ಲಾಕ್‌ಡೌನ್‌ನಿಂದ ಸಂಕಷ್ಟಕ್ಕೀಡಾದ ವಿಕಲಚೇತನರ ಬದುಕು: ಒಂದೊತ್ತಿನ ಊಟಕ್ಕೂ ಪರದಾಟ

Update: 2021-05-26 06:37 GMT

ಮೈಸೂರು, ಮೇ 24: ಕೊರೋನ ಎರಡನೇ ಅಲೆಯ ಲಾಕ್‌ಡೌನ್‌ನಿಂದ ತತ್ತರಿಸಿರುವ ವಿಶೇಷ ಚೇತನರು ಮತ್ತು ವಿಕಲಚೇತನರು ತೀವ್ರ ಸಂಕಷ್ಟಕ್ಕೊಳಗಾಗಿದ್ದು, ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದು, ಸರಕಾರದ ನೆರವಿಗೆ ಎದುರು ನೋಡುತ್ತಿದ್ದಾರೆ.

ಸಿಎಂ ಬಿ.ಎಸ್.ಯಡಿಯೂರಪ್ಪ ಅವರು, ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದರೂ ಅಂಗವಿಕಲರ ಬಗ್ಗೆ ಕಾಳಜಿ ವಹಿಸದಿರುವುದು ಇವರ ಅಸಮಾಧಾನಕ್ಕೆ ಕಾರಣವಾಗಿದೆ. ಮೈಸೂರು ಜಿಲ್ಲೆಯಲ್ಲಿ 30 ಸಾವಿರ ಅಂಗವಿಕಲರಿದ್ದು, 22 ಸಾವಿರ ಮಂದಿಯಷ್ಟೇ ಪಿಂಚಣಿ ಸೌಲಭ್ಯಕ್ಕೊಳಪಟ್ಟಿದ್ದಾರೆ.

ಅಂಗವಿಕಲರಾದರೂ ಸಾಮಾನ್ಯರಿಗೇನು ಕಡಿಮೆ ಇಲ್ಲದಂತೆ ಏನಾದರೊಂದು ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಇವರ ಬದುಕು ಲಾಕ್‌ಡೌನ್‌ನಿಂದಾಗಿ ಮೂರಾಬಟ್ಟೆಯಾಗಿದೆ.

ಕೈ, ಕಾಲು ಸ್ವಾಧೀನ ಹೊಂದಿದವರು, ಅಂಧರು, ಸೇರಿದಂತೆ ಹಲವರು ಕೆಲಸವೂ ಇಲ್ಲದೆ, ಇತ್ತ ಸರಕಾರದ ನೆರವು ಇಲ್ಲದೆ ಪರಿತಪಿಸುತ್ತಿದ್ದಾರೆ. ಸರಕಾರ ನಮ್ಮ ಬಗ್ಗೆಯೂ ಕಾಳಜಿ ವಹಿಸಿ ನಮ್ಮ ಜೀವನ ನಡೆಯಲು ಆರ್ಥಿಕವಾಗಿ ಸಹಾಯ ಮಾಡಬೇಕಿತ್ತು. ಆದರೆ ಯಾರೂ ನಮ್ಮ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ನಾವು ಮನುಷ್ಯರು ನಮಗೂ ಹೆಂಡತಿ ಮಕ್ಕಳಿದ್ದಾರೆ. ಅವರನ್ನು ಸಾಕುವುದು ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ.

ದೃಷ್ಟಿ ದೋಷವುಳ್ಳ ಮಂಜುನಾಥ್ ಸ್ವಾಮಿ ಎಂಬವರು ಮಾತನಾಡಿ, ನಾನು, ನನ್ನ ಹೆಂಡತಿ ಮತ್ತು ಪುಟ್ಟ ಮಗು ಬಾಡಿಗೆ ಮನೆಯಲ್ಲಿ ಜೀವನ ನಡೆಸುತ್ತಿದೇವೆ. ನನಗೆ ಕಣ್ಣು ಕಾಣವುದಿಲ್ಲ. ನನ್ನ ಹೆಂಡತಿ ಟೈಲರಿಂಗ್‌ ಕೆಲಸ ಮಾಡುತ್ತಿದ್ದಳು. ಅಲ್ಲಿ ಹೆಚ್ಚಿನ ಸಂಪಾ ದನೆ ಇರಲಿಲ್ಲ. ಅದರಲ್ಲಿ ಜೀವನ ನಡೆಸುತ್ತಿದ್ದೆವು. ಈಗ ಅಲ್ಲಿಯೂ ಕೆಲಸ ನಿಂತು ಹೋಗಿದೆ. ಜೀವನ ನಡೆಸುವುದೇ ಕಷ್ಟವಾಗಿದೆ. ಸರಕಾರ ಏನಾದರೂ ನೆರವು ನೀಡಬೇಕು ಎಂದು ಅಳಲು ತೋಡಿಕೊಂಡರು.

ರಮೇಶ್ ಎಂಬುವವರು ಮಾತನಾಡಿ, ನಾನು, ಚಿಲ್ಲರೆ ಅಂಗಡಿಯಲ್ಲಿ ಲೆಕ್ಕ ಬರೆದುಕೊಂಡು ಜೀವನ ಸಾಗಿಸುತ್ತಿದ್ದೆ. ಆದರೆ ಅಂಗಡಿ ಈಗ ತೆಗೆಯುತ್ತಿಲ್ಲ, ನನಗೆ ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದು, ಜೀವನ ನಡೆಸುವುದು ಕಷ್ಟವಾಗಿದೆ ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.

ಕೊರೋನ ಬಂದು ಸತ್ತರೂ ಪರವಾಗಿಲ್ಲ. ನಮ್ಮ ಮಕ್ಕಳು ಹಸಿವಿನಿಂದ ಸಾಯುವುದನ್ನು ನೋಡಲು ಆಗುವುದಿಲ್ಲ ಎಂದು ಮಿಕ್ಸಿ, ಕುಕ್ಕರ್ ರಿಪೇರಿ ಮಾಡುತ್ತಿದ್ದ ನಂಜನಗೂಡಿನ ಮುಹಮ್ಮದ್ ಯಾಸಿನ್ ಹೇಳಿದರು.

ನಾನು ಮೂರು ಚಕ್ರದ ಸ್ಕೂಟರ್‌ನಲ್ಲಿ ಊರೂರು ತಿರುಗಿ ಮಿಕ್ಸಿ, ಕುಕ್ಕರ್ ಸೇರಿದಂತೆ ಗೃಹಬಳಕೆ ವಸ್ತುಗಳ ರಿಪೇರಿ ಮಾಡುತ್ತಿದೆ. ಲಾಕ್‌ಡೌನ್ ನಿಂದಾಗಿ ಎಲ್ಲೂ ಹೋಗಲು ಆಗುತ್ತಿಲ್ಲ, ಮಕ್ಕಳಿಗೆ ಮೂರು ಹೊತ್ತು ಊಟವನ್ನು ಕೊಡಲು ಆಗುತ್ತಿಲ್ಲ, ಸರಕಾರ ನಮ್ಮಂತವರ ಬಗ್ಗೆ ಗಮನ ಹರಿಸಬೇಕು ಎಂದು ನಂಜನಗೂಡಿನ ಮುಹಮ್ಮದ್ ಯಾಸೀನ್ ಹೇಳಿದರು.

ಜಿಲ್ಲಾವಾರು ಅಂಗವಿಕಲರ ಸಂಖ್ಯೆ
ಮೈಸೂರು ತಾಲೂಕು 3,260, ಮೈಸೂರು ನಗರ 4 ಸಾವಿರ, ಎಚ್.ಡಿ.ಕೋಟೆ 2,880, ಹುಣಸೂರು 3,425, ಕೆ.ಆರ್.ನಗರ 4,459, ನಂಜನಗೂಡು 4,022, ಪಿರಿಯಾಪಟ್ಟಣ 3,118, ಟೀ.ನರಸೀಪುರ 4,520, ಸರಗೂರು 1,201 ಮಂದಿಯಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ ಒಟ್ಟು 30 ಸಾವಿರ ಮಂದಿ ಅಂಗವಿಕ ಲರಿದ್ದು, 22 ಸಾವಿರ ಮಂದಿಯ ಸರ್ವೆಯಷ್ಟೇ ಆಗಿದೆ. ಕೊರೋನ ಸಂಬಂಧ ಅಂಗವಿಕಲರಿಗಾಗಿ ಸರಕಾರದಿಂದ ಯಾವುದೇ ರೀತಿಯ ವಿಶೇಷ ಸೌಲಭ್ಯ ನೀಡಿಲ್ಲ. ಆದರೆ ಪ್ರತಿ ತಿಂಗಳು ಪಿಂಚಣಿ ನೀಡಲಾಗುತ್ತಿದೆ.
-ಮಾಲಿನಿ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ

Writer - ನೇರಳೆ ಸತೀಶ್ ಕುಮಾರ್

contributor

Editor - ನೇರಳೆ ಸತೀಶ್ ಕುಮಾರ್

contributor

Similar News