ಶಿಕ್ಷಕರ ಗೋಳು

Update: 2024-11-27 04:32 GMT

ಪಕ್ಕದ ಮನೆಯ ಪ್ರೌಢಶಾಲಾ ಶಿಕ್ಷಕಿಯೊಬ್ಬರು ಸ್ಕೂಟರ್‌ನಲ್ಲಿ ಬಿದ್ದು ಕಾಲಿನ ಮೂಳೆ ಮುರಿದುಕೊಂಡಿದ್ದರು. ಮಾತನಾಡಿಸಲೆಂದು ಮನೆಗೆ ಹೋದಾಗ ಅವರ ಗೋಳು ಕೇಳಿ ಅತೀವ ವೇದನೆಯಾಯಿತು.

‘‘ಏನಿಲ್ಲ ಸರ್, ಎಸೆಸೆಲ್ಸಿ ರಿಸಲ್ಟ್ ಇಂಪ್ರೂವ್ ಮಾಡ್ಬೇಕು ಅಂತ ಭಾರೀ ಒತ್ತಡ ಇದೆ. ಬೆಳಗ್ಗೆ 5ಕ್ಕೆ ಎದ್ದು ನನಗೆ ಗೊತ್ತು ಮಾಡಿದ ನಮ್ಮ ಶಾಲೆಯ 5 ಮಕ್ಕಳಿಗೆ ವೇಕಪ್ ಕಾಲ್ ಮಾಡಿದೆ. ಅದೇ ಗಳಿಗೆಯಲ್ಲಿ ನನ್ನ ಮಕ್ಕಳನ್ನು ಎಬ್ಬಿಸಿ, ಮನೆಗೆಲಸ ಮುಗಿಸಿ ಅಡಿಗೆ ಸಿದ್ಧಪಡಿಸಿ ಅವರನ್ನೆಲ್ಲ ರೆಡಿ ಮಾಡಿ ಶಾಲೆಗೆ ಕಳಿಸಿಕೊಡೋವಷ್ಟರಲ್ಲಿ ಟೈಮ್ ಆಗಿಹೋಯಿತು. ಇವತ್ತು ನನ್ನದೇ ಸ್ಪೆಷಲ್ ಕ್ಲಾಸ್ ಇತ್ತು. ಬೆಳಗ್ಗೆ 9:00 ಗಂಟೆಗೆ ತಲುಪಿ ಕ್ಲಾಸ್ ತಗೊಂಡಿರುವುದರ ಬಗ್ಗೆ ವಾಟ್ಸ್‌ಆ್ಯಪ್ ಗ್ರೂಪಿಗೆ ಜಿಪಿಎಸ್ ಫೋಟೊ ಹಾಕಬೇಕಿತ್ತು. ತಿಂಡಿಯನ್ನೂ ತಿನ್ನದೆ ಆತುರದಲ್ಲಿ ಹೋಗ್ತಾ ಇದ್ದೆ. ಒಂದು ಸಣ್ಣ ಕಲ್ಲಿನ ಮೇಲೆ ಗಾಡಿ ಬಿಟ್ಟಿದ್ದಷ್ಟೆ..ಹೀಗಾಯ್ತು’’ ಎಂದರು.

‘‘ಸರಕಾರಿ ನೌಕರಿ ಅಂದರೆ ಒತ್ತಡ ಇರುತ್ತೆ, ಇಷ್ಟೆಲ್ಲ ಗಾಬರಿ ಮಾಡಿಕೊಂಡರೆ ಹೇಗೆ?’’ ಎಂದೆ.

‘‘ಇಲ್ಲ ಸರ್ ಮೊದಲು ಹೀಗಿರಲಿಲ್ಲ. ಈಗ ಎಲ್ಲದ್ದಕ್ಕೂ ಶಿಕ್ಷಕರನ್ನೇ ಹೊಣೆ ಮಾಡ್ತಾರೆ. ಮಗು ಶಾಲೆಗೆ ಬರ್ಲಿಲ್ಲ ಅಂದ್ರೆ ಮನೆ ಭೇಟಿ ಮಾಡ್ಬೇಕು. ಬೆಳಗ್ಗೆ ಸ್ಪೆಷಲ್ ಕ್ಲಾಸ್, ಸಂಜೆ ಗ್ರೂಪ್ ಸ್ಟಡಿ, ಕೆಲವು ಕಡೆ ನೈಟ್ ಕ್ಲಾಸ್ ಕೂಡ ಮಾಡಿಸುತ್ತಾರೆ. ರಾತ್ರಿ 10:00 ಗಂಟೆಗೆ ಒಂದು ಫೋನ್ ಮಾಡಿ ಮಕ್ಕಳು ಓದುತ್ತಿರುವ ಬಗ್ಗೆ ಕನ್ಫರ್ಮ್ ಮಾಡಿಕೊಳ್ಳಬೇಕು. ಬೆಳಗ್ಗೆ 5ಕ್ಕೆ ವೇಕಪ್ ಕಾಲ್ ಮಾಡಬೇಕು. ಪಾಠ ಮುಗಿಸಿ ನೋಟ್ಸ್ ಕೊಟ್ಟು ನೋಟ್ಸ್ ಕರೆಕ್ಷನ್, ಹೋಮ್ ವರ್ಕ್ ನೋಡೋದು, ಕ್ವಿಜ್, ಪರೀಕ್ಷೆ, ಫಲಿತಾಂಶ ವಿಶ್ಲೇಷಣೆ, ಕ್ರಿಯಾ ಯೋಜನೆ, ಪರಿಹಾರ ಬೋಧನೆ ಅಂತೆಲ್ಲ ಮಾಡಬೇಕು. ಕಷ್ಟವಾದರೂ ಅದನ್ನೆಲ್ಲ ಮಾಡಬಹುದು. ಆದರೆ ಎಲ್ಲದ್ದಕ್ಕೂ ದಾಖಲೆಯಿಡಿ ಎನ್ನುತ್ತಾರೆ. ಪ್ರತಿಯೊಂದಕ್ಕೂ ಮೊಬೈಲ್ ತೆಗೆದುಕೊಂಡು ಜಿಪಿಎಸ್ ಫೋಟೊ ತೆಗೆದು ಗ್ರೂಪಿಗೆ ಹಾಕ್ಬೇಕು. ಇದರ ಮಧ್ಯೆ ಅಟೆಂಡೆನ್ಸ್ ಆನ್‌ಲೈನ್‌ನಲ್ಲಿ ಎಂಟ್ರಿ ಮಾಡಿ ಎನ್ನುತ್ತಾರೆ. ಮಧ್ಯಾಹ್ನ ಬಿಸಿ ಊಟ ಬಡಿಸುವಾಗಲೂ ಕೇರ್ ತಗೋಬೇಕು. ಗಡಿಬಿಡಿಯಲ್ಲಿ ಊಟ ಮುಗಿಸಿ ಮತ್ತೆ ಕ್ಲಾಸಿಗೆ ಹೋಗಬೇಕು. ಇದರ ಮಧ್ಯೆ ಯು ಡೈಸ್‌ನಲ್ಲಿ ವಿದ್ಯಾರ್ಥಿಗಳ ಮಾಹಿತಿ ತುಂಬಿ, ಆನ್‌ಲೈನ್‌ನಲ್ಲಿ ಮಾರ್ಕ್ಸ್ ಎಂಟ್ರಿ ಮಾಡಿ ಅಂತ ಎಚ್.ಎಂ. ಹೇಳುತ್ತಾರೆ. ಇತ್ತ ಪಾಠ ಮಾಡುವುದೋ, ಇಲ್ಲಾ ರೆಕಾರ್ಡ್ ನಿರ್ವಹಣೆ ಮಾಡುವುದೋ, ಮೊಬೈಲ್ ಹಿಡಿದುಕೊಂಡು ಡೇಟಾ ಎಂಟ್ರಿ ಮಾಡುವುದೋ? ನನ್ನ ಕೆಲಸದ ವ್ಯಾಪ್ತಿ ಏನು ಎನ್ನುವುದೇ ನನಗೆ ದೊಡ್ಡ ಸಮಸ್ಯೆಯಾಗಿದೆ. ನನ್ನ ಜೊತೆಯಲ್ಲಿ ಕ್ಲರ್ಕ್ ಕೆಲಸಕ್ಕೆ ಸೇರಿದ ಗೆಳತಿ ಪ್ರಮೋಷನ್ ತೆಗೆದುಕೊಂಡು ಆಫೀಸರ್ ಆಗಿದ್ದಾಳೆ. ಇಷ್ಟಪಟ್ಟು ಟೀಚರ್ ಆಗಿದ್ದಕ್ಕೆ ಇಷ್ಟೆಲ್ಲಾ ದುಡಿದು ಒಂದು ಪ್ರಮೋಷನ್ ಕೂಡ ಇಲ್ಲದೆ ಹೈರಾಣಾಗಬೇಕಾಗಿದೆ. ಪ್ರೈಮರಿ ಶಾಲೆಯಿಂದಲೇ ಶೈಕ್ಷಣಿಕ ಆಡಳಿತ ಬಿಗಿ ಮಾಡದೆ 8ನೇ ತರಗತಿಯಿಂದ ಮಕ್ಕಳಿಗೆ ಅಕ್ಷರ ಕಲಿಸಿ, ಪಾಸ್ ಮಾಡಿಸಿ, ಎಂದು ಅವೈಜ್ಞಾನಿಕವಾಗಿ ಮಾತಾಡ್ತಾರೆ. ನಮ್ಮ ಗೋಳು ಯಾರಿಗೆ ಹೇಳುವುದು? ನನ್ನ ಮಕ್ಕಳಿಗಂತೂ ಶಿಕ್ಷಕರ ಕೆಲಸ ಬೇಡ ಸಣ್ಣದೊಂದು ನೌಕರಿ ಹಿಡಿದು ನೆಮ್ಮದಿಯಾಗಿರಿ ಎಂದೇ ಹೇಳ್ತೀನಿ’’ ಎಂದು ಹೇಳುತ್ತಾ ಹೋದರು.

ಆದರೂ ಶಿಕ್ಷಕರು ಈ ಪರಿಯ ಒತ್ತಡಕ್ಕೆ ಒಳಗಾಗಿ ಮಾನಸಿಕ ಸ್ವಾಸ್ಥ್ಯ ಕಳೆದುಕೊಂಡು ಅಪಾಯಕ್ಕೆ ಒಳಗಾಗುವುದು ಉತ್ತಮ ಶೈಕ್ಷಣಿಕ ವಾತಾವರಣವನ್ನು ನಿರ್ಮಿಸುವುದಿಲ್ಲ. ಎಲ್ಲದ್ದಕ್ಕೂ ಸಮಿತಿ ರಚಿಸುವ ಸರಕಾರ ಎಸೆಸೆಲ್ಸಿ ಫಲಿತಾಂಶ ಕುಸಿತಕ್ಕೆ ಕಾರಣ ಹಾಗೂ ಫಲಿತಾಂಶ ವೃದ್ಧಿಸಲು ಏನು ಮಾಡಬೇಕು? ಇದರ ಜೊತೆಗೆ ಮಕ್ಕಳ ವರ್ತನಾ ಬದಲಾವಣೆಯ ಬಗ್ಗೆ ಅಧ್ಯಯನ ಮಾಡಲು ತಜ್ಞರ ಸಮಿತಿಯನ್ನೇಕೆ ರಚಿಸಬಾರದು? ಸರಕಾರ ಈ ನಿಟ್ಟಿನಲ್ಲಿ ಚಿಂತಿಸಿ ಶಿಕ್ಷಕರ ಒತ್ತಡವನ್ನು ತಗ್ಗಿಸಿ ಆರೋಗ್ಯಕರ ಶೈಕ್ಷಣಿಕ ವಾತಾವರಣವನ್ನು ನಿರ್ಮಿಸಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - -ಪುಟ್ಟದಾಸು, ಮಂಡ್ಯ

contributor

Similar News