ವಿಕ್ರಂ ಗೌಡ ಎನ್ ಕೌಂಟರ್ ಮಾಡಿದ ಪೊಲೀಸ್ ಅಧಿಕಾರಿ ವಿರುದ್ಧ ಎಫ್ ಐಆರ್ ಯಾಕಿಲ್ಲ ? ಪೊಲೀಸರು ಮತ್ತು ಸರಕಾರ ಎಡವಿದ್ದೆಲ್ಲಿ ?
ಆದಿವಾಸಿ ನಾಯಕ ವಿಕ್ರಂ ಗೌಡರನ್ನು ಎನ್ ಕೌಂಟರ್ ಮಾಡಿದ ಎಎನ್ಎಫ್ ಪೊಲೀಸರ ಕ್ರಮವನ್ನು ಸರಕಾರ ಮತ್ತು ಪೊಲೀಸ್ ಇಲಾಖೆ ಸಮರ್ಥಿಸಿದೆ. ಬಹುಶಃ ಎನ್ ಕೌಂಟರ್ ಇತಿಹಾಸದಲ್ಲೇ ಸರಕಾರ ಇಂತಹ ನಿಲುವನ್ನು ಬಹಿರಂಗವಾಗಿ ತೆಗೆದುಕೊಂಡಿರುವುದು ಇದೇ ಮೊದಲಿರಬಹುದು. ಸರಕಾರವೇ ಎನ್ ಕೌಂಟರ್ ಗೆ ಬೆಂಬಲವಾಗಿದ್ದರೂ ಬಹಿರಂಗವಾಗಿ ಅದನ್ನು ಹೇಳುವ ಸಾಹಸ ಮಾಡುವುದಿಲ್ಲ. ಅದು ಸರಕಾರವೊಂದರ ಲಕ್ಷಣ. ಆದರೆ ಮುಖ್ಯಮಂತ್ರಿಯಾದಿಯಾಗಿ, ಗೃಹ ಸಚಿವರು, ಹಿರಿಯ ಪೊಲೀಸ್ ಅಧಿಕಾರಿಗಳು ವಿಕ್ರಂ ಗೌಡ ಎನ್ ಕೌಂಟರ್ ಅನ್ನು ಸಮರ್ಥಿಸಿಕೊಂಡಿದ್ದಾರೆ. ‘ನ್ಯಾಯಾಂಗ ತನಿಖೆ ಅಗತ್ಯವಿಲ್ಲ’ ಎಂದು ಸರಕಾರ ಹೇಳಿದೆ.
ಎನ್ ಕೌಂಟರ್ ನಕಲಿಯೇ, ಅಸಲಿಯೇ ಎಂಬ ಚರ್ಚೆ ಪ್ರಾರಂಭವಾಗಿರುವಾಗಲೇ ಡಿಐಜಿ ರೂಪಾ ಮಾಧ್ಯಮದ ಜೊತೆ ಮಾತನಾಡುತ್ತಾ ‘ಈ ಎನ್ ಕೌಂಟರ್ ಘಟನೆ ಪೊಲೀಸ್ ಇಲಾಖೆಯ ಕಿರೀಟಕ್ಕೊಂದು ಗರಿ' ಎಂದು ಹೇಳುವ ಮೂಲಕ ಎನ್ ಕೌಂಟರ್ ನಡೆಸಿದ ಅಧಿಕಾರಿಗಳ ಕ್ರಮವನ್ನು ಶ್ಲಾಘಿಸಿದ್ದಾರೆ. ಎನ್ ಕೌಂಟರ್ ಎನ್ನುವುದು ಸಾಹಸ ಕೃತ್ಯವಲ್ಲ, ಬದಲಿಗೆ ಆತ್ಮರಕ್ಷಣೆಯ ಕ್ರಮ ಎಂದೂ ಅರಿಯದವರು ಗೃಹ ಇಲಾಖೆಯನ್ನು ಮುನ್ನಡೆಸುತ್ತಿದ್ದಾರೆ ಎನ್ನುವುದು ವಿಪರ್ಯಾಸ !
ಸರಕಾರ ಮತ್ತು ಪೊಲೀಸ್ ಇಲಾಖೆಯ ಈ ನಡವಳಿಕೆ ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಮಾರ್ಗದರ್ಶಿ ಸೂತ್ರಗಳಿಗೆ ವಿರುದ್ಧವಾದುದು. ಎನ್ ಕೌಂಟರ್ ಆದ ತಕ್ಷಣ ಎನ್ ಕೌಂಟರ್ ನಡೆಸಿದ ಪೊಲೀಸ್ ಸಿಬ್ಬಂಧಿ/ಅಧಿಕಾರಿ ವಿರುದ್ಧ ಎಫ್ ಐಆರ್ ದಾಖಲಿಸಬೇಕು ಎಂದು ರಾಷ್ಟ್ರೀಯ ಮಾನವ ಹಕ್ಕು ಆಯೋಗ ಹೇಳುತ್ತದೆ. ಈವರೆಗೂ ಎನ್ ಕೌಂಟರ್ ನಡೆಸಿದ ಅಧಿಕಾರಿಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆಯೇ ?
ಎನ್ ಕೌಂಟರ್ ನಡೆದ ತಕ್ಷಣ ಘಟನೆಯ ಕುರಿತು ಎಫ್ಐಆರ್ ದಾಖಲಿಸಬೇಕು ಎಂದು ಎನ್ಎಚ್ಆರ್ ಸಿ ಹೇಳುತ್ತದೆ. ಅದೊಂದೇ ನಿಯಮವನ್ನು ಹೆಬ್ರಿ ಪೊಲೀಸರು ಸರಿಯಾಗಿ ಪಾಲಿಸಿದ್ದಾರೆ. ವಿಕ್ರಂ ಗೌಡ ಹತ್ಯೆಯಾದ ಬಳಿಕ ತಕ್ಷಣ ಒಂದು ಎಫ್ಐಆರ್ ದಾಖಲಿಸಿದ್ದಾರೆ.
ಪೊಲೀಸರು ಯಾವುದೇ ವ್ಯಕ್ತಿಯನ್ನು ಎನ್ ಕೌಂಟರ್ ನಡೆಸಿದ ತಕ್ಷಣವೇ ಹಿರಿಯ ಅಧಿಕಾರಿಗಳು ಈ ಎನ್ ಕೌಂಟರ್ ಪ್ರಕರಣವನ್ನು ಸ್ವತಂತ್ರ ಪೊಲೀಸ್ ಘಟಕ (ಸಿಸಿಬಿ, ಸಿಐಡಿ ಇತ್ಯಾದಿ)ಗಳಿಂದ ತನಿಖೆ ನಡೆಸಬೇಕು. ಈ ಇಲಾಖಾ ತನಿಖೆಯನ್ನು ನಾಲ್ಕು ತಿಂಗಳೊಳಗೆ ಪೂರ್ಣಗೊಳಿಸಬೇಕು. ಈವರೆಗೂ ಸಿಐಡಿ ಅಥವಾ ತತ್ಸಮಾನ ಪೊಲೀಸ್ ಘಟಕಗಳಿಗೆ ವಿಕ್ರಂ ಗೌಡ ಪ್ರಕರಣವನ್ನು ತನಿಖೆಗೆ ವಹಿಸಿದ್ದು ಗೊತ್ತಿಲ್ಲ !
ಎನ್ ಕೌಂಟರ್ ನಡೆಸಿದ ಅಧಿಕಾರಿಯ ವಿರುದ್ಧ ಐಪಿಸಿ ಸೆಕ್ಷನ್ ಗಳಡಿಯಲ್ಲಿ (ಸದ್ಯ ಬಿಎನ್ಎಸ್ ಸೆಕ್ಷನ್) ಮೊಕದ್ದಮೆ ದಾಖಲಿಸಿ ಠಾಣೆಯಲ್ಲೂ ಪ್ರತ್ಯೇಕ ವಿಚಾರಣೆ ನಡೆಸಬೇಕು. ಅದನ್ನು ಈವರೆಗೂ ಹೆಬ್ರಿ ಪೊಲೀಸರು ಮಾಡಿಲ್ಲ. ಇದು ಮಾನವ ಹಕ್ಕು ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ.
ಪೊಲೀಸ್ ಎನ್ ಕೌಂಟರ್ ನಲ್ಲಿ ಯಾವುದೇ ವ್ಯಕ್ತಿ ಮೃತನಾದರೆ ತಕ್ಷಣ ಮ್ಯಾಜಿಸ್ಟ್ರೇಟ್ ತನಿಖೆ ನಡೆಸಬೇಕು. ಮ್ಯಾಜಿಸ್ಟ್ರೇಟ್ ಅವರು ಎಲ್ಲಾ ಸಾಕ್ಷಿಗಳ ವಿಚಾರಣೆ ನಡೆಸಿ ಆರೋಪಿ ಅಧಿಕಾರಿಗಳ ಹೆಸರಿನ ಸಹಿತ ವರದಿ ಸಲ್ಲಿಸಬೇಕು. ಇದು ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಸ್ಪಷ್ಟ ಸೂಚನೆಯಾಗಿದೆ. ಆದರೆ ರಾಜ್ಯದ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ತನಿಖೆಯೇ ನಡೆಸುವುದಿಲ್ಲ ಎಂದಿದ್ದಾರೆ. ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಮಾರ್ಗದರ್ಶಿ ಸೂತ್ರಗಳಿಂದ ಕರ್ನಾಟಕ ರಾಜ್ಯ ಹೊರಗಿದೆಯೇ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಬೇಕಿದೆ.
ಮ್ಯಾಜಿಸ್ಟ್ರೇಟ್ ತನಿಖೆ ಅಥವಾ ಸಿಐಡಿ ತನಿಖೆ ಅಥವಾ ಘಟನಾ ವ್ಯಾಪ್ತಿಯ ಪೊಲೀಸ್ ಠಾಣೆಯ ತನಿಖೆಯಲ್ಲಿ ಎನ್ ಕೌಂಟರ್ ನಡೆಸಿದ ಪೊಲೀಸ್ ಅಧಿಕಾರಿ ತಪ್ಪಿತಸ್ಥ ಎಂದು ತಿಳಿದುಬಂದರೆ ಮೃತನ ಕುಟುಂಬದ ಸದಸ್ಯರಿಗೆ ಸರಕಾರ ಪರಿಹಾರಧನ ಒದಗಿಸಬೇಕು ಎಂದು ಮಾನವ ಹಕ್ಕು ಆಯೋಗ ಹೇಳಿದೆ. ಆಯೋಗದ ಈ ನಿಯಮ ಜಾರಿಗೆ ಬರಬೇಕಾದರೆ ಯಾವುದಾದರೊಂದು ತನಿಖೆ ನಡೆಯಬೇಕು. ಆದರೆ ವಿಕ್ರಂ ಗೌಡ ಎನ್ ಕೌಂಟರ್ ಘಟನೆಯಲ್ಲಿ ಪೊಲೀಸರ ವಿರುದ್ಧ ಎಫ್ಐಆರ್ ದಾಖಲಿಸಿಲ್ಲ ಮತ್ತು ಯಾವ ತನಿಖೆಯೂ ನಡೆಯುತ್ತಿಲ್ಲ !
ಎನ್ ಕೌಂಟರ್ ಘಟನೆ ನಡೆದ ತಕ್ಷಣ ಅಧಿಕಾರಿಗಳು ಸಂಪೂರ್ಣ ವರದಿಯನ್ನು ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ 24 ಗಂಟೆಗಳ ಒಳಗಾಗಿ ಸಲ್ಲಿಕೆ ಮಾಡಬೇಕು. ಪೊಲೀಸ್ ಅಧಿಕಾರಿಗಳು ಈ ನಿಯಮವನ್ನು ಪಾಲಿಸದ್ದಾರೋ ಇಲ್ಲವೋ ಗೊತ್ತಿಲ್ಲ.
ಎಲ್ಲಕ್ಕಿಂತ ಮುಖ್ಯವಾಗಿ, ಎನ್ ಕೌಂಟರ್ ನಡೆಸಿದ ಪೊಲೀಸ್ ಅಧಿಕಾರಿ ವಿರುದ್ದ ಇಲಾಖಾ ತನಿಖೆ ನಡೆಸಬೇಕು. ಆತ ನಿರ್ದೋಷಿ ಎಂದು ಸಾಬೀತಾಗುವವರೆಗೆ ಆತ ಶಿಸ್ತುಕ್ರಮವನ್ನು ಎದುರಿಸಬೇಕು. ಎನ್ ಕೌಂಟರ್ ಹೆಸರಿನ ಹತ್ಯೆಯಲ್ಲಿ ಎಷ್ಟು ಜನ ಅಧಿಕಾರಿಗಳು ಭಾಗಿಯಾಗಿದ್ದಾರೋ ಅವರ್ಯಾರಿಗೂ ಕೂಡಾ ಹುದ್ದೆಯಲ್ಲಿ ಪ್ರಮೋಶನ್ ಅಥವಾ ಪ್ರಶಸ್ತಿ ಘೋಷಣೆ ಮಾಡಬಾರದು ಎಂದು ರಾಷ್ಟ್ರೀಯ ಮಾನವ ಹಕ್ಕು ಆಯೋಗ ಹೇಳುತ್ತದೆ. ವಿಪರ್ಯಾಸ ಎಂದರೆ ಎನ್ ಕೌಂಟರ್ ನಡೆಸಿದ ಅಧಿಕಾರಿಗಳನ್ನು ಹಿರಿಯ ಐಪಿಎಸ್ ಅಧಿಕಾರಿಗಳು ‘ಪೊಲೀಸ್ ಇಲಾಖೆಯ ಕಿರೀಟಕ್ಕೊಂದು ಗರಿ’ಎಂದು ಹೊಗಳುತ್ತಾರೆ !.
ಆದಿವಾಸಿ ನಾಯಕ ವಿಕ್ರಂ ಗೌಡ ಎನ್ ಕೌಂಟರ್ ಪ್ರಕರಣ ಹಲವು ಅನುಮಾನಗಳನ್ನು ಉಂಟು ಮಾಡಿದ್ದು ನಿಜ. ನವೆಂಬರ್ 8 ರಂದು ಎಎನ್ಎಫ್ ಪೊಲೀಸರು ಧರ್ಮಸ್ಥಳದಲ್ಲಿ ಇಬ್ಬರು ನಕ್ಸರನ್ನು ಬಂಧಿಸುತ್ತಾರೆ. ಆ ನಕ್ಸಲರನ್ನು ಪೊಲೀಸರು ಏನು ಮಾಡಿದರು ? ಅವರು ಎಲ್ಲಿದ್ದಾರೆ ? ಆ ಇಬ್ಬರ ಪೈಕಿ ಓರ್ವ ವಿಕ್ರಂ ಗೌಡ ಆಗಿದ್ದರೆ ? ಎಂಬುದು ನಿಗೂಢವಾಗಿದೆ.
ಇದಾದ ಬಳಿಕ ನವೆಂಬರ್ 12 ರಂದು ಜಯಪುರದಲ್ಲಿ ಎಎನ್ಎಫ್ ಎಸ್ಐ ದೂರಿನ ಆಧಾರದ ಮೇಲೆ ಒಂದು ಎಫ್ಐಆರ್ ದಾಖಲಾಗುತ್ತದೆ. ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಾಡಿನೊಳಗಿನ ಮನೆಯೊಂದರಲ್ಲಿ ನಕ್ಸಲರು ಅಡಗಿದ್ದಾರೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ಮಾಡುತ್ತಾರೆ. ಆ ಮನೆಯ ಹೊರಗೆ ಇಬ್ಬರು, ಒಳಗೆ ಇಬ್ಬರು ಬಂದೂಕುದಾರಿಗಳಿದ್ದರು. ಪೊಲೀಸರು ಮನೆಯ ಆವರಣದ ಬಳಿ ತಲುಪುತ್ತಿದ್ದಂತೆ ನಕ್ಸಲರು ಹಿಂಬದಿಯ ಕಾಡಿನಲ್ಲಿ ಓಡಿ ತಪ್ಪಿಸಿಕೊಂಡರು. ತಕ್ಷಣ ಪೊಲೀಸರು ಮನೆಯನ್ನು ತಪಾಸಣೆ ಮಾಡಿದಾಗ ಎರಡು ಬಂದೂಕುಗಳು ಸಿಕ್ಕಿದವು. ಓಡಿ ತಪ್ಪಿಸಿಕೊಂಡ ನಕ್ಸಲರನ್ನು ಮಡಂಗಾರು ಲತಾ ಮತ್ತು ಜಯಣ್ಣ ಎಂದು ಗುರುತಿಸಲಾಗಿದೆ. ಈ ಎಫ್ಐಆರ್ ಕೂಡಾ ಹಲವು ಅನುಮಾನಗಳನ್ನು ಸೃಷ್ಟಿಸುತ್ತದೆ. ಎಫ್ಐಆರ್ ನಲ್ಲಿ ಘಟನೆ ನಡೆದ ಸ್ಥಳವಿಲ್ಲ, ಮನೆಯ ಯಜಮಾನನ ಹೆಸರೂ ಇಲ್ಲ. ಪೊಲೀಸರು ಪ್ರತ್ಯಕ್ಷ ಕಂಡ ನಕ್ಸಲರ ಘಟನೆ ಮತ್ತು ಬಂದೂಕು ವಶಪಡಿಸಿಕೊಂಡ ಪ್ರಕರಣವನ್ನು ಇಷ್ಟು ಲಘುವಾಗಿ ಎಫ್ಐಆರ್ ಮಾಡಲು ಹೇಗೆ ಸಾಧ್ಯ? ಅಂದು ವಿಕ್ರಂ ಗೌಡ ಅರೆಸ್ಟ್ ಆಗಿದ್ದರೆ ? ಧರ್ಮಸ್ಥಳದಲ್ಲಿ ಬಂಧಿತ ಶಂಕಿತ ನಕ್ಸಲರ ವಿಚಾರಣೆಯಿಂದ ಮಾಹಿತಿ ಪಡೆದುಕೊಂಡ ಪೊಲೀಸರು ಜಯಪುರದಲ್ಲಿ ವಿಕ್ರಂ ಗೌಡನನ್ನು ಅರೆಸ್ಟ್ ಮಾಡಿದ್ದರೆ ?
ಈ ಎರಡು ಘಟನೆಗಳ ಬಳಿಕ ನವೆಂಬರ್ 18 ರಂದು ಸೋಮವಾರ ಸಂಜೆ 6 ಗಂಟೆಗೆ ವಿಕ್ರಂ ಗೌಡ ರೇಷನ್ ನಿಗೆಂದು ನಡ್ಪಾಲು ಗ್ರಾಮದ ಪೀತಬೈಲ್ ನ ಜಯಂತ ಮಲೆಕುಡಿಯರ ಮನೆಗೆ ಬಂದಾಗ ಎಎನ್ಎಫ್ ಪೊಲೀಸರು ಎನ್ ಕೌಂಟರ್ ಮಾಡಿದರು ಎಂದು ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ವಿಕ್ರಂ ಗೌಡ ಅವರ ದೇಹದ ಬಳಿ 9 ಎಂಎಂ ಕಾರ್ಬೈನ್ ಅನ್ನು ವಶಡಿಸಿಕೊಳ್ಳಲಾಯಿತು ಎಂದು ಡಿವೈಎಸ್ಪಿ ರಾಘವೇಂದ್ರ ನಾಯಕ್ ಹೇಳುತ್ತಾರೆ. ವಿಕ್ರಂ ಗೌಡಗೆ ಗುಂಡು ಹಾರಿಸಿದ ರಾಘವೇಂದ್ರ ನಾಯಕ್ ಬಳಿ ಎಆರ್ ರೈಫಲ್ ಇತ್ತು. ವಿಕ್ರಂ ಗೌಡ ಕಡೆಗೆ ರಾಘವೇಂದ್ರ ಅವರು ಎಆರ್ ರೈಫಲ್ ನಿಂದ ಶೂಟ್ ಮಾಡುತ್ತಾರೆ. ರಾಘವೇಂದ್ರ ಅವರ ಸಿಬ್ಬಂದಿಯ ಬಳಿ ಎ.ಕೆ.47 ಮತ್ತು ಎಕ್ಸಾಲಿಬರ್ ರೈಫಲ್ಸ್ ಹೊಂದಿದ್ದರು. ಈ ನಾಲ್ಕು ರೀತಿಯ 15ಕ್ಕೂ ಹೆಚ್ಚು ಅತ್ಯಾಧುನಿಕ ರೈಫಲ್ಸ್ ಗಳು ಏಕಕಾಲದಲ್ಲಿ ದಾಳಿ- ಪ್ರತಿದಾಳಿ ಮಾಡಬೇಕಾದರೆ ಆ ಮನೆಯ ಗೋಡೆ, ತೋಟ, ಪೊದೆಗಳು ಸಂಪೂರ್ಣ ಛಿದ್ರವಾಗಬೇಕಿತ್ತು. ಆದರೆ ಅಂತಹ ಯಾವುದೇ ಪರಿಸ್ಥಿತಿ ಅಲ್ಲಿ ಕಾಣುವುದಿಲ್ಲ.
ಇದಲ್ಲದೇ ಸ್ಥಳೀಯರು ಹೇಳುವ ಪ್ರಕಾರ ಎನ್ ಕೌಂಟರ್ ನಡೆದ ದಿನದ ಮೊದಲೇ ಪೀತಬೈಲ್ ನಲ್ಲಿ ಪೊಲೀಸ್ ವಾಹನಗಳ ಓಡಾಟ ಜೋರಾಗಿತ್ತು. ಘಟನೆ ಸೋಮವಾರ ಸಂಜೆ ನಡೆದಿದ್ದರೆ ಬೆಳಗ್ಗೆಯಿಂದ ಸರಣಿಯಾಗಿ ಪೊಲೀಸ್ ವಾಹನಗಳು ಬಂದಿದ್ದವು. ಇಷ್ಟೆಲ್ಲಾ ಪೊಲೀಸ್ ವಾಹನದ ಪ್ರದೇಶಕ್ಕೆ ವಿಕ್ರಂ ಗೌಡ ಯಾಕೆ ಬರುತ್ತಾರೆ ? ಎನ್ ಕೌಂಟರ್ ನಡೆದ ಮನೆ ಮತ್ತು ಸುತ್ತಮುತ್ತಲಿನ ಯಾವ ಮನೆಯಲ್ಲೂ ಎನ್ ಕೌಂಟರ್ ನಡೆದ ದಿನ ಜನರು ಇರಲಿಲ್ಲ. ಜನರಿಲ್ಲದ ಮನೆಯಿಂದ ವಿಕ್ರಂ ಗೌಡ ರೇಷನ್ ಸಂಗ್ರಹಕ್ಕೆ ಬರುತ್ತಾರೆಯೇ ?
ಎನ್ ಕೌಂಟರ್ ಬಗ್ಗೆ ಯಾವ ಅನುಮಾನಗಳು ಇಲ್ಲದೇ ಇದ್ದರೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮಾರ್ಗದರ್ಶಿ ಸೂತ್ರದಲ್ಲಿ ಸರ್ಕಾರ ತನಿಖೆ ನಡೆಸಬೇಕು. ವಿಕ್ರಂ ಗೌಡ ಎನ್ ಕೌಂಟರ್ ನಲ್ಲಿ ಹತ್ತಾರು ಸಂದೇಹಗಳಿವೆ. ನಡ್ಪಾಲು, ಕಬ್ಬಿನಾಲೆ, ಕೂಡ್ಲುವಿನ ಪ್ರತೀ ಮನೆಯಲ್ಲೂ ಎನ್ ಕೌಂಟರ್ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಆದರೂ ಪೊಲೀಸ್ ಇಲಾಖೆ ಮತ್ತು ಸರಕಾರ ಆಯೋಗದ ಮಾರ್ಗದರ್ಶಿ ಸೂಚನೆಗಳಂತೆ ನಡೆದುಕೊಳ್ಳದೇ ಇರುವುದು ವಿಪರ್ಯಾಸ. ಇದು ಒಂದಲ್ಲ ಒಂದು ದಿನ ಸರಕಾರವನ್ನು ಕಾನೂನಿನ ಕಟಕಟೆಯಲ್ಲಿ ನಿಲ್ಲಿಸಲಿದೆ ಎಂಬ ಎಚ್ಚರಿಕೆ ಸರಕಾರ ನಡೆಸುವವರಿಗೆ ಇರಬೇಕಿದೆ.