಸಾ.ರಾ.ಮಹೇಶ್ ಕೋರೋನ ಸಂದರ್ಭದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಅವರ ಕಾರ್ಯವನ್ನು ಶ್ಲಾಘನೆ ಮಾಡಿದ್ದಾರೆ. ಜೊತೆಗೆ ಸಾ.ರಾ.ಮಹೇಶ್ ಅವರಿಗೆ ದೇವರು ಇನ್ನಷ್ಟು ಶಕ್ತಿ ಕೊಟ್ಟು ಜಿಲ್ಲಾ ಮಟ್ಟದಲ್ಲೂ ಕೆಲಸ ಮಾಡುವಂತಾಗಲಿ ಎಂದು ಹಾರೈಸಿದ್ದಾರೆ.
ಸದ್ಯ ಸಾಹಿತ್ಯ ಕ್ಷೇತ್ರದಿಂದ ವಿಧಾನಪರಿಷತ್ ಸದಸ್ಯರಾಗಿರುವ ಎಚ್.ವಿಶ್ವನಾಥ್, ಅವರು ಬಿಜೆಪಿ ತೊರೆದರೂ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೇನು ತೊಂದರೆಯಾಗುವುದಿಲ್ಲ ಎಂದು ಹೇಳಲಾಗುತ್ತಿದೆ. ವಿಶ್ವನಾಥ್ ಅವರ ಬೆಳವಣಿಗೆಯನ್ನು ಗಮನಿಸಿದರೆ ಬಿಜೆಪಿ ಪಕ್ಷದದಿಂದ ದೂರ ಸರಿಯುತ್ತಿದ್ದು, ಬಿಜೆಪಿ ಪಕ್ಷದ ಯಾವ ಕಾರ್ಯಕ್ರಮಗಳಲ್ಲೂ ಅವರು ಭಾಗಿಯಾಗುತ್ತಿಲ್ಲ, ಹಾಗಾಗಿಯೇ ಅವರು ಬಿಜೆಪಿ ವಿರುದ್ಧ ನೇರವಾಗಿಯೇ ವಾಗ್ದಾಳಿ ನಡೆಸುತ್ತಿದ್ದಾರೆ.
ಎಲ್ಲವೂ ಅಂದುಕೊಂಡಂತೆ ಆದರೆ ಮುಂದೆ ಮೈಸೂರು ಲೋಕಸಭಾ ಕ್ಷೇತ್ರದಿಂದ ವಿಶ್ವನಾಥ್ ಜೆಡಿಎಸ್ ಅಭ್ಯರ್ಥಿಯಾಗಲಿದ್ದು, ಅವರ ಪುತ್ರ ಅಮಿತ್ ದೇವರಹಟ್ಟಿ ಅವರನ್ನು ಹುಣಸೂರು ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನಾಗಿ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಹುಣಸೂರು ಕ್ಷೇತ್ರದಿಂದ ಜೆಡಿಎಸ್ ಶಾಸಕರಾಗಿ ಆಯ್ಕೆಯಾಗಿದ್ದ ಎಚ್.ವಿಶ್ವನಾಥ್ ಅವರಿಗೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿ ಸ್ಥಾನ ಸಿಗಲು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅಡ್ಡಿಯಾಗಿದ್ದರು. ಜೊತೆಗೆ ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ವಿಶ್ವನಾಥ್ ಅವರನ್ನು ನಿರ್ಲಕ್ಷ್ಯ ಮಾಡಿದ್ದರು. ಇದರಿಂದ ರೆಬಲ್ ಆದ ವಿಶ್ವನಾಥ್ ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣರಾಗಿದ್ದರು. ಇವರನ್ನು ಅಂದಿನ ವಿಧಾನಸಭಾ ಅಧ್ಯಕ್ಷ ರಮೇಶ್ ಕುಮಾರ್ 7 ಜನ ಶಾಸಕರ ಜೊತೆ ಅನರ್ಹಗೊಳಿಸಿ ಆದೇಶ ನೀಡಿದ್ದರು.
ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ಸೇರಿದ್ದ ವಿಶ್ವನಾಥ್, ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಲು ಕನಸು ಕಂಡಿದ್ದರು. ಆದರೆ ಹುಣಸೂರು ಕ್ಷೇತ್ರದ ಉಪಚುನಾವಣೆಗೆ ಸ್ಪರ್ಧೆ ಮಾಡಿ ಪರಾಭವಗೊಂಡಿದ್ದರು. ಆದರೂ ಪಟ್ಟು ಬಿಡದ ಅವರು ಸಾಹಿತ್ಯ ಕ್ಷೇತ್ರದಿಂದ ವಿಧಾನಪರಿಷತ್ ಸದಸ್ಯರಾದರೂ ಅನರ್ಹಗೊಂಡ ವ್ಯಕ್ತಿಗಳು ನಾಮ ನಿರ್ದೇಶನವಾದರೆ ಮಂತ್ರಿ ಸ್ಥಾನ ನೀಡುವಂತಿಲ್ಲ ಎಂಬ ನ್ಯಾಯಾಲಯದ ತೀರ್ಪು ಅಡ್ಡಿಯಾಗಿತ್ತು.
ಇಷ್ಟೆಲ್ಲಾ ಬೆಳವಣಿಗೆಗಳು ನಡೆದರೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂತ್ರಿ ಸ್ಥಾನ ನೀಡುತ್ತಾರೆ ಎಂಬ ಅವರ ಆಸೆಗೆ ತಣ್ಣೀರು ಬಿದ್ದಿದ್ದು, ಹಾಗಾಗಿಯೇ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಹಳ್ಳಿ ಹಕ್ಕಿ ಎಚ್.ವಿಶ್ವನಾಥ್ ನೇರವಾಗಿಯೇ ವಾಗ್ದಾಳಿ ನಡೆಸಲು ಪ್ರಾರಂಭಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಸ್ವಪಕ್ಷದ ವಿರುದ್ಧವೇ ತಿರುಗಿ ಬಿದ್ದಿದ್ದರು. ಜೊತೆಗೆ ಸಿಎಂ ಆದವರ ಶಕ್ತಿಪೀಠದ ಕಣ್ಣು ಕಾಣುತ್ತಿಲ್ಲ, ಕಿವಿ ಕೇಳುತ್ತಿಲ್ಲ ಎಂದು ನೇರವಾಗಿಯೇ ಸಿಎಂ ವಿರುದ್ಧ ಮಾತನಾಡುತ್ತಿದ್ದಾರೆ.