ಯಾಸ್ ಅಬ್ಬರಕ್ಕೆ ಒಡಿಶಾ, ಬಂಗಾಳ ತತ್ತರ
ಕಟಕ್, ಮೇ 27: ಗಂಟೆಗೆ 130-145 ಕಿಲೋಮೀಟರ್ ವೇಗದಲ್ಲಿ ದೇಶದ ಪೂರ್ವ ಕರಾವಳಿಯನ್ನು ಅಪ್ಪಳಿಸಿರುವ ಯಾಸ್ ಚಂಡಮಾರುತ ಒಡಿಶಾ ಕರಾವಳಿ ಪ್ರದೇಶದ ಜನಜೀವನವನ್ನು ಅಕ್ಷರಶಃ ಅಸ್ತವ್ಯಸ್ತಗೊಳಿಸಿದೆ. ಚಂಡಮಾರುತದ ಪರಿಣಾಮವಾಗಿ ಭಾರೀ ಮಳೆಯಾಗುತ್ತಿದ್ದು, ಹಲವು ಮನೆಗಳು ಮತ್ತು ಕೃಷಿಭೂಮಿಗೆ ಹಾನಿಯಾಗಿದೆ. ಒಡಿಶಾದಲ್ಲಿ ಮೂವರು ಹಾಗೂ ಬಂಗಾಳದಲ್ಲಿ ಒಬ್ಬರು ಜೀವ ಕಳೆದುಕೊಂಡಿದ್ದಾರೆ.
ಬುಧವಾರ ಬೆಳಗ್ಗೆ 9ರ ವೇಳೆಗೆ ಒಡಿಶಾದ ಧಮ್ರಾ ಬಂದರಿನ ಸಮೀಪ ಚಂಡಮಾರುತ ಅಪ್ಪಳಿಸಿದ್ದು, ಕರಾವಳಿಯಲ್ಲಿ ವ್ಯಾಪಕ ಮಳೆಯಾಗುತ್ತಿದೆ. ತಗ್ಗುಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದ್ದು, 20 ಲಕ್ಷಕ್ಕೂ ಹೆಚ್ಚು ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಬಂಗಾಳದಲ್ಲಿ ಈ ವಿಕೋಪದಿಂದ ಕನಿಷ್ಠ ಒಂದು ಕೋಟಿ ಮಂದಿ ಹಾನಿಗೀಡಾಗಿದ್ದಾರೆ ಎಂದು ಸರ್ಕಾರ ಹೇಳಿಕೆ ನೀಡಿದೆ. ಜಾರ್ಖಂಡ್ ರಾಜ್ಯದತ್ತ ಚಂಡಮಾರುತ ಮುಖ ಮಾಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮಯೂರಗಂಜ್ ಜಿಲ್ಲೆಯ ಸಿಮಿಲಿಪಾಲ್ ರಾಷ್ಟ್ರೀಯ ಉದ್ಯಾನವನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಬುದ್ಧಬಲಂಗ್ ನದಿಯಲ್ಲಿ ಪ್ರವಾಹ ಬಂದಿದೆ ಎಂದು ಪರಿಹಾರ ತಂಡದ ಮೂಲಗಳು ಹೇಳಿವೆ.
ಕಿಯೋಂಜರ್ ಮತ್ತು ಬಲಸೋರ್ ಜಿಲ್ಲೆಗಳಲ್ಲಿ ಮರ ಬಿದ್ದು ಇಬ್ಬರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಆದರೆ ಅಧಿಕಾರಿಗಳು ಇದನ್ನು ದೃಢಪಡಿಸಿಲ್ಲ. ಮಯೂರ್‌ಗಂಜ್‌ನಲ್ಲಿ ಮನೆಕುಸಿದು ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ.
ಕೇಂದ್ರಪಾರ ಮತ್ತು ಜಜ್‌ಪುರ ಜಿಲ್ಲೆಗಳಲ್ಲಿ ಕೇಬಲ್‌ಗಳು ಕೊಚ್ಚಿಕೊಂಡು ಹೋಗಿದ್ದು, ಸಂಪರ್ಕ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಒಡಿಶಾದಲ್ಲಿ 5.8 ಲಕ್ಷ ಮಂದಿಯನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರಿಸಲಾಗಿದ್ದು, ಪಶ್ಚಿಮ ಬಂಗಾಲದಲ್ಲಿ 15 ಲಕ್ಷ ಮಂದಿಯನ್ನು ಸ್ಥಳಾಂತರಿಸಲಾಗಿದೆ. ಈ ಮಧ್ಯೆ ಪರಿಹಾರ ಶಿಬಿರಗಳಲ್ಲಿ ಕೋವಿಡ್-19 ಸೋಂಕು ಭೀತಿ ಎದುರಾಗಿದೆ.
ರಾಜ್ಯದಲ್ಲಿ ವ್ಯಾಪಕ ಹಾನಿ ಸಂಭವಿಸಿದ್ದು, ಮೂರು ಲಕ್ಷ ಮನೆಗಳು ಮತ್ತು 134 ಮೋರಿಗಳಿಗೆ ಹಾನಿಯಾಗಿವೆ ಎಂದು ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.