ಇದು ವ್ಯಾಪಾರ, ತಂತ್ರ, ದೇಣಿಗೆಗಳ ಹೆಸರಿನಲ್ಲಿ ಆದಾಯ ತೆರಿಗೆಯನ್ನು ವಂಚಿಸುತ್ತಿರುವ ʼಸದ್ಗುರುʼವಿನ ಇಶಾ ಫೌಂಡೇಷನ್

Update: 2021-05-21 14:44 GMT

ಆಂತರಿಕ ಕಂದಾಯ ಸೇವೆಗಳ ಇಲಾಖೆಯ ದಾಖಲೆಗಳಂತೆ ಅಮೆರಿಕದಲ್ಲಿ ನೋಂದಣಿಯಾಗಿರುವ ಸದ್ಗುರು ಜಗ್ಗಿ ವಾಸುದೇವ ಅವರ ಇಶಾ ಫೌಂಡೇಷನ್ 2018ನೇ ಸಾಲಿನಲ್ಲಿ 56.43 ಕೋ.ರೂ.ಗಳ ನಿವ್ವಳ ಆದಾಯವನ್ನು ತೋರಿಸಿದೆ. ಈ ಪೈಕಿ ಸುಮಾರು 35.81 ಕೋ.ರೂ.ಗಳು ದೇಣಿಗೆಗಳ ರೂಪದಲ್ಲಿ ಬಂದಿವೆ ಎಂದು ಅದು ಹೇಳಿದೆ. ಭಾರತದಲ್ಲಿ ಫೌಂಡೇಷನ್ನ ಆದಾಯಗಳ ಯಾವುದೇ ಸಾರ್ವಜನಿಕ ದಾಖಲೆಗಳಿಲ್ಲ. ತನ್ನ ಆದಾಯದಲ್ಲಿ ಗಣನೀಯ ಪಾಲು ದೇಣಿಗೆಗಳಾಗಿವೆ ಎಂದು ಅದು ಹೇಳಿಕೊಂಡಿದೆ. ಆದರೆ ಕನಿಷ್ಠ ಕೆಲವು ‘ದೇಣಿಗೆಗಳು ’ ದೇಣಿಗೆಗಳಲ್ಲ ಎನ್ನುವುದಕ್ಕೆ ಸಾಕ್ಷಾಧಾರಗಳಿವೆ. ವಾಸ್ತವದಲ್ಲಿ ಇಶಾ ಯೋಗ ಅಧಿವೇಶನಗಳು ಮತ್ತು ಆಧ್ಯಾತ್ಮಿಕ ಪ್ರವಾಸಗಳಂತಹ ತನ್ನ ಸೇವೆಗಳ ಮಾರಾಟದಿಂದ ಗಳಿಕೆಗಳನ್ನೂ ದೇಣಿಗೆಗಳೆಂದು ತೋರಿಸುತ್ತಿದೆ.

ತನ್ನ ಆದಾಯ ಮುಖ್ಯವಾಗಿ ದೇಣಿಗೆಗಳ ಮೂಲಕ ಬರುತ್ತಿದೆ ಎಂದೇಕೆ ಇಶಾ ಹೇಳಿಕೊಳ್ಳುತ್ತಿದೆ? ಇಶಾ ಫೌಂಡೇಷನ್ ಒಂದು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಆಗಿರುವುದರಿಂದ ಆದಾಯ ತೆರಿಗೆ ಕಾಯ್ದೆಯಡಿ ದೇಣಿಗೆಗಳಿಗೆ ತೆರಿಗೆ ಪಾವತಿಸುವುದರಿಂದ ವಿನಾಯಿತಿಯನ್ನು ಪಡೆದಿದೆ. ಹೀಗಾಗಿ ಪುಸ್ತಕ ವ್ಯಾಪಾರದ ವಹಿವಾಟುಗಳಿಗೂ ಅದು ದೇಣಿಗೆ ಪಾವತಿಯನ್ನು ನೀಡುತ್ತದೆ. ಅದು ತನ್ನ ‘ಕಾವೇರಿ ಕಾಲಿಂಗ್ ’ ಯೋಜನೆಯಡಿ ಸಸಿಗಳನ್ನು ಮಾರಾಟ ಮಾಡಿದಾಗಲೂ ಇದೇ ತಂತ್ರವನ್ನು ಬಳಸಿತ್ತು.
  
ಇಶಾ ಫೌಂಡೇಷನ್ನ ‘ಸಾಮಾಜಿಕ ಅಭಿವೃದ್ಧಿ ’ಘಟಕವಾಗಿರುವ ಇಶಾ ಔಟ್ರೀಚ್ ಸಸಿಗಳ ಮಾರಾಟದ ಹೊಣೆಯನ್ನು ಹೊತ್ತುಕೊಂಡಿತ್ತು. ‘ನಾನು ಇಶಾದ ಮದುರೈ ಕೇಂದ್ರದಿಂದ ಸಸಿಗಳನ್ನು ಖರೀದಿಸಿ ಅದಕ್ಕಾಗಿ 14,000 ರೂ.ಗಳನ್ನು ಪಾವತಿಸಿದ್ದೆ. ಆ ಸಮಯದಲ್ಲಿ ಅದು ಯಾವುದೇ ರಸೀದಿಯನ್ನು ನೀಡಿರಲಿಲ್ಲ. ತಿಂಗಳುಗಳ ಬಳಿಕ ಅದು 1,242 ರೂ.ಗಳ ಮೊತ್ತವನ್ನು ನಮೂದಿಸಿ ಔಟ್ರೀಚ್ ಹೆಸರಿನಲ್ಲಿ ದೇಣಿಗೆ ಸ್ವೀಕೃತಿಯ ರಸೀದಿಯನ್ನು ಕಳುಹಿಸಿತ್ತು. ಇದು ವಂಚನೆಯಾಗಿದೆ. ದೇಣಿಗೆಗಳ ರೂಪದಲ್ಲಿ ತನಗೆ ಎಲ್ಲ ಹಣ ಬರುತ್ತಿದೆ ಎಂದು ತೋರಿಸುವ ಮೂಲಕ ಅದು ಆದಾಯ ತೆರಿಗೆಯಿಂದ ನುಣುಚಿಕೊಳ್ಳುತ್ತಿದೆ ’ಎಂದು ತಮಿಳುನಾಡಿನ ದಿಂಡಿಗಲ್ನ ರೈತ ನಾಗಪ್ಪನ್ ಗೌತಮ ಹೇಳಿದರು. ಇಶಾದಿಂದ ಸಸಿಗಳನ್ನು ಖರೀದಿಸಿದ್ದ ಅಸಂಖ್ಯಾತ ಜನರ ಅನುಭವವೂ ಇದೇ ಆಗಿದೆ.
  
2014ರಲ್ಲಿ ಸ್ವೀಡಿಷ್ ಪ್ರಜೆ ಜಯಾ ಬಾಲು ಅವರು ಯೋಗ ಅಧಿವೇಶನ ಮತ್ತು ಯಂತ್ರ ಸಮಾರಂಭಕ್ಕಾಗಿ ಶುಲ್ಕವಾಗಿ ಇಶಾ ಫೌಂಡೇಷನ್ಗೆ 4.50 ಲ.ರೂ.ಗಳನ್ನು ಪಾವತಿಸಿದ್ದರು,ಆದರೆ ಬಿಲ್ನ ಬದಲಾಗಿ ದೇಣಿಗೆ ರಸೀದಿಯನ್ನು ಅವರಿಗೆ ನೀಡಲಾಗಿತ್ತು. ಇಶಾ ತನಗೆ ವಂಚಿಸಿದೆ ಎಂದು ಆರೋಪಿಸಿ ಕೊಯಮತ್ತೂರಿನ ಅಳಂದುರೈ ಪೊಲೀಸ್ ಠಾಣೆಗೆ ಅವರು ದೂರನ್ನು ಸಲ್ಲಿಸಿದ್ದರು. ಹಣವು ಯೋಗ ಅಧಿವೇಶನ ಮತ್ತು ಯಂತ್ರ ಸಮಾರಂಭಕ್ಕೆ ಶುಲ್ಕವೆಂದು ತಾನು ಭಾವಿಸಿದ್ದೆ, ಏಕೆಂದರೆ ದೇಣಿಗೆಯು ಸ್ವಯಂಪ್ರೇರಿತವಾಗಿರಬೇಕೇ ಹೊರತು ಯಾರೋ ಅದನ್ನು ನಿಗದಿಗೊಳಿಸುವುದಲ್ಲ ಎಂದು ಅವರು ದೂರಿನಲ್ಲಿ ಬರೆದಿದ್ದರು. ತನ್ನ ಹಣವನ್ನು ಮರಳಿಸಬೇಕೆಂಬ ಜಯಾರ ಬೇಡಿಕೆಯನ್ನು ಇಶಾ ಸಾರಾಸಗಟಾಗಿ ನಿರಾಕರಿಸಿತ್ತು. ಸ್ಥಳಿಯ ವಕೀಲ ಜೆ.ಡಿ.ಸಾಕ್ರೆಟಿಸ್ ಮತ್ತು ಅವರ ಸ್ನೇಹಿತ ಆರ್.ಸಾದಿಕುಲ್ಲಾ ಅವರ ನೆರವಿನಿಂದ ಕೊನೆಗೂ 2015ರಲ್ಲಿ ತನ್ನ ಹಣವನ್ನು ಇಶಾದಿಂದ ವಾಪಸ್ ಪಡೆದುಕೊಳ್ಳುವಲ್ಲಿ ಜಯಾ ಸಫಲರಾಗಿದ್ದರು.
 
ಯೋಗ ಮತ್ತು ಆಧ್ಯಾತ್ಮಿಕ ಸೇವೆಗಳ ಮಾರಾಟದ ಜೊತೆಗೆ ಇಶಾ ಫುಡ್ಸ್ ಆ್ಯಂಡ್ ಸ್ಪೈಸಸ್, ಇಶಾ ಕ್ರಾಫ್ಟ್ಸ್, ಇಶಾ ನ್ಯಾಚುರೊ ಆರ್ಗಾನಿಕ್ ಸೊಲ್ಯೂಷನ್ಸ್, ಉಜ್ಜೀವನ ಆಗ್ರೋ ಸೊಲ್ಯೂಷನ್ಸ್ನಂತಹ ಹಲವಾರು ಉದ್ಯಮಗಳೊಂದಿಗೂ ಇಶಾ ಫೌಂಡೇಷನ್ ಗುರುತಿಸಿಕೊಂಡಿದೆ. ವಿನ್ಯಾಸಕ ಸತ್ಯ ಪೌಲ್ ಅವರ ಪುತ್ರ ಪುನೀತ ನಂದಾ, ಎಬಿಎನ್ ಆಮ್ರಾ ಬ್ಯಾಂಕಿನ ಮಾಜಿ ಉಪಾಧ್ಯಕ್ಷೆ ಹಾಗೂ ಇಶಾ ಲೀಡರ್ಶಿಪ್ ಅಕಾಡೆಮಿಯ ನಿರ್ದೇಶಕಿ ಮೌಮಿತಾ ಸೇನ್ ಶರ್ಮಾ, ಇಶಾ ವಿದ್ಯಾದ ಯೋಜನಾ ನಿರ್ದೇಶಕ ವಿನೋದ ಹರಿ, ಇಶಾ ಲೈಫ್ನ ನಿರ್ದೇಶಕ ಗೋಪಾಲ ಕೃಷ್ಣಮೂರ್ತಿ ಮತ್ತು ಜಗ್ಗಿ ವಾಸುದೇವರ ಪುತ್ರಿ ರಾಧೆ ಜಗ್ಗಿ ಅವರು ಈ ಕಂಪನಿಗಳ ಆಡಳಿತ ಮಂಡಳಿಗಳಲ್ಲಿದ್ದಾರೆ.

ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ದಾಖಲೆಗಳಂತೆ ಇಶಾ 2019-20ನೇ ಸಾಲಿನಲ್ಲಿ ಈ ಎಲ್ಲ ಕಂಪನಿಗಳಿಂದ ಸುಮಾರು 117 ಕೋ.ರೂ.ಗಳನ್ನು ಗಳಿಸಿದೆ.

ಇಶಾ ಫೌಂಡೇಷನ್ ಗಣನೀಯ ಪ್ರಮಾಣದಲ್ಲಿ ‘ಆಧ್ಯಾತ್ಮಿಕ ’ಪ್ರವಾಸಗಳ ಪ್ಯಾಕೇಜ್ಗಳನ್ನೂ ಮಾರಾಟ ಮಾಡುತ್ತದೆ. ವಾಸುದೇವರ ಜೊತೆ 13 ದಿನಗಳ ಕೈಲಾಸ ಮಾನಸ ಸರೋವರ ಯಾತ್ರೆಗೆ ಅದು ಪ್ರತಿ ವ್ಯಕ್ತಿಗೆ 50 ಲ.ರೂ.ವರೆಗೆ ಶುಲ್ಕವನ್ನು ವಿಧಿಸುತ್ತದೆ. ಇಷ್ಟೊಂದು ಭಾರೀ ಮೊತ್ತವನ್ನು ಪಾವತಿಸಲು ಸಾಧ್ಯವಾಗದ ಭಕ್ತರಿಗಾಗಿ 2.75 ಲ.ರೂ.,3.45 ಲ.ರೂ.ಮತ್ತು 5.50 ಲ.ರೂ.ಗಳ ಪವಿತ್ರ ಪರ್ವತ ಯಾತ್ರೆಗಳ ಪ್ಯಾಕೇಜ್ಗಳನ್ನು ಅದು ನೀಡುತ್ತದೆ. ಆದರೆ ಈ ಪ್ಯಾಕೇಜ್ಗಳಡಿ ಯಾತ್ರೆಯ ಸಂದರ್ಭದಲ್ಲಿ ಒಂದು ಬಾರಿ ಮಾತ್ರ ಜಗ್ಗಿ ವಾಸುದೇವರ (ಸದ್ಗುರು) ದರ್ಶನಕ್ಕೆ ಭಕ್ತರಿಗೆ ಅವಕಾಶವಿರುತ್ತದೆ. ಈ ವರ್ಷ ಕೋವಿಡ್ ಸಾಂಕ್ರಾಮಿಕವು ಪ್ರವಾಸ ಯೋಜನೆಗಳಿಗೆ ಅಡ್ಡಿಯನ್ನುಂಟು ಮಾಡುವ ಮುನ್ನ ತಲಾ ಹಲವಾರು ಭಕ್ತರು ಇವುಗಳನ್ನು ಬುಕ್ ಮಾಡಿದ್ದರು.

ಜಗ್ಗಿ ವಾಸುದೇವರ ಜೊತೆ ಹಿಮಾಲಯಕ್ಕೆ 12 ದಿನಗಳ ಬೈಕ್ ಪ್ರವಾಸಕ್ಕೆ ಪ್ರತಿ ವ್ಯಕ್ತಿಗೆ 12 ಲ.ರೂ.ಗಳನ್ನು ನಿಗದಿಗೊಳಿಸಲಾಗಿದೆ. ವಾಸುದೇವರ ಜೊತೆ ಐದು ದಿನಗಳ ವಾರಣಾಸಿ ಪ್ರವಾಸಕ್ಕೆ ಐದು ಲ.ರೂ. ಮತ್ತು ಅವರಿಲ್ಲದ ಪ್ರವಾಸಕ್ಕೆ 50,000 ರೂ.ಗಳನ್ನು ನೀಡಬೇಕಿದೆ. ಮೈಸೂರಿನ ಚಾಮುಂಡಿ ಬೆಟ್ಟ ಪ್ರವಾಸಕ್ಕೆ ಪ್ರತಿ ವ್ಯಕ್ತಿ 3ರಿಂದ 4 ಲ.ರೂ.ಪಾವತಿಸಬೇಕಾಗುತ್ತದೆ. ಐದು ದಿನಗಳ ರಾಮೇಶ್ವರಂ ಅಥವಾ ಮದುರೈ ಯಾತ್ರೆಗೆ ಶುಲ್ಕ ಪ್ರತಿ ವ್ಯಕ್ತಿಗೆ 45,000 ರೂ.ಆಗಿದೆ. ಈ ಎಲ್ಲ ಆಧಾತ್ಮಿಕ ಪ್ರವಾಸಗಳ ಮೂಲಕ ಇಶಾ ವಾರ್ಷಿಕ ಸುಮಾರು 60 ಕೋ.ರೂ.ಗಳನ್ನು ಗಳಿಸುತ್ತಿದೆ.
 
ಇಶಾ ಕ್ಯಾಂಪಸ್ನಲ್ಲಿ ಪ್ರತಿ ವರ್ಷ ನಡೆಯುವ ಮಹಾ ಶಿವರಾತ್ರಿ ಉತ್ಸವವು ಬೃಹತ್ ಆದಾಯದ ಮೂಲವಾಗಿದೆ. ಈ ಉತ್ಸವದಲ್ಲಿ ಭಾಗಿಯಾಗಲು 250 ರೂ.ಗಳಿಂದ ಹಿಡಿದು 50,000 ರೂ.ವರೆಗಿನ ಟಿಕೆಟ್ಗಳನ್ನು ಮಾರಾಟ ಮಾಡಲಾಗುತ್ತದೆ. ಕಳೆದ ವರ್ಷದ ಉತ್ಸವದಲ್ಲಿ ಅಂದಾಜು 10 ಲಕ್ಷ ಜನರು ಭಾಗವಹಿಸಿದ್ದರು. ಉತ್ಸವದ ಸಂದರ್ಭದಲ್ಲಿ ನಾಲ್ಕು ದಿನಗಳ ‘ರಿಟ್ರೀಟ್’ಗಾಗಿ 50,000 ರೂ.ಗಳಿಂದ 2.5 ಲ.ರೂವರೆಗೆ ಶುಲ್ಕಗಳನ್ನು ವಸೂಲು ಮಾಡಲಾಗುತ್ತದೆ.

ತಮಿಳುನಾಡಿನ ಜಾಗ್ರತ ಇಲಾಖೆಯ ಮಾಜಿ ಅಧಿಕಾರಿ ಎ.ಶಂಕರ ಅವರು 2018ರಲ್ಲಿ ಇಶಾ ತೆರಿಗೆಯಿಂದ ನುಣುಚಿಕೊಳ್ಳಲು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಜಿ ಅನ್ನು ದುರುಪಯೋಗಿಸಿಕೊಳ್ಳುತ್ತಿದೆ ಎಂದು ಆರೋಪಿಸಿ ರಾಜ್ಯದ ಆದಾಯ ತೆರಿಗೆ ಆಯುಕ್ತರಿಗೆ ದೂರು ಸಲ್ಲಿಸಿದ್ದರು. ಮೂರು ವರ್ಷಗಳ ಹಿಂದೆ ಆದಾಯ ತೆರಿಗೆ ಇಲಾಖೆಯಿಂದ ಒಂದು ದೂರವಾಣಿ ಕರೆ ಬಂದಿದ್ದನ್ನು ಹೊರತು ಪಡಿಸಿದರೆ ಈ ದೂರಿನ ವಿಷಯದಲ್ಲಿ ಈವರೆಗೆ ಯಾವುದೇ ಪ್ರಗತಿಯಾಗಿಲ್ಲ.
  
ಶಂಕರ ಅವರ ದೂರಿನ ಕುರಿತು ಆದಾಯ ತೆರಿಗೆ ಆಯುಕ್ತ (ವಿನಾಯಿತಿಗಳು) ಕೆ.ರವಿ ರಾಮಚಂದ್ರನ್ ಅವರನ್ನು ಪ್ರಶ್ನಿಸಿದಾಗ, ‘ದೂರುದಾರರು ಮರಳಿ ನಮ್ಮನ್ನು ಸಂಪರ್ಕಿಸಬೇಕಾಗುತ್ತದೆ. ಈ ವಿಷಯವನ್ನು ನಾನು ಪರಿಶೀಲಿಸುತ್ತೇನೆ. ಅಕ್ರಮಗಳು ನಡೆದಿರುವುದು ಹೌದಾದರೆ ನಾವು ಸೂಕ್ತ ಕ್ರಮಗಳನ್ನು ಜರುಗಿಸುತ್ತೇವೆ. ಯಾವುದಕ್ಕೂ ನಾನು ಮೊದಲು ದೂರನ್ನು ಪರಿಶೀಲಿಸಬೇಕಿದೆ ’ಎಂದು ಉತ್ತರಿಸಿದ್ದಾರೆ. ತನ್ನ ಹಣಕಾಸು ಮತ್ತು ಆದಾಯ ತೆರಿಗೆ ವಂಚನೆ ಆರೋಪಗಳ ಕುರಿತು ಪ್ರಶ್ನೆಗಳಿಗೆ ಇಶಾ ಫೌಂಡೇಷನ್ ಉತ್ತರಿಸಿಲ್ಲ.
 
ಉದ್ಯಮ ವಹಿವಾಟುಗಳನ್ನು ದೇಣಿಗೆಗಳೆಂದು ತೋರಿಸುವ ಇಶಾದ ತಂತ್ರ ಅದರ ಭಾರೀ ಪ್ರಚಾರ ಪಡೆದಿದ್ದ ‘ಕಾವೇರಿ ಕಾಲಿಂಗ್ ’ಪರಿಸರ ಅಭಿಯಾನವನ್ನೂ ಬಿಟ್ಟಿಲ್ಲ. ಕರ್ನಾಟಕದ ತಲಕಾವೇರಿಯಿಂದ ತಮಿಳುನಾಡಿನ ತಿರುವಾವೂರುವರೆಗೆ 639 ಕಿ.ಮೀ.ಉದ್ದದ ಪಟ್ಟಿಯಲ್ಲಿ 242 ಕೋ.ಸಸಿಗಳನ್ನು ನೆಡುವ ಈ ಯೋಜನೆಯು, 
2019 ಸೆಪ್ಟೆಂಬರ್ನಲ್ಲಿ ಆರಂಭಗೊಂಡಿತ್ತು. ಯೋಜನೆಯ ಪ್ರಚಾರಕ್ಕಾಗಿ ಜಗ್ಗಿ ವಾಸುದೇವ ಗಣ್ಯ ರಾಜಕಾರಣಿಗಳು,ಚಿತ್ರತಾರೆಯರು,ಕ್ರೀಡಾಪಟುಗಳನ್ನು ಸೆಳೆದುಕೊಂಡಿದ್ದು,ಪ್ರತಿ ಸಸಿಗೆ 42 ರೂ.ಗಳ ‘ದೇಣಿಗೆ ’ಯನ್ನು ನಿಗದಿಗೊಳಿಸಿದ್ದರು.
 
ಆರಂಭಗೊಂಡ ಬೆನ್ನಿಗೇ ಈ ಯೋಜನೆಯು ವಿವಾದಕ್ಕೆ ಸಿಲುಕಿತ್ತು. ಇಶಾದ ಹಣ ಸಂಗ್ರಹ ಅಭಿಯಾನವನ್ನು ತಕ್ಷಣ ನಿಲ್ಲಿಸುವಂತೆ ಕೋರಿ ಬೆಂಗಳೂರಿನ ವಕೀಲ ಎ.ವಿ.ಅಮರನಾಥ ಅವರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದ್ದರು. ಸರಕಾರಿ ಜಮೀನಿನಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳಲು ಮತ್ತು ಅದಕ್ಕಾಗಿ ಸಾರ್ವಜನಿಕರಿಂದ ಅಗಾಧ ಮೊತ್ತವನ್ನು ಸಂಗ್ರಹಿಸಲು ಖಾಸಗಿ ಸಂಸ್ಥೆಗೆ ಹೇಗೆ ಅವಕಾಶ ನೀಡಲಾಗಿದೆ ಎಂದು 2019,ನವೆಂಬರ್ನಲ್ಲಿ ಸಲ್ಲಿಸಿದ್ದ ತನ್ನ ಅರ್ಜಿಯಲ್ಲಿ ಅವರು ಪ್ರಶ್ನಿಸಿದ್ದರು.
  
ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಶಾದ ಯೋಜನೆಗೆ ತನ್ನ ಸರಕಾರವು ಎರಡು ಕೋಟಿ ಸಸಿಗಳನ್ನು ಒದಗಿಸುತ್ತದೆ ಎಂದು ಪ್ರಕಟಿಸಿದ್ದರು. ನದಿ ಪುನರುಜ್ಜೀವನ ಯೋಜನೆಗಳನ್ನು ರಾಜ್ಯ ಸರಕಾರ ಅಥವಾ ಕೇಂದ್ರ ಸರಕಾರ ಮಾತ್ರ ಕೈಗೆತ್ತಿಕೊಳ್ಳಬಹುದು ಎಂದು ನೀತಿ ಆಯೋಗದ ನಿಯಮಗಳು ಸ್ಪಷ್ಟಪಡಿಸಿದ್ದರೂ ವಾಸುದೇವ ತನ್ನ ಯೋಜನೆಗೆ ಸರಕಾರದ ಒಪ್ಪಿಗೆ ದೊರಕಿದೆ ಎಂದು ಹೇಳಿಕೊಂಡಿದ್ದರು.

ಅಮರನಾಥರ ಅರ್ಜಿಯಲ್ಲಿ ಹುರುಳಿರುವುದನ್ನು ಮನಗಂಡ ಉಚ್ಚ ನ್ಯಾಯಾಲಯವು ಇಶಾ ಫೌಂಡೇಷನ್ ಸಸಿಗಳಿಗಾಗಿ ಹಣವನ್ನು ಸಂಗ್ರಹಿಸುತ್ತಿರುವಾಗ ಕ್ರಮಗಳನ್ನು ಕೈಗೊಳ್ಳದ್ದಕ್ಕಾಗಿ 2020 ಜನವರಿಯಲ್ಲಿ ಕರ್ನಾಟಕ ಸರಕಾರವನ್ನು ತರಾಟೆಗೆತ್ತಿಕೊಂಡಿತ್ತು ಮತ್ತು ಈ ವರೆಗೆ ಎಷ್ಟು ಹಣವನ್ನು ಸಂಗ್ರಹಿಸಲಾಗಿದೆ ಎನ್ನುವುದನ್ನು ಬಹಿರಂಗಗೊಳಿಸುವಂತೆ ಫೌಂಡೇಷನ್ಗೆ ನಿರ್ದೇಶ ನೀಡಿತ್ತು. ಮಾರ್ಚ್ನಲ್ಲಿ ನ್ಯಾಯಾಲಯಕ್ಕೆ ಉತ್ತರ ಸಲ್ಲಿಸಿದ್ದ ಇಶಾ ಫೌಂಡೇಷನ್ ತಾನು ಯೋಜನೆಯಲ್ಲಿ ಭಾಗಿಯಾಗಿಲ್ಲ ಮತ್ತು ಇಶಾ ಔಟ್ರೀಚ್ನ ಈ ಯೋಜನೆಯಲ್ಲಿ ಕಳೆದ ತಿಂಗಳವರೆಗೆ 82.50 ಕೋ.ರೂ.ಗಳನ್ನು ಸಂಗ್ರಹಿಸಲಾಗಿದೆ ಮತ್ತು ಅಷ್ಟೂ ಮೊತ್ತವನ್ನು ಸಸಿಗಳನ್ನು ನೆಡಲು ಬಳಸಲಾಗಿದೆ ಎಂದು ತಿಳಿಸಿತ್ತು.

ಇತ್ತೀಚಿಗೆ ಇಶಾ ತನ್ನ ವೆಬ್ಸೈಟ್ನಲ್ಲಿ ಯೋಜನೆಗೆ ಈವರೆಗೆ 5.6 ಕೋ.ಸಸಿಗಳನ್ನು ದೇಣಿಗೆ ನೀಡಲಾಗಿದೆ ಎಂದು ಪ್ರಕಟಿಸಿದೆ. ಪ್ರತಿ ಸಸಿಗೆ 42 ರೂ.ಗಳಂತೆ ಈ ಮೊತ್ತ 235 ಕೋ.ರೂ.ಗೂ ಹೆಚ್ಚಾಗುತ್ತದೆ.

ಕಾವೇರಿ ಕಾಲಿಂಗ್ ನ ಉಸ್ತುವಾರಿಗಾಗಿ ಇಶಾ ಔಟ್ರೀಚ್ ಮಂಡಳಿಯೊಂದನ್ನು ಹೊಂದಿದ್ದು, ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಅರಿಜಿತ್ ಪಸಾಯತ್, ಉದ್ಯಮಿ ಕಿರಣ್ ಮಝುಮ್ದಾರ್ ಶಾ, ಮಾಜಿ ಕೇಂದ್ರ ಜಲ ಸಂಪನ್ಮೂಲ ಕಾರ್ಯದರ್ಶಿ ಶಶಿಶೇಖರ, ಭಾರತೀಯ ಕೈಗಾರಿಕೆಗಳ ಒಕ್ಕೂಟದ ಮಾಜಿ ಅಧ್ಯಕ್ಷ ಚಂದ್ರಜಿತ ಬ್ಯಾನರ್ಜಿ,‌ ಟಾಟಾ ಸ್ಟೀಲ್ನ ಮಾಜಿ ಅಧ್ಯಕ್ಷ ಬಿ.ಮುತ್ತುರಾಮನ್ ಮತ್ತು ಮಾಜಿ ಇಸ್ರೋ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್ ಅವರು ಈ ಮಂಡಳಿಯಲ್ಲಿದ್ದಾರೆ.
 ‌
ನ್ಯಾಯಾಲಯದಲ್ಲಿ ತನ್ನ ರಕ್ಷಣೆಗೆ ವಾದ ಮಂಡಿಸಿದ್ದ ಕರ್ನಾಟಕ ಸರಕಾರವು ಕಾವೇರಿ ಕಾಲಿಂಗ್ ಯೋಜನೆಗೆ ತಾನು ಅನುಮತಿ ನೀಡಿಲ್ಲ,ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ಕೇವಲ ಎರಡು ಕೋಟಿ ಸಸಿಗಳನ್ನು ಇಶಾಕ್ಕೆ ನೀಡುವುದಾಗಿ ಪ್ರಕಟಿಸಿದ್ದೆ. ಇದರ ಬದಲಾಗಿ ಇಶಾ ಯೋಜನೆಯ ಸದಸ್ಯರಾಗಲು ರೈತರನ್ನು ಪ್ರೋತ್ಸಾಹಿಸಬೇಕಿತ್ತು, ಆದರೆ ಅದು ಸ್ವತಃ ಸಸಿಗಳನ್ನು ನೆಡುವಂತಿಲ್ಲ ಎಂದು ತಿಳಿಸಿತ್ತು.

ವಿವಿಧ ಜಾತಿಗಳ ಎರಡು ಕೋಟಿ ಸಸಿಗಳನ್ನು ಸಿದ್ಧಪಡಿಸುವುದು ಕಾರ್ಯಸಾಧ್ಯವಲ್ಲ ಎಂದು ಅರಣ್ಯ ಇಲಾಖೆಯು ಬೆಟ್ಟುಮಾಡಿದ ಬಳಿಕ ತಾನು ಅಂತಿಮವಾಗಿ 73.44 ಲ.ಸಸಿಗಳನ್ನು ಮಾತ್ರ ಇಶಾಕ್ಕೆ ನೀಡಿದ್ದೇನೆ ಎಂದು ತಿಳಿಸಿತ್ತು. ಇದಾದ ಬಳಿಕ ಕಾವೇರಿ ಕಾಲಿಂಗ್ ಯೋಜನೆಗೆ ತಾನು ಭೂಮಿ ಅಥವಾ ಹಣಕಾಸು ಒದಗಿಸಿಲ್ಲ ಎಂದು ಸಾರ್ವಜನಿಕ ಅಧಿಸೂಚನೆಯ ಮೂಲಕ ಅರಣ್ಯ ಇಲಾಖೆಯು ಸ್ಪಷ್ಟಪಡಿಸಿತ್ತು.
 
ಕಾವೇರಿ ಕಾಲಿಂಗ್ ಸರಕಾರಿ ಯೋಜನೆ ಎಂದು ಹೇಳಿಕೊಂಡು ಇಶಾ ಹಣವನ್ನು ಸಂಗ್ರಹಿಸಿದೆಯೇ ಎನ್ನುವುದರ ಬಗ್ಗೆ ತನಿಖೆ ನಡೆಸುವಂತೆ ಈ ವರ್ಷದ ಮಾರ್ಚ್ 8ರಂದು ಉಚ್ಚ ನ್ಯಾಯಾಲಯವು ಕರ್ನಾಟಕ ಸರಕಾರಕ್ಕೆ ನಿರ್ದೇಶ ನೀಡಿದೆ. ಇದನ್ನು ಪ್ರಶ್ನಿಸಿ ಇಶಾ ಔಟ್ರೀಚ್ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ವಿಚಾರಣೆಯಿನ್ನೂ ಬಾಕಿಯಿದೆ.

Writer - ಪ್ರತೀಕ್ ಗೋಯಲ್

contributor

Editor - ಪ್ರತೀಕ್ ಗೋಯಲ್

contributor

Similar News