ಶೇಖ್ ಅಹ್ಮದ್ ಯಾಸೀನ್ ಎಲ್ಲೆಡೆ ಸಂಚಲನ ಮೂಡಿಸಿದ ನಿಶ್ಚಲ ಮನುಷ್ಯ

Update: 2021-07-07 05:23 GMT

                                                                                  ► ಭಾಗ-18

ಇಂದು ಫೆಲೆಸ್ತೀನ್‌ನಲ್ಲಿ ಪ್ರಬಲವಾಗಿರುವ ಹಮಾಸ್ ಪಕ್ಷದ ಸ್ಥಾಪಕ, ಶೇಖ್ ಅಹ್ಮದ್ ಯಾಸೀನ್ 1936 ರಲ್ಲಿ ಅಲ್ ಜೂರಾ ಎಂಬ ಫೆಲೆಸ್ತೀನ್‌ನ ಒಂದು ಸುಂದರ ಗ್ರಾಮದಲ್ಲಿ ಜನಿಸಿದರು. ಸುಮಾರು 500 ಮನೆಗಳಿದ್ದ ಆ ಗ್ರಾಮ ಇಂದು ಭೂಪಟದಿಂದ ಅಳಿದು ಹೋಗಿದೆ. 1948ರಲ್ಲಿ ಫೆಲೆಸ್ತೀನ್ ಅನ್ನು ಆಕ್ರಮಿಸುವ ವೇಳೆ ಇಸ್ರೇಲ್ ಸೇನೆಯು ಬುಲ್‌ಡೋಝರ್‌ಗಳನ್ನು ತಂದು ಆ ಗ್ರಾಮವನ್ನು ನೆಲಸಮ ಮಾಡಿತ್ತು. ಅಂದು ನಿರಾಶ್ರಿತರಾಗಿದ್ದ ಲಕ್ಷಾಂತರ ಫೆಲೆಸ್ತೀನಿಗಳಲ್ಲಿ ಶೇಖ್ ಯಾಸೀನ್‌ರ ಕುಟುಂಬವೂ ಸೇರಿತ್ತು. ಅವರ ಪರಿವಾರವು ಗಾಝಾ ಪಟ್ಟಿಯಲ್ಲಿ ಶಿಬಿರ ಹೂಡಿತ್ತು. ಅದೇ ವರ್ಷ ಅಂದರೆ ಶೇಖ್ ಯಾಸೀನ್ 12 ವರ್ಷದವರಾಗಿದ್ದಾಗ ಆಟ ಆಡುತ್ತಿದ್ದ ವೇಳೆ ಸಂಭವಿಸಿದ ಒಂದು ಅಪಘಾತದಲ್ಲಿ ಅವರಿಗೆ ಗಂಭೀರ ಗಾಯವಾಗಿ ಎರಡೂ ಕಾಲುಗಳು ಮತ್ತು ಎರಡೂ ಕೈಗಳು ನಿಷ್ಕ್ರಿಯವಾಗಿ ಬಿಟ್ಟವು. ಮುಂದಿನ ಅವರ ಬದುಕೆಲ್ಲಾ ವೀಲ್‌ಚೇರ್‌ನಲ್ಲೇ ಕಳೆಯಿತು.

 ಅಸ್ವಸ್ಥರಾಗಿದ್ದರೂ ಶಿಕ್ಷಣ ಮುಂದುವರಿಸಿದ ಯಾಸೀನ್ 1959ರಲ್ಲಿ ‘ಐನ್ ಶಮ್ಸ್ ವಿಶ್ವವಿದ್ಯಾನಿಲಯ’ ಸೇರಲು ಈಜಿಪ್ಟ್‌ಗೆ ಹೋದರು. ಆರ್ಥಿಕ ಸಮಸ್ಯೆಯಿಂದಾಗಿ ಕೋರ್ಸ್ ಪೂರ್ತಿಮಾಡಲಾಗದೆ ಮಧ್ಯದಲ್ಲೇ ಮರಳಿ ಬಂದರು. ಈಜಿಪ್ಟ್‌ನಲ್ಲಿ ತಮ್ಮ ಅಲ್ಪಾವಧಿಯ ವಾಸ್ತವ್ಯದ ಮಧ್ಯೆ ಅಲ್ಲಿನ ‘ಇಖ್ವಾನ್ ಅಲ್ ಮುಸ್ಲಿಮೂನ್’ ಅಥವಾ ಬ್ರದರ್ ಹುಡ್ ಸಂಘಟನೆಯ ನಾಯಕರ ಜೊತೆ ಸಂಪರ್ಕ ಬೆಳೆಸಿಕೊಂಡ ಶೇಖ್ ಯಾಸೀನ್, ಅವರ ವಿಚಾರಧಾರೆಯಿಂದ ಪ್ರಭಾವಿತರಾದರು. ಮುಂದೆ ಅವರು ಫೆಲೆಸ್ತೀನ್‌ನಲ್ಲಿ ಸ್ಥಾಪಿಸಿದ ‘ಹಮಾಸ್’ ಸಂಘಟನೆಯ ಹಿಂದೆಯೂ ಅದೇ ವಿಚಾರ ಧಾರೆಯ ಪ್ರಭಾವ ಇತ್ತು.

ಶೇಖ್ ಯಾಸೀನ್, ಫೆಲೆಸ್ತೀನ್‌ನಲ್ಲಿ ಅರಬಿ ಮತ್ತು ಇಸ್ಲಾಮ್ ಧರ್ಮದ ಶಿಕ್ಷಕರಾಗಿ ಸೇವೆ ಸಲ್ಲಿಸಲಾರಂಭಿಸಿದ ಬಳಿಕ ಕೆಲವೇ ವರ್ಷಗಳ ಅವಧಿಯಲ್ಲಿ ಜನರು ಅವರನ್ನು ಆ ಪ್ರದೇಶದ ಅತ್ಯಂತ ಗೌರವಾನ್ವಿತ ವಿದ್ವಾಂಸರಾಗಿ ಗುರುತಿಸತೊಡಗಿದರು. ವಿಶೇಷವಾಗಿ ಅವರು ಸಾಮಾಜಿಕ ನ್ಯಾಯ, ನವ ವಸಾಹತುಶಾಹಿತ್ವ, ಅಭಿವ್ಯಕ್ತಿ ಸ್ವಾತಂತ್ರ ಮಾನವಹಕ್ಕುಗಳು ಇತ್ಯಾದಿಗಳ ಕುರಿತಂತೆ ಆಡುತ್ತಿದ್ದ ಮಾತುಗಳು ಅಪಾರ ಅಭಿಮಾನಿಗಳನ್ನು ಅವರೆಡೆಗೆ ಸೆಳೆದವು. ಯುವ ಪೀಳಿಗೆಯಲ್ಲಿ ಅವರ ಅಭಿಮಾನಿಗಳ ಒಂದು ದೊಡ್ಡ ಬಳಗವೇ ಬೆಳೆಯಿತು. ಅವರ ಜನಪ್ರಿಯತೆ ಬೆಳೆದಂತೆಲ್ಲಾ ಇಸ್ರೇಲ್ ಸರಕಾರವು ಅವರ ವಿರುದ್ಧ ಕಟ್ಟುನಿಟ್ಟಿನ ಬೇಹುಗಾರಿಕೆ ನಡೆಸಲು ಮತ್ತು ಅವರಿಗೆ ಕಿರುಕುಳ ನೀಡಲು ಆರಂಭಿಸಿತು. 1983 ರಲ್ಲಿ, ಒಂದು ಭೂಗತ ಸಂಘಟನೆಯನ್ನು ಸ್ಥಾಪಿಸಿದರು ಮತ್ತು ಅಕ್ರಮ ಶಸ್ತ್ರಾಸ್ತ್ರ ಸಂಗ್ರಹಿಸಿಟ್ಟರು ಎಂಬ ಆರೋಪ ಹೊರಿಸಿ ಸರಕಾರವು ಈ ವೀಲ್ ಚೇರ್ ದಾರ್ಶನಿಕನನ್ನು ಬಂಧಿಸಿತು. ಮುಂದೆ ಇವರಿಗೆ 13 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಯಿತು. ಎರಡು ವರ್ಷಗಳ ಬಳಿಕ ಕೈದಿಗಳ ವಿನಿಮಯ ಕಾರ್ಯಕ್ರಮವೊಂದರ ಪ್ರಕಾರ ಅವರನ್ನು ಬಿಟ್ಟು ಬಿಡಲಾಯಿತು.

1987ರಲ್ಲಿ ಶೇಖ್ ಯಾಸೀನ್ ಅವರು ‘ಹರಕ ಅಲ್ ಮಖಾವಮ ಅಲ್ ಇಸ್ಲಾಮಿಯ್ಯ’ (ಇಸ್ಲಾಮಿಕ್ ಪ್ರತಿರೋಧ ಆಂದೋಲನ - ಸಂಕ್ಷಿಪ್ತವಾಗಿ ‘ಹಮಾಸ್’) ಸಂಘಟನೆಯನ್ನು ಸ್ಥಾಪಿಸಿದರು. ಫೆಲೆಸ್ತೀನ್ ಬೆಳವಣಿಗೆಗಳನ್ನು ಗಮನಿಸುತ್ತಿದ್ದವರು ಆಗಲೇ, ಅಲ್ಲಿಯ ವಿಮೋಚನಾ ಚಳವಳಿಯನ್ನು ಶೇಖ್ ಯಾಸೀನ್, ಅವರ ವೀಲ್ ಚೇರ್, ಅವರ ಹಮಾಸ್ ಸಂಘಟನೆ ಮತ್ತು ಅವರಿಂದ ಪ್ರೇರಿತ ‘ಇನ್ತಿಫಾದಃ’ ಆಂದೋಲನದ ಜೊತೆ ಗುರುತಿಸಲು ಆರಂಭಿಸಿದ್ದರು.

 1989 ರಲ್ಲಿ ಅವರನ್ನು ಮತ್ತೆ ಬಂಧಿಸಲಾಯಿತು. ಈ ಬಾರಿ ಅವರ ಮೇಲೆ, ಹಿಂಸೆಗೆ ಪ್ರಚೋದನೆ ಮತ್ತು ಒಬ್ಬ ಇಸ್ರೇಲಿ ಯೋಧನ ಹತ್ಯೆಗೆ ಆದೇಶ ನೀಡಿದ್ದರೆಂಬ ಆರೋಪ ಹೊರಿಸಲಾಯಿತು. ನ್ಯಾಯಾಲಯವು ಅವರಿಗೆ 40 ವರ್ಷಗಳ ಕಠಿಣ ಶಿಕ್ಷೆಯನ್ನೂ ವಿಧಿಸಿತು. ಅವರ ಬಂಧನ, ವಿಚಾರಣೆ ಮತ್ತು ಶಿಕ್ಷೆಯ ಸುದ್ದಿಗಳು ಅರಬ್ ಮಾಧ್ಯಮಗಳಲ್ಲಿ ಸತತ ಚರ್ಚೆಯಲ್ಲಿದ್ದವು. ವೀಲ್ ಚೇರ್‌ನಲ್ಲಿರುವ ಯಾಸೀನ್‌ರ ನಿಶ್ಚಲ ಶರೀರ ಮತ್ತು ಅವರ ಮೇಲೆ ಹೊರಿಸಲಾದ ಗಂಭೀರ ಆರೋಪಗಳ ಪಟ್ಟಿ, ಇವೆರಡನ್ನೂ ಜೊತೆಗಿಟ್ಟು ಜನರು ಇಸ್ರೇಲ್ ಸರಕಾರವನ್ನು ಲೇವಡಿ ಮಾಡುತ್ತಿದ್ದರು. 8 ವರ್ಷ ಅವರು ಜೈಲಲ್ಲಿದ್ದರು. ತೀವ್ರ ಅಂತರ್‌ರಾಷ್ಟ್ರೀಯ ಒತ್ತಡದಡಿಯಲ್ಲಿ, ಅವರ ಇಬ್ಬರು ಪುತ್ರರನ್ನು ಅವರ ಸೇವೆಗಾಗಿ ಅವರ ಜೊತೆಗಿರಲು ಅನುಮತಿಸಲಾಯಿತು. ಜಗತ್ತಿನ ವಿವಿಧ ಭಾಗಗಳಿಂದ ಅವರ ಬಿಡುಗಡೆಗೆ ಆಗ್ರಹಿಸುವ ಮನವಿಗಳು ಬರತೊಡಗಿದವು. ಕೊನೆಗೆ 1997ರಲ್ಲಿ ಇಸ್ರೇಲ್ ಸರಕಾರ ಮತ್ತು ಜೋರ್ಡನ್ ನ ಕಿಂಗ್ ಹುಸೈನ್ ಮಧ್ಯೆ ನಡೆದ ಒಂದು ಒಪ್ಪಂದದ ಪ್ರಕಾರ ಅವರನ್ನು ಬಿಡುಗಡೆಗೊಳಿಸಲಾಯಿತು. ಆದರೆ ಅಷ್ಟರಲ್ಲೇ ಅವರ ಅರೋಗ್ಯವು ತೀವ್ರ ಹದಗೆಟ್ಟಿತ್ತು. ವಿಚಾರಣೆಯ ಹೆಸರಲ್ಲಿ ನಡೆಸಲಾದ ಚಿತ್ರಹಿಂಸೆಯಿಂದಾಗಿ ಅವರ ಬಲಗಣ್ಣು ನಿಷ್ಕ್ರಿಯವಾಗಿತ್ತು ಹಾಗೂ ಶ್ರವಣ ಶಕ್ತಿ ಕ್ಷೀಣಿಸಿತ್ತು. ಜೈಲಿನಲ್ಲಿದ್ದ ತೀರಾ ಪ್ರತಿಕೂಲ ಪರಿಸ್ಥಿತಿಯಿಂದಾಗಿ ಉಸಿರಾಟದ ತೊಂದರೆಯೂ ಕಾಣಿಸಿಕೊಂಡಿತ್ತು.

 ಎಫ್ - 16 ಫೈಟರ್ ಜೆಟ್ ಅನ್ನು ಸೋಲಿಸಿದ ವೀಲ್ ಚೇರ್

ಹಮಾಸ್ ನಾಯಕ ಶೇಖ್ ಯಾಸೀನ್‌ರ ಹತ್ಯೆಗೆ ಇಸ್ರೇಲ್ ಸರಕಾರ ನೇರ ಹಾಗೂ ಪರೋಕ್ಷವಾಗಿ ಹಲವು ಪ್ರಯತ್ನಗಳನ್ನು ನಡೆಸಿತ್ತು. ಸುದ್ದಿ ಸಂಸ್ಥೆ ಅಲ್ ಜಝೀರಾ ವರದಿ ಪ್ರಕಾರ 2003 ಸೆಪ್ಟಂಬರ್ 6ರಂದು ಇಸ್ರೇಲ್ ವಾಯುಪಡೆಯ ಎಫ್ - 16 ಫೈಟರ್ ಜೆಟ್ ವಿಮಾನವು ಗಾಝಾದಲ್ಲಿದ್ದ ಶೇಖ್ ಅಹ್ಮದ್ ಯಾಸೀನ್ ಅವರ ಮನೆಯನ್ನು ಗುರಿಯಾಗಿಸಿ ಹಲವು ಮಿಸೈಲ್‌ಗಳನ್ನು ಪ್ರಯೋಗಿಸಿತ್ತು. ಆವೇಳೆ ಯಾಸೀನ್ ಆ ಮನೆಯಲ್ಲಿದ್ದರು. ತೀವ್ರ ಅನಾರೋಗ್ಯ ಪೀಡಿತ ಸ್ಥಿತಿಯಲ್ಲಿ ವೀಲ್ ಚೇರ್‌ನಲ್ಲಿದ್ದ ಅವರು, ಅಲ್ಪ ಸ್ವಲ್ಪ ಗಾಯಗಳೊಂದಿಗೆ ಬಚಾವಾದರು.

ಘಟನೆಯ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಶೇಖ್ ಹೇಳಿದರು:

ನಾಯಕರನ್ನು ಕೊಲ್ಲುವ ಮೂಲಕ ಹಮಾಸ್ ಅನ್ನು ಮುಗಿಸಬಹುದು ಎಂಬುದು ಇಸ್ರೇಲ್‌ನ ಭ್ರಮೆ. ಹಮಾಸ್ ನಾಯಕರು ಯಾರೂ ಮರಣಕ್ಕೆ ಅಂಜುವುದಿಲ್ಲ. ಅವರು ಹುತಾತ್ಮರಾಗುವುದಕ್ಕೆ ಕಾತರರಾಗಿದ್ದಾರೆ. ಈ ಘಟನೆಯ ಬಳಿಕ ಅವರು ಅಜ್ಞಾತ ಸ್ಥಳಗಳಲ್ಲಿ ಅವಿತಿರುವುದನ್ನು ಬಿಟ್ಟು ತಾನು ಯಾವಾಗ ಎಲ್ಲಿ ಇರುತ್ತೇನೆಂಬುದನ್ನು ಮುಂಗಡವಾಗಿ ಪ್ರಕಟಿಸಲಾರಂಭಿಸಿದರು. 2004 ಜನವರಿ 14 ರೀಮ್ ರಿಯಾಶಿ ಎಂಬ ಮಹಿಳೆ ಆತ್ಮ ಹತ್ಯಾದಾಳಿಯೊಂದರಲ್ಲಿ ನಾಲ್ಕು ಮಂದಿ ಇಸ್ರೇಲಿ ನಾಗರಿಕರನ್ನು ಕೊಂದಾಗ ಅದನ್ನು, ಶೇಖ್ ಯಾಸೀನ್ ಅವರ ಆದೇಶ ಪ್ರಕಾರ ನಡೆಸಲಾದ ಕೃತ್ಯವೆಂದು ಆರೋಪಿಸಲಾಯಿತು. ಯಾಸೀನ್ ಮತ್ತು ಹಮಾಸ್ ಈ ಆರೋಪವನ್ನು ಅಲ್ಲಗಳೆದವು. 2004 ಮಾರ್ಚ್ 22 ರಂದು ಶೇಖ್ ಯಾಸೀನ್ ಗಾಝಾ ದಲ್ಲಿ ಮುಂಜಾವಿನ ನಮಾಝ್ ಮುಗಿಸಿ ಮಸೀದಿಯಿಂದ ಹೊರ ಬರುತ್ತಿ ದ್ದಾಗ ಇಸ್ರೇಲಿ ವಾಯುಪಡೆಯ ಹೆಲಿಕಾಪ್ಟರ್‌ಗಳು ಗುಂಡಿನ ಮಳೆ ಸುರಿಸಿ ಯಾಸೀನ್ ಸಹಿತ 9 ಮಂದಿಯನ್ನು ಕೊಂದು ಹಾಕಿದವು. ಈ ಹತ್ಯೆಯು ಫೆಲೆಸ್ತೀನ್ ಜನತೆಯ ಆಕ್ರೋಶವನ್ನು ಮತ್ತಷ್ಟು ಹೆಚ್ಚಿ ಸಿತು. ಜಗತ್ತಿನ ಹೆಚ್ಚಿನೆಲ್ಲ ದೇಶಗಳು ಇದನ್ನು ಸರಕಾರ ಪ್ರಾಯೋಜಿತ ಹತ್ಯಾಕಾಂಡ ಎಂದು ಖಂಡಿಸಿದವು. ಎಲ್ಲ ಪ್ರತಿಬಂಧಗಳ ಹೊರತಾಗಿಯೂ 2 ಲಕ್ಷಕ್ಕೂ ಹೆಚ್ಚಿನ ಅಭಿಮಾನಿಗಳು ಅವರ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಿದರು. ಈ ವೇಳೆ ಒಬ್ಬ ವಿದ್ಯಾರ್ಥಿ ಸ್ಪ್ರೇ ಪೇಂಟ್ ಮೂಲಕ ಬರೆದ ಒಂದು ಗೋಡೆ ಬರಹ ಹೀಗಿತ್ತು: ಇಲ್ಲಿ ಪ್ರತಿಯೊಬ್ಬರೂ ಶೇಖ್ ಯಾಸೀನ್‌ಗಳೇ. ಅವರೊಬ್ಬರ ಜಾಗ ತುಂಬಲು ಇಲ್ಲಿ ಒಂದು ಮಿಲಿಯ ಜನ ಕಾದಿದ್ದಾರೆ.

ಶೇಖ್ ಯಾಸೀನ್ ಅವರ ಕೆಲವು ಹೇಳಿಕೆಗಳು

ನನ್ನನ್ನು ಕೊಂದರೇನಂತೆ? ನನ್ನಂತಹ ಸಾವಿರಾರು ಮಂದಿ ಎದ್ದು ಬರುತ್ತಾರೆ. ಇಸ್ರೇಲಿಗಳು ತಿಳಿದಿರಬೇಕು: ಅವರು ಏನೇ ಮಾಡಿದರೂ ಈ ಹೋರಾಟ ಮುಂದುವರಿಯಲಿದೆ. ಅವರ ಅಪರಾಧಗಳಿಗಾಗಿ ಅವರು ಭಾರೀ ಬೆಲೆ ತೆರಬೇಕಾಗುತ್ತದೆ. ನಮ್ಮ ಕೆಲಸ ತುಂಬಾ ಕಠಿಣವಾಗಿದೆ ಮತ್ತು ಇದಕ್ಕಾಗಿ ನಾವು ಬಹಳಷ್ಟು ತ್ಯಾಗ ಬಲಿದಾನಗಳನ್ನು ನೀಡಬೇಕಾದೀತು. ಆದರೆ ಇನ್ ಶಾ ಅಲ್ಲಾಹ್, ಭವಿಷ್ಯವು ನಮ್ಮ ಪರವಾಗಿದೆ. ಜಗತ್ತಿನ ಎಲ್ಲ ದೇಶಗಳು ನಮ್ಮ ಗುರಿ ಮತ್ತು ನಮ್ಮ ಹೋರಾಟವನ್ನು ಗೌರವಿಸಿದ್ದರೆ ಎಷ್ಟು ಚೆನ್ನಾಗಿತ್ತು. ನಾವು ಅವರ ಯಾವ ವ್ಯವಹಾರದಲ್ಲೂ ಹಸ್ತಕ್ಷೇಪ ಮಾಡುತ್ತಿರಲಿಲ್ಲ. ಅಮೆರಿಕ ಅಥವಾ ಯುರೋಪ್ ಜೊತೆ ನಮಗೆ ಯಾವ ಜಗಳವೂ ಇಲ್ಲ. ನಮ್ಮ ತಾಯಿನಾಡನ್ನು ಮತ್ತು ನಮ್ಮ ಮನೆಗಳನ್ನು ನಮ್ಮಿಂದ ಕಿತ್ತುಕೊಂಡ ಇಸ್ರೇಲ್ ಎಂಬ ಶತ್ರುವಿನ ವಿರುದ್ಧ ಮಾತ್ರ ನಾವು ಹೋರಾಡುತ್ತಿದ್ದೇವೆ.

(ಮುಂದುವರಿಯುವುದು)

Writer - ಎ.ಎಸ್. ಪುತ್ತಿಗೆ

contributor

Editor - ಎ.ಎಸ್. ಪುತ್ತಿಗೆ

contributor

Similar News