ಹಾಸನ: 333 ರೂ. 33 ಪೈಸೆಗೆ ಕೋವಿಡ್ ವಾರ್ಡ್ ನಲ್ಲಿ ದುಡಿಯುತ್ತಿರುವ ಪದವೀಧರರು
ಸಕಲೇಶಪುರ, ಜೂ.3: ಕೋವಿಡ್ ರೋಗಿಗಳ ಹತ್ತಿರ ಹೋಗಲೂ ಹಿಂಜರಿಯುವ, ಆಪ್ತರು ಸತ್ತರೂ ಶವಕ್ಕೆ ಹೆಗಲು ನೀಡಲು ಭಯ ಪಡುವ ಈ ಸಂದರ್ಭದಲ್ಲಿ ಕೋವಿಡ್ ವಾರ್ಡ್‌ನಲ್ಲಿ ಪಿಪಿಇ ಕಿಟ್ ಧರಿಸಿ 24 'ಡಿ' ಗ್ರೂಪ್ ನೌಕರರು ಕೆಲಸ ಮಾಡುತ್ತಿದ್ದಾರೆ.
ಕೊರೋನ ವಾರ್ಡ್‌ಗಳಲ್ಲಿ ದುಡಿಯುವ 'ಡಿ' ಗ್ರೂಪ್ ನೌಕರರ ದಿನದ ಆದಾಯ 333 ರೂ. 33 ಪೈಸೆ. ಪದವಿ ವಿದ್ಯಾಭ್ಯಾಸ ಹೊಂದಿರುವ ಇವರು ಪಾಳಿಯಲ್ಲಿ ಪಿಪಿಇ ಕಿಟ್ ಧರಿಸಿ ದುಡಿಯುತ್ತಾರೆ. ಕಾಫಿ ತೋಟದ ಕೂಲಿ ಕಾರ್ಮಿಕರ ದಿನದ ಆದಾಯಕ್ಕಿಂತಲೂ ಕನಿಷ್ಠ ದರದಲ್ಲಿ ದುಡಿಯುವ ಈ ನೌಕರರ ಸೇವೆ ನಿಜಕ್ಕೂ ಶ್ಲಾಘನೀಯ.
'ಡಿ' ಗ್ರೂಪ್ ನೌಕರರ ತಿಂಗಳ ಸಂಬಳ 10 ಸಾವಿರ ರೂ. ಇದನ್ನು ದಿನಕ್ಕೆ ವಿಭಾಗಿಸಿದರೆ 333 ರೂ. 33 ಪೈಸೆ ಮಾತ್ರ. 24 ಮಂದಿ 'ಡಿ' ಗ್ರೂಪ್ ನೌಕರರಲ್ಲಿ 19 ಮಂದಿ ಪದವಿ ವಿದ್ಯಾರ್ಹತೆ ಹೊಂದಿದ್ದಾರೆ. ಉಳಿದವರು ಪಿಯುಸಿ ಮತ್ತು ಎಸೆಸೆಲ್ಸಿ ವಿದ್ಯಾರ್ಹತೆ ಹೊಂದಿದವರು. 19 ಪುರುಷರು ಮತ್ತು 6 ಮಹಿಳೆಯರು ದಿನಕ್ಕೆ 3 ಶಿಫ್ಟ್‌ನಲ್ಲಿ ಸೇವೆ ಸಲ್ಲಿಸುತ್ತಾರೆ.
ರೋಗಿಗಳ ಸಂಪೂರ್ಣ ಆರೈಕೆಯನ್ನು ಇವರುಗಳೇ ಮಾಡುತ್ತಾರೆ. ರೋಗಿಗಳಿಗೆ ಆರೋಗ್ಯ ತಪಾಸಣೆ, ಊಟ ಮಾಡಿಸುವುದು, ಡೈಪರ್, ಬಟ್ಟೆಗಳನ್ನು ಬದಲಾಯಿಸುವುದು, ವಾಂತಿ ಮಾಡಿಕೊಂಡರೆ ಸ್ವಚ್ಛ ಗೊಳಿಸುವುದು, ಸ್ನಾನ ಮಾಡಿಸುವುದು, ವಾರ್ಡ್ ಕ್ಲೀನ್ ಮಾಡುವುದು, ಶೌಚಾಲಯ ಸ್ವಚ್ಛ ಮಾಡುವುದು ಇತ್ಯಾದಿ ಕೆಲಸಗಳನ್ನು ಅವರು ನಿರ್ವಹಿಸುತ್ತಾರೆ.
ರೋಗಿಗಳ ಹಣ ಸೇರಿದಂತೆ ಮೊಬೈಲ್, ಚಿನ್ನದ ವಸ್ತುಗಳ ಮೇಲೆ ನಿಗಾವಹಿಸಿ, ಒಂದು ವೇಳೆ ರೋಗಿ ಮೃತಪಟ್ಟ ಸಂದರ್ಭದಲ್ಲಿ ಹಣ, ಚಿನ್ನ, ಮೊಬೈಲ್ ಅವರ ಸಂಬಂಧಿಕರಿಗೆ ನೀಡುತ್ತಾರೆ. ಕೋವಿಡ್ ರೋಗಿ ಮೃತಪಟ್ಟರೆ, ಮೃತದೇಹ ಪ್ಯಾಕ್ ಮಾಡುತ್ತಾರೆ. ಹೀಗೆ ಇವರ ಸೇವೆಯ ಪಟ್ಟಿ ಬೆಳೆಯುತ್ತಾ ಸಾಗುತ್ತದೆ.
ಕೋವಿಡ್ ವಾರ್ಡ್‌ನಲ್ಲಿ ಡಾಕ್ಟರ್‌ಗಳು ನರ್ಸ್‌ಗಳು ಹೇಳುವ ಎಲ್ಲ ಕೆಲಸವನ್ನೂ ಅಚ್ಚುಕಟ್ಟಾಗಿ ಮಾಡುತ್ತಾರೆ. ಸದಾ ಕೋವಿಡ್ ರೋಗಿಗಳ ಸಂಪರ್ಕದಲ್ಲಿ ಇರುವ ಇವರು ತಮ್ಮ ಕುಟುಂಬಿಕರ ಜೊತೆಯಲ್ಲಿ ಇರಲು ಸಾಧ್ಯವಾಗದೆ ಸೋಂಕಿನ ಭಯದಿಂದ ಅನೇಕರು ಹಾಸ್ಟೆಲ್ ನಲ್ಲಿ ವಾಸಿಸುತ್ತಿದ್ದಾರೆ.
ಸರಕಾರ ಇವರಿಗೆ ಕೋವಿಡ್ ಲಸಿಕೆ ನೀಡಿದೆ ಆದರೆ ಇವರ ಕುಟುಂಬದ ಸದಸ್ಯರಿಗೆ ನೀಡಿಲ್ಲ. ಇವರ ಸೇವೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಸಸ್ಥಿ ಸೆಕ್ಯೂರಿಟಿ ಏಜೆನ್ಸಿ ಎಂಬ ಸಂಸ್ಥೆಗೆ ಇವರಲ್ಲಿ ಅನೇಕರು 30 ಸಾವಿರ ರೂ. ನೀಡಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ. ಈಗ ಉದ್ಯೋಗ ಎಂಟಪ್ರೈಸಸ್ ಇವರನ್ನು ಮರು ನೇಮಕ ಮಾಡಿಕೊಂಡಿದೆ. ಇವರ ಕೆಲಸ ಖಾಯಂ ಅಲ್ಲ. ಗುತ್ತಿಗೆ ಪಡೆದ ಸಂಸ್ಥೆಗಳು ಯಾವ ಕ್ಷಣದಲ್ಲಾದರೂ ಇವರನ್ನು ಕೆಲಸದಿಂದ ತೆಗೆದು ಹಾಕಬಹುದು. ಕೆಲಸದ ಭದ್ರತೆ ಇವರಿಗೆ ಇಲ್ಲ.
ಖಾಯಂ ಕೆಲಸ ಸಿಗಬಹುದು ಎಂಬ ಆಸೆಯಿಂದ ಕನಿಷ್ಠ ಸಂಬಳಕ್ಕೆ ದುಡಿಯುತ್ತಿರುವ ವಿದ್ಯಾವಂತ ನೌಕರರ ಸಮಸ್ಯೆಗೆ ಸರಕಾರ ಸ್ಪಂದಿಸಿ, ಕೊರೋನ ಸಂಕಷ್ಟದ ಸಂದರ್ಭದಲ್ಲಿ ಸಲ್ಲಿಸಿರುವ ಮಾನವೀಯ ಸೇವೆ ಗುರುತಿಸಿ ಖಾಯಂ ನೌಕರಿ ನೀಡುವ ಜೊತೆಗೆ ವೇತನವನ್ನೂ ಹೆಚ್ಚಿಸಬೇಕಿದೆ.