ಆಮ್ಲಜನಕ ಸಾಂದ್ರಕಗಳ ಆಮದು ಮೇಲೆ ಐಜಿಎಸ್ಟಿ ವಿಧಿಸಿರುವುದು ‘ಅಸಾಂವಿಧಾನಿಕ’ ಎಂದ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ
ಹೊಸದಿಲ್ಲಿ, ಜೂ. 1: ವೈಯುಕ್ತಿಕ ಬಳಕೆಗೆ ಆಮ್ಲಜನಕ ಸಾಂದ್ರಕಗಳನ್ನು ಆಮದು ಮಾಡುವುದರ ಮೇಲೆ ಸಂಯೋಜಿತ ಸರಕು ಹಾಗೂ ಸೇವೆಗಳ ತೆರಿಗೆ (ಐಜಿಎಸ್ಟಿ) ವಿಧಿಸುವುದನ್ನು ‘‘ಅಸಾಂವಿಧಾನಿಕ’’ ಎಂದು ಕರೆದ ದಿಲ್ಲಿ ಉಚ್ಚ ನ್ಯಾಯಾಲಯದ ಆದೇಶಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ತಡೆ ವಿಧಿಸಿದೆ.
ಉಚ್ಚ ನ್ಯಾಯಾಲಯದ ಮೇ 21ರ ಆದೇಶದ ವಿರುದ್ಧ ಕೇಂದ್ರ ಹಣಕಾಸು ಸಚಿವಾಲಯ ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು. ‘‘ಮುಂದಿನ ಆದೇಶದ ವರೆಗೆ ದಿಲ್ಲಿ ಉಚ್ಚ ನ್ಯಾಯಾಲಯದ ಆದೇಶದ ಕಾರ್ಯಾಚರಣೆಗೆ ನಾವು ತಡೆ ವಿಧಿಸುತ್ತೇವೆ’’ ಎಂದು ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ ಹಾಗೂ ಎಂ.ಆರ್. ಶಾ ಅವರನ್ನೊಳಗೊಂಡ ವಿಶೇಷ ನ್ಯಾಯಪೀಠ ಹೇಳಿದೆ. ಅಲ್ಲದೆ ಮನವಿಯ ಕುರಿತಂತೆ ನೋಟಿಸು ಜಾರಿ ಮಾಡಿ ಉಚ್ಚ ನ್ಯಾಯಾಲಯದ ಮುಂದೆ ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಸಿದ ದೂರುದಾರರಿಂದ ಪ್ರತಿಕ್ರಿಯೆ ಕೋರಿದೆ. ಆಮ್ಲಜನಕದ ಸಾಂದ್ರಕಗಳು ಸೇರಿದಂತೆ ಕೋವಿಡ್-19ಕ್ಕೆ ಸಂಬಂಧಿಸಿದ ಅಗತ್ಯದ ವಸ್ತುಗಳಿಗೆ ಜಿಎಸ್ಟಿ ವಿನಾಯತಿ ನೀಡುವ ಕುರಿತು ಪರಿಶೀಲಿಸಲು ಜೂನ್ 8ರಂದು ಜಿಎಸ್ಟಿ ಮಂಡಳಿ ಸಭೆಯನ್ನು ಆಯೋಜಿಸಲಾಗಿದೆ ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ವಾದಿಸಿದರು.
‘‘ಈ ಹಿಂದೆ ಐಜಿಎಸ್ಟಿ ಶೇ. 77 ಇತ್ತು. ಅದನ್ನು ನಾವು ಶೇ. 28ಕ್ಕೆ ಇಳಿಕೆ ಮಾಡಿದೆವು. ಅದನ್ನು ಮತ್ತೆ ಶೇ. 12ಕ್ಕೆ ಇಳಿಸಲಾಯಿತು. ಆದರೆ, ಇದು ಕಲಂ 21ನ್ನು ಉಲ್ಲಂಘಿಸಿದೆ ಎಂದು ಅವರು ಇನ್ನೂ ಹೇಳುತ್ತಿದ್ದಾರೆ’’ ಎಂದು ವೇಣುಗೋಪಾಲ್ ತಿಳಿಸಿದರು. ಆಮ್ಲಜನಕ ಸಾಂದ್ರಕಗಳ ಆಮದು ಮೇಲೆ ರಾಜ್ಯ ಹಾಗೂ ಸರಕಾರದ ಇತರ ಏಜೆನ್ಸಿಗಳಿಗೆ ಈಗಾಗಲೇ ಐಜಿಎಸ್ಟಿ ವಿನಾಯತಿ ನೀಡಲಾಗಿದೆ ಎಂಬುದನ್ನು ಉಚ್ಚ ನ್ಯಾಯಾಲಯ ಪರಿಗಣಿಸಿಲ್ಲ ಎಂದು ಅವರು ಹೇಳಿದರು. ಅಟಾರ್ನಿ ಜನರಲ್ ಅವರ ಪ್ರತಿಪಾದನೆಯನ್ನು ಗಮನಿಸಿದ ವಿಶೇಷ ನ್ಯಾಯಪೀಠ ಪ್ರಕರಣದ ವಿಚಾರಣೆಯನ್ನು ನಾಲ್ಕು ವಾರಗಳ ಕಾಲ ಮುಂದೂಡಿತು. ವೈಯುಕ್ತಿಕ ಬಳಕೆಗಾಗಿ ಆಮದು ಮಾಡಿಕೊಳ್ಳುವ ಸಾಂದ್ರಕಗಳು, ಅದು ಕೊಡುಗೆಯಾಗಿದ್ದರೂ ಇಲ್ಲದೆ ಇದ್ದರೂ ಶೇ. 12ರಷ್ಟು ಐಜಿಎಸ್ಟಿ ವಿಧಿಸಲಾಗುವುದು ಎಂದು ಹಣಕಾಸು ಸಚಿವಾಲಯ ಜಾರಿಗೊಳಿಸಿದ ಅಧಿಸೂಚನೆಯನ್ನು ಉಚ್ಚ ನ್ಯಾಯಾಲಯ ಮೇ 21ರಂದು ರದ್ದುಗೊಳಿಸಿತ್ತು.