ಪರಿಸರ ಕಾಳಜಿಯ ಜೊತೆಗೆ ಬಡ ನಿರ್ಗತಿಕರಿಗೆ ಸಹಾಯ, ಸೇವೆ ಸಲ್ಲಿಸುತ್ತಿರುವ ನಿವೃತ್ತ ಅರಣ್ಯಾಧಿಕಾರಿ ದಂಪತಿ
ಮೈಸೂರು,ಮೇ.17: ನಿವೃತ್ತ ಅರಣ್ಯ ಇಲಾಖೆ ಅಧಿಕಾರಿ ದಂಪತಿಗಳು ಪರಿಸರ ಕಾಳಜಿಯೊಂದಿಗೆ ಬಡವರು, ಅಶಕ್ತರು, ನಿರ್ಗತಿಕರು, ಅನಾಥಮಕ್ಕಳಿಗೆ ತಮ್ಮ ಕೈಲಾದ ಸೇವೆಯನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದು, ಇದೀಗ ಕೊರೋನ ಲಾಕ್‍ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೊಳಗಾದ ಜನರಿಗೆ ಮಾಸ್ಕ್, ಸ್ಯಾನಿಟೈಸರ್, ಊಟ, ರೇಷನ್ ಕಿಟ್‍ಗಳ ಜೊತೆಗೆ ಧನಸಾಹಯವನ್ನು ಮಾಡುತ್ತ ಮಾನವೀಯ ಸೇವೆ ಮಾಡುತ್ತಿದ್ದಾರೆ.
ಮೂಲತಃ ಹಾಸನ ಜಿಲ್ಲೆ ಸಕಲೇಶಪುರದ ಮಡಬಾನೆ ಕುಟುಂಬದ ನಿವೃತ್ತ ಉಪ ಅರಣ್ಯವಲಯ ಅಧಿಕಾರಿ ಎ.ಎಂ.ಯೋಗೇಶ್ವರ್ ಮತ್ತು ಕೆ.ಎನ್.ಪ್ರಮೀಳ ಕುಟುಂಬ ಮೈಸೂರು ನಗರದ ನಿವೇದಿತಾನಗರದಲ್ಲಿ ನೆಲೆಸಿದ್ದು, ಪತಿ ಪತ್ನಿ ಇಬ್ಬರೂ ಸಾಮಾಜಿಕ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.
ಕೊರೋನ ಲಾಕ್‍ಡೌನ್ ಆದ ದಿನದಿಂದಲೂ ಬಡವರು, ನಿರ್ಗತಿಕರು ಮತ್ತು ಕೊರೋನ ವಾರಿಯರ್ಸ್‍ಗಳಾದ ಪೊಲೀಸರು, ಪೌರಕಾರ್ಮಿಕರು, ನರ್ಸ್‍ಗಳಿಗೆ ಪ್ರತಿನಿತ್ಯ ಆಹಾರವನ್ನು ನೀಡುತ್ತಾ ಬರುತ್ತಿದ್ದಾರೆ. ಸಂಕಷ್ಟದಲ್ಲಿದ್ದವರಿಗೆ ಈ ದಂಪತಿ ಮಾಸ್ಕ್, ಸ್ಯಾನಿಟೈಸರ್, ಅಕ್ಕಿ, ಬೇಳೆ, ಎಣ್ಣೆ, ಸಕ್ಕರೆ, ಟೀ.ಪುಡಿ, ಈರುಳ್ಳಿ, ಸೇರಿದಂತೆ ನಿತ್ಯ ಬಳಕೆಗೆ ಬೇಕಾಗುವ ರೇಷನ್ ಕಿಟ್ ಅನ್ನು ನೀಡುತ್ತಿದ್ದಾರೆ. ಜೊತೆಗೆ ಪ್ರಾಣಿಗಳಿಗೂ ನೀರು, ಆಹಾರ ನೀಡುವ ಮೂಲಕ ಪರಿಸರ ಕಾಳಜಿ ಪ್ರದರ್ಶಿಸುತ್ತಿದ್ದಾರೆ.
ಕಳೆದ ವರ್ಷ ಲಾಕ್‍ಡೌನ್ ಸಂದರ್ಭದಲ್ಲೂ ಸಂಕಷ್ಟದಲ್ಲಿದ್ದವರಿಗೆ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ.
ಅರಣ್ಯ ಇಲಾಖೆಯಲ್ಲಿ ಸುಮಾರು 40 ವರ್ಷ ಸೇವೆ ಸಲ್ಲಿಸಿರುವ ಇವರಿಗೆ ಹತ್ತು ಹಲವಾರು ಪ್ರಶಸ್ತಿಗಳು ಲಭಿಸಿವೆ. ಉಡುಪಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ 74 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮುಖ್ಯಸ್ಥರಾಗಿ ಹಾಗು ಸಹ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ಕೀರ್ತಿ ಇವರದಾಗಿದೆ.
ಖ್ಯಾತ ಕವಿ ನಿಸಾರ್ ಅಹಮದ್ ಅವರಿಗೆ ತೀರ ಹತ್ತಿರದವರಾಗಿದ್ದ ಇವರು ಪರಿಸರದ ಬಗ್ಗೆಯೂ ಅಷ್ಟೇ ಕಾಳಜಿ ಹೊಂದಿದ್ದಾರೆ.
ಗೃಹಪ್ರವೇಶ, ಮದುವೆ ಅಥವಾ ಇನ್ನಿತರೆ ಕಾರ್ಯಗಳಾಗಲಿ ಒಂದು ಗಿಡ ತೆಗೆದುಕೊಂಡು ಹೋಗಿ ಅಲ್ಲಿ ನೆಟ್ಟು ಬರುವುದು ಇವರ ಕಾಯಕವಾಗಿದೆ. ರೋಟರಿಯನ್ನ ಕೂಡ ಆಗಿರುವ ಇವರು ಸರ್ಕಾರಿ ಸೇವೆ ಸಲ್ಲಿಸುವಾಗಲು ಇಲಾಖೆಯಲ್ಲೆ ಸಂಘದ ಅಧ್ಯಕ್ಷರಾಗಿ ತಮ್ಮ ಸಹೋದ್ಯೋಗಿಗಳ ಕಷ್ಟಕ್ಕೆ ನೆರವಾಗಿದ್ದಾರೆ.
ನಾವು ಯಾರಿಗಾದರೂ ಒಂದು ತುತ್ತು ಸಹಾಯ ಮಾಡಿದ್ದೇವೆ ಎಂದಾದರೆ ಅದು ನಮ್ಮ ಬವರಿನಿಂದ ಬಂದ ಹಣದಿಂದ ಮಾತ್ರ. ನನ್ನೆಲ್ಲಾ ಸೇವೆಗೆ ನನ್ನ ಪತ್ನಿಯ ಬೆಂಬಲ ಮತ್ತು ಸಹಕಾರ ಕಾರಣ.
ಎ.ಎಂ.ಯೋಗೇಶ್ವರ್- ನಿವೃತ್ತ ಅರಣ್ಯಾಧಿಕಾರಿ.
ಕಷ್ಟದಲ್ಲಿದ್ದವರಿಗೆ ನೆರವಾಗ ಬೇಕಾದದ್ದು ಮನುಷ್ಯನ ಧರ್ಮ, ಹಾಗಾಗಿ ಈ ನಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದೇವೆ.
-ಕೆ.ಎನ್.ಪ್ರಮೀಳಾ, ಒಳಾಂಗಣ ವಿನ್ಯಾಸಗಾರ್ತಿ.