ಮನಮೋಹನ್‌ಸಿಂಗ್ ಸ್ಮರಣೆಯೆಂದರೆ ಶಿಕ್ಷಣ ಹಕ್ಕು ಕಾಯ್ದೆಯ ಪೂರ್ಣ ಜಾರಿ
ದೇಶದ ಪ್ರಧಾನ ಮಂತ್ರಿಯಾಗಿ 10 ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಡಾ.ಮನಮೋಹನ್‌ಸಿಂಗ್‌ರವರ ಅವಧಿಯಲ್ಲಿ ಭಾರತದ ಇತಿಹಾಸದಲ್ಲಿ ಉಳಿಯುವ ಹಲವು ಮಹತ್ವದ ಸಾಧನೆಗಳಾಗಿವೆ. ಅಂತಹ ಸಾಧನೆಗಳಲ್ಲಿ ಒಂದಾದ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯ್ದೆ 2009 (ಸಂಕ್ಷಿಪ್ತವಾಗಿ ಶಿಕ್ಷಣ ಹಕ್ಕು ಕಾಯ್ದೆ), ಭಾರತದ ಶಾಲಾ ಶಿಕ್ಷಣದ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗಿದೆ.
ಭಾಗ- 1
ಡಾ.ಮನಮೋಹನ್‌ಸಿಂಗ್‌ರವರು ಈ ದೇಶ ಕಂಡ ಸರಳ, ಸಜ್ಜನ, ಪ್ರಾಮಾಣಿಕ ಮತ್ತು ಕಳಂಕರಹಿತ ಪ್ರಧಾನಿ. ಇವರು ಪ್ರಖ್ಯಾತ ಅರ್ಥಶಾಸ್ತ್ರಜ್ಞರೂ ಹೌದು. ಇವರ ಹಿರಿಮೆಯೆಂದರೆ, ಒಬ್ಬ ಸಾಮಾನ್ಯ ಅರ್ಥಶಾಸ್ತ್ರದ ಪ್ರಾಧ್ಯಾಪಕ ಹುದ್ದೆಯಿಂದ ಹಿಡಿದು ದೇಶದ ಅತ್ಯುನ್ನತ ಸ್ಥಾನವಾದ ಪ್ರಧಾನಿ ಸ್ಥಾನದವರೆಗೆ ಆರ್ಥಿಕ ವಿಚಾರ, ನೀತಿ ಹಾಗೂ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಬಹುತೇಕ ಎಲ್ಲಾ ಆಯಕಟ್ಟಿನ ಸ್ಥಳಗಳಲ್ಲಿ ಕಾರ್ಯನಿರ್ವಹಿಸಿದ್ದು. ನಮ್ಮಲ್ಲಿ ‘ಸಾಧನೆ ಮಾತಾಗಬೇಕೇ ಹೊರತು ಮಾತೇ ಸಾಧನೆಯಾಗಬಾರದು’ ಎಂಬ ಮಾತಿದೆ. ಇದು ಡಾ. ಮನಮೋಹನ್‌ಸಿಂಗ್‌ರವರಿಗೆ ಹೇಳಿ ಮಾಡಿಸಿದಂತಿದೆ.
ದೇಶದ ಪ್ರಧಾನ ಮಂತ್ರಿಯಾಗಿ 10 ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಅವರ ಅವಧಿಯಲ್ಲಿ ಭಾರತದ ಇತಿಹಾಸದಲ್ಲಿ ಉಳಿಯುವ ಹಲವು ಮಹತ್ವದ ಸಾಧನೆಗಳಾಗಿವೆ. ಅಂತಹ ಸಾಧನೆಗಳಲ್ಲಿ ಒಂದಾದ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯ್ದೆ 2009 (ಸಂಕ್ಷಿಪ್ತವಾಗಿ ಶಿಕ್ಷಣ ಹಕ್ಕು ಕಾಯ್ದೆ), ಭಾರತದ ಶಾಲಾ ಶಿಕ್ಷಣದ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗಿದೆ.
1993ರಲ್ಲಿ ಸರ್ವೋಚ್ಚ ನ್ಯಾಯಾಲಯವು 14 ವರ್ಷದವರೆಗೆ ಶಿಕ್ಷಣ ಎಲ್ಲಾ ಮಕ್ಕಳಿಗೆ ಒಂದು ಮೂಲಭೂತ ಹಕ್ಕೆಂಬ ತೀರ್ಪನ್ನು ನೀಡಿದ ತರುವಾಯ, ನಾಗರಿಕ ಸಮಾಜದ ನಿರಂತರ ಹೋರಾಟದ ಫಲವಾಗಿ 2002ರಲ್ಲಿ ಸಂವಿಧಾನದ 86ನೇ ತಿದ್ದುಪಡಿಯ ಮೂಲಕ ಜೀವಿಸುವ ಹಕ್ಕಿನ (21) ನಂತರ ಶಿಕ್ಷಣದ ಮೂಲಭೂತ ಹಕ್ಕನ್ನು (21ಎ) ಸೇರಿಸಲಾಯಿತು. ಸಂವಿಧಾನಬದ್ಧ ಈ ಮೂಲಭೂತ ಹಕ್ಕು ಎಲ್ಲಾ ಮಕ್ಕಳಿಗೆ ದೊರೆಯಬೇಕಾದರೆ ಆರ್ಟಿಕಲ್21ಎಯನ್ನು ದೇಶದಲ್ಲಿ ಜಾರಿಗೊಳಿಸಲು ಒಂದು ಕಾನೂನನ್ನು ರಚಿಸಬೇಕಾಯಿತು. ಮನಮೋಹನ್‌ಸಿಂಗ್‌ರವರು ಮೇ 2004ರಲ್ಲಿ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯ್ದೆ ರಚನೆಯ ಪ್ರಕ್ರಿಯೆ ಪ್ರಾರಂಭವಾಯಿತು. ಸರಿ ಸುಮಾರು ಐದು ವರ್ಷಗಳ ದೀರ್ಘಕಾಲದ ಚರ್ಚೆಗಳ ಮೂಲಕ 2009ರಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಮಸೂದೆಯು ಸಂಸತ್ತಿನಲ್ಲಿ ಅಂಗೀಕಾರವಾಗಿ ರಾಷ್ಟ್ರಪತಿಯವರ ಒಪ್ಪಿಗೆ ಪಡೆದು ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯ್ದೆಯಾಯಿತು.
ಶಿಕ್ಷಣ ಹಕ್ಕು ಕಾಯ್ದೆ ಎಷ್ಟು ಮಹತ್ವವುಳ್ಳ ಕಾಯ್ದೆ ಎಂಬುದನ್ನು ಶಿಕ್ಷಣ ಮಸೂದೆಯನ್ನು ಸಂಸತ್ತಿನಲ್ಲಿ 2009ರಲ್ಲಿ ಮಂಡಿಸಿದ ಸಂದರ್ಭದಲ್ಲಿ, ಮಸೂದೆಯ ಉದ್ದೇಶ ಮತ್ತು ಕಾರಣಗಳ ಭಾಗದಲ್ಲಿ ವಿವರಿಸಲಾಗಿತ್ತು. ಅದರಂತೆ, ‘‘ಈ ಉದ್ದೇಶಿತ ಮಸೂದೆಯನ್ನು ಮೌಲ್ಯಗಳಾದ ಸಮಾನತೆ, ಸಾಮಾಜಿಕ ನ್ಯಾಯ, ಪ್ರಜಾಪ್ರಭುತ್ವ ಮತ್ತು ಮಾನವೀಯ ನೆಲೆಯಲ್ಲಿ ಸಮ ಸಮಾಜವನ್ನು ಕಟ್ಟಿಕೊಳ್ಳಬೇಕಾದರೆ, ಎಲ್ಲರನ್ನೂ ಒಳಗೊಳ್ಳುವ ಪ್ರಾಥಮಿಕ ಶಿಕ್ಷಣವನ್ನು ಕಲ್ಪಿಸುವ ಅವಕಾಶದ ಮೂಲಕ ಮಾತ್ರ ಸಾಧ್ಯವೆಂಬ ಬಲವಾದ ನಂಬಿಕೆಯಿಂದ ರೂಪಿಸಲಾಗುತ್ತಿದೆ. ಎಲ್ಲಾ ಮಕ್ಕಳಿಗೆ, ಅದರಲ್ಲೂ ವಿಶೇಷವಾಗಿ ಅವಕಾಶ ವಂಚಿತ ಮತ್ತು ಹಿಂದುಳಿದ ವರ್ಗಗಳ ಮಕ್ಕಳಿಗೆ ತೃಪ್ತಿದಾಯಕ ಉಚಿತ ಮತ್ತು ಕಡ್ಡಾಯ ಶಿಕ್ಷಣ ಒದಗಿಸುವುದು ಕೇವಲ ಸರಕಾರಿ ಅಥವಾ ಸರಕಾರಿ ಅನುದಾನಿತ ಶಾಲೆಗಳದ್ದು ಮಾತ್ರವಲ್ಲದೆ, ಸರಕಾರದ ಹಣಕಾಸನ್ನು ಅವಲಂಬಿಸದ ಶಾಲೆಗಳ ಜವಾಬ್ದಾರಿಯೂ ಹೌದು’’ ಎಂಬುದನ್ನು ಮಸೂದೆಯ ಉದ್ದೇಶ ಮತ್ತು ಕಾರಣಗಳ 4ನೇ ಪ್ಯಾರಾವು ಸ್ಪಷ್ಟವಾಗಿ ತಿಳಿಸಿತ್ತು.
ಇಂತಹ ಮಹತ್ವದ ಐತಿಹಾಸಿಕ ಕಾನೂನನ್ನು ಅಂದಿನ ಪ್ರಧಾನ ಮಂತ್ರಿಗಳಾಗಿದ್ದ ಡಾ.ಮನಮೋಹನ್‌ಸಿಂಗ್‌ರವರು ಎಪ್ರಿಲ್ 1, 2010ರಂದು ದೇಶಾದ್ಯಂತ ಜಾರಿಗೊಳಿಸುವುದಾಗಿ ಘೋಷಿಸಿದರು. ಈ ಮೂಲಕ ಭಾರತದಲ್ಲಿ ಶಿಕ್ಷಣದ ಮೂಲಭೂತ ಹಕ್ಕು ಕಾಯ್ದೆಯು ಜಾರಿಗೆ ಬರುವುದರೊಂದಿಗೆ, 6ರಿಂದ 14 ವರ್ಷದ ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಒದಗಿಸಲು ಕಾನೂನಿನ ಖಾತರಿ ಹೊಂದಿರುವ 130 ದೇಶಗಳ ಒಕ್ಕೂಟಕ್ಕೆ ಭಾರತವು ಸೇರ್ಪಡೆಯಾಯಿತು. ಯುನೆಸ್ಕೋದ ‘ಎಜುಕೇಶನ್ ಫಾರ್ ಆಲ್ ಗ್ಲೋಬಲ್ ಮಾನಿಟರಿಂಗ್ ರಿಪೋರ್ಟ್ 2010’ ಪ್ರಕಾರ, ಜಗತ್ತಿನ 135 ದೇಶಗಳು ಮಕ್ಕಳಿಗೆ ಉಚಿತ ಮತ್ತು ತಾರತಮ್ಯರಹಿತ ಕಡ್ಡಾಯ ಶಿಕ್ಷಣಕ್ಕಾಗಿ ಸಾಂವಿಧಾನಿಕ ಮೂಲಭೂತ ಹಕ್ಕಿನ ಸ್ಥಾನವನ್ನು ಕಲ್ಪಿಸಿವೆ.
ಎಪ್ರಿಲ್ 1, 2010ರಂದು ಶಿಕ್ಷಣ ಹಕ್ಕು ಕಾಯ್ದೆಯನ್ನು ಜಾರಿಗೊಳಿಸಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ ಡಾ.ಮನಮೋಹನ್‌ಸಿಂಗ್‌ರವರ ಭಾಷಣ ಇಂದಿಗೂ ಒಂದು ದಾಖಲೆಯಾಗಿ ಉಳಿದಿದೆ. ಅಂದಿನ ಭಾಷಣದಲ್ಲಿ ಅವರು, ‘‘ಸುಮಾರು ನೂರು ವರ್ಷಗಳ ಹಿಂದೆ ಭಾರತದ ಮಹಾನ್ ಪುತ್ರ ಗೋಪಾಲಕೃಷ್ಣ ಗೋಖಲೆ ಅವರು ಭಾರತೀಯ ಮಕ್ಕಳಿಗೆ ಶಿಕ್ಷಣದ ಹಕ್ಕನ್ನು ನೀಡುವಂತೆ ಇಂಪೀರಿಯಲ್ ಲೆಜಿಸ್ಲೇಟಿವ್ ಅಸೆಂಬ್ಲಿಯನ್ನು ಒತ್ತಾಯಿಸಿದ್ದರು. ಅದಾದ ತೊಂಭತ್ತು ವರ್ಷಗಳ ನಂತರ, ಶಿಕ್ಷಣದ ಹಕ್ಕನ್ನು ಮೂಲಭೂತ ಹಕ್ಕು ಎಂದು ಘೋಷಿಸಲು ಭಾರತದ ಸಂವಿಧಾನವನ್ನು ತಿದ್ದುಪಡಿ ಮಾಡಲಾಯಿತು.
ಇಂದು, ನಮ್ಮ ಎಲ್ಲಾ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣದ ಹಕ್ಕನ್ನು ನೀಡುವ ಪ್ರತಿಜ್ಞೆಯನ್ನು ಈಡೇರಿಸಲು ನಮ್ಮ ಸರಕಾರ ನಿಮ್ಮ ಮುಂದೆ ಬಂದಿದೆ. ಆಗಸ್ಟ್ 2009ರಲ್ಲಿ ಸಂಸತ್ತು ಜಾರಿಗೆ ತಂದ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯ್ದೆ ಇಂದು ಜಾರಿಗೆ ಬಂದಿದೆ. ನಮ್ಮ ಸಂವಿಧಾನದಲ್ಲಿ ಅನುಚ್ಛೇದ 21ಎ ಅಡಿಯಲ್ಲಿ ಸಂಯೋಜಿಸಲಾದ ಶಿಕ್ಷಣದ ಮೂಲಭೂತ ಹಕ್ಕು ಇಂದಿನಿಂದ ಜಾರಿಗೆ ಬಂದಿದೆ. ಇದು ನಮ್ಮ ಮಕ್ಕಳ ಶಿಕ್ಷಣ ಮತ್ತು ಭಾರತದ ಭವಿಷ್ಯದ ಬಗ್ಗೆ ನಮ್ಮ ರಾಷ್ಟ್ರೀಯ ಬದ್ಧತೆಯನ್ನು ಪ್ರದರ್ಶಿಸುತ್ತದೆ.
ನಮ್ಮದು ಯುವಜನರ ದೇಶ. ನಮ್ಮ ಮಕ್ಕಳು ಮತ್ತು ಯುವಜನರ ಆರೋಗ್ಯ, ಶಿಕ್ಷಣ ಮತ್ತು ಸೃಜನಶೀಲ ಸಾಮರ್ಥ್ಯಗಳು ನಮ್ಮ ರಾಷ್ಟ್ರದ ಯೋಗಕ್ಷೇಮ ಮತ್ತು ಶಕ್ತಿಯನ್ನು ನಿರ್ಧರಿಸುತ್ತವೆ. ಶಿಕ್ಷಣವು ಪ್ರಗತಿಯ ಕೀಲಿಯಾಗಿದೆ. ಇದು ಜನತೆಯನ್ನು ಸಬಲೀಕರಿಸುತ್ತದೆ ಮತ್ತು ರಾಷ್ಟ್ರವನ್ನು ಶಕ್ತಗೊಳಿಸುತ್ತದೆ. ನಾವು ನಮ್ಮ ಮಕ್ಕಳು ಮತ್ತು ಯುವಜನರನ್ನು ಸರಿಯಾದ ಶಿಕ್ಷಣದೊಂದಿಗೆ ಪೋಷಿಸಿದರೆ, ಬಲವಾದ ಮತ್ತು ಸಮೃದ್ಧ ದೇಶವಾಗಿ ಭಾರತದ ಭವಿಷ್ಯವು ಸುರಕ್ಷಿತವಾಗಿರುತ್ತದೆ ಎಂಬುದು ನಮ್ಮ ಸರಕಾರದ ನಂಬಿಕೆಯಾಗಿದೆ.
ಲಿಂಗ ಮತ್ತು ಸಾಮಾಜಿಕ ವರ್ಗವನ್ನು ಲೆಕ್ಕಿಸದೆ ಎಲ್ಲಾ ಮಕ್ಕಳು ಶಿಕ್ಷಣಕ್ಕೆ ಪ್ರವೇಶವನ್ನು ಹೊಂದಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ. ಭಾರತದ ಜವಾಬ್ದಾರಿಯುತ ಮತ್ತು ಸಕ್ರಿಯ ನಾಗರಿಕರಾಗಲು ಅಗತ್ಯವಾದ ಕೌಶಲ, ಜ್ಞಾನ, ಮೌಲ್ಯ ಮತ್ತು ನಡೆ-ನುಡಿಗಳನ್ನು ಪಡೆಯಲು ಅನುವು ಮಾಡಿಕೊಡುವ ಶಿಕ್ಷಣವನ್ನು ಜಾರಿಗೊಳಿಸಿದ್ದೇವೆ.
ಶಿಕ್ಷಣದ ಹಕ್ಕನ್ನು ಸಾಕಾರಗೊಳಿಸಲು ಕೇಂದ್ರ, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತ್ತು ಜಿಲ್ಲಾ ಮತ್ತು ಗ್ರಾಮ ಮಟ್ಟದಲ್ಲಿ ಸರಕಾರವು ಸಾಮಾನ್ಯ ರಾಷ್ಟ್ರೀಯ ಪ್ರಯತ್ನದ ಭಾಗವಾಗಿ ಒಟ್ಟಾಗಿ ಕೆಲಸ ಮಾಡಬೇಕು. ಈ ರಾಷ್ಟ್ರೀಯ ಪ್ರಯತ್ನದಲ್ಲಿ ಸಂಪೂರ್ಣ ಸಂಕಲ್ಪ ಮತ್ತು ದೃಢನಿಶ್ಚಯದೊಂದಿಗೆ ಕೈಜೋಡಿಸುವಂತೆ ನಾನು ಎಲ್ಲ ರಾಜ್ಯ ಸರಕಾರಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕರೆ ನೀಡುತ್ತೇನೆ. ನಮ್ಮ ಸರಕಾರ, ರಾಜ್ಯ ಸರಕಾರಗಳ ಸಹಭಾಗಿತ್ವದಲ್ಲಿ ಶಿಕ್ಷಣ ಹಕ್ಕು ಕಾಯ್ದೆಯ ಅನುಷ್ಠಾನಕ್ಕೆ ಹಣಕಾಸಿನ ನಿರ್ಬಂಧಗಳು ಅಡ್ಡಿಯಾಗದಂತೆ ನೋಡಿಕೊಳ್ಳುತ್ತದೆ.
ಯಾವುದೇ ಶೈಕ್ಷಣಿಕ ಪ್ರಯತ್ನದ ಯಶಸ್ಸು ಶಿಕ್ಷಕರ ಸಾಮರ್ಥ್ಯ ಮತ್ತು ಪ್ರೇರಣೆಯನ್ನು ಆಧರಿಸಿದೆ. ಶಿಕ್ಷಣದ ಹಕ್ಕಿನ ಅನುಷ್ಠಾನವೂ ಇದಕ್ಕೆ ಹೊರತಾಗಿಲ್ಲ. ಈ ಪ್ರಯತ್ನದಲ್ಲಿ ಪಾಲುದಾರರಾಗುವಂತೆ ನಾನು ದೇಶಾದ್ಯಂತದ ನಮ್ಮ ಎಲ್ಲಾ ಶಿಕ್ಷಕರಿಗೆ ಕರೆ ನೀಡುತ್ತೇನೆ.
ನಮ್ಮ ಶಿಕ್ಷಕರ ಕೆಲಸದ ಪರಿಸ್ಥಿತಿಗಳನ್ನು ಸುಧಾರಿಸಲು ಮತ್ತು ಅವರ ಪ್ರತಿಭೆ ಮತ್ತು ಸೃಜನಶೀಲತೆಗೆ ಸಂಪೂರ್ಣ ಅಭಿವ್ಯಕ್ತಿಯನ್ನು ನೀಡುವ ಮೂಲಕ ಘನತೆಯಿಂದ ಕಲಿಸಲು ಅನುವು ಮಾಡಿಕೊಡಲು ಒಟ್ಟಾಗಿ ಕೆಲಸ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ಕಾಯ್ದೆಯಡಿ ಶಾಲಾ ನಿರ್ವಹಣಾ ಜವಾಬ್ದಾರಿಗಳನ್ನು ನಿಯೋಜಿಸಿರುವುದರಿಂದ ಪೋಷಕರು ಸಹ ನಿರ್ಣಾಯಕ ಪಾತ್ರ ವಹಿಸುತ್ತಾರೆ. ನಾವು ಈ ಕಾಯ್ದೆಯನ್ನು ಜಾರಿಗೆ ತರುವಾಗ ನಮ್ಮ ಸಮಾಜದ ಪ್ರತಿಯೊಂದು ಅನಾನುಕೂಲಕರ ಹಾಗೂ ಅವಕಾಶವಂಚಿತ ಸಮುದಾಯಗಳ, ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳ, ದಲಿತರ, ಆದಿವಾಸಿಗಳ ಮತ್ತು ಅಲ್ಪಸಂಖ್ಯಾತ ವರ್ಗದ ಮಕ್ಕಳ ಅಗತ್ಯಗಳ ಬಗ್ಗೆ ವಿಶೇಷವಾಗಿ ಗಮನ ಹರಿಸಬೇಕಾಗಿದೆ.
ನಾನು ಸಾಧಾರಣ ಆದಾಯದ ಕುಟುಂಬದಲ್ಲಿ ಜನಿಸಿದೆ. ನನ್ನ ಬಾಲ್ಯದಲ್ಲಿ ನಾನು ಶಾಲೆಗೆ ಹೋಗಲು ಬಹಳ ದೂರ ನಡೆಯಬೇಕಾಗಿತ್ತು. ಸೀಮೆಎಣ್ಣೆ ದೀಪದ ಮಂದ ಬೆಳಕಿನಲ್ಲಿ ನಾನು ಓದುತ್ತಿದ್ದೆ. ಶಿಕ್ಷಣದಿಂದಾಗಿ ನಾನು ಇಂದು ಈ ಮಟ್ಟಕ್ಕೆ ಬಂದಿದ್ದೇನೆ.
ಪ್ರತಿಯೊಬ್ಬ ಭಾರತೀಯ ಮಗು ಶಿಕ್ಷಣದ ಬೆಳಕನ್ನು ಸ್ಪರ್ಶಿಸಬೇಕು ಎಂದು ನಾನು ಬಯಸುತ್ತೇನೆ. ಪ್ರತಿಯೊಬ್ಬ ಭಾರತೀಯನೂ ಉತ್ತಮ ಭವಿಷ್ಯದ ಕನಸು ಕಾಣಬೇಕು ಮತ್ತು ಆ ಕನಸನ್ನು ಬದುಕಿಸಬೇಕು. ಭಾರತದ ಮಕ್ಕಳಿಗೆ, ನಮ್ಮ ಯುವಕ ಯುವತಿಯರಿಗೆ ಹಾಗೂ ನಮ್ಮ ರಾಷ್ಟ್ರದ ಭವಿಷ್ಯಕ್ಕಾಗಿ ನಾವು ಒಟ್ಟಾಗಿ ಪ್ರತಿಜ್ಞೆ ಮಾಡೋಣ’’ ವೆಂದು ದೇಶದ ಜನತೆಗೆ ಪ್ರಧಾನಿ ಕರೆ ನೀಡಿದ್ದರು.
ಒಟ್ಟಾರೆ, ಹಲವು ವರ್ಷಗಳ ಸತತ ಹೋರಾಟದ ಫಲವಾಗಿ ಶಿಕ್ಷಣ ಒಂದು ಮೂಲಭೂತ ಹಕ್ಕಾಗಿ ಸಂವಿಧಾನದಲ್ಲಿ ಸೇರ್ಪಡೆಯಾಯಿತು. ಇದನ್ನು ಸಾಕಾರಗೊಳಿಸಲು ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯ್ದೆ 2009, ಎಪ್ರಿಲ್ 1, 2010ರಿಂದ ರಾಷ್ಟ್ರಾದ್ಯಂತ ಜಾರಿಗೊಂಡಿತು. ಅಂದು, ಜಾರಿಯಾದ ಶಿಕ್ಷಣ ಹಕ್ಕು ಕಾಯ್ದೆಯಲ್ಲಿ ಹಲವು ಮಹತ್ವದ ಅವಕಾಶಗಳನ್ನು ಕಲ್ಪಿಸಲಾಗಿತ್ತು.
ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅನುವಾಗುವಂತೆ ಹಲವು ಕಾರ್ಯಾತ್ಮಕ ಪದಪುಂಜಗಳಿಗೆ ವಾಖ್ಯಾನವನ್ನು ನೀಡಲಾಗಿದೆ. ಈ ವಾಖ್ಯಾನಗಳು ಕಾಯ್ದೆಯ ವ್ಯಾಪ್ತಿ ಮತ್ತು ಇತಿ-ಮಿತಿಗಳನ್ನು ಅರ್ಥ ಮಾಡಿಕೊಂಡು ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಸಹಾಯವಾಗುತ್ತವೆ.
ಮಗುವಿನ ಶಿಕ್ಷಣದ ಮೂಲಭೂತ ಹಕ್ಕಿಗೆ ಸಂಬಂಧಿಸಿದಂತೆ ಹಲವು ಅವಕಾಶಗಳನ್ನು ಕಲ್ಪಿಸಲಾಗಿದೆ. ಅದರಂತೆ 6 ರಿಂದ 14 ವರ್ಷ ವಯಸ್ಸಿನ ಪ್ರತಿಯೊಂದು ಮಗುವೂ ತನ್ನ ನೆರೆಹೊರೆಯ ಶಾಲೆಯಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಪಡೆಯುವ ಹಕ್ಕನ್ನು ಹೊಂದಿರುತ್ತದೆ. ಇಂತಹ ಶಿಕ್ಷಣವನ್ನು ಪೂರ್ಣಗೊಳಿಸಲು ಅಡ್ಡಿಯುಂಟುಮಾಡಬಹುದಾದ ಯಾವುದೇ ಬಗೆಯ ಶುಲ್ಕ ಮತ್ತು ಖರ್ಚುಗಳನ್ನು ಮಗು ಸಂದಾಯ ಮಾಡಬೇಕಾಗಿರುವುದಿಲ್ಲ.
ಈ ಹಕ್ಕು ಅಂಗವಿಕಲತೆ ಹೊಂದಿರುವ ಮಕ್ಕಳಿಗೂ ಸಮಾನವಾಗಿ ಅನ್ವಯಿಸುತ್ತದೆ. ಈ ಕಾಯ್ದೆ ಜಾರಿಯಾದ ಸಂದರ್ಭದಲ್ಲಿ ಶಾಲೆಗೆ ಸೇರದ ಅಥವಾ ಶಾಲೆಗೆ ಸೇರಿ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸದ ಆರುವರ್ಷಕ್ಕೆ ಮೇಲ್ಪಟ್ಟ ಯಾವುದೇ ಮಗು ಅವನ/ಅವಳ ವಯಸ್ಸಿಗೆ ಅನುಗುಣವಾಗಿ ಸೂಕ್ತ ತರಗತಿಗೆ ಸೇರುವ ಹಕ್ಕನ್ನು ಹೊಂದಿರುತ್ತದೆ. ಈ ರೀತಿ ಸೂಕ್ತ ತರಗತಿಗೆ ನೇರವಾಗಿ ಸೇರಿಕೊಂಡ ಮಗು ತನ್ನ ಉಳಿದ ಸಹಪಾಠಿಗಳ ಜೊತೆ ಸಮಾನವಾಗಿ ಕಲಿಯಲು ಅನುವಾಗುವಂತೆ ನಿಗದಿತ ಸಮಯದೊಳಗೆ ವಿಶೇಷ ತರಬೇತಿಯನ್ನು ಪಡೆಯುವ ಹಕ್ಕನ್ನು ಸಹ ಹೊಂದಿರುತ್ತದೆ. ಈ ರೀತಿ ಶಾಲೆಗೆ ಸೇರಲ್ಪಡುವ ಮಕ್ಕಳು ಹದಿನಾಲ್ಕು ವರ್ಷದ ನಂತರವೂ ಪ್ರಾಥಮಿಕ ಶಿಕ್ಷಣವನ್ನು ಪೂರೈಸುವ ನಿಟ್ಟಿನಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯಲು ಹಕ್ಕುದಾರರಾಗಿರುತ್ತಾರೆ.
ಮುಂದುವರಿದು, ಮಗುವಿಗೆ ಶಾಲೆಯೊಂದರಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಲು ಅವಕಾಶ ವಿಲ್ಲದಿದ್ದಲ್ಲಿ ಇತರ ಯಾವುದೇ ಶಾಲೆಗೆ ವರ್ಗಾವಣೆ ಕೋರುವ ಹಕ್ಕನ್ನು ಹೊಂದಿರುತ್ತದೆ. ಅಂತಹ ಸಂದರ್ಭದಲ್ಲಿ ಬೇರೊಂದು ಶಾಲೆಯಲ್ಲಿ ಪ್ರವೇಶ ಪಡೆಯಲು ಅನುಕೂಲವಾಗುವಂತೆ ಮಗು ಕಲಿಯುತ್ತಿದ್ದ ಶಾಲೆಯ ಮುಖ್ಯ ಶಿಕ್ಷಕರು ಅಥವಾ ಪ್ರಭಾರಿ ಶಿಕ್ಷಕರು ಕೂಡಲೇ ವರ್ಗಾವಣೆ ಪ್ರಮಾಣಪತ್ರವನ್ನು ನೀಡಬೇಕು. ವರ್ಗಾವಣೆ ಪತ್ರವನ್ನು ಪಡೆಯಲು ಆಗಬಹುದಾದ ವಿಳಂಬ ಮಗುವಿನ ಶಾಲೆಯ ಪ್ರವೇಶ ನಿರಾಕರಣೆಗೆ ಕಾರಣವಾಗುವಂತಿಲ್ಲ. ವರ್ಗಾವಣೆ ಪತ್ರವನ್ನು ವಿತರಣೆ ಮಾಡಲು ವಿಳಂಬ ಮಾಡುವ ಶಿಕ್ಷಕರ ಮೇಲೆ ಸೇವಾ ನಿಯಮಗಳ ಅಡಿಯಲ್ಲಿ ಶಿಸ್ತುಕ್ರಮ ಜರುಗಿಸಲು ಅವಕಾಶವಿರುತ್ತದೆ.
ಪ್ರತಿಯೊಂದು ಮಗುವಿಗೂ ಶಿಕ್ಷಣವನ್ನು ಒದಗಿಸುವ ನಿಟ್ಟಿನಲ್ಲಿ ಸಮುಚಿತ ಹಾಗೂ ಸ್ಥಳೀಯ ಪ್ರಾಧಿಕಾರ (ಪಂಚಾಯತ್) ನೆರಹೊರೆಯ ಪರಿಮಿತಿಯೊಳಗೆ ಶಾಲೆಗಳು ಇಲ್ಲದಿದ್ದಲ್ಲಿ, ಈ ಕಾಯ್ದೆ ಪ್ರಾರಂಭವಾದ ಮೂರು ವರ್ಷದ ಒಳಗಾಗಿ ಶಾಲೆಯನ್ನು ಪ್ರಾರಂಭಿಸಬೇಕಾಗುತ್ತದೆ. ಈ ಕಾಯ್ದೆಯಲ್ಲಿನ ಅವಕಾಶಗಳನ್ನು ಜಾರಿಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅಗತ್ಯ ಹಣಕಾಸನ್ನು ಒದಗಿಸಲು ಸಮಾನ ಜವಾಬ್ದಾರಿಯನ್ನು ಹೊಂದಿರುತ್ತವೆ. ಕೇಂದ್ರ ಸರಕಾರವೂ ಕಾಲ ಕಾಲಕ್ಕೆ ರಾಜ್ಯ ಸರಕಾರಗಳೊಂದಿಗೆ ಚರ್ಚಿಸಿ ಅಗತ್ಯ ಹಣಕಾಸಿನ ನೆರವನ್ನು ನೀಡಲು ಬದ್ಧವಾಗಿರುತ್ತದೆ. ಇದಲ್ಲದೆ, ಕೇಂದ್ರ ಸರಕಾರವೂ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು, ಶಿಕ್ಷಕರ ತರಬೇತಿಯ ಮಾನದಂಡ ಮತ್ತು ಹೊಸ ಸಂಶೋಧನೆ ಆವಿಷ್ಕಾರಗಳನ್ನು ಕೈಗೊಳ್ಳಲು ರಾಜ್ಯ ಸರಕಾರಕ್ಕೆ ತಾಂತ್ರಿಕ ನೆರವು ಮತ್ತು ಸಂಪನ್ಮೂಲಗಳನ್ನು ಒದಗಿಸುವ ಜವಾಬ್ದಾರಿಯನ್ನು ಹೊಂದಿರುತ್ತದೆ. ಉಳಿದಂತೆ ರಾಜ್ಯ ಸರಕಾರ, ಕೇಂದ್ರ ಸರಕಾರ ಒದಗಿಸಬಹುದಾದ ಅನುದಾನ ಮತ್ತು ತನ್ನ ಇತರ ಸಂಪನ್ಮೂಲಗಳನ್ನು ಕ್ರೋಡೀಕರಿಸಿ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಬದ್ಧವಾಗಿರುತ್ತದೆ.
ಈ ಹಿನ್ನೆಲೆಯಲ್ಲಿ, ಸಮುಚಿತ ಸರಕಾರ ಅಂದರೆ ರಾಜ್ಯಸರಕಾರ ಮತ್ತು ಸ್ಥಳೀಯ ಸರಕಾರ ಮಗುವಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಒದಗಿಸಲು ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.
1. ಆರರಿಂದ ಹದಿನಾಲ್ಕು ವರ್ಷ ವಯಸ್ಸಿನ ಪ್ರತಿಯೊಂದು ಮಗುವಿಗೂ ಉಚಿತ ಪ್ರಾಥಮಿಕ ಶಿಕ್ಷಣವನ್ನು ಒದಗಿಸುವುದು;
2. ಆರರಿಂದ ಹದಿನಾಲ್ಕು ವರ್ಷಗಳ ವಯಸ್ಸಿನ ಪ್ರತಿಯೊಂದು ಮಗುವೂ ಪ್ರಾಥಮಿಕ ಶಿಕ್ಷಣಕ್ಕೆ ಕಡ್ಡಾಯವಾಗಿ ಸೇರಿಕೊಂಡು, ತಪ್ಪದೆ ಹಾಜರಾಗಿ ಶಿಕ್ಷಣ ಪೂರೈಸುವಂತೆ ನೋಡಿಕೊಳ್ಳುವುದು;
3. ದುರ್ಬಲ ವರ್ಗಕ್ಕೆ ಸೇರಿರುವ ಮಗುವಿನ ಬಗ್ಗೆ ಮತ್ತು ಅನುಕೂಲಸ್ಥರಲ್ಲದ ಗುಂಪಿಗೆ ಸೇರಿರುವ ಮಗುವಿನ ವಿರುದ್ಧ ಯಾವುದೇ ಕಾರಣದಿಂದ ತಾರತಮ್ಯ ಮಾಡದಂತೆ ಮತ್ತು ಪ್ರಾಥಮಿಕ ಶಿಕ್ಷಣ ಮುಂದುವರಿಸುವುದಕ್ಕೆ ಮತ್ತು ಅದನ್ನು ಪೂರ್ಣಗೊಳಿಸುವುದಕ್ಕೆ ಅಡ್ಡಿಪಡಿಸದಂತೆ ನೋಡಿಕೊಳ್ಳತಕ್ಕದ್ದು;
4. ಶಾಲೆಯ ಕಟ್ಟಡ, ಬೋಧನಾ ಸಿಬ್ಬಂದಿ ಮತ್ತು ಕಲಿಕಾ ಸಾಮಗ್ರಿ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸತಕ್ಕದ್ದು;
5. ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ವಿಶೇಷ ತರಬೇತಿ ಸೌಲಭ್ಯವನ್ನು ಒದಗಿಸತಕ್ಕದ್ದು;
6. ಪ್ರತಿಯೊಂದು ಮಗುವೂ, ಪ್ರಾಥಮಿಕ ಶಿಕ್ಷಣಕ್ಕೆ ಪ್ರವೇಶ ಪಡೆದು, ಹಾಜರಾಗಿ ಅದನ್ನು ಪೂರ್ಣಗೊಳಿಸುವಂತೆ ನೋಡಿಕೊಳ್ಳತಕ್ಕದ್ದು ಮತ್ತು ಆ ಬಗ್ಗೆ ಮೇಲ್ವಿಚಾರಣೆ ಮಾಡತಕ್ಕದ್ದು;
7. ಕಾಯ್ದೆಯ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದ ಮಾನಕ ಗುಣಮಟ್ಟಗಳಿಗೆ ಮತ್ತು ಪ್ರಮಾಣಕಗಳಿಗೆ ಅನುಗುಣವಾಗಿ ಉತ್ತಮ ಗುಣಮಟ್ಟದ ಪ್ರಾಥಮಿಕ ಶಿಕ್ಷಣ ದೊರೆಯುವಂತೆ ನೋಡಿಕೊಳ್ಳತಕ್ಕದ್ದು;
8. ಪ್ರಾಥಮಿಕ ಶಿಕ್ಷಣಕ್ಕಾಗಿ ಪಠ್ಯಕ್ರಮವನ್ನು ಮತ್ತು ವ್ಯಾಸಂಗ ಕ್ರಮಗಳನ್ನು ಸಕಾಲದಲ್ಲಿ ನಿಯಮಿಸುವಂತೆ ನೋಡಿಕೊಳ್ಳತಕ್ಕದ್ದು;
9. ಶಿಕ್ಷಕರಿಗೆ ತರಬೇತಿ ಸೌಲಭ್ಯವನ್ನು ಒದಗಿಸತಕ್ಕದ್ದು.
ತಂದೆ ತಾಯಿಯರ ಕರ್ತವ್ಯದ ಭಾಗವಾಗಿ ಪ್ರತಿಯೊಬ್ಬ ತಂದೆ, ತಾಯಿ ಅಥವಾ ಪೋಷಕರು ತನ್ನ ಮಗು ಅಥವಾ ತನ್ನ ಆಶ್ರಯದಲ್ಲಿರುವ ಮಗುವನ್ನು ಹತ್ತಿರದ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ಸೇರಿಸುವುದು ಅವರ ಕರ್ತವ್ಯವಾಗಿರುತ್ತದೆ. ಮೂರು ವರ್ಷಗಳಿಗೂ ಮೇಲ್ಪಟ್ಟ ವಯಸ್ಸಿನ ಮಕ್ಕಳನ್ನು ಪ್ರಾಥಮಿಕ ಶಿಕ್ಷಣಕ್ಕಾಗಿ ಸಿದ್ಧಗೊಳಿಸುವ ದೃಷ್ಟಿಯಿಂದ ಮಕ್ಕಳು ಆರು ವರ್ಷ ಪೂರೈಸುವವರೆಗೆ ಆರೈಕೆ ದೊರಕಿಸಿ ಉಚಿತ ಶಾಲಾ ಪೂರ್ವ ಶಿಕ್ಷಣವನ್ನು ಸಮುಚಿತ ಸರಕಾರ ಒದಗಿಸಲು ಅಗತ್ಯ ವ್ಯವಸ್ಥೆ ಮಾಡಬೇಕಾಗುತ್ತದೆ.