ಕೋವಿಡ್ ಕೋಟ್ಯಧಿಪತಿಗಳು ಮತ್ತು ವ್ಯಾಕ್ಸಿನ್ ವರ್ಣಭೇದ

Update: 2021-06-01 19:30 GMT

ಹಾಗೆ ನೋಡಿದರೆ ಹೊಸದಾಗಿ ವ್ಯಾಕ್ಸಿನ್ ಬಿಲಿಯನೇರ್‌ಗಳಾದ ಒಂಭತ್ತು ಬಿಲಿಯಾಧೀಶರು ಕಳೆದ ವರ್ಷ ಮಾತ್ರ ಮಾಡಿರುವ ಲಾಭದಲ್ಲಿ ಬಡದೇಶಗಳ ಒಟ್ಟಾರೆ 77 ಕೋಟಿ ಜನರಿಗೆ ಎರಡೆರಡು ಬಾರಿ ವ್ಯಾಕ್ಸಿನ್ ಹಾಕಬಹುದು. ಹಾಗೆಯೇ ಈಗಾಗಲೇ ಔಷಧ ಉದ್ಯಮದಲ್ಲಿರುವ ಮೇಲಿನ 8 ಕಂಪೆನಿಗಳು ಹೋದ ವರ್ಷ ಮಾತ್ರ ಮಾಡಿರುವ ಲಾಭದಲ್ಲಿ ಭಾರತದ ಪ್ರತಿಯೊಬ್ಬರಿಗೂ 1.6 ಬಾರಿ ವ್ಯಾಕ್ಸಿನ್ ಹಾಕಬಹುದು...ಎಲ್ಲಾ ಇದೆ...ಆದರೆ ಯಾವುದೂ ಸಿಗುವುದಿಲ್ಲ.


ಕೆಳಗಿನ ಪಟ್ಟಿಯನ್ನು ನೋಡಿ:
 ಈ ಒಂಭತ್ತು ಕೋವಿಡ್ ಉದ್ಯಮಿಗಳು ಕೋವಿಡ್ ವರ್ಷದಲ್ಲಿ ಹುಟ್ಟಿಕೊಂಡ ಜಗತ್ತಿನ ಹೊಸ ಬಿಲಿಯನೇರ್‌ಗಳು(ಶತಕೋಟ್ಯಧಿಪತಿಗಳು)..
ಮೊಡೆರ್ನಾ ವ್ಯಾಕ್ಸಿನ್ ಉತ್ಪಾದಿಸುವ ಕಂಪೆನಿಯ ಮುಖ್ಯಸ್ಥ ಸ್ಟೀಫನ್ ಬಾನ್ಸೆಲ್‌ರ 2020-21ನೇ ಸಾಲಿನ ಆದಾಯ- 4.3 ಬಿಲಿಯನ್ ಡಾಲರುಗಳು. (ಒಂದು ಬಿಲಿಯನ್=100 ಕೋಟಿ ರೂ. ಡಾಲರ್‌ಗೆ ಸರಾಸರಿ 75 ರೂ. ಎಂದಿಟ್ಟುಕೊಂಡರೂ 32,250 ಕೋಟಿ ರೂಪಾಯಿಗಳು ಮಾತ್ರ! )
ಮತ್ತೊಂದು ಕೋವಿಡ್ ವ್ಯಾಕ್ಸಿನ್ ಫೈಝರ್‌ನ ಪೇಟೆಂಟ್ ಪಡೆದಿರುವ ಜರ್ಮನಿಯ BioNTechನ ಸಹ ಸಂಸ್ಥಾಪಕ ಊಗುರ್ ಸಹೀನ್- ಕಳೆದ ವರ್ಷದ ಆದಾಯ 4 ಬಿಲಿಯನ್ ಡಾಲರುಗಳು.
 ಮೊಡೆರ್ನಾ ಸಂಸ್ಥಾಪಕ ಹೂಡಿಕೆದಾರ ತಿಮೋತಿ ಸ್ಪ್ರಿಂಗರ್-2.2 ಬಿಲಿಯನ್ ಡಾಲರುಗಳು. ಮೊಡೆರ್ನಾ ಮುಖ್ಯಸ್ಥ ನೌಬರ್ ಆಫಯಾನ್-1.9 ಬಿಲಿಯನ್ ಡಾಲರುಗಳು. ಮೊಡೆರ್ನಾ ಉತ್ಪಾದನೆ ಮತ್ತು ಪ್ಯಾಕೇಜಿಂಗ್ ವ್ಯವಹಾರದ ಅಧ್ಯಕ್ಷ ಲೋಪೆಜ್ ಬೆಲ್ಮೋನ್ಟೆ- 1.8 ಬಿಲಿಯನ್ ಡಾಲರುಗಳು. ಮೊಡೆರ್ನಾ ಸಹಸಂಸ್ಥಾಪಕ ರಾಬರ್ಟ್ ಲ್ಯಾಂಗರ್- 1.6 ಬಿಲಿಯನ್ ಡಾಲರುಗಳು.
ಮತ್ತೊಂದು ವ್ಯಾಕ್ಸಿನ್ ಕಂಪೆನಿಯಾದ CanSino Biologicsನ ಮುಖ್ಯ ವಿಜ್ಞಾನಿ ಜು ತಾವೋ- 1.3 ಬಿಲಿಯನ್ ಡಾಲರುಗಳು. ಇದರ ಸಹಸಂಸ್ಥಾಪಕ ಕ್ಯೂ ಡಾಂಗ್ ಶು -1.2 ಬಿಲಿಯನ್ ಡಾಲರುಗಳು. ಇದರ ಸಹ ಸಂಸ್ಥಾಪಕ ಮವೋ ಹುಯ್ ಹುವಾ -1 ಬಿಲಿಯನ್ ಡಾಲರುಗಳು.

ಒಂಭತ್ತು ಕೋಟ್ಯಧಿಪತಿಗಳ ಕಳೆದ ವರ್ಷದ ಒಟ್ಟು ಆದಾಯ 19.3 ಬಿಲಿಯನ್ ಡಾಲರುಗಳು. ಅಂದರೆ 1.5 ಲಕ್ಷ ಕೋಟಿ ರೂಪಾಯಿಗಳು! ಹಾಗೆಯೇ, ಈಗಾಗಲೇ ವ್ಯಾಕ್ಸಿನ್ ಹಾಗೂ ಔಷಧ ಉದ್ಯಮಗಳಲ್ಲಿರುವ: -ಫೈಝರ್ ವ್ಯಾಕ್ಸಿನ್ ಉತ್ಪಾದನೆ ಮಾಡುವ ಜರ್ಮನಿಯ BioNTech -ಚೀನಾದ Zhifei Biological products ಮತ್ತು ಸಿನೋಫಾರ್ಮಾ, ಭಾರತದ ‘ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ’, ‘ಕ್ಯಾಡಿಲಾ ಹೆಲ್ತ್ ಕೇರ್’ಗಳಂತಹ 8 ಔಷಧ ಕಂಪೆನಿಗಳು ಕಳೆದ ಒಂದು ವರ್ಷದಲ್ಲಿ ಮಾಡಿರುವ ಲಾಭ 32 ಬಿಲಿಯನ್ ಡಾಲರುಗಳು ಅಂದರೆ 2.4 ಲಕ್ಷ ಕೋಟಿ ರೂಪಾಯಿಗಳು. -ಇದರಲ್ಲಿ ಭಾರತದ ಸೀರಂ ಇನ್‌ಸ್ಟಿಟ್ಯೂಟ್‌ನ ಆಧಾರ್ ಪೂನಾವಾಲಾರ ಆದಾಯ 2020ರಲ್ಲಿ 8.2 ಬಿಲಿಯನ್ ಡಾಲರ್ ಇದ್ದದ್ದು 2021ರಲ್ಲಿ ಕೇವಲ ಕೋವಿಡ್ ವ್ಯವಹಾರದ ಮೂಲಕ 12.7 ಬಿಲಿಯನ್ ಡಾಲರ್(1 ಲಕ್ಷ ಕೋಟಿ ರೂ.)ಗಳಿಗೇರಿತು. ಅಂದರೆ ಶೇ. 54ರಷ್ಟು ಏರಿಕೆ! ಹಾಗೆಯೇ ‘ಕ್ಯಾಡಿಲಾ ಹೆಲ್ತ್ ಕೇರ್’ನ ಪಂಕಜ್ ಪಟೇಲನ ಆದಾಯ 2020ರಲ್ಲಿ ಕೇವಲ 3 ಬಿಲಿಯನ್ ಡಾಲರ್ ಇದ್ದದ್ದು 2021ರಲ್ಲಿ 5 ಬಿಲಿಯನ್ ಡಾಲರ್‌ಗೇರಿತು..

ಕೋವಿಡ್ ಕೋಟ್ಯಧಿಪತಿಗಳು ಮತ್ತು ಪೇಟೆಂಟ್ ಅಕ್ಟೋಪಸ್
ಇವೆಲ್ಲವೂ ವ್ಯಾಕ್ಸಿನ್ ಕಂಡುಹಿಡಿದ ಮೇಲೆ ಲಸಿಕೆ ಮಾರುಕಟ್ಟೆ ತಂದುಕೊಡುತ್ತಿರುವ ಲಾಭ. ಏಕೆಂದರೆ ಲಸಿಕೆ ಕಂಡು ಹಿಡಿದ ಮೇಲೆ ಈ ಕಂಪೆನಿಗಳು ಡಬ್ಲೂಟಿಒ(ವಿಶ್ವ ವ್ಯಾಪಾರ ಸಂಸ್ಥೆ)ಯಡಿಯ ಕರಾರಾಗಿರುವ TRIPS (Trade Related Intellectual Property Rights) ನಡಿ ತಮ್ಮ ಉತ್ಪನ್ನಗಳ ವಿಶ್ವ ಏಕಸ್ವಾಮ್ಯ (ಪೇಟೆಂಟ್), ವಿಶ್ವ ಮಾರಾಟ ಹಾಗೂ ತಮಗಿಷ್ಟ ಬಂದಂತೆ ದರ ನಿಗದಿ ಮಾಡುವ ಏಕಸ್ವಾಮ್ಯವನ್ನು ಪಡೆದುಕೊಳ್ಳುತ್ತವೆ. ಇದರಿಂದಾಗಿ ಜಗತ್ತು ಎಂತಹ ವೈದ್ಯಕೀಯ ತುರ್ತನ್ನು ಎದುರಿಸಿದರೂ, ಯಾವುದೇ ಜೀವನಾವಶ್ಯಕ ಔಷಧಿಗಳು ಬೇಕಾಗಿದ್ದರೂ ಈ ಬಹುರಾಷ್ಟ್ರೀಯ ಔಷಧ ಕಂಪೆನಿಗಳೆದುರು ಕೈಚಾಚಿ ನಿಲ್ಲಬೇಕಾಗುತ್ತದೆ. ಇಂದು ಕೋವಿಡ್ ವ್ಯಾಕ್ಸಿನ್ ಉತ್ಪಾದನೆಯು ಫೈಝರ್, ಮೊಡೆರ್ನಾ, ಜಾನ್ಸನ್ ಆ್ಯಂಡ್ ಜಾನ್ಸನ್, ಆ್ಯಸ್ಟ್ರಝೆನೆಕ, ಸಿನೋಫಾರ್ಮಾ ಸ್ಪುಟ್ನಿಕ್‌ಗಳಂತಹ ಆರೇಳು ಬಹುರಾಷ್ಟ್ರೀಯ ಕಂಪೆನಿಗಳ ಏಕಸ್ವಾಮ್ಯದಲ್ಲಿವೆ. ಜಗತ್ತಿನಾದ್ಯಂತ ಈಗಾಗಲೇ 17 ಕೋಟಿ ಜನರಿಗೆ ಸೋಂಕು ತಗಲಿದ್ದರೂ, 37 ಲಕ್ಷಕ್ಕೂ ಹೆಚ್ಚು ಜನ ಸತ್ತಿದ್ದರೂ, ಈ ಕಂಪೆನಿಗಳು ತಮ್ಮ ಏಕಸ್ವಾಮ್ಯವನ್ನು ಸಡಿಲಿಸಲು ಮಾನವಕೋಟಿಯನ್ನು ಉಳಿಸಲೂ ಮುಂದಾಗುತ್ತಿಲ್ಲ.

ಹಣ ಮತ್ತು ಜ್ಞಾನ ಜನರದ್ದು-ಲಾಭ ಮಾತ್ರ ವ್ಯಾಕ್ಸಿನ್ ಕಂಪೆನಿಗಳದ್ದು! 
ಏಕೆಂದರೆ ಈ ಕಂಪೆನಿಗಳ ಪ್ರಕಾರ ವ್ಯಾಕ್ಸಿನ್ ಅನ್ವೇಷಣೆಗೆ ಹಾಗೂ ಉತ್ಪಾದನೆಗೆ ದೊಡ್ಡ ಪ್ರಮಾಣದ ಹೂಡಿಕೆಯನ್ನು ಮಾಡಿರುವುದರಿಂದ ಅದರ ಲಾಭ ಪಡೆದುಕೊಳ್ಳುವುದು ಅವರ ಹಕ್ಕು ಹಾಗೂ ಈ ಮುಂದೆಯೂ ಹೊಸ ಹೊಸ ವ್ಯಾಕ್ಸಿನ್‌ಗಳನ್ನು ಕಂಡುಹಿಡಿಯಬೇಕೆಂದರೂ ಈ ಲಾಭದ ಉತ್ತೇಜನ ಇಲ್ಲದಿದ್ದರೆ ಹೂಡಿಕೆ ಮಾಡಲು ಯಾರೂ ಮುಂದೆ ಬರಲಾರರು ಎನ್ನುವುದು.

ಆದರೆ ಇದು ನಿಜವೇ? ಈ ಕಂಪೆನಿಗಳು ಸ್ವಂತ ದುಡ್ಡಿನಿಂದ ವ್ಯಾಕ್ಸಿನ್ ಅನ್ವೇಷಣೆ ಹಾಗೂ ಉತ್ಪಾದನೆ ಮಾಡುತ್ತಿವೆಯೇ? ಖಂಡಿತಾ ಇಲ್ಲ. ಉದಾಹರಣೆಗೆ,
ಕಳೆದ ವರ್ಷದಿಂದ ಕೇವಲ ವ್ಯಾಕ್ಸಿನ್ ವ್ಯಾಪಾರದಿಂದಲೇ ಬಿಲಿಯನೇರ್‌ಗಳಾದ ಮೊಡೆರ್ನಾ ಕಂಪೆನಿ ವ್ಯಾಕ್ಸಿನ್ ಕಂಡುಹಿಡಿಯಲು ಅಮೆರಿಕ ಸರಕಾರ 2.5 ಬಿಲಿಯನ್ ಡಾಲರ್ ಹಣವನ್ನು ಹೂಡಿಕೆ ಮಾಡಿತ್ತು. ಮಾತ್ರವಲ್ಲದೆ ಅದರ ಶೇ. 70ರಷ್ಟು ಉತ್ಪನ್ನಗಳಿಗೆ ಅದು ನಿಗದಿ ಪಡಿಸಿದ ಬೆಲೆಗೆ ಮುಂಗಡವಾದ ಹಾಗೂ ಖಾತರಿಯಾದ ಮಾರುಕಟ್ಟೆಯನ್ನು ಖಾತರಿ ಪಡಿಸಿತ್ತು. ಹೀಗಾಗಿ ಅಮೆರಿಕದ ಜನರ ದುಡ್ಡಿನಿಂದ ವ್ಯಾಕ್ಸಿನ್ ಕಂಡು ಹಿಡಿದ ಈ ಮೊಡೆರ್ನಾ ಕಂಪೆನಿ ಈಗ ವ್ಯಾಕ್ಸಿನ್ ತನ್ನದೇ ಆಸ್ತಿ ಎಂದು ಜಗತ್ತನ್ನು ಸುಲಿಯುತ್ತಿದೆ.
ಫೈಝರ್ ವ್ಯಾಕ್ಸಿನ್ ಕಂಡುಹಿಡಿಯಲು ಅಮೆರಿಕ ಸರಕಾರ 450 ಮಿಲಿಯನ್ ಡಾಲರುಗಳನ್ನು ಹಾಗೂ ಮುಂಗಡ ಮಾರುಕಟ್ಟೆಯನ್ನು ನೀಡಿತ್ತು.
ಚೀನಾದ ಎಲ್ಲಾ ಕಂಪೆನಿಗಳ ಉತ್ಪನ್ನಗಳಿಗೂ ಚೀನಾ ಸರಕಾರದ ಅರ್ಥಾತ್ ಜನರ ತೆರಿಗೆ ಹಣದ ಹೂಡಿಕೆಯಿತ್ತು.
ಭಾರತದಲ್ಲಿ ಕೋವಿಶೀಲ್ಡ್ ಲಸಿಕೆ ಉತ್ಪಾದಿಸುವ ‘ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ’ ಇಂಗ್ಲೆಂಡಿನ ‘ಆ್ಯಸ್ಟ್ರಝೆನೆಕ’ ಎಂಬ ಔಷಧ ಕಂಪೆನಿಯ ತಂತ್ರಜ್ಞಾನದ ಒಡಂಬಡಿಕೆಯೊಂದಿಗೆ ಉತ್ಪಾದಿಸುತ್ತದೆ. ಹಾಗೂ ಆಸ್ಟ್ರಝೆನೆಕ ಕಂಪೆನಿ ತನ್ನ ಮೂಲವಿಜ್ಞಾನ ಹಾಗೂ ತಂತ್ರಜ್ಞಾನವನ್ನು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಿಂದ ಪಡೆದುಕೊಳ್ಳುತ್ತದೆ ಹಾಗೂ ಅದರ ಉತ್ಪಾದನೆಗೆ ಇಂಗ್ಲೆಂಡಿನ ಸರಕಾರ ಅಲ್ಲಿನ ಜನರ ತೆರಿಗೆ ಹಣವನ್ನು ನೀಡಿದೆ.

ಹೀಗಾಗಿ ಕೋವಿಶೀಲ್ಡ್ ವ್ಯಾಕ್ಸಿನ್‌ನ ವಿಜ್ಞಾನ ಹಾಗೂ ತಂತ್ರಜ್ಞಾನ ಅನ್ವೇಷಣೆಗೆ ‘ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ’ ಒಂದು ಫೈಸಾ ಖರ್ಚು ಮಾಡಿಲ್ಲ. ಅಷ್ಟು ಮಾತ್ರವಲ್ಲ, ವ್ಯಾಕ್ಸಿನ್ ಉತ್ಪಾದನೆಗೆ GAVI ಸಂಸ್ಥೆ ಕಳೆದ ವರ್ಷ ಜೂನ್ ತಿಂಗಳಲ್ಲೇ ಸೀರಂ ಇನ್‌ಸ್ಟಿಟ್ಯೂಟ್‌ಗೆ 3,000 ಕೋಟಿ ರೂ. ಧನಸಹಾಯ ಮಾಡಿತ್ತು. ಕಳೆದ ಮಾರ್ಚ್‌ನಲ್ಲಿ ಭಾರತ ಸರಕಾರವೂ ಭಾರತದ ತೆರಿಗೆದಾರ ಹಣದಿಂದ 3,500 ಕೋಟಿ ರೂ. ಧನ ಸಹಾಯ ಮಾಡಿತ್ತು.

ಆದರೂ ಒಂದು ವ್ಯಾಕ್ಸಿನ್ ಡೋಸಿಗೆ 150 ರೂ. ದರ ನಿಗದಿ ಮಾಡಿದರೂ ತನಗೆ ಲಾಭವಿದೆ ಎಂದು ಒಪ್ಪಿಕೊಳ್ಳುವ ಈ ಸಂಸ್ಥೆಯ ಮಾಲಕ ಸೂಪರ್ ಫ್ರಾಫಿಟ್‌ಗಾಗಿ ಒಂದು ವ್ಯಾಕ್ಸಿನ್‌ಗೆ 300ರಿಂದ 1,200 ರೂ. ನಿಗದಿ ಮಾಡಿದ್ದಾರೆ.

ಹಾಗೆಯೇ ಕೋವ್ಯಾಕ್ಸಿನ್ ಉತ್ಪಾದನೆ ಮಾಡುವ ‘ಭಾರತ್ ಬಯೋಟೆಕ್’ ಸಂಸ್ಥೆಯ ವಿಜ್ಞಾನ ಹಾಗೂ ತಂತ್ರಜ್ಞಾನಗಳೆಲ್ಲಾ ಭಾರತ ಸರಕಾರದ ಐಸಿಎಂಆರ್‌ನದ್ದು ಹಾಗೂ ಅದರ ಉತ್ಪಾದನೆಗೆ ಭಾರತ ಸರಕಾರ 1,500 ಕೋಟಿ ರೂ. ತೆರಿಗೆ ದುಡ್ಡನ್ನು ನೀಡಿದೆ. ಆದರೂ ಈ ಸಂಸ್ಥೆ ವ್ಯಾಕ್ಸಿನ್‌ಗೆ 600ರಿಂದ 1,200 ರೂ. ಬೆಲೆ ನಿಗದಿ ಮಾಡಿ ಜನರನ್ನು ಸುಲಿಯ ಹೊರಟಿದೆ. ಹೀಗೆ ಜಗತ್ತಿನಲ್ಲಿ ಎಲ್ಲಾ ಕಡೆ ಈ ಔಷಧ ಕಂಪೆನಿಗಳು ಜನರ ತೆರಿಗೆ ಹಣ ಹಾಗೂ ಸಾರ್ವಜನಿಕ ಸಂಸ್ಥೆಗಳ ವಿಜ್ಞಾನ-ತಂತ್ರಜ್ಞಾನಗಳಿಂದ ಔಷಧ, ವ್ಯಾಕ್ಸಿನ್ ಉತ್ಪಾದನೆ ಮಾಡುತ್ತಿವೆೆಯೇ ವಿನಾ ಅವರ ಸ್ವಂತ ಹೂಡಿಕೆ ಏನಿಲ್ಲ. ಆದರೂ ‘ಡಬ್ಲೂಟಿಒ’ ಅಡಿಯಲ್ಲಿ TRIPS -ಬಂಡವಾಳಶಾಹಿ ಬೌದ್ಧಿಕ ಮಾರುಕಟ್ಟೆ ನೀತಿಗಳನ್ನು ಬಳಸಿಕೊಂಡು ಈ ಕಂಪೆನಿಗಳು ಸಾರ್ವಜನಿಕರ ದುಡ್ಡು, ಪ್ರಾಣ ಮತ್ತು ಜ್ಞಾನಗಳ ಮೂಲಕ ಕಂಡುಹಿಡಿದ ವ್ಯಾಕ್ಸಿನ್ ಅನ್ನು ಉತ್ಪಾದನಾ ವೆಚ್ಚಕ್ಕಿಂತ ಹತ್ತಾರು ಪಟ್ಟು ಹೆಚ್ಚಿನ ಬೆಲೆಗೆ ಮಾರಿಕೊಂಡು ಲಾಭ ಸೂರೆ ಹೊಡೆಯುತ್ತಿವೆೆ.

ವ್ಯಾಕ್ಸಿನ್ ವರ್ಣಭೇದ ಮತ್ತು ವರ್ಗಭೇದ
ಈ TRIPS ಅಡಿಯಲ್ಲಿ ಕಾರ್ಪೊರೇಟ್ ಕಂಪೆನಿಗಳು ಲಾಭಕ್ಕಾಗಿಯೇ ವ್ಯಾಕ್ಸಿನ್ ಉತ್ಪಾದಿಸುವುದರಿಂದ ಅದಕ್ಕೆ ಹೆಚ್ಚು ಎಲ್ಲಿ ಮಾರುಕಟ್ಟೆ ಇರುತ್ತದೋ ಅಲ್ಲಿಗೆ ಲಸಿಕೆ ಸರಬರಾಜಾಗುತ್ತದೆಯೇ ವಿನಾ ಎಲ್ಲಿ ಆರೋಗ್ಯ ತುರ್ತಿದೆಯೋ ಆ ಕಡೆಗಲ್ಲ. ಏಕೆಂದರೆ ಅದೇ ಬಂಡವಾಳಶಾಹಿ ಮಾರುಕಟ್ಟೆ ನಿಯಮವಾಗಿದೆ. ಹೀಗಾಗಿಯೇ ಎಪ್ರಿಲ್ ಕೊನೆಯವರೆಗೆ ಜಗತ್ತಿನಲ್ಲಿ 140 ಕೋಟಿ ಡೋಸುಗಳಷ್ಟು ಲಸಿಕೆಯನ್ನು ಈ ಕಂಪೆನಿಗಳು ಉತ್ಪಾದಿಸಿದ್ದರೂ ಅದರಲ್ಲಿ ಶೇ. 90 ಭಾಗವನ್ನು ಮಾರಿಕೊಂಡಿದ್ದಾರೆ.

ಹೀಗಾಗಿ ಒಂದೆಡೆ ಅಮೆರಿಕ, ಕೆನಡ, ಐರೋಪ್ಯ ದೇಶಗಳಲ್ಲಿನ ಜನಸಂಖ್ಯೆಗೆ ಆಗಿ ಮಿಗುವಷ್ಟು ವ್ಯಾಕ್ಸಿನ್ ದಾಸ್ತಾನು ಸಂಗ್ರಹವಾಗಿದ್ದರೆ ಮತ್ತೊಂದೆಡೆ ಇಷ್ಟು ದುಬಾರಿ ಬೆಲೆಯಲ್ಲಿ ಕೊಂಡುಕೊಳ್ಳಲಾಗದ, ಅಂದಾಜು 130 ಕೋಟಿ ಜನಸಂಖ್ಯೆ ಇರುವ ಇಡೀ ಆಫ್ರಿಕಾ ಖಂಡಕ್ಕೆ ಈವರೆಗೆ ಸರಬರಾಜಾಗಿರುವುದು ಕೇವಲ 26 ಲಕ್ಷ ವ್ಯಾಕ್ಸಿನ್‌ಗಳು ಮಾತ್ರ!. ಒಟ್ಟಾರೆ ಏಶ್ಯ ಹಾಗೂ ಲ್ಯಾಟಿನ್‌ಅಮೆರಿಕದ 77 ಕೋಟಿ ಜನಸಂಖ್ಯೆ ಇರುವ ನೂರಕ್ಕೂ ಹೆಚ್ಚು ಬಡದೇಶಗಳಿಗೆ ಈವರೆಗೆ ಕೇವಲ 1 ಕೋಟಿ ವ್ಯಾಕ್ಸಿನ್ ಕೂಡಾ ಸಿಕ್ಕಿಲ್ಲ.

 ಪರಿಣಾಮವಾಗಿ ಅಮೆರಿಕ ಹಾಗೂ ಐರೋಪ್ಯ ದೇಶಗಳು, ಏಶ್ಯ ಖಂಡದ ಜಪಾನ್, ಸಿಂಗಾಪುರ, ಹಾಂಕಾಂಗ್‌ನಂತಹ ಶ್ರೀಮಂತ ದೇಶಗಳು ಮತ್ತು ಚೀನಾ 2021ರ ವೇಳೆಗೆ ತಮ್ಮ ದೇಶದ ಎಲ್ಲಾ ಜನರಿಗೂ ವ್ಯಾಕ್ಸಿನ್ ಹಾಕಿಸಿ ತಮ್ಮ ದೇಶಗಳನ್ನು ಕೋವಿಡ್ ಮುಕ್ತ ಮಾಡಿಕೊಳ್ಳಬಹುದು. ಈ ವ್ಯಾಕ್ಸಿನ್ ವಿತರಣೆಯಲ್ಲಿನ ವರ್ಗಭೇದ ಮತ್ತು ವರ್ಣಭೇದ ನೀತಿಗಳಿಂದಾಗಿ ಭಾರತ, ಬ್ರೆಝಿಲ್, ದ.ಆಫ್ರಿಕಾದಂತಹ ದೇಶಗಳು 2022ರ ಅಂತ್ಯದವರೆಗೂ ಲಸಿಕೀಕರಣ ಮುಗಿಸಿರುವುದಿಲ್ಲ. ಇನ್ನು ಆಫ್ರಿಕಾ ದೇಶಗಳಂತೂ 2023ರ ತನಕ ಕೋವಿಡ್ ಬಾಧೆಯಲ್ಲಿ ನರಳುವಂತಾಗುತ್ತದೆ.

ಸಾರ್ವಜನಿಕ ಆರೋಗ್ಯವನ್ನು ಮಾರುಕಟ್ಟೆ ಶಕ್ತಿಗಳಿಗೆ ಒಪ್ಪಿಸಿದಲ್ಲಿ ಆಗುವ ಅನಾಹುತವಿದು. ಸಾರ್ವಜನಿಕ ಆರೋಗ್ಯ ಅದರಲ್ಲೂ ಸಾಂಕ್ರಾಮಿಕದಂತಹ ಕಾಯಿಲೆಗಳ ಸಂದರ್ಭದಲ್ಲಿ ವ್ಯಾಕ್ಸಿನ್‌ಗಳು ಕೇವಲ ಮಾರುಕಟ್ಟೆ ಸರಕುಗಳಲ್ಲ. ಅವು ಒಂದು Public Good.. ಅಂದರೆ ಎಲ್ಲರಿಗೂ ಸಮಾನವಾಗಿ ದಕ್ಕಿದರೆ ಮಾತ್ರ ಎಲ್ಲರ ಕಲ್ಯಾಣವಾಗುತ್ತದೆ. ದುಡ್ಡಿದ್ದವರಿಗೆ ಮಾತ್ರ ಸಿಕ್ಕಿ ಉಳಿದವರಿಗೆ ಸಿಗಲಿಲ್ಲವೆಂದರೆ ಹಣವಂತರ ಆರ್ಥಿಕತೆಯ ಆರೋಗ್ಯವು ಕೂಡಾ ಬಿಗಡಾಯಿಸುತ್ತದೆ. ಏಕೆಂದರೆ ಜಾಗತಿಕ ಸಾಂಕ್ರಾಮಿಕ ಸಂದರ್ಭಗಳಲ್ಲಿ: ಎಲ್ಲರೂ ಬಚಾವಾಗದ ಹೊರತು ಯಾರೊಬ್ಬರೂ ಬಚಾವಾಗಲಾರರು.

ಕಂಪೆನಿಗಳ ಲಾಭಾಂತರ ಮತ್ತು ವೈರಸ್‌ನ ರೂಪಾಂತರ
ಆದರೆ ಸಾಂಕ್ರಾಮಿಕದ ನಿರ್ವಹಣೆಯ ಉಸ್ತುವಾರಿಯನ್ನು ಬಂಡವಾಳಶಾಹಿ ಶಕ್ತಿಗಳಿಗೆ ಮತ್ತು ಮಾರುಕಟ್ಟೆ ನಿಯಮಗಳಿಗೆ ಒಪ್ಪಿಸಿದರೆ ತಾತ್ಕಾಲಿಕವಾಗಿ ಕೆಲವು ಕಂಪೆನಿಗಳು ಲಾಭ ಮಾಡಿಕೊಂಡರೂ, ಒಟ್ಟಾರೆ ಜಗತ್ತಿನ ಆರ್ಥಿಕತೆಗೆ ಆಗುವ ನಷ್ಟ ಅದಕ್ಕಿಂತ ಹಲವು ಪಟ್ಟು ಹೆಚ್ಚಾಗಿರುತ್ತದೆ. ಜೊತೆಗೆ ಸಾಂಕ್ರಾಮಿಕವು ಪುನರಾವರ್ತನೆಯಾಗುತ್ತಲೇ ಇರುತ್ತದೆ. ಏಕೆಂದರೆ ಎಲ್ಲಿಯತನಕ ಜಗತ್ತಿನ ಎಲ್ಲರೂ ವ್ಯಾಕ್ಸಿನ್ ಪಡೆದುಕೊಂಡು ಕೋವಿಡ್ ಮುಕ್ತರಾಗುವುದಿಲ್ಲವೋ ಅಲ್ಲಿಯತನಕ ವ್ಯಾಕ್ಸಿನ್ ಪಡೆದುಕೊಂಡ ಶ್ರೀಮಂತ ದೇಶಗಳು ಸಹ ಕೋವಿಡ್ ಅಲೆಗಳಿಂದ ಸಂಪೂರ್ಣವಾಗಿ ಮುಕ್ತವಾಗಲು ಸಾಧ್ಯವಿಲ್ಲ. ಅದರಲ್ಲೂ ಜಾಗತೀಕರಣದ ಈ ಕಾಲಘಟ್ಟದಲ್ಲಿ ಅದು ಸಾಧ್ಯವೇ ಇಲ್ಲ. ಏಕೆಂದರೆ ಜಗತ್ತಿನ ಯಾವುದೇ ಒಂದು ದೇಶದಲ್ಲಿ ಮಾಡುವ ಅರೆಬರೆ ವ್ಯಾಕ್ಸಿನೀಕರಣದಿಂದ ಇಡೀ ಜಗತ್ತೇ ವ್ಯಾಕ್ಸಿನ್ ನಿರೋಧಕ ಶಕ್ತಿ ಪಡೆದುಕೊಂಡ ಹೊಸ ವೈರಸ್ ದಾಳಿಗೆ ತುತ್ತಾಗುತ್ತದೆ. ಏಕೆಂದರೆ ಸಂಪೂರ್ಣ ವ್ಯಾಕ್ಸಿನೀಕರಣವಾಗದೆ, ಜನಸಂಖ್ಯೆಯ ಒಂದು ವರ್ಗಕ್ಕೆ ಮಾತ್ರ ವ್ಯಾಕ್ಸಿನ್ ಕೊಟ್ಟಿದ್ದರೆ ಅಥವಾ ಒಂದು ವ್ಯಾಕ್ಸಿನ್ ಮಾತ್ರ ಕೊಟ್ಟಿದ್ದರೆ, ಆ ಸಮುದಾಯದಲ್ಲಿ ಕೊರೋನವನ್ನು ಸಂಪೂರ್ಣವಾಗಿ ಹೊಡೆದಟ್ಟುವ ಪ್ರತಿರೋಧ ಸೃಷ್ಟಿಯಾಗದಿರಬಹುದು. ಆಗ ಕೊರೋನ ವೈರಸ್ ವ್ಯಾಕ್ಸಿನ್ ನಿರೋಧಕ ಶಕ್ತಿಯನ್ನು ಸಂಚಯಿಸಿಕೊಂಡು ಹೊಸ ವೈರಸ್ಸಾಗಿ ರೂಪಾಂತರಗೊಂಡು ಹೊಸದಾಗಿ ಹರಡಲು ಪ್ರಾರಂಭಿಸಬಹುದು. ಆ ರೀತಿ ಮ್ಯುಟೆಂಟಾದ ಹೊಸ ಕೊರೋನ ವೈರಸನ್ನು ಈಗಾಗಲೇ ಹಾಕಿಸಿಕೊಂಡಿರುವ ವ್ಯಾಕ್ಸಿನ್‌ಗಳಿಂದ ತಡೆಗಟ್ಟಲು ಆಗುವುದಿಲ್ಲ. ಆದ್ದರಿಂದ ಅದು ಈಗಾಗಲೇ ವ್ಯಾಕ್ಸಿನ್ ಪಡೆದುಕೊಂಡಿರುವ ದೇಶಗಳ ಜನರಿಗೂ ಸುಲಭವಾಗಿ ಹರಡುತ್ತದೆ.
ಹೀಗಾಗಿ ಇರುವುದೊಂದೇ ದಾರಿ....

ಜಗತ್ತಿನ ಎಲ್ಲಾ ಜನರು ಒಟ್ಟಿಗೆ ಮತ್ತು ಸಾಧ್ಯವಾದಷ್ಟು ಬೇಗ ವ್ಯಾಕ್ಸಿನ್ ಪಡೆದುಕೊಂಡು ಕೋವಿಡ್ ಮುಕ್ತವಾಗಬೇಕು. ಅತ್ಯಂತ ತ್ವರಿತವಾಗಿ ಮತ್ತು ಉಚಿತವಾಗಿ ಜಗತ್ತಿನ ಎಲ್ಲ ಜನರಿಗೂ ವ್ಯಾಕ್ಸಿನ್ ದೊರೆಯಬೇಕು. ಇಲ್ಲದಿದ್ದಲ್ಲಿ ಇಡೀ ಜಗತ್ತು ಪದೇಪದೇ ಹೊಸಹೊಸ ಬಗೆಯ ಕೋವಿಡ್ ಅಲೆಗಳಿಗೆ ತುತ್ತಾಗುತ್ತಲೇ ಇರುತ್ತದೆ. -ಅದಾಗಬೇಕೆಂದರೆ, ಜಗತ್ತಿನಲ್ಲಿ ಯಾವ್ಯಾವ ದೇಶಗಳಲ್ಲಿ ಸಾಧ್ಯವಿದೆಯೋ, ಸಾಮರ್ಥ್ಯವಿದೆಯೋ ಅಲ್ಲೆಲ್ಲಾ ಕೋಟಿ ಕೋಟಿ ಸಂಖ್ಯೆಗಳಲ್ಲಿ ಲಸಿಕೆ ಉತ್ಪಾದನೆಯಾಗಬೇಕು ಹಾಗೂ ಲಾಭದ ಆದ್ಯತೆಯ ಮೇಲಲ್ಲದೆ, ಆರೋಗ್ಯ ತುರ್ತಿನ ಆದ್ಯತೆಯ ಮೇಲೆ ಅದರ ದಕ್ಷ ಹಂಚಿಕೆಯಾಗಬೇಕು. ಅದಾಗಬೇಕೆಂದರೆ ವ್ಯಾಕ್ಸಿನ್ ಮೇಲೆ ಕಂಪೆನಿಗಳಿಗೆ ಕೊಡಲಾಗಿರುವ ಪೇಟೆಂಟ್ ಹಿಂಪಡೆಯಬೇಕು. ವ್ಯಾಕ್ಸಿನ್ ಕಂಡು ಹಿಡಿದ ಕಂಪೆನಿಗಳೂ ಜಾಗತಿಕ ತುರ್ತು ಪರಿಸ್ಥಿತಿಯಲ್ಲಿ ಸೂಪರ್ ಪ್ರಾಫಿಟ್ಟನ್ನು ಮರೆತು ತಮ್ಮ ತಂತ್ರಜ್ಞಾನ, ಸಂಪನ್ಮೂಲ, ಫಾರ್ಮುಲಾಗಳನ್ನು ಹಂಚಿಕೊಳ್ಳಬೇಕು....

ಆದರೆ ಡಬ್ಲೂಟಿಒ, ಪೇಟೆಂಟ್ ಹಾಗೂ ಇನ್ನಿತರ ಕೈಗಾರಿಕಾ ರಹಸ್ಯಗಳ ಕಾನೂನುಗಳಿಂದ ಲಾಭಸಬಲರಾಗಿರುವ ಈ ವ್ಯಾಕ್ಸಿನ್ ಬಿಲಿಯನೇರ್‌ಗಳು ಲಸಿಕೆ ಉತ್ಪಾದನೆ ಹಾಗೂ ವಿತರಣೆಗಳ ಮೇಲೆ ಏಕಸ್ವಾಮ್ಯವನ್ನು ಬಿಟ್ಟು ಕೊಡಲು ಸಿದ್ಧವಿಲ್ಲ.. ಶಾಸನಬದ್ಧ ಲಾಭಕೋರತನದಿಂದಾಗಿಯೇ ಇಂದು ಜಗತ್ತು ಹಲವಾರು ಕೋವಿಡ್ ಅಲೆಗಳನ್ನು ಎದುರಿಸಬೇಕಾದ ಅಪಾಯಕ್ಕೆ ತುತ್ತಾಗಿದೆ. ಇಷ್ಟಾದರೂ ಇತ್ತೀಚೆಗೆ ಮೇ 20ರಂದು ಸಭೆ ಸೇರಿದ್ದ ಜಗತ್ತಿನ ಶ್ರೀಮಂತ ಬಂಡವಾಳಶಾಹಿ ದೇಶಗಳ ಕೂಟವಾದ ಜಿ-7, ಬಡ ದೇಶಗಳಿಗೆ ವ್ಯಾಕ್ಸಿನ್ ಉತ್ಪಾದಿಸಲು ಸ್ವ ಪ್ರೇರಿತ ಲೈಸೆನ್ಸ್ ಕೊಡುವ ಬಗ್ಗೆ ಚರ್ಚಿಸಿದವೇ ವಿನಾ ಎಲ್ಲಾ ಬಗೆಯ ವ್ಯಾಕ್ಸಿನ್ ಉತ್ಪಾದನೆಯ ಮೇಲಿನ ಹಕ್ಕು ಸ್ವಾಮ್ಯವನ್ನು ತೆಗೆದುಹಾಕುವ ಮತ್ತು ಲಸಿಕೆ ಉತ್ಪಾದನಾ ತಂತ್ರಜ್ಞಾವನ್ನು ಹಂಚಿಕೊಳ್ಳುವ ಬಗ್ಗೆ ಪ್ರಸ್ತಾಪವನ್ನು ಕೂಡ ಮಾಡಲಿಲ್ಲ.

ಪೇಟೆಂಟ್ ಬಿಡಲೊಪ್ಪದ ಲಾಭಪಿಪಾಸುಗಳು
ಇದೀಗ ಭಾರತ ಮತ್ತು ದಕ್ಷಿಣ ಆಫ್ರಿಕಾಗಳು ವ್ಯಾಕ್ಸಿನ್ ಮೇಲಿನ ಪೇಟೆಂಟ್ ಹಕ್ಕನ್ನು ತೆಗೆದುಹಾಕಬೇಕೆಂದು ಡಬ್ಲೂಟಿಒ ಮುಂದೆ ಮನವಿ ಸಲ್ಲಿಸಿವೆ. (ಆದರೆ ಔಷಧ ಕಂಪೆನಿಗಳು ಲಾಭದ ಲಾಲಸೆ ಬಿಟ್ಟು ಪೇಟೆಂಟ್ ಹಂಚಿಕೊಳ್ಳಬೇಕೆಂದು ಅಂತರ್‌ರಾಷ್ಟ್ರೀಯ ವೇದಿಕೆಗಳಲ್ಲಿ ಹೇಳುವ ಮೋದಿ ನೇತೃತ್ವದ ಭಾರತ ಸರಕಾರ ಭಾರತದೊಳಗೆ ವ್ಯಾಕ್ಸಿನ್ ಕಂಪೆನಿಗಳು ತಮಗಿಷ್ಟ ಬಂದಂತಹ ದರ ನಿಗದಿ ಮಾಡುವ ನೀತಿಯನ್ನು ಜಾರಿ ಮಾಡಿವೆೆ!) ಎರಡು ವಾರಗಳ ಕೆಳಗೆ ಅಮೆರಿಕ ಕೂಡಾ ಈ ಪ್ರಸ್ತಾವಕ್ಕೆ ಬೆಂಬಲ ಸೂಚಿಸಿದೆ. (ಆದರೆ ಈವರೆಗೆ ತನ್ನ ಔಷಧ ಕಂಪೆನಿಗಳ ಲಾಭಾಸಕ್ತಿಗೆ ಸೋಂಕು ತಗಲುವ ಎಲ್ಲಾ ಪ್ರಸ್ತಾಪಗಳನ್ನು ತಿರಸ್ಕರಿಸುತ್ತಲೇ ಬಂದಿದೆ)

ಆದರೆ ಭಾರತ-ಆಫ್ರಿಕಾ ಜಂಟಿ ಪ್ರಸ್ತಾಪಗಳಿಂದ ಪರಿಣಾಮಕಾರಿಯಾದದ್ದೇನೂ ಆಗುವುದಿಲ್ಲ. ಏಕೆಂದರೆ ಕಳೆದ ಅಕ್ಟೋಬರ್‌ನಲ್ಲಿ ಈ ಪ್ರಸ್ತಾಪ ಮುಂದಿಟ್ಟ ನಂತರ TRIPS ಕೌನ್ಸಿಲ್‌ನ ಹತ್ತು ಸಭೆಗಳು ನಡೆದಿದ್ದು ಇನ್ನೂ ಪ್ರಾಥಮಿಕ ಹಂತದ ಚರ್ಚೆಗಳು ಮುಕ್ತಾಯಗೊಂಡಿಲ್ಲ. ಮುಂದಿನ ಜೂನ್ ತಿಂಗಳಲ್ಲಿ ಭಾರತ ಮತ್ತು ದ. ಆಫ್ರಿಕಾ ತಮ್ಮ ಪ್ರಸ್ತಾಪದ ಪರಿಷ್ಕೃತ ಕರಡನ್ನು ಮುಂದಿಡಬೇಕಿದೆ. ಆ ನಂತರ ಕರಡಿನ ಪ್ರತಿಪದಶಃ ಚರ್ಚೆಗಳು ಪ್ರಾರಂಭವಾಗಲಿವೆ. ಇದೊಂದು ಸುದೀರ್ಘ ಪ್ರಕ್ರಿಯೆಯಾಗಿದ್ದು ಮುಗಿಯಲು ಒಂದೆರಡು ವರ್ಷಗಳು ಬೇಕಾಗಬಹುದು.

  ಎಲ್ಲಕ್ಕಿಂತ ಹೆಚ್ಚಾಗಿ ಡಬ್ಲೂಟಿಒನಲ್ಲಿ 164 ಸದಸ್ಯ ರಾಷ್ಟ್ರಗಳಿದ್ದು, ಎಲ್ಲಾ ಸದಸ್ಯ ರಾಷ್ಟ್ರಗಳೂ ಒಪ್ಪಿಕೊಳ್ಳದೆ ಪೇಟೆಂಟ್ ತಾತ್ಕಾಲಿಕ ರದ್ದು ಪ್ರಸ್ತಾಪ ಕೂಡಾ ಪಾಸಾಗುವುದಿಲ್ಲ. ಮತ್ತು ಇದಕ್ಕೆ ಫೈಝರ್ ವ್ಯಾಕ್ಸಿನ್ ಪೇಟೆಂಟ್ ಹೊಂದಿರುವ ಜರ್ಮನಿ, ಕೋವಿಶೀಲ್ಡ್ ಉತ್ಪಾದಿಸುವ ಇಂಗ್ಲೆಂಡ್, ಕೆನಡಾ ಇನ್ನಿತರ ದೇಶಗಳು ಈ ಪ್ರಸ್ತಾಪವನ್ನು ಬಲವಾಗಿ ವಿರೋಧಿಸಿವೆ. ಮೇಲಾಗಿ ಇದು ಕೇವಲ ಪೇಟೆಂಟ್ ರದ್ದಾದರೆ ಉತ್ಪಾದನೆ ಮಾಡಬಹುದಾದ ವ್ಯಾಕ್ಸಿನ್ ಅಲ್ಲ. ಇದಕ್ಕೇ ಬೇಕಾದ ಜೈವಿಕ ವಸ್ತು, ಉತ್ಪಾದನಾ ತಂತ್ರ, ಮಾನವ ಸಂಪನ್ಮೂಲ ಇವೆಲ್ಲವನ್ನೂ ಕೂಡಾ ಹಂಚಿಕೊಳ್ಳುವ ವ್ಯವಸ್ಥೆಯಾಗದೆ ಕೇವಲ ಪೇಟೆಂಟ್ ರದ್ದಾದರೆ ಇತರ ದೇಶಗಳಲ್ಲಿ ವ್ಯಾಕ್ಸಿನ್ ಉತ್ಪಾದಿಸಲು ಆಗುವುದಿಲ್ಲ.
    
ಆದರೆ ಈ ಉತ್ಪಾದನಾ ವ್ಯವಸ್ಥೆ ಲಾಭಕೋರ ಕಾರ್ಪೊರೇಟ್ ಕಂಪೆನಿಗಳ ಹಿಡಿತದಿಂದ ಹೊರಬರದೆ ಜಗತ್ತು ಉಳಿಯಲು ಸಾಧ್ಯವಿಲ್ಲ. ಹಾಗೆ ನೋಡಿದರೆ ಹೊಸದಾಗಿ ವ್ಯಾಕ್ಸಿನ್ ಬಿಲಿಯನೇರ್‌ಗಳಾದ ಮೇಲಿನ ಒಂಭತ್ತು ಬಿಲಿಯಾಧೀಶರು ಕಳೆದ ವರ್ಷ ಮಾತ್ರ ಮಾಡಿರುವ ಲಾಭದಲ್ಲಿ ಬಡದೇಶಗಳ ಒಟ್ಟಾರೆ 77 ಕೋಟಿ ಜನರಿಗೆ ಎರಡೆರಡು ಬಾರಿ ವ್ಯಾಕ್ಸಿನ್ ಹಾಕಬಹುದು. ಹಾಗೆಯೇ ಈಗಾಗಲೇ ಔಷಧ ಉದ್ಯಮದಲ್ಲಿರುವ ಮೇಲಿನ 8 ಕಂಪೆನಿಗಳು ಹೋದ ವರ್ಷ ಮಾತ್ರ ಮಾಡಿರುವ ಲಾಭದಲ್ಲಿ ಭಾರತದ ಪ್ರತಿಯೊಬ್ಬರಿಗೂ 1.6 ಬಾರಿ ವ್ಯಾಕ್ಸಿನ್ ಹಾಕಬಹುದು...ಎಲ್ಲಾ ಇದೆ...ಆದರೆ ಯಾವುದೂ ಸಿಗುವುದಿಲ್ಲ. ಕಣ್ಣಿಗೆಟಕಿದರೂ ಕೈಗೆಟುಕದಂತೆ ಬಂಡವಾಳಶಾಹಿ ವ್ಯವಸ್ಥೆಯ ಮಾಯಾಗನ್ನಡಿಯಿದೆ...
ಲಾಭಕೋರ ಬಂಡವಾಳಶಾಹಿ ವೈರಸ್ಸಿಗೆ ಯಾವ ಲಸಿಕೆ?

ಸಾರಾಂಶವಿಷ್ಟೇ: 
 ಕೋವಿಡ್ ಸಾಂಕ್ರಾಮಿಕ ಹುಟ್ಟಲು ಕೊರೋನ ವೈರಸ್ ಕಾರಣವಾಗಿದ್ದರೂ.. ಅದು ಜಗತ್ತಿನಾದ್ಯಂತ ಹರಡಲು ಹಾಗೂ ಲಕ್ಷಾಂತರ ಜನ ಸಾಯಲು ಕಾರಣವಾಗಿರುವುದು ಮಾತ್ರ ಈ ದೊಡ್ಡ ದೊಡ್ಡ ವ್ಯಾಕ್ಸಿನ್ ಬಂಡವಾಳ ಶಾಹಿಗಳು... ಮತ್ತು ಅವರ ಲಾಭಕ್ಕೆ ಪೂರಕವಾದ ಬಂಡವಾಳಶಾಹಿ ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯೇ...

ಇತಿಹಾಸದಲ್ಲಿ ಇಂತಹ ನಿರ್ಜೀವ ಕೊರೋನಗಳು ಹುಟ್ಟುಹಾಕಿದ ಸಾಂಕ್ರಾಮಿಕಗಳು ಮಾನವ ಕುಲಕ್ಕೆ ಮಾಡಿರುವ ಹಾನಿಗಿಂತ ಈ ಸಜೀವ ಕಾರ್ಪೊರೇಟ್ ಬಂಡವಾಳಶಾಹಿ ವ್ಯವಸ್ಥೆ ಮಾ�

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News