ದುರಿತ ಕಾಲದ ದಿಟ್ಟ ಆಡಳಿತಗಾರನ ನಿರ್ಗಮನ

ಡಾ. ಮನಮೋಹನ್ ಸಿಂಗ್ ಅವರ ದೂರದೃಷ್ಟಿಯ ಯೋಜನೆಗಳು ಭಾರತದಲ್ಲಿ ಕೇವಲ ಕಾರ್ಯಕ್ರಮಗಳಾಗಿ ಮಾತ್ರ ಉಳಿಯಲಿಲ್ಲ. ಜನಸಾಮಾನ್ಯರ ಹಕ್ಕುಗಳಾಗಿ ಉಳಿದಿವೆೆ. ಬಡ ಜನರ, ಹಿಂದುಳಿದವರ, ದೀನ ದಲಿತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದವರಾಗಿದ್ದರು. ದುಡಿಯುವ ಕೈಗಳಿಗೆ ಮನರೇಗಾ, ದೇಶದ ಎಂಭತ್ತು ಕೋಟಿಗೂ ಹೆಚ್ಚು ಜನರಿಗೆ ಪಡಿತರ ವಿತರಿಸುವ ಆಹಾರ ಭದ್ರತಾ ಕಾನೂನು, ಕಡ್ಡಾಯ ಮತ್ತು ಉಚಿತ ಶಿಕ್ಷಣದ ಹಕ್ಕು, ಆರ್‌ಟಿಐ ಕಾಯ್ದೆ, ಸೂರಿಲ್ಲದ ಜನರಿಗೆ ಇಂದಿರಾ ಅವಾಸ್, ಆದಿವಾಸಿ ಸಮುದಾಯಕ್ಕೆ ಅರಣ್ಯವಾಸಿಗಳಾಗಿ ಬದುಕುವ ಹಕ್ಕು, ಸರ್ವಶಿಕ್ಷ ಅಭಿಯಾನ, ಆರೋಗ್ಯದ ಹಕ್ಕಿನಡಿಯಲ್ಲಿ ಜನಸಾಮನ್ಯರಿಗಾಗಿಯೇ 108 ಆ್ಯಂಬುಲೆನ್ಸ್ ಮಾಡುವ ಮೂಲಕ ಹಲವಾರು ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಕಾನೂನುಗಳನ್ನು ತಂದ ಕೀರ್ತಿ ಮನಮೋಹನ್ ಸಿಂಗ್ ಅವರಿಗೆ ಸಲ್ಲಬೇಕು.

Update: 2024-12-28 06:36 GMT

ನನ್ನ ರಾಜಕೀಯ ಜೀವನದ ಐವತ್ತು ವರ್ಷಗಳ ಸಾರ್ವಜನಿಕ ಜೀವನದಲ್ಲಿ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಜೊತೆಗಿನ ಒಡನಾಟದ ಬಂಧುತ್ವ ಬರೋಬ್ಬರಿ ಇಪ್ಪತ್ತೆರಡು ವರ್ಷಗಳದ್ದು. ಸುದೀರ್ಘ ಸಾರ್ವಜನಿಕ ಜೀವನ ನಡೆಸಿದ, ಅಪಾರ ಪಾಂಡಿತ್ಯವಿದ್ದರೂ ಸಜ್ಜನ, ಸರಳ, ವಿನಯತೆ ಹೊಂದಿದ್ದ ಒಬ್ಬ ಪರಿಪೂರ್ಣ ರಾಜಕಾರಣಿಯ ದಂತಕತೆಯ ಅಧ್ಯಾಯ ಮುಗಿದಿದೆ.

ಸರಕಾರ ಹಾಗೂ ಸರಕಾರೇತರ ಸಾರ್ವಜನಿಕ ಹುದ್ದೆಗಳನ್ನು ಅಲಂಕರಿಸುವಾಗ ಸರಳವಾಗಿ ಬದುಕನ್ನು ರೂಪಿಸಿಕೊಳ್ಳುವುದು ವಿರಳಾತಿವಿರಳ. ಆದರೆ ಮನಮೋಹನ್ ಸಿಂಗ್ ಅವರು ಇದಕ್ಕೆ ಅಪವಾದವಾಗಿದ್ದರು. ಅವರ ಇಡೀ ಜೀವನದುದ್ದಕ್ಕೂ ಸರಳವಾಗಿ ಮಾತ್ರ ಬದುಕಲಿಲ್ಲ, ಅದರ ಜೊತೆಗೆ ತಾವು ನಿಭಾಯಿಸಿದ ಪ್ರಾಧ್ಯಾಪಕ ಸ್ಥಾನದಿಂದ ಪ್ರಧಾನಿ ಹುದ್ದೆಯವರೆಗೂ ಎಂದೂ ಅಧಿಕಾರ ದುರುಪಯೋಗ ಮಾಡಿಕೊಳ್ಳಲಿಲ್ಲ.

ಪಕ್ಷದ ಹಲವು ಜವಾಬ್ದಾರಿಗಳನ್ನು ನಿಭಾಯಿಸಿದ ಕಾಲಘಟ್ಟದಲ್ಲಿ ಅತ್ಯಂತ ಗಟ್ಟಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಿಂಗ್ ಅವರು ಸದಾ ನನ್ನ ಬೆನ್ನಿಗೆ ನಿಲ್ಲುತ್ತಿದ್ದರು. ರಾಜ್ಯಸಭೆಯಲ್ಲಂತೂ ಬಹು ಕಾಲದ ಮಾರ್ಗದರ್ಶಿಯಾಗಿದ್ದರು. ಅವರು ತಮ್ಮ ಹುದ್ದೆಯನ್ನು ದುರುಪಯೋಗ ಮಾಡಿಕೊಳ್ಳುವುದು ಬಿಡಿ, ಆ ಹುದ್ದೆಗಳಿಗೆ ಸಿಗುವ ಸವಲತ್ತುಗಳನ್ನು ಕೂಡ ಸಿಂಗ್ ಯಾವತ್ತೂ ದುರುಪಯೋಗ ಪಡಿಸಿಕೊಳ್ಳಲಿಲ್ಲ.

ನನಗೆ ಈಗಲೂ ನೆನಪಿದೆ, 2000ನೇ ಇಸವಿ.ಅವರ ಬರುವಿಕೆಯನ್ನು ಖಾತ್ರಿಪಡಿಸಿಕೊಂಡೇ ದೊಡ್ಡಬಳ್ಳಾಪುರದಲ್ಲಿ ಪಕ್ಷದ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಅವರೇ ಮುಖ್ಯ ಅತಿಥಿಯೂ ಕೂಡ. ಆದರೆ ಕೊನೆ ಘಳಿಗೆಯಲ್ಲಿ ಅವರು ಭಾಗವಹಿಸಲು ಆಗುವುದಿಲ್ಲ ಎಂದು ಅವರ ಆಪ್ತ ಸಹಾಯಕರಿಂದ ಕರೆ ಬಂತು. ಕೂಡಲೇ ನಾನೇ ಖುದ್ದಾಗಿ ದಿಲ್ಲಿಗೆ ಹೋಗಿ ಅವರನ್ನು ಮನವರಿಕೆ ಮಾಡಿದರಾಯಿತು ಎಂದು ಹೋದೆ. ಅವರನ್ನು ಭೇಟಿಯಾಗಿ ಕಾರ್ಯಕ್ರಮದ ಮಹತ್ವ ತಿಳಿಸಿ ಹೇಳಿದೆ. ಆದರೆ ಕರ್ನಾಟಕಕ್ಕೆ ಬರಲು ಅವರ ನೀಡಿದ ಕಾರಣ ಫ್ಲೈಟಲ್ಲಿ ಬರಲು ಅವರ ಬಳಿ ಹಣ ಇರಲಿಲ್ಲ! ‘‘ಸರ್ ರಾಜ್ಯ ಸಭಾ ಸದಸ್ಯರಿಗೆ ವರ್ಷಕ್ಕೆ 34 ಟಿಕೆಟ್ ಫ್ರೀ ಇರುತ್ತೆ ಅದರಲ್ಲೇ ಬರಬಹುದು’’ ಎಂದು ಮನವರಿಕೆ ಮಾಡಿದೆ. ಅದಕ್ಕೆ ಒಪ್ಪದ ಸಿಂಗ್ ‘‘ಹರಿಪ್ರಸಾದ್, ನನ್ನ ಹುದ್ದೆಗೆ ಸಿಗುವ ಸವಲತ್ತನ್ನು ಪಕ್ಷದ ಕಾರ್ಯಕ್ರಮಕ್ಕೆ ಬಳಸುವುದಿಲ್ಲ’’ ಎಂದು ಕಡ್ಡಿ ತುಂಡಾದಂತೆ ಹೇಳಿದ್ದರು. ಪಕ್ಷದ ಖರ್ಚಿನಲ್ಲಿ ಟಿಕೆಟ್ ಮಾಡಿಸಿದರೆ ಬರುತ್ತೇನೆ ಎಂದು ಒಪ್ಪಿದ ನಂತರ ಎಐಸಿಸಿಯಿಂದಲೇ ಟಿಕೆಟ್ ಮಾಡಿಸಿಕೊಂಡು ಕಾರ್ಯಕ್ರಮಕ್ಕೂ ಬಂದರು. ಆಗ ಅವರು ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿದ್ದರು..!

ಸಿಂಗ್ ಅವರು ಅತ್ಯಂತ ಮುತ್ಸದ್ದಿ ಹಾಗೂ ಅತ್ಯುತ್ತಮ ಸಂಸದೀಯ ಪಟು ಕೂಡ ಆಗಿದ್ದರು. ಅವರ ದೂರದೃಷ್ಟಿಯ ಯೋಜನೆಗಳು ಭಾರತದಲ್ಲಿ ಕೇವಲ ಕಾರ್ಯಕ್ರಮಗಳಾಗಿ ಮಾತ್ರ ಉಳಿಯಲಿಲ್ಲ. ಜನಸಾಮಾನ್ಯರ ಹಕ್ಕುಗಳಾಗಿ ಉಳಿದಿವೆೆ. ಬಡ ಜನರ, ಹಿಂದುಳಿದವರ, ದೀನ ದಲಿತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದವರಾಗಿದ್ದರು. ದುಡಿಯುವ ಕೈಗಳಿಗೆ ಮನರೇಗಾ, ದೇಶದ ಎಂಭತ್ತು ಕೋಟಿಗೂ ಹೆಚ್ಚು ಜನರಿಗೆ ಪಡಿತರ ವಿತರಿಸುವ ಆಹಾರ ಭದ್ರತಾ ಕಾನೂನು, ಕಡ್ಡಾಯ ಮತ್ತು ಉಚಿತ ಶಿಕ್ಷಣದ ಹಕ್ಕು, ಆರ್ ಟಿ ಐ ಕಾಯ್ದೆ, ಸೂರಿಲ್ಲದ ಜನರಿಗೆ ಇಂದಿರಾ ಅವಾಸ್, ಆದಿವಾಸಿ ಸಮುದಾಯಕ್ಕೆ ಅರಣ್ಯವಾಸಿಗಳಾಗಿ ಬದುಕುವ ಹಕ್ಕು, ಸರ್ವಶಿಕ್ಷ ಅಭಿಯಾನ, ಆರೋಗ್ಯದ ಹಕ್ಕಿನಡಿಯಲ್ಲಿ ಜನಸಾಮಾನ್ಯರಿಗಾಗಿಯೇ 108 ಆ್ಯಂಬುಲೆನ್ಸ್ ಮಾಡುವ ಮೂಲಕ ಹಲವಾರು ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಕಾನೂನುಗಳನ್ನು ತಂದ ಕೀರ್ತಿ ಮನಮೋಹನ್ ಸಿಂಗ್ ಅವರಿಗೆ ಸಲ್ಲಬೇಕು.

ಬಾಬಾ ಸಾಹೇಬರ ಕನಸಾಗಿದ್ದ ಹಿಂದೂ ಕೋಡ್ ಬಿಲ್ಲಿನ ಮಹತ್ವದ ಅಂಶವಾಗಿದ್ದ ಮಹಿಳೆಯರಿಗೆ ಆಸ್ತಿಯ ಸಮಪಾಲು ಹಕ್ಕನ್ನು ಕಾಂಗ್ರೆಸ್ ಯುಪಿಎ ಸರಕಾರ 2005ರಲ್ಲಿ ಮಾಡಲು ಸಿಂಗ್ ಅವರು ತೋರಿದ ದಿಟ್ಟತನವನ್ನು ಮರೆಯಲು ಸಾಧ್ಯವಿಲ್ಲ. ಮಹಿಳೆಯರಿಗೆ ಶೇ. 33 ಮೀಸಲಾತಿಯ ಹಕ್ಕುಗಳಿಗಾಗಿ ಹೋರಾಡಿದರು. 23 ಕೋಟಿ ಅತ್ಯಂತ ಕಡು ಬಡತನದಿಂದ ನಲುಗಿದ್ದ ಭಾರತೀಯ ಕುಟುಂಬಗಳು ಮಧ್ಯಮ ವರ್ಗಗಳಾಗಿ ಬದಲಾಗಲು ಸಿಂಗ್ ಅವರು ರೂಪಿಸಿದ ಯೋಜನೆಗಳ ಪ್ರಕ್ರಿಯೆಯೇ ಅಸಾಧಾರಣವಾದದ್ದು.

ಭಾರತ ದೇಶ ಇಂದು ಜಗತ್ತಿನ ನಾಲ್ಕನೇ ಆರ್ಥಿಕ ದೊಡ್ಡ ಶಕ್ತಿಯಾಗಿ ಹೊರಹೊಮ್ಮಲು, ಜಾಗತಿಕ ಮಟ್ಟದಲ್ಲಿ ವಿದೇಶಾಂಗ ನೀತಿಗೆ ಮನ್ನಣೆ ಸಿಗಲು ಸಿಂಗ್ ಅವರ ಕೊಡುಗೆ ಅಪಾರವಾದದ್ದು. ಅವರು ಅರ್ಥ ಶಾಸ್ತ್ರಜ್ಞರಾಗಿ ಅಪಾರ ಪಾಂಡಿತ್ಯದೊಂದಿಗೆ ವರ್ಲ್ಡ್ ಬ್ಯಾಂಕಿನಲ್ಲೋ, ಅಥವಾ ಖಾಸಗಿ ವಲಯದಲ್ಲೋ ವಿಲಾಸ ಜೀವನವನ್ನು ನಡೆಸಬಹುದಾಗಿತ್ತು. ಆದರೆ ದೇಶ ಎದುರಿಸುತ್ತಿದ್ದ ಆರ್ಥಿಕ ಜರ್ಜರಿತ ಹಿನ್ನಡೆಯ ಸ್ಥಿತಿಯಲ್ಲೂ ದೇಶವನ್ನು ಅವರು ಸಮರ್ಥವಾಗಿ ಮುನ್ನಡೆಸಿದರು.

ದುರಿತ ಕಾಲದ ಗಟ್ಟಿ ಆಡಳಿತಗಾರನನ್ನು ದೇಶ ಕಳೆದು ಕೊಂಡಿದೆ. ಒಬ್ಬ ಮಿತ ಭಾಷಿಯೂ, ಮೃದು ಭಾಷಿಯೂ ಆಗಿದ್ದ ಭಾರತದ ರತ್ನವೇ ಕಳಚಿದಂತಾಯಿತು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಬಿ.ಕೆ. ಹರಿಪ್ರಸಾದ್

contributor

Similar News