ಸಂಕಷ್ಟದ ಸುಳಿಯಲ್ಲಿ ಅಡಿಕೆ ಬೆಳೆ
ಮಂಗಳೂರು: ದೇಶದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿರುವ ಅಡಿಕೆಯು ಕರ್ನಾಟಕದ ರೈತರ ಜೀವನಾಧಾರಗಳಲ್ಲಿ ಪ್ರಮುಖ ಬೆಳೆಯಾಗಿ ಗುರುತಿಸಿಕೊಂಡಿದೆ. ಹೀಗಾಗಿಯೇ ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಇತರ ಕೃಷಿಗಳ ಜಾಗವನ್ನು ಆವರಿಸಿಕೊಂಡು ಅಡಿಕೆ ಬೆಳೆಯ ಪ್ರದೇಶ ವಿಸ್ತರಣೆಗೊಳ್ಳುತ್ತಾ ಸಾಗಿದೆ. ಅಲ್ಲದೆ ದೇಶದಲ್ಲಿಯೇ ಅಡಿಕೆ ಉತ್ಪಾದನೆಯಲ್ಲಿ ಕರ್ನಾಟಕವು ಪ್ರಥಮ ಸ್ಥಾನಕ್ಕೇರಿದೆ. ಈ ಮಧ್ಯೆ ಅಡಿಕೆ ಬೆಳೆಯನ್ನು ಅತಿಯಾಗಿ ಕಾಡುವ ಕೊಳೆರೋಗ, ಹಳದಿ ರೋಗದಿಂದ ರೈತರು ಕಂಗಾಲಾಗಿದ್ದಾರೆ. ಬೇಡಿಕೆಗಿಂತಲೂ ಹೆಚ್ಚಾಗಿರುವ ಉತ್ಪಾದನೆಯಿಂದ ಬೆಲೆ ಕುಸಿತದ ತಲೆಬಿಸಿಯ ನಡುವೆಯೇ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಅಡಿಕೆಯು ಕ್ಯಾನ್ಸರ್‌ಕಾರಕ ಎಂದು ವರದಿ ನೀಡಿರುವುದು ರಾಜ್ಯದ ಅಡಿಕೆ ಬೆಳೆಗಾರರನ್ನು ಆತಂಕಕ್ಕೀಡು ಮಾಡಿವೆ.
ಅಡಿಕೆಗೆ ಕಾಡುತ್ತಿವೆ ವಿವಿಧ ಮಾರಕ ರೋಗಗಳು
ಇತ್ತೀಚಿನ ವರ್ಷಗಳಲ್ಲಿ ಅಡಿಕೆ ಕೃಷಿಯು ಹಲವು ರೋಗಗಳಿಗೆ ತುತ್ತಾಗುತ್ತಿವೆ. ಎಲೆಚುಕ್ಕಿ, ಕೊಳೆ, ಸುಳಿ, ಹಳದಿ ಎಲೆ, ಅಣಬೆ, ಪಿಂಗಾರು ಕರಡುವ, ಬೇರು ಕೊಳೆಯುವ, ಹಿಡಿಮುಂಡೆಯಂತಹ ರೋಗಗಳಿಗೆ ಅಡಿಕೆ ಮರಗಳು ಬಲಿಯಾಗುತ್ತಿವೆ.
ಅಡಿಕೆ ಮರದ ಎಲೆಗಳ ಅಂಚು ಹಳದಿ ಬಣ್ಣಕ್ಕೆ ತಿರುಗಿ ಬಳಿಕ ಪೂರ್ತಿ ಎಲೆಯು ಹಳದಿ ಮತ್ತು ಹಸಿರು ಪಟ್ಟಿಯಿಂದ ಮಿಶ್ರಿತ ಬಣ್ಣವಾಗುವುದು ಹಳದಿ ರೋಗದ ಲಕ್ಷಣವಾಗಿದೆ. ಕ್ರಮೇಣ ಎಲೆಗಳು ಒಣಗಲಾರಂಭಿಸುತ್ತವೆ. ಅಂತಿಮವಾಗಿ ಅಡಿಕೆ ಮರವೇ ಒಣಗಿ ಸಾಯುತ್ತವೆ. ರೋಗ ಬಾಧಿಸಿದ ಮರದ ಅಡಿಕೆಯು ಕಂದು ಬಣ್ಣದಿಂದ ಕೂಡಿದ್ದು, ಸೇವನೆಗೆ ಯೋಗ್ಯವಾಗಿರುವುದಿಲ್ಲ.
ಹುಳಗಳ ಉಪಟಳ
ಅಡಿಕೆ ಬೆಳೆಗೆ ಕಾಡುವ ಹುಳಬಾಧೆಯಲ್ಲಿ ಪೆಂಟಾಟೋವಿಡ್ ಕೂಡಾ ಒಂದು. ಈ ಕೀಟವು ಅಡಿಕೆ ಕಾಯಿ ಹಾಗೂ ಮೊಗ್ಗುಗಳ ತೊಟ್ಟಿನ ಭಾಗಕ್ಕೆ ಕಚ್ಚಿ ಹಾನಿಗೊಳಿಸುತ್ತವೆ.
ಹಿಂಗಾರ (ಅಡಿಕೆ ಹೂವು) ಒಣಗು ರೋಗ
ಹಿಂಗಾರ ಒಣಗು ರೋಗವು ಸಾಮಾನ್ಯ ವಾಗಿ ಜನವರಿ-ಮೇ ತಿಂಗಳಿನಲ್ಲಿ ಹೆಚ್ಚಾಗಿ ಬಾಧಿಸುತ್ತದೆ. ಈ ರೋಗ ಬಾಧೆಗೊಳಗಾದ ಹಿಂಗಾರದ ಹೂಗಳು ಮತ್ತು ಎಳೆಮೊಗ್ಗುಗಳು ಉದುರುತ್ತವೆ. ಇದನ್ನು ತಡೆಗಟ್ಟದಿದ್ದಲ್ಲಿ ಕ್ರಮೇಣ ಕೀಟದ ಗೂಡುಗಳಿಂದ ತುಂಬಿಕೊಂಡು ಹಿಂಗಾರವೇ ಕೊಳೆಯುತ್ತದೆ.
ಬೇರು ಹುಳ (white grub)
ಇದು ಅಡಿಕೆ ಬೆಳೆಗೆ ಬರುವ ಇನ್ನೊಂದು ಹುಳ ರೋಗ. ಅಧಿಕ ಮರಳಿನಾಂಶ ಇರುವ ಮಣ್ಣಿನ ತೋಟದಲ್ಲಿ ಈ ರೋಗ ಜೂನ್, ಜುಲೈಯಲ್ಲಿ ಕಾಡುತ್ತದೆ. ಬೇರು ಹುಳ ಬಾಧಿಸಿದ ಅಡಿಕೆ ಮರಗಳಲ್ಲಿ ರೋಗಬಾಧೆ ಅದರ ಶಿರಭಾಗದ ಬೆಳವಣಿಗೆಯಲ್ಲಿ ಗೋಚರವಾಗುತ್ತದೆ. ಮಣ್ಣಿನಲ್ಲಿ ಕಾಣಿಸಿಕೊಳ್ಳುವ ಈ ಹುಳಗಳು ಮರಗಳ ಬೇರುಗಳನ್ನು ತಿನ್ನಲು ಆರಂಭಿಸುತ್ತವೆ. ಬೇರುಗಳ ಸಂಖ್ಯೆ ಕ್ಷೀಣಿಸುವುದರಿಂದ ಮರಗಳ ಬೆಳವಣಿಗೆಯ ಪ್ರಮಾಣ ಕುಗ್ಗುತ್ತವೆೆ. ಇದರಿಂದ ಮರಗಳು ನಿತ್ರಾಣಗೊಂಡು ವರ್ಷದಿಂದ ವರ್ಷಕ್ಕೆ ಫಸಲು ಕಡಿಮೆಯಾಗುತ್ತದೆ. ಅಂತಿಮವಾಗಿ ಮರಗಳ ಎಲೆಗಳು ಉದುರ ಲಾರಂಭಿಸುತ್ತವೆ. ಕ್ರಮೇಣ ಮರಗಳು ಸಾಯುತ್ತವೆ.
ಅತಿಯಾದ ಮಳೆಯಿಂದ ಸಮಸ್ಯೆ: ಅಡಿಕೆಯು ನಿಯಮಿತವಾಗಿ ನೀರನ್ನು ಅಪೇಕ್ಷಿಸುವ ಬೆಳೆಯಾಗಿದ್ದು, ನೀರಿನ ತೀವ್ರ ಅಭಾವಕ್ಕೆ ತುತ್ತಾದರೆ ಪುನಃ ಸಹಜ ಸ್ಥಿತಿಗೆ ಬರಲು 2ರಿಂದ 3 ವರ್ಷಗಳೇ ಬೇಕಾಗಬಹುದು. ಅಡಿಕೆ ಗಿಡ ಏಕದಳ ಸಸ್ಯ. ಇದು ನೆಲದ ಮೇಲ್ಪದರದಲ್ಲಿ ಬೇರು ಬಿಡುತ್ತವೆ. ಇದಕ್ಕೆ ಹೆಚ್ಚು ನೀರು ಬಳಸುವುದರಿಂದ ರೋಗ ರುಜಿನಗಳು ಹೆಚ್ಚಾಗುತ್ತವೆ. ಬೆಳೆಗಾರರು ಅಧಿಕವಾಗಿ ಸ್ಪ್ರಿಂಕ್ಲರ್ ನೀರಾವರಿ ಮಾಡುತ್ತಾರೆ. ಇದರಿಂದ ನೆಲ ತೇವವಾಗಿರುತ್ತದೆ. ಪರಿಣಾಮ ಸುಳಿ ರೋಗ, ಕೊಳೆ ರೋಗ, ಮಿಡಿ ಉದುರುವುದು ಇನ್ನಿತರ ರೋಗಗಳಿಗೆ ಕಾರಣವಾಗುತ್ತದೆ. ಅತಿಯಾದ ಮಳೆಯಿಂದ ಮಣ್ಣಿನ ಠಿಊ ಮಟ್ಟ ತೀವ್ರವಾಗಿ ಕಡಿಮೆಯಾಗುತ್ತದೆ. ಮೋಡ ಕವಿದ ವಾತಾವರಣ, ತೋಟದಲ್ಲಿ ನೀರು ನಿಲ್ಲುವಿಕೆ, ಹೆಚ್ಚಾದ ಮಣ್ಣಿನ ತೇವಾಂಶ ಮತ್ತು ಸೂರ್ಯನ ಬೆಳಕಿನ ಕೊರತೆ ಅಡಿಕೆಗೆ ಹಲವು ರೋಗಗಳು ಕಾಣಿಸಿಕೊಳ್ಳಲು ಕಾರಣವಾಗುತ್ತವೆ.
ಸಕಾಲದಲ್ಲಿ ಕೊಯ್ಲು ಮತ್ತು ಸಂಸ್ಕರಣೆೆ
ಉತ್ತಮ ಗುಣಮಟ್ಟದ ಅಡಿಕೆ ಫಸಲು ಪಡೆಯುವಲ್ಲಿ ಸಕಾಲದ ಕೊಯ್ಲು ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಕಳೆದ ಕೆಲ ವರ್ಷಗಳ ವಾತಾವರಣ ಅಡಿಕೆಗೆ ಪ್ರತಿಕೂಲವಾಗಿ ಪರಿಣಮಿಸಿದೆ. ಮಳೆ, ಚಳಿ, ಬಿರುಬಿಸಿಲು ಇವು ಮೂರು ಒಂದೇ ದಿನ ಕಂಡುಬರುತ್ತವೆ. ಇಂತಹ ವಾತಾವರಣ ಕೃಷಿ ಕ್ಷೇತ್ರಕ್ಕೆ ಭಾರೀ ಕಂಟಕವಾಗಿ ಪರಿಣಮಿಸಿದ್ದು, ಅಡಿಕೆ ಕೃಷಿಕರಿಗಂತೂ ದೊಡ್ಡ ಹೊಡೆತ ನೀಡಿದೆ. ಇದರಿಂದ ಅಡಿಕೆ ಹಣ್ಣಾಗಿದ್ದರೂ ಕೊಯ್ಲು ಮಾಡದ ಸ್ಥಿತಿ ಎದುರಾಗಿದೆ. ಅಡಿಕೆಗಳನ್ನು ಶಿಲೀಂಧ್ರದ ಹಾನಿಯಿಂದ ರಕ್ಷಿಸಲು ಸರಿಯಾಗಿ ಒಣಗಿಸುವುದು ಅವಶ್ಯಕ. ಆದರೆ ಅಕಾಲಿಕ ಮಳೆ, ಮೋಡ ಕವಿದ ವಾತಾವರಣದಿಂದ ಕೊಯ್ಲು ಮಾಡಿರುವ ಹಣ್ಣು ಅಡಿಕೆಯನ್ನು ಒಣಗಿಸುವುದು ಬೆಳೆಗಾರರಿಗೆ ಸವಾಲಾಗಿದೆ.
ಅಡಿಕೆ ಬೆಳೆಯ ಭವಿಷ್ಯ
‘ಅಡಿಕೆಗೆ ಭವಿಷ್ಯವಿಲ್ಲ, ಆ ಕೃಷಿ ಮಾಡಬೇಡಿ, ಪರ್ಯಾಯ ಕೃಷಿಗೆ ಆದ್ಯತೆ ನೀಡಿ’ ಎಂಬ ಒತ್ತಾಯ ಆಗಾಗ್ಗ ಕೇಳಿ ಬರುತ್ತ್ತಿದೆ. ಆದರೆ ಅಡಿಕೆ ಕೃಷಿಯ ಭವಿಷ್ಯಕ್ಕೆ ಅಂತಹ ಸಂಕಷ್ಟ ಎದುರಾಗಿಲ್ಲ ಎಂಬುದು ಸತ್ಯ. ಅಡಿಕೆಯ ಬೆಲೆಯಲ್ಲಿ ಏರಿಳಿತದ ಸಂದರ್ಭ ಅಡಿಕೆಯ ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸುತ್ತಲೇ ಹೆಚ್ಚಿನ ಬೆಳೆಗಾರರು ಕೃಷಿ ಪ್ರದೇಶವನ್ನು ವಿಸ್ತರಿಸುತ್ತಲೇ ಇದ್ದಾರೆ. ದಕ್ಷಿಣ ಮತ್ತು ಉತ್ತರ ಕರ್ನಾಟಕ ಬಹುತೇಕ ಜಿಲ್ಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ಅಡಿಕೆ ಬೆಳೆಯುವ ಪ್ರದೇಶ ವಿಸ್ತಾರಗೊಳ್ಳುತ್ತಿದೆ. ನೆರೆಯ ಕೇರಳ, ತಮಿಳುನಾಡು, ಮಹಾರಾಷ್ಟ್ರದಲ್ಲೂ ಅಡಿಕೆ ತೋಟದಲ್ಲಿ ಗಣನೀಯ ಏರಿಕೆ ಕಂಡುಬರುತ್ತಿದೆ.
ಮಾರುಕಟ್ಟೆಯ ಸ್ಥಿತಿ ಏನಾಗಬಹುದು?
ಅಡಿಕೆ ಸುಪಾರಿ, ಗುಟ್ಕಾ ಮಾತ್ರವಲ್ಲದೆ ಇದೀಗ ಐಸ್‌ಕ್ರೀಮ್ ಸೇರಿದಂತೆ ಇತರ ಆಹಾರ ಪದಾರ್ಥಗಳಲ್ಲಿಯೂ ಬಳಕೆಯಾಗುತ್ತಿದೆ. ಹೀಗಾಗಿ ಅಡಿಕೆಗೆ ಬೇಡಿಕೆ ಹೆಚ್ಚಿದೆ. ಆದರೆ ಗುಟ್ಕಾದಲ್ಲಿ ಉಪಯೋಗಿಸುವ ಅಡಿಕೆ ಕ್ಯಾನ್ಸರ್‌ಕಾರಕ ಎಂಬ ವರದಿಯನ್ನು ಡಬ್ಲ್ಯುಎಚ್‌ಒ ನೀಡಿರುವುದರಿಂದ ಅಡಿಕೆ ಬೆಳೆಯ ಮೇಲೆ ತೂಗುಗತ್ತಿ ಬಿದ್ದಿದೆ. ಬೇಡಿಕೆಗಿಂತಲೂ ಅಧಿಕ ಪ್ರಮಾಣದಲ್ಲಿ ಅಡಿಕೆ ಉತ್ಪಾದನೆಯೂ ಬೆಳೆಗಾರರ ಮೇಲೆ ವ್ಯತ್ತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ವಿದೇಶಗಳಿಂದ ಆಮದಾಗುವ ಅಡಿಕೆಯ ಬೆಲೆ ಕಡಿಮೆಯಾಗಿರುವುದು ಕೂಡಾ ಅಡಿಕೆ ಬೆಳೆಗಾರರಿಗೆ ಕಂಟಕವಾಗಿ ಪರಿಣಮಿಸಬಹುದು.
ಇತ್ತೀಚಿನ ವರ್ಷಗಳಲ್ಲಿ ಅಡಿಕೆಯ ಉತ್ಪಾದನೆ ಹೆಚ್ಚುತ್ತಿದ್ದು, ಬೇಡಿಕೆ ಕಡಿಮೆ ಯಾಗುವ ಆತಂಕ ಎದುರಾಗಿದೆ. ಆದ್ದರಿಂದ ಅಡಿಕೆ ತೋಟವನ್ನು ಮತ್ತಷ್ಟು ವಿಸ್ತರಿಸುವ ಕಾರ್ಯವನ್ನು ರೈತರು ಕೈಬಿಡಬೇಕು. ಬದಲಾಗಿ ಇರುವ ತೋಟವನ್ನು ಉಳಿಸಿ ಬೆಳೆಸುವತ್ತ ಹೆಚ್ಚು ಗಮನ ಹರಿಸಬೇಕು ಎನ್ನುತ್ತಾರೆ ಕೃಷಿಕ ವಿನೋದ್ ಲಸ್ರಾದೊ ಸುಳ್ಯ.
ಈಗಾಗಲೇ ರೋಗಗಳಿಂದ ಕಂಗೆಟ್ಟಿರುವ ಅಡಿಕೆ ಕೃಷಿ ಇನ್ನೂ ವ್ಯಾಪಕವಾಗಿ ಹರಡುವ ಸಾಧ್ಯತೆ ಇದೆ. ಅಲ್ಲದೆ ಅಡಿಕೆಗೆ ಸಂಬಂಧಪಟ್ಟ ಎಲ್ಲ ಉತ್ಪಾದನಾ ಪರಿಕರಗಳ ಬೆಲೆ ದುಬಾರಿಯಾಗುತ್ತಿದೆ. ಕೆಲಸಗಾರರ ಲಭ್ಯತೆ, ಮಜೂರಿ ಕೂಡಾ ಕಬ್ಬಿನ ಕಡಲೆಯಾಗಿದೆ. ಆದ್ದರಿಂದ ಇರುವ ಅಡಿಕೆ ತೋಟವನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡು ವತ್ತ ಗಮನ ಹರಿಸಬೇಕು ಎಂದು ಅವರು ಸಲಹೆ ನೀಡುತ್ತಾರೆ.
ಅಡಿಕೆಯೊಂದಿಗೆ ಮಿಶ್ರ ಬೆಳೆ
ಅಡಿಕೆ ಕೃಷಿಯಲ್ಲಿ ಮುಖ್ಯ ಸಮಸ್ಯೆಗಳೆಂದರೆ ಸಸಿಗಳನ್ನು ನೆಟ್ಟ ನಂತರ ಮೊದಲ ಫಸಲು ಕೊಡಲು ದೀರ್ಘಕಾಲ ತೆಗೆದುಕೊಳ್ಳುತ್ತದೆ. ಇಳುವರಿ ನೀಡಲಾರಂಭಿಸಿದ ಆರಂಭಿಕ ವರ್ಷಗಳಲ್ಲಿ ದೊರೆಯುವ ಕಡಿಮೆ ಆದಾಯ, ಮಾರುಕಟ್ಟೆಯಲ್ಲಿ ಅಡಿಕೆ ಬೆಲೆಯಲ್ಲಿ ಏರಿಳಿತ, ಕೀಟ ಮತ್ತು ರೋಗಗಳ ಹಾವಳಿ, ಪ್ರಾಕೃತಿಕ ವಿಕೋಪಗಳಿಂದಾಗುವ ಆಕಸ್ಮಿಕ ನಷ್ಟ, ಇದಕ್ಕೆ ಮಿಶ್ರ ಬೆಳೆ ಅಥವಾ ಮಿಶ್ರ ಕೃಷಿ ಪದ್ಧತಿ ಪರಿಹಾರವಾಗಿದೆ.
ತೋಟಗಾರಿಕಾ ಬೆಳೆಗಳಾದ ಬಾಳೆ, ಕಾಳು ಮೆಣಸು, ಕೊಕ್ಕೊ, ಸುವರ್ಣಗೆಡ್ಡೆ, ಲಿಂಬು, ವೀಳ್ಯದೆಲೆ, ಅನಾನಸು ಇತ್ಯಾದಿ ಬೆಳೆಗಳನ್ನು ಅಡಿಕೆಯೊಂದಿಗೆ ಮಿಶ್ರ ಬೆಳೆಯಾಗಿ ಬೆಳೆಯಬಹುದು.
ಅಡಿಕೆ ಮೇಲೆ ಮತ್ತೆ ಕ್ಯಾನ್ಸರ್ ತೂಗುಗತ್ತಿ
ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್‌ಒ)ಯ ಅಂಗ ಸಂಸ್ಥೆ ಇಂಟರ್‌ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆ್ಯಂಡ್ ಕ್ಯಾನ್ಸರ್ (ಐಎಆರ್‌ಸಿ) ಸಂಸ್ಥೆ ಅಡಿಕೆ ಕ್ಯಾನ್ಸರ್‌ಕಾರಕ, ಇದರ ಬಳಕೆಯನ್ನು ನಿಯಂತ್ರಿಸಿದರೆ ಬಾಯಿ ಕ್ಯಾನ್ಸರ್ ಪ್ರಮಾಣವನ್ನು ಸಾಕಷ್ಟು ತಗ್ಗಿಸಬಹುದು ಎಂದು ವರದಿ ನೀಡಿದೆ. ಅಂತರ್‌ರಾಷ್ಟ್ರೀಯ ಜನರಲ್ ಒಂದರಲ್ಲಿ 2024ರ ಆಗಸ್ಟ್ 9ರಂದು ಈ ವರದಿ ಪ್ರಕಟವಾಗಿದೆ. ಐಎಆರ್‌ಸಿ ಬಾಯಿ ಕ್ಯಾನ್ಸರ್ ಬಗ್ಗೆ ಸಂಶೋಧನೆ ಮಾಡುವ ಸಂಸ್ಥೆಯಾಗಿದ್ದು, ಪ್ರತೀ ಐದು ವರ್ಷಕ್ಕೊಮ್ಮೆ ತನ್ನ ವರದಿಯನ್ನು ಬಿಡುಗಡೆ ಮಾಡುತ್ತದೆ. ಈ ವರದಿ ಅಡಿಕೆ ಬೆಳೆಗಾರರ ನಿದ್ದೆಗೆಡಿಸಿದೆ.
ಈ ಸಂಸ್ಥೆ ಈ ಹಿಂದೆ ನೀಡಿದ ವರದಿಯಲ್ಲೂ ಅಡಿಕೆ ಕ್ಯಾನ್ಸರ್‌ಕಾರಕ ಎಂದು ಹೇಳಿತ್ತು. ತಂಬಾಕು ಮಿಶ್ರಿತ ಅಡಿಕೆ ಮಾತ್ರವಲ್ಲ, ನೇರವಾಗಿ ಅಡಿಕೆ ಬೆಳೆಯನ್ನೇ ನಿಯಂತ್ರಿಸುವಂತೆ ಸೂಚಿಸಿದ್ದು, ಹೊಗೆರಹಿತ ತಂಬಾಕು(ತಿಂದು ಉಗುಳುವ) ಮತ್ತು ಅಡಿಕೆ ಬಳಕೆಗೆ ಕಡಿವಾಣ ಹಾಕುವ ಮೂಲಕ ವಿಶ್ವದ ಮೂರನೇ ಒಂದರಷ್ಟು ಬಾಯಿ ಕ್ಯಾನ್ಸರ್ ತಡೆಗಟ್ಟಬಹುದು ಎಂದು ವರದಿಯಲ್ಲಿ ಉಲ್ಲೇಖಿಸಿದೆ.
ಅಡಿಕೆ ಬೆಳೆಗಾರರು ಮತ್ತು ಇದಕ್ಕೆ ಸಂಬಂಧಪಟ್ಟ ಸಂಸ್ಥೆಗಳು ಅಡಿಕೆ ಕ್ಯಾನ್ಸರ್‌ಕಾರಕವಲ್ಲ. ಅಡಿಕೆಯ ಸೇವನೆಯಿಂದ ಯಾವುದೇ ಆರೋಗ್ಯ ಸಮಸ್ಯೆ ಬರುವುದಿಲ್ಲ ಎಂದು ಸಾಬೀತುಪಡಿಸುವ ಕುರಿತಂತೆ ಈಗಾಗಲೇ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆಯುತ್ತಿದೆ.
ಭತ್ತದ ಕೃಷಿಯನ್ನು ಆವರಿಸಿದ ಅಡಿಕೆ
ಕೆಲವಾರು ವರ್ಷಗಳ ಹಿಂದೆ ಕರಾವಳಿ ಜಿಲ್ಲೆಗಳಲ್ಲಿ ಭತ್ತದ ಕೃಷಿ ಪ್ರಮುಖ ಬೆಳೆಯಾಗಿತ್ತು. ಈ ಆಹಾರ ಬೆಳೆ ಜೀವನಾ ಧಾರವೂ ಆಗಿತ್ತು. ಆದರೆ ಅಡಿಕೆ ಕೃಷಿಯ ವ್ಯಾಪ್ತಿ ವಿಸ್ತಾರವಾಗುತ್ತಿದ್ದಂತೆ ಕರಾವಳಿ ಮತ್ತು ಮಲೆನಾಡಿನ ರೈತರು ಕೂಡಾ ಈ ವಾಣಿಜ್ಯ ಬೆಳೆಯತ್ತ ಆಕರ್ಷಿತರಾದರು. ಎಕರೆಗಟ್ಟಲೆ ಭತ್ತದ ಗದ್ದೆಗಳು ಅಡಿಕೆ ತೋಟಗಳಾಗಿ ಬದಲಾದವು. ಭತ್ತ ಬೇಸಾಯಕ್ಕೆ ಸೂಕ್ತ ಕಾರ್ಮಿಕರ ಕೊರತೆ, ವರ್ಷದಲ್ಲಿ ಎರಡೇ ಬಾರಿ ಸಿಗುವ ಫಸಲು, ಪರಿಶ್ರಮಕ್ಕೆ ತಕ್ಕಷ್ಟು ಸಿಗದ ಬೆಲೆ ಮೊದ ಲಾದ ಸಮಸ್ಯೆಗಳೂ ಭತ್ತ ಕೃಷಿ ಕೈಬಿಟ್ಟು ಅಡಿಕೆ ಕೃಷಿಗೆ ಮೊರೆ ಹೋಗಲು ಕಾರಣ ಎನ್ನಬಹುದು.
ಅಡಿಕೆಯ ಇತಿಹಾಸ
ಅಡಿಕೆಯ ಮೂಲವನ್ನು ಕೆದಕಲು ಹೊರಟರೆ ಅದರ ಬಗ್ಗೆ ನಿಖರವಾದ ಮಾಹಿತಿಗಳು ಲಭ್ಯವಿಲ್ಲವಾದರೂ ಎಲೆ ಅಡಿಕೆ (ಸುಪಾರಿ ಅಥವಾ ಪಾನ್) ತಿನ್ನುವ ಸಂಸ್ಕೃತಿಯು ಫಿಲಿಪ್ಪೀನ್ಸ್ಸ್ ಮತ್ತು ಮಲೇಶ್ಯದಲ್ಲಿ ಹುಟ್ಟಿಕೊಂಡಿದೆ ಎಂದು ಹೇಳಲಾಗುತ್ತದೆ. ಬಳಿಕ ಇದು ಭಾರತ, ಪಪುವಾ ನ್ಯೂ ಗಿನಿಯಾ, ಶ್ರೀಲಂಕಾ, ಭೂತಾನ್, ತೈವಾನ್, ಮ್ಯಾನ್ಮಾರ್, ಕಾಂಬೋಡಿಯಾ, ಸೊಲೊಮನ್ ದ್ವೀಪಗಳು, ಥಾಯ್ಲೆಂಡ್, ಲಾವೋಸ್, ಮಾಲ್ದೀವ್ಸ್, ವಿಯೆಟ್ನಾಮ್ ಸೇರಿದಂತೆ ಆಗ್ನೇಯ ಏಶ್ಯದ ಉಳಿದ ಭಾಗಗಳಲ್ಲಿ ವಾಣಿಜ್ಯ ಬೆಳೆಯಾಗಿ ಬೆಳೆಯಲು ಆರಂಭಗೊಂಡಿತು ಎಂಬ ಮಾಹಿತಿಯಿದೆ.
ಭಾರತದಲ್ಲಿ ಅಡಿಕೆ ಬೆಳೆ ಆರಂಭದ ಬಗ್ಗೆಯೂ ನಿಖರ ಮಾಹಿತಿ ಲಭ್ಯವಿಲ್ಲ. ಆದರೂ ಭಾರತದಲ್ಲಿ ಅಡಿಕೆ ಬೆಳೆಗೆ 2,000 ವರ್ಷಗಳಷ್ಟು ಹಳೆಯ ಇತಿಹಾಸ ಇದೆ ಎನ್ನಲಾಗುತ್ತಿದೆ. ವ್ಯಾಪಾರದ ಉದ್ದೇಶಕ್ಕಾಗಿ ಇಂಡೋನೇಶ್ಯ ಮತ್ತು ಮಲೇಶ್ಯ ದೇಶಗಳಿಗೆ ಭೇಟಿ ನೀಡುತ್ತಿದ್ದ ದಕ್ಷಿಣ ಭಾರತದ ಕರಾವಳಿಯ ವ್ಯಾಪಾರಿಗಳು ಅಡಿಕೆಯನ್ನು ತಂದು ನೆಟ್ಟಿರಬೇಕು. ಈ ಮೂಲಕ ದೇಶದ ಇತರ ಭಾಗಗಳಿಗೆ ಅಡಿಕೆ ಕೃಷಿ ಹಬ್ಬಿತು ಎಂದು ಹೇಳಲಾಗುತ್ತದೆ.
ದೇಶದಲ್ಲಿ ಕರ್ನಾಟಕದ ಶಿವಮೊಗ್ಗದಲ್ಲೇ ಮೊದಲು !
ಭಾರತದಲ್ಲಿ ಮೊಟ್ಟ ಮೊದಲು ಶಿವಮೊಗ್ಗದ ಸೊರಬ ತಾಲೂಕಿನ ಕ್ಯಾಸನೂರು ಗ್ರಾಮದಲ್ಲಿ ಕಾಳು ಮೆಣಸು ಬೆಳೆಗೆ ಪೂರಕವಾಗಿ ಅಡಿಕೆಯನ್ನು ಬೆಳೆಯಲಾಗಿದೆ ಎಂದು ಹೇಳಲಾಗುತ್ತದೆ. ಬಳಿಕ ಕರ್ನಾಟಕದ ಕರಾವಳಿ, ಮಲೆನಾಡು ಪ್ರದೇಶಗಳ ಕೃಷಿಕರು ವ್ಯಾಪಕವಾಗಿ ಇದನ್ನು ಬೆಳೆಯಲು ಪ್ರಾರಂಭಿಸಿದರು. ಈಗಲೂ ಅಡಿಕೆ ಬೆಳೆಯಲ್ಲಿ ಕರಾವಳಿ ಮತ್ತು ಮಲೆನಾಡಿದ್ದೇ ಸಿಂಹಪಾಲು.
ಅಡಿಕೆ ಬೆಳೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದ್ದರೆ, ನೆರೆಯ ಕೇರಳ, ಅಸ್ಸಾಂ, ತಮಿಳುನಾಡು, ಮಹಾರಾಷ್ಟ್ರ, ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಒಡಿಶಾ ಬಳಿಕದ ಸ್ಥಾನದಲ್ಲಿವೆ. ಅಡಿಕೆ ಬಳಸುವವರ ಸಂಖ್ಯೆ ಅಧಿಕವಿರುವ ಗುಜರಾತ್ ಅಡಿಕೆಯ ಮುಖ್ಯ ಮಾರುಕಟ್ಟೆಯಾಗಿದೆ.
ಅಡಿಕೆ ಬೆಳೆಯುವ ದೇಶಗಳು: ಏಶ್ಯ ಖಂಡದಲ್ಲಿ ಅಡಿಕೆಯನ್ನು ಬಹಳ ಹಿಂದಿನಿಂದಲೂ ವಾಣಿಜ್ಯ ಬೆಳೆಯಾಗಿ ಬೆಳೆಸಲಾಗುತ್ತಿದೆ. ಅದರಲ್ಲೂ ಭಾರತ ಅಡಿಕೆ ಉತ್ಪಾದನೆಯಲ್ಲಿ ಮುಂದಿದೆ. ಅಂಕಿಅಂಶಗಳ ಪ್ರಕಾರ ಭಾರತವು ಶೇ.51ರಷ್ಟು ಅಡಿಕೆ ಉತ್ಪಾದಿಸುತ್ತದೆ. ಚೀನಾ, ಮ್ಯಾನ್ಮಾರ್, ಬಾಂಗ್ಲಾದೇಶ, ಇಂಡೋನೇಶ್ಯ, ಥಾಯ್ಲೆಂಡ್ ಮತ್ತು ಮಲೇಶ್ಯಗಳಲ್ಲೂ ಅಡಿಕೆಯನ್ನು ವ್ಯಾಪಕವಾಗಿ ಬೆಳೆಯಲಾಗುತ್ತದೆ.
ಅಡಿಕೆ ಬೆಳೆಯಲ್ಲಿ ಭಾರತವು ಇತರ ದೇಶಗಳಿಗೆ ಹೋಲಿಸಿದರೆ ಗರಿಷ್ಠ ಪ್ರದೇಶವನ್ನು ಹೊಂದಿದೆ. ಒಟ್ಟು 9.55 ಲಕ್ಷ ಹೆಕ್ಟೇರ್‌ಗಳಷ್ಟು ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ದೇಶದ ಒಟ್ಟು ಅಡಿಕೆ ಬೆಳೆಯಲ್ಲಿ ಕರ್ನಾಟಕದ ಪಾಲು ಸುಮಾರು ಶೇ.40ರಷ್ಟು ಇದ್ದು, ಆ ಮೂಲಕ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ. ಕರ್ನಾಟಕದ ಒಟ್ಟು ಉತ್ಪಾದನೆಯಲ್ಲಿ ದಕ್ಷಿಣ ಕನ್ನಡ, ಶಿವಮೊಗ್ಗ, ಚಿತ್ರದುರ್ಗ, ಮೈಸೂರು, ಕೋಲಾರ, ತುಮಕೂರು, ಚಿಕ್ಕಮಗಳೂರು ಮತ್ತು ಧಾರವಾಡ ಪ್ರಮುಖ ಪಾಲನ್ನು ಹೊಂದಿರುವ ಜಿಲ್ಲೆಗಳಾಗಿವೆ.
ಮಾರಕವಾದ ಆಮದು
ಇತ್ತೀಚೆಗೆ ಭೂತಾನ್‌ನಿಂದ ಕನಿಷ್ಠ ಆಮದು ಬೆಲೆ ಇಲ್ಲದೆ ಅಡಿಕೆ ಆಮದು ಮಾಡಿಕೊಳ್ಳಲು ಕೇಂದ್ರ ಸರಕಾರ ಅನುಮತಿ ನೀಡಿದೆ. ರೋಗಗಳ ಬಾಧೆಯಿಂದ ನಲುಗುತ್ತಿರುವ ಅಡಿಕೆ ಕೃಷಿಕರು ಕೇಂದ್ರದ ಈ ನಿರ್ಧಾರದಿಂದ ಸಂಕಷ್ಟಕ್ಕೀಡಾಗಿದ್ದಾರೆ.
ಭಾರತದಲ್ಲಿ ಅಡಿಕೆ ಅಕ್ರಮ ಆಮದು ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಕೇಂದ್ರ ಸರಕಾರ ನೀಡಿರುವ ಈ ಅನುಮತಿ ಅಡಿಕೆ ಬೆಳೆಗಾರರನ್ನು ಚಿಂತೆಗೀಡು ಮಾಡಿದೆ. ಭಾರತದಲ್ಲಿ ಉತ್ಪಾದನೆಯಾಗುವ ಒಟ್ಟು ಅಡಿಕೆಯ ಪೈಕಿ ಶೇ.2ರಷ್ಟು ಭೂತಾನ್‌ನಿಂದ ಆಮದು ಮಾಡಿಕೊಳ್ಳಲಾಗುತ್ತಿದೆ.
ಭೂತಾನ್, ಶ್ರೀಲಂಕಾ, ಮ್ಯಾನ್ಮಾರ್ ಸೇರಿದಂತೆ, ಭಾರತದ ಮೇಘಾಲಯ, ಅಸ್ಸಾಮಿನ ಅಡಿಕೆಯನ್ನು ರಾಜ್ಯಕ್ಕೆ ಆಮದು ಮಾಡಿಕೊಂಡು ಇಲ್ಲಿನ ಅಡಿಕೆ ಜತೆಗೆ ಸೇರಿಸಿ ಸಾಂಪ್ರದಾಯಿಕ ಅಡಿಕೆ ಹೆಸರಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಈ ದಂಧೆಯ ಹಿಂದೆ ಇರುವ ಪ್ರಭಾವಿಗಳು ಮಾರುಕಟ್ಟೆ ವ್ಯವಸ್ಥೆ ಹಾಳು ಮಾಡುತ್ತಿದ್ದಾರೆ. ಇದರಿಂದ ಅಡಿಕೆ ಬೆಲೆ ದೊಡ್ಡ ಮಟ್ಟಕ್ಕೆ ಕುಸಿಯುವ ಆತಂಕ ರೈತರನ್ನು ಕಾಡುತ್ತಿದೆ.
ಮಹೀಂದ್ರ ಜೀಪ್ ಮತ್ತು ಸುಳ್ಯದ ಅಡಿಕೆ ಬೆಳೆಗಾರರು-ಹೀಗೊಂದು ಸಂಬಂಧ !
ದೇಶದ ಹೆಸರಾಂತ ವಾಹನ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿರುವ ‘ಮಹೀಂದ್ರ’ಗೆ ಸುಳ್ಯದ ಅಡಿಕೆ ಬೆಳೆಗಾರರು 90ರ ದಶಕದಲ್ಲಿ ಸಂಜೀವಿನಿಯಾಗಿದ್ದರು ಎಂಬ ಸ್ವಾರಸ್ಯಕರ ಸಂಗತಿಯನ್ನು ಸುಳ್ಯದ ಹಿರಿಯ ರೈತರು ಹೇಳುತ್ತಾರೆ.
ಮಹೀಂದ್ರ ಕಂಪೆನಿಯು 90ರ ದಶಕದಲ್ಲಿ ಜೀಪ್ ಉತ್ಪಾದನೆಯನ್ನು ಪೂರ್ಣವಾಗಿ ಸ್ಥಗಿತಗೊಳಿಸುವ ಚಿಂತನೆಯಲ್ಲಿತ್ತೆನ್ನಲಾಗಿದೆ. ಇದೇ ಅವಧಿಯಲ್ಲಿ ಜೀಪ್‌ಗಳಿಗೆ ಏಕಾಏಕಿ ಬೇಡಿಕೆ ಹೆಚ್ಚಾಯಿತು. ಇದರಿಂದ ಅಚ್ಚರಿಗೊಂಡ ಕಂಪೆನಿಯ ಉನ್ನತ ಅಧಿಕಾರಿಗಳು ಈ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಕರ್ನಾಟಕದ ದ.ಕ. ಜಿಲ್ಲೆಯ ಸುಳ್ಯ ತಾಲೂಕಿನಿಂದ ಜೀಪ್‌ಗಳಿಗಾಗಿ ಅತ್ಯಧಿಕ ಬೇಡಿಕೆ ಬರುತ್ತಿರುವುದು ಗಮನಕ್ಕೆ ಬಂತು. ಇದರಿಂದ ಪ್ರಭಾವಿತರಾದ ಮಹೀಂದ್ರ ಕಂಪೆನಿಯ ಉನ್ನತ ಅಧಿಕಾರಿಗಳು ಸುಳ್ಯಕ್ಕೆ ಭೇಟಿ ನೀಡಿದ್ದರಂತೆ. ದ.ಕ. ಜಿಲ್ಲೆಯಲ್ಲೇ ಸುಳ್ಯ ತಾಲೂಕಿನಲ್ಲಿ ಅಡಿಕೆ ಕೃಷಿಕರು ಅಧಿಕ. ಸುಳ್ಯದ ಕಡಿದಾದ ಮತ್ತು ಬೆಟ್ಟಗುಡ್ಡಗಳನ್ನು ಹೊಂದಿರುವ ಹಳ್ಳಿಗಳನ್ನು ಸಂಪರ್ಕಿಸಲು ಜೀಪ್ ಅಲ್ಲದೆ ಬೇರೆ ವಾಹನಗಳ ಬಳಕೆ ಸಾಧ್ಯವಾಗುತ್ತಿರಲಿಲ್ಲ. ಇಲ್ಲಿ ಕೃಷಿಕರು ತಮ್ಮ ಅಡಿಕೆಯನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕೊಂಡೊಯ್ಯಲು ಮತ್ತು ವೈಯಕ್ತಿಕ ಬಳಕೆಗೆ ಜೀಪನ್ನೇ ಹೆಚ್ಚು ಅವಲಂಬಿತರಾಗಿದ್ದರು. ಈ ನಡುವೆ 90ರ ದಶಕದಲ್ಲಿ ಅಡಿಕೆಯ ದರ ಒಮ್ಮೆಲೆ ಏರಿಕೆಯಾಗಿತ್ತು. ಈ ವೇಳೆ ಹೆಚ್ಚಿನ ಎಲ್ಲಾ ಅಡಿಕೆ ಬೆಳೆಗಾರರು ಜೀಪ್‌ಗಳನ್ನು ಖರೀದಿಸಿದ್ದರು.
ಈಗಲೂ ಸುಳ್ಯದ ಗ್ರಾಮೀಣ ಪ್ರದೇಶಗಳಲ್ಲಿ ಜೀಪ್ ಪ್ರಮುಖ ಸಾರಿಗೆಯಾಗಿದೆ. ತಾಲೂಕಿನಾದ್ಯಂತ ಸಾವಿರಕ್ಕೂ ಮಿಕ್ಕಿ ಜೀಪ್‌ಗಳು ಈಗಲೂ ಕಾಣಬಹುದಾಗಿದೆ.
ಅಡಿಕೆಯು ಆಯುರ್ವೇದ ಗುಣಗಳನ್ನು ಹೊಂದಿದ್ದರೂ, ಅದು ಕ್ಯಾನ್ಸರ್ ಕಾರಕ ಎಂಬ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯ ಏಕಪಕ್ಷೀಯ ನಿರ್ಣಯ ಸರಿಯಲ್ಲ. ಪುರಾತನ ಕಾಲದಿಂದಲೂ ಅಡಿಕೆಯು ಭಾರತೀಯ ಸಂಸ್ಕೃತಿಯಲ್ಲಿ ಪವಿತ್ರ ಸ್ಥಾನವನ್ನು ಪಡೆದಿದೆ. ಶುಭ ಸಮಾರಂಭಗಳಲ್ಲಿ ವೀಳ್ಯದೆಲೆಯೊಂದಿಗೆ ಅಡಿಕೆಯನ್ನು ಸೇರಿಸಿ ತಾಂಬೂಲ ನೀಡುವುದು ಭಾರತೀಯ ಸಂಸ್ಕೃತಿಯ ಪ್ರತೀಕ. ಆಯುರ್ವೇದ ಶಾಸ್ತ್ರದಲ್ಲೂ ಅಡಿಕೆಗೆ ಅದರ ಔಷಧೀಯ ಗುಣಗಳಿಂದಾಗಿ ವಿಶೇಷ ಸ್ಥಾನಮಾನವಿದೆ. 1974ರಿಂದ 2022ರವರೆಗೂ ವಿವಿಧ ಸಂಸ್ಥೆಗಳು ನಡೆಸಿದ ಅಧ್ಯಯನದಲ್ಲಿ ಅಡಿಕೆಯಲ್ಲಿ ಯಾವುದೇ ಕ್ಯಾನ್ಸರ್‌ಕಾರಕ ಅಂಶವಿಲ್ಲ ಎಂಬುದು ದೃಢಪಟ್ಟಿದೆ.
-ಕಿಶೋರ್ ಕುಮಾರ್ ಕೊಡ್ಗಿ, ಅಧ್ಯಕ್ಷರು, ಕ್ಯಾಂಪ್ಕೊ (ಲಿ.)
ಈ ವರ್ಷ ಭಾರೀ ಮಳೆಯಾದ ಕಾರಣ ಅಡಿಕೆ ಇಳುವರಿ ಕಡಿಮೆಯಾಗಿದೆ. ಎಲೆಚುಕ್ಕೆ ರೋಗ, ಹಳದಿ ಎಲೆ ರೋಗ ಜೊತೆಗೆ ಹಿಂಗಾರ ಒಣಗುವ ರೋಗದಿಂದ ನಾವು ಅಡಿಕೆ ಮರವನ್ನು ಉಳಿಸಿಕೊಳ್ಳುವುದು ಸವಾಲಾಗಿದೆ. ಒಂದೆಡೆ ಅಡಿಕೆ ಬೆಳೆ ಉಳಿಸಿಕೊಳ್ಳುವ ಸವಾಲು ಎದುರಾದರೆ ಮತ್ತೊಂದೆಡೆ ಅಡಿಕೆ ಬೆಲೆ ಕುಸಿಯುತ್ತಿದೆ. ಕೃಷಿಗೆ ಹಾಕಿದ ಬಂಡವಾಳ ತೆಗೆಯುವುದು ಕಷ್ಟವಾಗಿದೆ.
-ನಾಗರಾಜ್ ಎಂ.ಡಿ., ಅಡಿಕೆ ಬೆಳೆಗಾರರು, ಶಿವಮೊಗ್ಗ