ಪ್ರತಿಭಟನಾ ನಿರತ ರೈತರ ಕ್ಯಾಂಪ್ ಮೇಲೆ ದಾಳಿ ಕುರಿತು ಎಸ್ಐಟಿ ತನಿಖೆಗೆ ಮನವಿ
ಹೊಸದಿಲ್ಲಿ, ಮೇ 27: ಕೇಂದ್ರ ಸರಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧದ ಪ್ರತಿಭಟನೆ ಸಂದರ್ಭ ಹೊಸದಿಲ್ಲಿಯ ಹೊರವಲಯದಲ್ಲಿ ಕ್ಯಾಂಪ್ ಹಾಕಿದ್ದ ರೈತರ ಮೇಲೆ ಜನವರಿ 29ರಂದು ದಾಳಿ ನಡೆಸಿದ ಆರೋಪದ ಕುರಿತಂತೆ ವಿಶೇಷ ತನಿಖಾ ತಂಡ (ಎಸ್ಐಟಿ)ದಿಂದ ಸ್ವತಂತ್ರ ತನಿಖೆ ನಡೆಸುವಂತೆ ಕೋರಿ ಸಲ್ಲಿಸಿದ ಮನವಿಯ ಕುರಿತಂತೆ ದಿಲ್ಲಿ ನ್ಯಾಯಾಲಯ ಗುರುವಾರ ಕೇಂದ್ರ ಹಾಗೂ ದಿಲ್ಲಿ ಸರಕಾರದ ಪ್ರತಿಕ್ರಿಯೆ ಕೋರಿದೆ.
ಈ ಪ್ರದೇಶ ಯಾರ ವ್ಯಾಪ್ತಿಗೆ ಬರುತ್ತದೆ ಹಾಗೂ ಮನವಿ ಕುರಿತು ತಮ್ಮ ನಿಲುವು ಏನು ಎಂದು ಪ್ರಶ್ನಿಸಿ ನ್ಯಾಯಮೂರ್ತಿ ಮುಖ್ತಾ ಗುಪ್ತಾ ಗೃಹ ಸಚಿವಾಲಯ, ದಿಲ್ಲಿ ಸರಕಾರದ ಗೃಹ ಇಲಾಖೆ ಹಾಗೂ ಅಲಿಪುರ ಪೊಲೀಸ್ ಠಾಣೆಗೆ ನೋಟಿಸು ಜಾರಿ ಮಾಡಿದ್ದಾರೆ. ದಿಲ್ಲಿ ಹಾಗೂ ಹರ್ಯಾಣ ನಡುವಿನ ಸಿಂಗು ಗಡಿಯಲ್ಲಿ ರೈತರ ಕ್ಯಾಂಪ್ ಮೇಲೆ ಜನವರಿ 29ರಂದು ಅಲ್ಲಿ ನಿಯೋಜಿಸಲಾಗಿದ್ದ ಪೊಲೀಸ್ ಸಿಬ್ಬಂದಿ ನೆರವು ಹಾಗೂ ಮಾರ್ಗಸೂಚಿಯಲ್ಲಿ ಕೆಲವು ದುಷ್ಕರ್ಮಿಗಳು ದಾಳಿ ನಡೆಸಿದ್ದರು ಎಂದು ಮನವಿ ಪ್ರತಿಪಾದಿಸಿದೆ.
ದಾಳಿಗೆ ಸಂಬಂಧಿಸಿ ದುಷ್ಕರ್ಮಿಗಳು ಹಾಗೂ ತಪ್ಪೆಸಗಿದ ದಿಲ್ಲಿ ಪೊಲೀಸ್ನ ಪೊಲೀಸ್ ಅಧಿಕಾರಿಗಳ ವಿರುದ್ಧ ಅಲಿಪುರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿತ್ತು. ಆದರೆ, ಪೊಲೀಸರು ಇದುವರೆಗೆ ಎಫ್ಐಆರ್ ದಾಖಲಿಸಿಲ್ಲ ಎಂದು ಮನವಿ ಪ್ರತಿಪಾದಿಸಿದೆ. ಆರೋಪಿಗಳ ವಿರುದ್ಧ ಸೂಕ್ತ ತನಿಖೆ ನಡೆಸುವಂತೆ ಸಿಬಿಐ, ಸಿಜೆಐ, ರಾಷ್ಟ್ರೀಯ ಮಹಿಳಾ ಆಯೋಗ, ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ ಮನವಿ ಮಾಡಲಾಗಿತ್ತು. ಆದರೆ, ಇದುವರೆಗೆ ಯಾರೂ ಕೂಡ ಕ್ರಮ ಕೈಗೊಂಡಿಲ್ಲ ಎಂದು ಮನವಿ ಹೇಳಿದೆ. ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಎಸ್ಐಟಿಯಿಂದ ಸ್ವತಂತ್ರ ತನಿಖೆಯ ಹೊರತಾಗಿ ಪೊಲೀಸರು ಕ್ಯಾಮೆರಾ ದಾಖಲಿಸಿದ ಪ್ರತಿಭಟನಾ ಸ್ಥಳದ ಘಟನೆಯ ವೀಡಿಯೊ ತುಣುಕನ್ನು ಸಂರಕ್ಷಿಸಿ ಇರಿಸುವಂತೆ ಕೂಡಾ ಮನವಿ ಆಗ್ರಹಿಸಿದೆ.