ಹವ್ಯಕರಲ್ಲಿ ಮೌಲ್ಯ ಇರಲಿ, ಶೌರ್ಯ ಇರಲಿ, ಕ್ರೌರ್ಯ ಯಾಕೆ ಭಟ್ರೆ?
ವಿಶ್ವ ಹವ್ಯಕ ಸಮ್ಮೇಳನದ ಮುಕ್ತಾಯದ ಸಂದರ್ಭದಲ್ಲಿ ವಿಶ್ವೇಶ್ವರ ಭಟ್ಟರ ಭಾಷಣ ಪ್ರಜ್ಞಾವಂತ ಹವ್ಯಕರಲ್ಲಿ ತುಸು ಗಾಬರಿ ಹುಟ್ಟಿಸುವಂತಿತ್ತು..
ಹವ್ಯಕರು ಇಸ್ರೇಲಿ (ಯಹೂದಿ) ಜನಾಂಗವನ್ನು ʻನೂರಕ್ಕೆ ನೂರರಷ್ಟು ಹೋಲುತ್ತಾರೆʼ ಎಂಬ ಬೀಸು ಹೇಳಿಕೆ ಅವರದ್ದಾಗಿತ್ತು.
ನಿಜವೆ? ಇಸ್ರೇಲಿಗರು ಶ್ರಮಪಟ್ಟು ದುಡಿಯುತ್ತಾರೆ ನಿಜ. ಬುದ್ಧಿವಂತರ ಸಂಖ್ಯೆಯೂ ಜಾಸ್ತಿಯೇ ಇದೆಯೆನ್ನೋಣ. ಅವರು ಗೆದ್ದಷ್ಟು ನೊಬೆಲ್ ಪ್ರಶಸ್ತಿಗಳನ್ನು ಜಗತ್ತಿನ ಬೇರೆ ಯಾವ ಜನಾಂಗವೂ ಪಡೆದಿಲ್ಲ ಹೌದು.
ಆದರೆ ಅವರಷ್ಟು ಕ್ರೂರಿಗಳು ಬೇರೆ ಯಾವುದೇ ಜನಾಂಗದಲ್ಲಿ ನೋಡಸಿಗಲಿಕ್ಕಿಲ್ಲ.
ಇದಕ್ಕೆ ಸಾಕ್ಷಿಯಾಗಿ ಪ್ಯಾಲಸ್ಟಿನ್/ ಗಾಝಾ ಪಟ್ಟಿಯಲ್ಲಿ ಈಚೆ ನಡೆದ, ಈಗಲೂ ಪಕ್ಕದ ಸಿರಿಯಾ ದೇಶದ ಮೇಲೆ ನಡೆಯುತ್ತಿರುವ ಅಮಾನುಷ ಇಸ್ರೇಲಿ ದಾಳಿಯನ್ನು ನೋಡಬಹುದು. ಕಳೆದ ಒಂದು ವರ್ಷದಲ್ಲಿ 8119 ಜನರನ್ನು ಅವರು ಕೊಂದಿದ್ದಾರೆ. ಅವರಲ್ಲಿ 44% ಮಕ್ಕಳು, 26% ಮಹಿಳೆಯರು. ಈ ನತದೃಷ್ಟರು ಯಾರ ಮೇಲೂ ಸಮರ ಸಾರಿರಲಿಲ್ಲ. (ಇದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗ ಕಳೆದ ತಿಂಗಳು ನೀಡಿದ ವರದಿ. ವಾಸ್ತವದಲ್ಲಿ 40 ಸಾವಿರಕ್ಕೂ ಅಧಿಕ ಸಾವು ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಇಲ್ಲಿ ಅಂಗಾಂಗ ಕಳೆದುಕೊಂಡವರ ಸಂಖ್ಯ ಸೇರಿಲ್ಲ).
ಅದಕ್ಕಿಂತ ಮುಂಚೆ, ಐನ್‌ಸ್ಟೀನ್ ಹೇಳಿದ ಮಾತನ್ನು ಇಲ್ಲಿ ಮತ್ತೊಮ್ಮೆ ಕೇಳೋಣ. ಅದರ ಹಿನ್ನೆಲೆ ಹೀಗಿದೆ:
ಎಲ್ಲೆಲ್ಲೋ ಚದುರಿ ಹೋಗಿದ್ದ ಯಹೂದ್ಯರು ಒಂದೆಡೆ ಕೂಡಿ ಬಾಳಲೆಂದು 1948ರಲ್ಲಿ ಇಸ್ರೇಲ್ ಎಂಬ ದೇಶವನ್ನು ಸ್ಥಾಪಿಸಿದರು.
ಹೊಸ ದೇಶವನ್ನು ಕಟ್ಟಿಕೊಂಡ ಆರಂಭದಲ್ಲೇ ಪಕ್ಕದ ಪ್ಯಾಲಸ್ಟೀನ್ ಹಳ್ಳಿಗಳಿಗೆ ನುಗ್ಗಿ ಇವರು ಮುಗ್ಧರ ನರಮೇಧ ಮಾಡಿದ ಪರಿ (ಸ್ವತಃ ಯಹೂದಿಯೇ ಆಗಿದ್ದ) ಐನ್‌ಸ್ಟೀನ್‌ಗೆ ಗಾಬರಿ ಹುಟ್ಟಿಸಿತ್ತು.
Deir Yassin ಎಂಬ ಅರಬ್ ಹಳ್ಳಿಯ ಮಹಿಳೆ- ಮಕ್ಕಳೂ ಸೇರಿದಂತೆ 240 ಜನರನ್ನು ಕೊಂದು, ಹೆಣಗಳ ರಾಶಿಯ ಮೇಲೆ ಕೇಕೆ ಹಾಕಿದ್ದರ ಬಗ್ಗೆ ತುಂಬ ನೊಂದವರಲ್ಲಿ ಐನ್‌ಸ್ಟೀನ್ ಕೂಡ ಒಬ್ಬರಾಗಿದ್ದರು.
1948ರಲ್ಲಿ ಅವರು ಸಹಿ ಹಾಕಿದ, ʼನ್ಯೂಯಾರ್ಕ್ ಟೈಮ್ಸ್ʼನಲ್ಲಿ ಪ್ರಕಟವಾದ ಪತ್ರದ ಮುಖ್ಯವಾಕ್ಯ ಹೀಗಿತ್ತು:
"ಇವರು ತಮ್ಮ ಯಹೂದಿ ಸಮುದಾಯಕ್ಕೆ ಅತಿಯಾದ ರಾಷ್ಟ್ರೀಯತೆ (ultranationalism), ಧಾರ್ಮಿಕ ಮೂಢನಂಬಿಕೆ ಮತ್ತು ಜನಾಂಗೀಯ ಶ್ರೇಷ್ಠತೆಯ ಸ್ಫೋಟಕ ಮಿಶ್ರಣವನ್ನು ತುಂಬುತ್ತಿದ್ದಾರೆ".
ಅಂಥ ಸ್ಫೋಟಕ ಮಿಶ್ರಣ ಈಗಾಗಲೇ ಹವ್ಯಕರಲ್ಲಿ ಇದೆ ಎಂದು ಅದು ಹೇಗೆ ವಿಶ್ವೇಶ್ವರ ಭಟ್ಟರು ಕಂಡರೊ?
ಹವ್ಯಕರ ಸದ್ಗುಣಗಳು ಬೇಕಾದಷ್ಟಿವೆ. ಶತಮಾನಗಳ ಕಾಲ ಅವರು ತಮ್ಮ ಪಾಡಿಗೆ ತಾವು ಕೃಷಿ ಮಾಡಿಕೊಂಡು ಬಂದವರು. ಬೇಜಾನ್ ಪರಿಸರ ಪ್ರೇಮಿಗಳು. ಬ್ರಾಹ್ಮಣರಲ್ಲಿ ಕೃಷಿ ಕೆಲಸ ಮಾಡುತ್ತಲೇ ಜೀವನ ನಿರ್ವಹಣೆ ಮಾಡುತ್ತಿರುವ ಏಕೈಕ ಪಂಗಡ ಇವರದ್ದು. ನಾನಂತೂ ಹವ್ಯಕರನ್ನು ʻನಾಲ್ಕೂ ವರ್ಣಗಳ ಮಿಶ್ರಣʼ ಎನ್ನುತ್ತೇನೆ. ಬೆಳಿಗ್ಗೆ ಎದ್ದು ಸೆಗಣಿ ಬಾಚುತ್ತಾರೆ. ಅಪ್ಪಟ ಕೂಲಿಯಾಳೇ ಆಗಿ ದುಡಿಯುತ್ತಾರೆ. ದನ ಸತ್ತರೆ ಅದನ್ನೂ ಎಳೆದುಕೊಂಡು ಹೋಗಿ ದೂರ ವಿಲೆವಾರಿ ಮಾಡಿ ಬಂದು, ಸ್ನಾನ ಸಂಧ್ಯಾವಂದನೆ, ಅಗ್ನಿಪೂಜೆ, ದೇವರ ಪೂಜೆ, ಮುಗಿಸಿ, ಮಹಿಳೆಯರು ಕೈಯಾರೆ ಬೆಳೆದ ಸೊಪ್ಪು ತರಕಾರಿಗಳಿಂದ ತಯಾರಿಸಿದ ಶುದ್ಧ ವೆಜಿಟೇರಿಯನ್ ಊಟ ಮಾಡುತ್ತಾರೆ. ಪೇಟೆಗೆ ಹೋದರೆ ವೈಶ್ಯರೂ ಅಗುತ್ತಾರೆ, ಸಮಯ ಬಂದರೆ ಕ್ಷತ್ರಿಯರೂ ಆಗುತ್ತಾರೆ.
(ಹಾಗೆಂದು ಡಾಕ್ಟರ್ ಕೆನ್ನೆಗೆ ಏಟು ಕೊಟ್ಟ ಸಂಸದರನ್ನು ಇಲ್ಲಿ ನೆನಪಿಸಿಕೊಳ್ಳಬೇಡಿ. ಹವ್ಯಕರ ಕ್ಷಾತ್ರ ತೇಜಸ್ಸು ಎಂದರೆ ಪೈಪೋಟಿಯಲ್ಲಿ ಗೆಲುವು ಸಾಧಿಸಲು ಛಲ ಹೊತ್ತು ಶ್ರಮಿಸುವವರು ಅಷ್ಟೆ. ಅದಕ್ಕೆ ಇದೇ ವಿಶ್ವೇಶ್ವರ ಭಟ್ಟರ ಉದಾಹರಣೆಯನ್ನೇ ಕೊಡಬಹುದು: ಅವರು ಜಿಯಾಲಜಿ ಮತ್ತು ಪತ್ರಿಕೋದ್ಯಮ ಎರಡೂ ಮಾಸ್ಟರ್ ಡಿಗ್ರಿಗಳಲ್ಲಿ ಅದೆಷ್ಟೊ ಚಿನ್ನದ ಪದಕಗಳನ್ನು ಬಾಚಿಕೊಂಡವರು. ನಂತರ ವೃತ್ತಿಯಲ್ಲೂ ಮೇಲುಗೈ ಸಾಧಿಸಿದವರು.)
ಯಹೂದ್ಯರು (ಇಸ್ರೇಲಿಗರು) ಭಾರಿ ಕಂಜೂಸ್, ಜುಗ್ಗ, ಪೈಸೆಪೈಸೆ ಲೆಕ್ಕ ಮಾಡುವವರು, ಹಣಕ್ಕಾಗಿ ಬಾಯಿಬಾಯಿ ಬಿಡುವವರು ಎಂತಲೂ ವಿಶ್ವಪ್ರತೀತಿ ಇದೆ. (ಶೇಕ್ಸ್‌ಪಿಯರ್‌ನ ʼಮರ್ಚಂಟ್ ಆಫ್ ವೆನಿಸ್ʼ ನಾಟಕದಲ್ಲಿ ಯಹೂದಿ ಮೂಲದ ಶೈಲಾಕ್ ಎಂಬ ಮಹಾಜುಗ್ಗ ವ್ಯಾಪಾರಿಯನ್ನು ನೆನಪಿಸಿಕೊಳ್ಳಿ). ಆದರೆ ತಾವು ಹಾಗಲ್ಲ ಎಂದೂ ಆ ಗುಣವನ್ನು ಬೇಕಂತಲೇ ತಮ್ಮ ತಲೆಗೆ ಕಟ್ಟಿದ್ದಾರೆ ಎಂತಲೂ ʼವಿಶ್ವ ಯಹೂದಿ ಕಾಂಗ್ರೆಸ್ʼ ಸ್ಪಷ್ಟೀಕರಣ ನೀಡಿದೆ ಅನ್ನಿ.
ʻನಾವು ಹವ್ಯಕರು 100% ಯಹೂದ್ಯರ ಥರಾʼ ಎಂದು ಎದೆ ತಟ್ಟಿ ವಿಶ್ವೇಶ್ವರ ಭಟ್ಟರು ಹೇಳಿದ್ದನ್ನು ʻವಿಶ್ವ ಹವ್ಯಕ ಸಮಾವೇಶʼದ ಸಂಘಟಕರು ಒಪ್ಪುತ್ತಾರೆಯೆ? ಅಥವಾ ಯಹೂದ್ಯರ ಹಾಗೆ ಸ್ಪಷ್ಟೀಕರಣ ಕೊಡುತ್ತಾರೊ?
ಶ್ರೇಷ್ಠತೆಯ ವ್ಯಸನ ಭಟ್ಟರಲ್ಲಿ ಹೇಗೆಲ್ಲ ವ್ಯಕ್ತವಾಗಿದೆ ನೋಡಿ:
ʻನಮಗೂ 20,23% ಮೀಸಲಾತಿ ಸಿಕ್ಕಿದ್ದಿದ್ದರೆ ಕರ್ನಾಟಕದ ಸ್ವರೂಪವನ್ನೇ ಬದಲಿಸಿಬಿಡುತ್ತಿದ್ದೆವುʼ ಎಂತಲೂ ಅದೇ ವೇದಿಕೆಯಲ್ಲಿ ಭಟ್ ಹೇಳಿದ್ದಾರೆ. ಇದು ಸೊಕ್ಕಿನ ಮಾತಲ್ಲವೆ? ಆತ್ಮವಿಶ್ವಾಸಕ್ಕೂ ಸೊಕ್ಕಿಗೂ ಮಧ್ಯೆ ಒಂದು ಗೆರೆ ಇರಬೇಕು. ಯಶಸ್ಸಿನ, ಖ್ಯಾತಿಯ ಮಜಲುಗಳನ್ನು ಏರಿದ ಹವ್ಯಕರು ಆ ಗೆರೆಯನ್ನು ಮೀರಿದ್ದು ತೀರಾ ಕಡಿಮೆ. ತಮ್ಮ ಸಾಮರ್ಥ್ಯಕ್ಕೆ ಮಾನ್ಯತೆ ಸಿಗಲೆಂದು ಶ್ರಮಿಸುತ್ತಾರೆ ವಿನಾ ಯಾರಿಗೂ ಕೈಯೊಡ್ಡಿ ಬೇಡುವವರಲ್ಲ ಎಂದು ಇದೇ ವೇದಿಕೆಯಲ್ಲಿ ಇತರ ಹವ್ಯಕರು ಅಭಿಮಾನದಿಂದ ಹೇಳಿದ್ದಾರೆ. ಅವರೆಲ್ಲರ ಮಾತನ್ನು ಸುಳ್ಳು ಮಾಡಬೇಕೆಂಬ ಇರಾದೆ ಭಟ್ಟರಿಗೆ ಇರಲಿಕ್ಕಿಲ್ಲ ಎಂದು ಭಾವಿಸೋಣ. ಏನೋ ಅಷ್ಟೊಂದು ಶ್ರೋತೃಗಳ ಚಪ್ಪಾಳೆಗಳ ನಡುವಣ ಉಮೇದಿಯಲ್ಲಿ ಭಟ್ಟರ ಬಾಯಿಂದ ಆ ಮಾತು ಬಂದಿರಬೇಕು.
ಮೀಸಲಾತಿ ವ್ಯವಸ್ಥೆಯನ್ನು ಏಕೆ ತರಲಾಗಿದೆ ಎಂಬುದು ಅವರಿಗೆ ಗೊತ್ತಿಲ್ಲದ ವಿಷಯವೇನಲ್ಲ. ಜಾತಿ ವ್ಯವಸ್ಥೆಯ ನಿರ್ಮೂಲನ ಆಗಬೇಕು, ಸಮ-ಸಮಾಜವನ್ನು ನಿರ್ಮಿಸಬೇಕು ಎಂಬ ಸರ್ವೋನ್ನತ ಆದರ್ಶ ಸಾಧನೆಗೆ ಅದು ಮೆಟ್ಟಿಲು ಆಗಲೆಂಬ ಆಶಯ ಅದರಲ್ಲಿತ್ತು. (ಆ ವಿಶೇಷ ಪಾವಟಿಗೆಯಲ್ಲಿ ನೂಕುನುಗ್ಗಲು ಹೆಚ್ಚಾಗಿ ಅನೇಕ ಅಧ್ವಾನಗಳಾಗುತ್ತಿವೆ, ಅದು ಬೇರೆ ಮಾತು). ಆ ಪಾವಟಿಗೆಗಳ ದೋಷಗಳನ್ನು ಸುಧಾರಿಸುವತ್ತ ಕೈಜೋಡಿಸುವಲ್ಲಿ ಶ್ರೇಷ್ಠತೆ ವ್ಯಕ್ತವಾಗಬೇಕೆ ವಿನಾ ಅಂಥ ಮೆಟ್ಟಿಲು ನಮಗೂ ಇದ್ದಿದ್ದರೆ ಏನೆಲ್ಲ ಮಾಡುತ್ತಿದ್ದೆವು ಎಂದು ಬಹಿರಂಗವಾಗಿ ಹೇಳುವುದು ಸೊಕ್ಕಿನ ಮಾತಾಗುತ್ತದೆ.
ನಾಝೀವಾದ (ನಾತ್ಸಿಸಂ) ಹೇಗೆ ಹುಟ್ಟಿಕೊಂಡಿತು, ಯಹೂದ್ಯರನ್ನು ಯಾಕೆ ಅಷ್ಟೊಂದು ಸಾರಾ ಸಗಟಾಗಿ ಯಾರಾದರೂ ದ್ವೇಷಿಸುತ್ತಿದ್ದರು, ಎಂಬುದನ್ನು ಅರ್ಥಮಾಡಿಕೊಂಡರೆ ಶ್ರೇಷ್ಠತೆಯ ವ್ಯಸನದ ದುರಂತ ಎಂಥವರಿಗೂ ಮನದಟ್ಟಾಗುತ್ತದೆ.
ದಟ್ಟ ಪ್ರಕೃತಿಯ ಮಡಿಲಲ್ಲಿ, ಅಲ್ಲಿನ ನಾನಾ ಸವಾಲುಗಳನ್ನು ಎದುರಿಸುವ ಹಂತದಲ್ಲೇ ಇತರ ಜಾತಿ-ಜನಾಂಗಗಳ ಜೊತೆ ಹೊಂದಿ ಬಾಳುವ ಗುಣಗಳನ್ನು ಮೈಗೂಡಿಸಿಕೊಂಡವರು ಹವ್ಯಕರು. ಅವರ ಯಕ್ಷಗಾನ, ತಾಳಮದ್ದಲೆಯಲ್ಲಿ ರಾವಣ, ದುರ್ಯೋಧನರ ಪಾತ್ರಗಳಷ್ಟೇ ಶ್ರೇಷ್ಠತೆಯನ್ನು ಮೆರೆಯುತ್ತವೆ ವಿನಾ ಹವ್ಯಕರದು ಬಹುತೇಕ ಶಾಂತಿಪ್ರಿಯ ಸಮುದಾಯ. ಈಗೀಗಂತೂ ಧಾರ್ಮಿಕ ಮೂಢನಂಬಿಕೆಗಳು ಕ್ರಮೇಣ ಕಡಿಮೆಯಾಗುತ್ತಿವೆ; ಅನಿವಾರ್ಯ ಕಾರಣಗಳಿಂದಾಗಿ ಜಾತಿಯ ಬಂಧವನ್ನು ಮೀರಿ ವಿವಾಹಗಳು ನೆರವೇರುತ್ತಿವೆ. ಒಂದು ಸಮಾಜ ತನ್ನಿಂತಾನೇ ಆದರ್ಶಗಳ ಔನ್ನತ್ಯಕ್ಕೇರುತ್ತಿದೆ.
*
ಆದರೆ ಈ ಹಂತದಲ್ಲೇ ರಾಷ್ಟ್ರಮಟ್ಟದಲ್ಲಿ ಶ್ರೇಷ್ಠತೆಯ ವಿಷಬೀಜಗಳ ಬಿತ್ತನೆ ನಡೆಯುತ್ತಿದೆ. ಭಕ್ತಾಗ್ರಣಿ ಹನುಮಂತ ಈಗ ಕೆಕ್ಕರಿಸುವ ಕಣ್ಣಿನ ಕಪಿಶ್ರೇಷ್ಠ ಆಗುತ್ತಿದ್ದಾನೆ. ಸೌಮ್ಯಶಾಂತಲ ಶ್ರೀರಾಮನನ್ನು ಸಿಕ್ಸ್‌ಪ್ಯಾಕ್ ಹೀರೋ ಎಂಬಂತೆ ಬಿಂಬಿಸಲಾಗುತ್ತಿದೆ. ಐನ್‌ಸ್ಟೀನ್ ಹೇಳಿದ ಅತಿಯಾದ ರಾಷ್ಟ್ರೀಯತೆ, ಧರ್ಮಾಂಧತೆ ಮತ್ತು ಶ್ರೇಷ್ಠತೆಯ ವ್ಯಸನದ ʻಸ್ಫೋಟಕ ಮಿಶ್ರಣʼವೊಂದನ್ನು ಭಜನೆ, ಗೋರಕ್ಷಣೆ, ಗೀತಾಪಾಠ, ಶ್ಲೋಕಾಚರಣೆಗಳ ಮೂಲಕ ಬಿತ್ತರಿಸಲಾಗುತ್ತಿದೆ. ಇದು ಹವ್ಯಕ ಸಮಾಜದ ಒಳಿತಿಗಂತೂ ಅಲ್ಲ. ನಾಡಿನ ನಾಳಿನ ಒಳ್ಳೆಯದಕ್ಕಂತೂ ಅಲ್ಲವೇ ಅಲ್ಲ.
ಇದೇ ಸಮಾವೇಶದಲ್ಲಿ "ಹವ್ಯಕರು ಮೂರು ಮಕ್ಕಳನ್ನು ಹೆರಬೇಕು" ಎಂದು ಇಬ್ಬಿಬ್ಬರು ಸ್ವಾಮೀಜಿಗಳು ಹೇಳಿದ್ದಾರೆ. ʻನಿಮಗೆ ಸಾಕಿಕೊಳ್ಳಲು ಸಾಧ್ಯ ಇಲ್ಲದಿದ್ದರೆ ಮಕ್ಕಳನ್ನು ಮಠಕ್ಕೆ ತಂದು ಬಿಡಿʼ ಎಂತಲೂ ಹೇಳಿದ್ದಾರೆ. ಶ್ರೇಷ್ಠತೆಯ ವ್ಯಸನ ಹೀಗೂ ಪ್ರಕಟವಾಗಬೇಕೆ? ʻಮೂರನೆಯ ಮಗುವನ್ನು ದತ್ತಕ ಪಡೆಯಿರಿʼ ಎಂದು ಹೇಳಿ ಸಾರ್ವತ್ರಿಕ ಶಾಭಾಸ್ ಪಡೆಯಬಹುದಿತ್ತು. ಯಾಕೆ ಆ ವಿವೇಕ, ಆ ದಿವ್ಯಾದರ್ಶ ಇವರಲ್ಲಿ ಮೂಡಲಿಲ್ಲವೊ?
ಮೂರು ಮಕ್ಕಳನ್ನು ಹೆರುವುದು ಈಗಿನ ಕಾಲದಲ್ಲಿ ಸುಲಭವಲ್ಲ. ವೈಜ್ಞಾನಿಕ ವಾಸ್ತವ ಏನೆಂದರೆ, ಊಟ-ಉಣಿಸಿನ ಅಭಾವವಿದ್ದಾಗ ಮಾತ್ರ ಮಹಿಳೆಯರು ಪದೇಪದೇ ಗರ್ಭ ಧರಿಸುತ್ತಾರೆ. ( ಸಸ್ಯಲೋಕ, ಪ್ರಾಣಿಲೋಕದಲ್ಲೂ ಕಾಣಬರುವ ವಾಸ್ತವ ಇದು.) ಮಕ್ಕಳಾಗದವರು ಉಪವಾಸ ಮಾಡಬೇಕು ಎಂಬ ವ್ರತದ ಹಿಂದೆ ಇದೇ ತರ್ಕ ಇದೆ. ರಾಜ ಮಹಾರಾಜರಿಗೆ ಮಕ್ಕಳೇ ಆಗುತ್ತಿರಲಿಲ್ಲ.
ಇಂದು ನಗರದಲ್ಲಿ ಹಾಯಾಗಿ ತಿಂದುಣ್ಣುವವರಿಗೆ ಒಂದು ಮಗು ಜನಿಸುವುದೇ ಕಷ್ಟ. ಇದಕ್ಕೆ ನಗರದ ಕಲುಷಿತ ಪರಿಸರವೂ ಬಹುಮಟ್ಟಿಗೆ ಕಾರಣವಿರಬಹುದು. ಶರೀರದ ಹಾರ್ಮೋನುಗಳನ್ನೇ ಬದಲಾಯಿಸುವ ಅದೆಷ್ಟು ಬಗೆಯ ಕೆಮಿಕಲ್‌ಗಳ ಕಲಸುಮೇಲೋಗರ ಇಲ್ಲಿದೆ. ಇನ್ನು ಎರಡು ಮತ್ತು ಮೂರನೆಯ ಮಗುವನ್ನು ಹೆರುವುದು ಸುಲಭವೆ? ಅದರ ಪೋಷಣೆ ಸುಲಭವೆ? ಏನೋ, ಮಠಾಧೀಶರು ನೀಡಿದ ಸಲಹೆಯ ಪ್ರಕಾರ ಅಂತೂ ಕಷ್ಟಪಟ್ಟು ಇನ್‌ವಿಟ್ರೊ ಬೀಜಾಂಕುರ ಮಾಡಿಸಿಕೊಂಡರೆ ಯಾವ ಜಾತಿಯ ವೀರ್ಯವೊ, ಯಾವ ಧರ್ಮದ ಅಂಡಾಶಯವೊ?
[ಅದು ಓಕೆ; ಹವ್ಯಕರ ಮತ್ತು ಮುಕ್ರಿ ಜನರ ರಕ್ತದ ಹೋಲಿಕೆ ಮಾಡಿದಾಗ, ಜೀನ್‌ಗಳ ಮಟ್ಟದಲ್ಲಿ ಇವೆರಡು ಜನಾಂಗಗಳಲ್ಲಿ ಏನೇನೂ ವ್ಯತ್ಯಾಸ ಇಲ್ಲ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ].
ಹಳ್ಳಿಯಲ್ಲಿ ವಾಸಿಸುವ ಹವ್ಯಕರಿಗೆ ಬೇರೆಯದೇ ಸಮಸ್ಯೆ ಇದೆ: ಒಂದು ಗಂಡು ಹುಟ್ಟಿದರೂ ಅದಕ್ಕೆ ಹೆಣ್ಣು ಕೊಡುವವರು ಸಿಗಲಾರರು. ಮೂರು ಗಂಡು ಮಕ್ಕಳು ಹುಟ್ಟಿದರೆ ಮೂವರನ್ನೂ ಮಠಕ್ಕೇ ಬಿಡಬೇಕಾದ ಪರಿಸ್ಥಿತಿ ಇದೆ! ʻಯಾವ ಕೆಳಜಾತಿಯ ಹೆಣ್ಣಾದರೂ ಸರಿ, ಮದುವೆ ಮಾಡಿಕೊಂಡು ಸಂತಾನವೃದ್ಧಿ ಮಾಡಿಕೊಳ್ಳಿʼ ಎಂದು ಮಠಾಧೀಶರೇ ಸಮ್ಮತಿ ನೀಡಿದ್ದಾರೆಂದು ಹಳ್ಳಿಯ ಜನರು ಆಡಿಕೊಳ್ಳುತ್ತಿದ್ದಾರೆ. ಹಾಗೆ ಸಮ್ಮತಿ ಸಿಗುವುದೇ ಆದರೆ ಯಾವುದೋ ಗೊತ್ತಿಲ್ಲದ ಜಾತಿಯ ಅನಾಥ ಮಗುವನ್ನು ತಂದು ಪಾಲಿಸಬಾರದೇಕೆ?
ʼಸಮಾವೇಶದಲ್ಲಿ ಸಣ್ಣಪುಟ್ಟ ನ್ಯೂನತೆಗಳೂ ಕಂಡಿಲ್ಲʼ ಎಂಬರ್ಥದಲ್ಲಿ ವಿಶ್ವೇಶ್ವರ ಭಟ್ಟರು ಹೇಳಿದ್ದಾರೆ. ಇರಬಹುದು. ಕೈಗೊಂಡ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಗುಣ ಹವ್ಯಕರಲ್ಲಿ ಇದ್ದೇ ಇದೆ.
ನ್ಯೂನತೆ ಏನಿದ್ದರೂ ವೇದಿಕೆಯ ಮೇಲಿನ ಮಾತುಗಳಲ್ಲೇ ಕಂಡುವಲ್ಲ...!
ʼನಮ್ಮ ರಕ್ತವೇ ಮೇಲು, ನಾವೇ ಮೇಲುʼ ಎಂದು ಒತ್ತಿ ಹೇಳುವ ಭರದಲ್ಲಿ, ʻನಾವು ಅಷ್ಟೇನೂ ಮೇಲಲ್ಲ, ನಮ್ಮ ಚಿಂತನೆಯಲ್ಲೂ ನ್ಯೂನತೆ ಇದೆʼ ಎಂದು ವಾದಿಸಿದಂತಾಯಿತಲ್ಲ?