ಸೊರಗುತ್ತಿರುವ ಗೇರು ಕೃಷಿ... ಸಂಕಷ್ಟದಲ್ಲಿ ಉದ್ಯಮ !

Update: 2024-12-31 12:33 GMT

ಮಂಗಳೂರು, ಡಿ.30: ಗೇರು ಕೃಷಿ ವಾಣಿಜ್ಯ ಬೆಳೆಗಳಲ್ಲೊಂದು. ಗೇರುಬೀಜ ವಾಣಿಜ್ಯೋದ್ಯಮ ರಾಜ್ಯದ ಆರ್ಥಿಕ ವ್ಯವಸ್ಥೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಿವೆ. ಆದರೆ, ಕರಾವಳಿ ಸಹಿತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಳನಳಿಸುತ್ತಿದ್ದ ಗೇರು ಕೃಷಿ ಇಂದು ಕಣ್ಮರೆಯಾಗುತ್ತಿದ್ದು, ಬೆಳೆಗಾರರಿಗೆ ಸಂಕಷ್ಟ ಎದುರಾಗಿದೆ. ಗ್ರಾಮಾಂತರ ವಲಯದ ಗುಡ್ಡಗಾಡು ಪ್ರದೇಶ ಮತ್ತು ಒಣಭೂಮಿಯಲ್ಲಿ ಹತ್ತಿಪ್ಪತ್ತು ವರ್ಷಗಳ ಹಿಂದೆ ಹೇರಳವಾಗಿ ಬೆಳೆಯುತ್ತಿದ್ದ ‘ಗೇರು ಕೃಷಿ’ ಸೊರಗುತ್ತಿದೆ. ಅದಲ್ಲದೆ, ಹೇರಳವಾಗಿ ಕಾಣುತ್ತಿದ್ದ ಗೇರು ತೋಪುಗಳನ್ನು ನೆಲಸಮ ಮಾಡಿರುವ ಗೇರು ಬೆಳೆಗಾರರು ಪರ್ಯಾಯ ಕೃಷಿಯತ್ತ ಮುಖಮಾಡಿದ್ದಾರೆ.

ಗೇರು ಋತುಕಾಲಿಕ ಬೆಳೆಯಾಗಿದ್ದು, ಗೇರು ನಿಗಮಕ್ಕೆ ಬೆಳೆಯೇ ಮೂಲ ಆದಾಯ. ರಾಜ್ಯದ ದಕ್ಷಿಣ ಕನ್ನಡ, ಉತ್ತರಕನ್ನಡ, ಉಡುಪಿ, ಕೋಲಾರ, ಶಿವಮೊಗ್ಗ, ಬೆಳಗಾವಿ, ಮಂಡ್ಯ ಸೇರಿ ಹಲವು ಜಿಲ್ಲೆಗಳಲ್ಲಿ ಗೇರು ಕೃಷಿ ಇದೆ. ರಾಜ್ಯದಲ್ಲಿ ಗೇರು ಕೃಷಿ ಹಾಗೂ ಬೀಜ ಸಂಸ್ಕರಣಾ ಉದ್ಯಮಗಳು ಹೆಚ್ಚಿನವು ಇರುವುದು ಕರಾವಳಿ ಭಾಗದಲ್ಲಿ.

ಅಕಾಲಿಕ ಮಳೆ, ಕೀಟಬಾಧೆಗಳಾದ ಟೀ ಮಾಸ್ಕಿಟೊ, ಪ್ರಾಕೃತಿಕ ವಿಕೋಪಗಳು ಬೆಳೆ ಮತ್ತು ಆದಾಯ ವ್ಯತ್ಯಯಕ್ಕೆ ಕಾರಣವಾಗಿದ್ದು, 2018ರಿಂದೀಚೆಗೆ ನಿಗಮದ ಆದಾಯದಲ್ಲಿ ವರ್ಷದಿಂದ ವರ್ಷಕ್ಕೆ ಭಾರೀ ವ್ಯತ್ಯಯ ಕಂಡು ಬರುತ್ತಿದೆ. ಇದರಿಂದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಯಲ್ಲಿ ಬೆಳೆಸುವ ಗೇರು ಫಸಲಿನ ಆದಾಯವೂ ಕುಂಠಿತವಾಗಿದೆ.

1925-26ರ ಅವಧಿಯಲ್ಲಿ ರಾಜ್ಯದಲ್ಲಿ ಗೇರು ಸಂಸ್ಕರಣಾ ಉದ್ಯಮವು ಆರಂಭವಾಗಿದ್ದು, ಶತಮಾನೋತ್ಸವ ಹೊಸ್ತಿಲಲ್ಲಿರುವ ಈ ಉದ್ಯಮ ಈಗ ಸಂಕಷ್ಟಕ್ಕೆ ಸಿಲುಕಿ ಒಂದೊಂದೇ ಘಟಕ ಮುಚ್ಚುತ್ತಿವೆ.

ಕರ್ನಾಟಕ ಗೇರು ಅಭಿವೃದ್ಧಿ ನಿಗಮಕ್ಕೆ 2018-19ರಲ್ಲಿ 8.11 ಕೋಟಿ ರೂ. ಮೊತ್ತದ ಉತ್ತಮ ಆದಾಯ ಬಂದಿತ್ತು. 2019-20ರಲ್ಲಿ 5.86 ಕೋಟಿ ರೂ.ಗೆ ಇಳಿಕೆ ಕಂಡುಬಂದರೆ, 2020-21ರಲ್ಲಿ 5.34 ಕೋಟಿ ರೂ., 2021-22ರಲ್ಲಿ 4.93 ಕೋಟಿ ರೂ. ಮತ್ತು 2022-23ರಲ್ಲಿ 4.14 ಕೋಟಿ ರೂ.ಗೆ ಆದಾಯ ಇಳಿಕೆಯಾಗಿದೆ. ಈ ವರ್ಷವೂ ಆದಾಯ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ ಇದೆ.

ಅಕಾಲಿಕ ಮಳೆ ಮತ್ತು ಹವಾಮಾನ ವೈಪರೀತ್ಯ, ನಿರ್ವಹಣಾ ವೆಚ್ಚ, ಕೆಲಸಗಾರರ ಕೂಲಿ, ‘ಟೀ ಮೋಸ್ಕಿಟೊ’ ಕೀಟಭಾದೆ ಇತ್ಯಾದಿಯಿಂದಾಗಿ ನಿಗಮದ ಆದಾಯದಲ್ಲಿ ಏರುಪೇರು ಆಗುತ್ತದೆ. ಮೋಡ ಕವಿದಾಗಲೂ ಹೂ ಕರಟಿ ಹೋಗುವ ಅಪಾಯವಿದೆ. ಮಳೆಗಾಲದ ಆರಂಭಕ್ಕೆ ಹೈಬ್ರೀಡ್ ತಳಿಯ ಗೇರು ಬೀಜ ನೆಟ್ಟು ಪೋಷಿಸಿದರೆ 2-3 ವರ್ಷಗಳಲ್ಲಿ ಫಸಲು ಪಡೆಯಬಹುದು. ಹೂ ಬಿಡುವ ಸಮಯದಲ್ಲಿ ಅದರ ರಸವನ್ನು ಹೀರಿ ನಾಶಪಡಿಸುವ ಕೀಟದ ಬಗ್ಗೆ ಎಚ್ಚರಿಕೆ ವಹಿಸಬೇಕೆನ್ನುವುದು ಕೃಷಿಕರ ಮಾತು.

ಪರಿಚಯ: ನಾಲ್ಕು ಶತಮಾನಗಳ ಹಿಂದೆ ನಮ್ಮ ದೇಶದಲ್ಲಿ ವಸಾಹತುಶಾಹಿಗಳಾಗಿ ಬಂದ ಪೋರ್ಚುಗೀಸರು ಗೇರು ಮರವನ್ನು ಪರಿಚಯಿಸಿದರು. ಕರಾವಳಿ ತೀರ ಪ್ರದೇಶಗಳಲ್ಲಿ ಮರಳು ಕೊಚ್ಚಿ ಹೋಗುವುದನ್ನು ತಡೆಯವುದು, ಬೋಳು-ಬರಡು ಗುಡ್ಡಗಳನ್ನು ಹಸಿರಾಗಿಸುವುದು ಅವರ ಮುಖ್ಯ ಉದ್ದೇಶವಾಗಿತ್ತು. ಈ ಮರಗಳ ದೊಡ್ಡ ದೊಡ್ಡ ತೋಪುಗಳು ನಿರ್ಮಾಣವಾಗಿ ಬೋಳು ಗುಡ್ಡಗಳೆಲ್ಲಾ ಹಸಿರುಮಯವಾದವು.

ಕರ್ನಾಟಕ ಗೇರು ಅಭಿವೃದ್ಧಿ ನಿಗಮ 1978ನೇ ಫೆಬ್ರವರಿ14ರಂದು ಕಂಪೆನಿ ಕಾಯ್ದೆಯನ್ವಯ ಸ್ಥಾಪಿಸಲ್ಪಟ್ಟಿದ್ದು, ಅರಣ್ಯ ಇಲಾಖೆಯಿಂದ ಪಡೆದಗೇರು ನೆಡುತೋಪುಗಳ ಉಸ್ತುವಾರಿ ಹಾಗೂ ಕರ್ನಾಟಕದಲ್ಲಿ ಗೇರು ಕೃಷಿಯ ವಿಸ್ತರಣೆಯ ಮುಖ್ಯ ಉದ್ದೇಶದಿಂದ ಪ್ರಾರಂಭಗೊಂಡಿದೆ.

ನಿಗಮದ ಅಧಿಕೃತ ಬಂಡವಾಳ 10 ಕೋಟಿ ರೂ. ಆಗಿದ್ದು, ಸಂಚಿತ ಬಂಡವಾಳ 759.03 ಲಕ್ಷ ರೂ. ಆಗಿದೆ. ಇದರಲ್ಲಿ 44 ಲಕ್ಷ ರೂ. ಮೊತ್ತದ 4,400 ಶೇರುಗಳು ಕೇಂದ್ರ ಸರಕಾರದಿಂದ ಬಂದ ಪಾಲು ಬಂಡವಾಳವಾಗಿದ್ದು, ಉಳಿದ 715.03 ಲಕ್ಷ ರೂ. ಮೊತ್ತದ 71,503 ಶೇರುಗಳು ರಾಜ್ಯ ಸರಕಾರದ್ದಾಗಿದೆ.

ನಿಗಮಕ್ಕೆ ಕರ್ನಾಟಕ ಸರಕಾರದಿಂದ 25,627.026 ಹೆಕ್ಟೇರ್ ಗೇರು ನೆಡುತೋಪುಗಳನ್ನು ಹಸ್ತಾಂತರ ಮಾಡಿದ್ದು, ಇದರಲ್ಲಿ 12,718.836 ಹೆಕ್ಟೇರ್ ಈಕ್ವಿಟಿ ರೂಪದಲ್ಲಿ ಹಾಗೂ 12,908.19 ಹೆಕ್ಟೇರ್ ಲೀಸ್ ರೂಪದಲ್ಲಿಯೂ ಇರುತ್ತದೆ. ಈ ಗೇರು ನೆಡುತೋಪುಗಳು ಉತ್ತರಕನ್ನಡ, ದಕ್ಷಿಣಕನ್ನಡ, ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಹರಡಿರುತ್ತದೆ. ಈ ಪ್ರದೇಶಗಳನ್ನು ಮಂಗಳೂರು, ಕುಮಟಾ ವಿಭಾಗಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಇಲಾಖೆ ತಿಳಿಸಿದೆ.

2011ರಲ್ಲಿ ಸುಮಾರು 7 ಎಕರೆ ಭೂಮಿಯಲ್ಲಿ 2,000 ಗೇರು ಕಸಿಗಿಡಗಳನ್ನು ನಾಟಿ ಮಾಡಿದ್ದೇನೆ. ಅಲ್ಲದೆ ಹೊಲದ ಬದುಗಳಲ್ಲಿ ಲೋಕಲ್ ತಳಿಯ ಗೇರು ಗಿಡಗಳನ್ನು ಮಾಡಿದ್ದೆ. ಗಿಡ ನಾಟಿ ಮಾಡಿದ 4ನೇ ವರ್ಷದಲ್ಲಿ 50 ಕ್ವಿಂಟಾಲ್ ಗೇರು ಬೀಜ ಸಿಕ್ಕಿದೆ. 1 ಕೆಜಿ ಗೇರು ಬೀಜಕ್ಕೆ ಸರಾಸರಿ 120-150 ರೂ. ಬೆಲೆ ಸಿಕ್ಕಿದೆ. ಪುತ್ತೂರಿನಲ್ಲಿರುವ ಗೇರು ಅಭಿವೃದ್ಧಿ ಮಂಡಳಿಯು ನನಗೆ ಉತ್ತಮ ಗೇರು ಕೃಷಿಕ ಪ್ರಶಸ್ತಿ ನೀಡಿ ಗೌರವಿಸಿದೆ. ಗೇರು ಕೃಷಿಗೆ ಖರ್ಚು ಜಾಸ್ತಿ ಇಲ್ಲ. ಕೂಲಿಯಾಳುಗಳ ಅವಶ್ಯಕತೆಯೂ ಕಡಿಮೆ. ನಾವೇ ಕೃಷಿ ಕೆಲಸ ಮಾಡಲು ಸಾಧ್ಯ. ಆದರೆ ಇತ್ತೀಚಿನ ಮಾರುಕಟ್ಟೆ ಧಾರಣೆ ಹಾಗೂ ಇತರ ಕಾರಣಗಳಿಂದ ಗೇರು ಕೃಷಿಯತ್ತ ಒಳವು ತೋರಲು ಸಾಧ್ಯವಾಗಿಲ್ಲ. ನಷ್ಟದಿಂದ ಗೇರು ಗಿಡಗಳನ್ನು ಕಡಿದು ತೆಂಗು ಬೆಳೆಯತ್ತ ಮುಖಮಾಡಿದ್ದೇನೆ.

ಸತೀಶ್ ರೈ , ಪ್ರಗತಿಪರ ಕೃಷಿಕ, ಉತ್ತಮ ಗೇರು ಕೃಷಿಕ ಪ್ರಶಸ್ತಿ ಪುರಸ್ಕೃತ

ಗೇರು ತೋಪು ಅಭಿವೃದ್ಧಿಗೆ ಸರಕಾರಕ್ಕೆ ಪ್ರಸ್ತಾವ

ರಾಜ್ಯದಲ್ಲಿ ಹೊಸ ಗೇರು ತೋಪುಗಳನ್ನು ಅಭಿವೃದ್ಧಿಪಡಿಸಲು ನಿಗಮವು ಪ್ರಸ್ತಾವ ಸಿದ್ಧಪಡಿಸಿದೆ. ಗೇರು ಸಸಿ ನರ್ಸರಿ ಅಭಿವೃದ್ಧಿ ಗೇರು ಗಿಡಗಳ ನಾಟಿ ಹಾಗೂ ಹೊಸ ಕಸಿ ಗಿಡಗಳನ್ನು ಬೆಳೆಸಿ ಹಳೆ ಗೇರು ತೋಪುಗಳ ಪುನರುಜ್ಜೀವನಗೊಳಿಸಲು ಒಟ್ಟು 50 ಕೋಟಿ ರೂ. ನೀಡುವಂತೆ ಸರಕಾರಕ್ಕೆ ಬೇಡಿಕೆ ಸಲ್ಲಿಸಲಿದ್ದೇವೆ. ರಾಷ್ಟ್ರೀಯ ತೋಟಗಾರಿಕಾ ಅಭಿಯಾನದಡಿ 10 ಕೋಟಿ ರೂ. ಹಾಗೂ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ 8 ಕೋಟಿ ರೂ. ಒದಗಿಸುವಂತೆಯೂ ಪ್ರಸ್ತಾವ ಸಲ್ಲಿಸಲಾಗಿದೆ.

ಮಮತಾ ಗಟ್ಟಿ, ರಾಜ್ಯ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ

ವ್ಯರ್ಥವಾಗುತ್ತಿರುವ ಗೇರು ಹಣ್ಣು

ಗೇರು ಹಣ್ಣಿನಿಂದ ಕಚ್ಚಾ ಗೇರು ಬೀಜ ಹೊರ ತೆಗೆದ ನಂತರ ಆ ಹಣ್ಣು ಸಂಪೂರ್ಣ ವ್ಯರ್ಥವಾಗುತ್ತಿದೆ. ಇದರಿಂದ ಜ್ಯೂಸ್ ಎಥೆನಾಲ್ ಫೆನ್ನಿ ತಯಾರಿಸಲು ಅವಕಾಶ ಇದೆ. ರೈತರಿಗೆ ಇದು ಲಾಭದಾಯಕ ಕೃಷಿ ಆಗುತ್ತದೆ. ಗೋವಾದಲ್ಲಿ ತೆರಿಗೆ ವಿಧಿಸದೇ ಫೆನ್ನಿ ತಯಾರಿಕೆಗೆ ಉತ್ತೇಜನ ನೀಡಲಾಗುತ್ತಿದೆ. ಕರ್ನಾಟಕದಲ್ಲಿ ಇದಕ್ಕೆ ಅಬಕಾರಿ ಸುಂಕ ವಿಧಿಸಲಾಗುತ್ತದೆ. ಗೇರು ಕೃಷಿಕರು ಹಾಗೂ ಸಂಸ್ಕರಣಾ ಘಟಕಗಳ ನೆರವಿಗೆ ಸರಕಾರ ಧಾವಿಸಬೇಕು.

ಕೆ.ಪ್ರಕಾಶ್ ಕಲ್ಬಾವಿ, ಗೇರು ಸಂಸ್ಕರಣಾ ಉದ್ಯಮಿ ಮಂಗಳೂರು

ನಿಗಮದ ನೋಂದಾಯಿತ ಕಚೇರಿಯು ಅಬ್ಬಕ್ಕ ನಗರ, ಒಂದನೇ ಮುಖ್ಯರಸ್ತೆ, ಕೊಟ್ಟಾರ, ಮಂಗಳೂರಿನಲ್ಲಿದೆ. ಕೇಂದ್ರ ಸರಕಾರದ ರಾಷ್ಟ್ರೀಯ ಗೇರು ಸಂಶೋಧನಾ ಸಂಸ್ಥೆಯ ಶಾಖೆಯೂ ಪುತ್ತೂರಿನಲ್ಲಿದೆ. ನಿಗಮದ ಗೇರು ನೆಡುತೋಪುಗಳು ವಿಭಾಗೀಯ ಮಟ್ಟದಲ್ಲಿ ಉಪ ಅರಣ್ಯಸಂರಕ್ಷಣಾಧಿಕಾರಿ ಶ್ರೇಣಿಯ 2 ವಿಭಾಗೀಯ ವ್ಯವಸ್ಥಾಪಕರೊಂದಿಗೆ ಹಾಗೂ ವಿಭಾಗೀಯ ವ್ಯವಸ್ಥಾಪಕರು ಕಚೇರಿ ಮತ್ತು ಕ್ಷೇತ್ರೀಯ ಸಿಬ್ಬಂದಿಯ ನೆರವಿನೊಂದಿಗೆ ಕೇಂದ್ರ ಕಚೇರಿಯ ಒಟ್ಟಾರೆ ನಿರ್ದೇಶನದ ಆಡಳಿತ ಮತ್ತು ಮೇಲ್ವಿಚಾರಣೆಯೊಂದಿಗೆ ಕರ್ತವ್ಯವನ್ನು ನಿಭಾಯಿಸುತ್ತಾರೆ.

ಗೇರು ನೆಡುತೋಪುಗಳು:

ನಿಗಮವು 1982-87ರಲ್ಲಿ 25,632.62 ಹೆಕ್ಟೇರ್ ಭೂಮಿಯನ್ನು ಹೊಂದಿರುತ್ತದೆ. ನಿಗಮವು 1992-93ರಿಂದ 2017-18ರವರೆಗೆ 3,714 ಹೆ. ಗೇರು ನೆಡುತೋಪಿನಲ್ಲಿ ಕಸಿ ಗೇರು ಬೆಳೆಯನ್ನು ಬೆಳೆಸಲಾಗಿದೆ. ನಿಗಮವು 12,677.50 ಹೆಕ್ಟೇರು ಗೇರು ನೆಡುತೋಪಿನಲ್ಲಿ ಅಧಿಕ ಇಳುವರಿ ಬರುವ ವಿವಿಧ ಗೇರು ತಳಿಯನ್ನು ಬೆಳೆಸಲಾಗಿದೆ. ಈ ಅಧಿಕ ಇಳುವರಿಯ ವಿವಿಧ ಕಸಿ ಗೇರು ಗಿಡಗಳ ಸುತ್ತ ಕಳೆ ತೆಗೆಯುವುದು, ಮಣ್ಣಿನ ಕೆಲಸ ಮತ್ತು ಗೊಬ್ಬರ ಹಾಕುವ ಕೆಲಸವನ್ನು ನಿರ್ವಹಿಸಲಾಗಿದೆ. ಅಧಿಕ ಇಳುವರಿ ಬರುವ ಗೇರು ಗಿಡಗಳಾದ ಉಳ್ಳಾಲ-I, ಉಳ್ಳಾಲ-III, ವೆಂಗುರ್ಲಾ-Iಗಿ, ವೆಂಗುರ್ಲಾ-I, ಗೋವಾ -11/6, ರಾಷ್ಟ್ರೀಯ ಸಂಶೋಧನಾ ಗೇರು ಕೇಂದ್ರದ ಸೆಲೆಕ್ಷನ್-II, ಕೆ. 22/1, ಯು.ಎನ್.50, ಧನ ಮತ್ತು ವೃದ್ಧಾಚಲಂ-III ಗೇರು ತಳಿಗಳನ್ನು ನಿಗಮದ ನೆಡುತೋಪುಗಳಲ್ಲಿ ಬೆಳೆಸಲಾಗಿದೆ ಎಂದು ಇಲಾಖೆ ತಿಳಿಸಿದೆ.

ನಿಗಮವು 120.275 ಹೆಕ್ಟೇರ್ ಪ್ರದೇಶದಲ್ಲಿ ಅಧಿಕ ಇಳುವರಿ ಬರುವ ತಳಿಯ ಕ್ಲೋನಲ್ ಬ್ಯಾಂಕ್‌ಗಳನ್ನು ಗೇರು ಕಸಿ ಕಟ್ಟಲು ಬೇಕಾಗುವ ಕಸಿ ಕಡ್ಡಿಗಳನ್ನು ಪಡೆಯಲು ನಿರ್ಮಿಸಲಾಗಿದೆ. ಅಧಿಕ ಇಳುವರಿ ಬರುವ ಉತ್ತಮ ತಳಿಯ ಗಿಡಗಳಾದ ಉಳ್ಳಾಲ-I, II, III, Iಗಿ, ಎಂ.10/4, 3/7, ಗುಂಟೂರು 8/46, ತಳಿಪರಂಬ, ವೃದ್ಧಾಚಲಂ-III, ವೆಂಗುರ್ಲಾ-I, II, III, Iಗಿ, ಬಿಎಲ್‌ಎ 139/1, ರಾಷ್ಟ್ರೀಯ ಸಂಶೋಧನಾ ಗೇರು ಕೇಂದ್ರದ ಸೆಲೆಕ್ಷನ್- I, II, 3/108, ಗುಬ್ಬಿ 2/97, ಕೇರಳ 9/66, ಆಂಧ್ರ 5/23, ಕುಂದಾಪುರ 6/21, ಮೂಡಬಿದಿರೆ, ಇಳಂತಿಲ-I, II, III, Iಗಿ ಗೋವಾ 11/6, ಕೆ. 22/1, ಯು.ಎನ್.50 ಮತ್ತು ಧನ ಗೇರು ಗಿಡಗಳು ನಿಗಮದ ಕ್ಲೋನಲ್ ಬ್ಯಾಂಕಿನಲ್ಲಿ ಲಭ್ಯವಿರುತ್ತದೆ ಎಂದು ಇಲಾಖೆ ಮಾಹಿತಿ ನೀಡಿದೆ.

ಗೇರುಗಿಡಗಳ ಟ್ರ್ಯಾಕ್ ತಂತ್ರಜ್ಞಾನದ ಅಭಿವೃದ್ಧಿ:

ಪುತ್ತೂರು ಗೇರು ಸಂಶೋಧನಾ ಕೇಂದ್ರ ಅಭಿವೃದ್ಧಿಪಡಿಸಿರುವ ಗೇರು ಗಿಡಗಳಾದ ಭಾಸ್ಕರ ವಿಆರ್ ಐ-3 ಉಳ್ಳಾಲ -3 ತಳಿಗಳು ಪ್ರಸ್ತುತ ಬಳಕೆಯಲ್ಲಿವೆ. ಈಚೆಗೆ ನೇತ್ರಾ ಜಂಬೊ-1 ಮತ್ತು ನೇತ್ರಾ ಗಂಗಾ ತಳಿಗಳನ್ನೂ ಕೇಂದ್ರವು ಪರಿಚಯಿಸಿದೆ. ಇವು ಒಣಭೂಮಿಯ ಗೇರು ಕೃಷಿಯಲ್ಲಿ ಹೊಸ ಭರವಸೆ ಮೂಡಿಸಿವೆ. ಸಂಶೋಧನಾ ಕೇಂದ್ರವು ಗೇರು ಬೀಜದಿಂದ ಸಿಪ್ಪೆ ಬೇರ್ಪಡಿಸುವ ತಂತ್ರ, ಗೇರು ಕೃಷಿ ಹಾಗೂ ಅದಕ್ಕೆ ಬಳಸುವ ಪೋಷಕಾಂಶಗಳ ಸಮಗ್ರ ಮಾಹಿತಿ ನೀಡುವ ಆ್ಯಪ್ ಗೇರುಗಿಡಗಳ ಟ್ರ್ಯಾಕ್ ಮಾಡುವ ತಂತ್ರಜ್ಞಾನಗಳನ್ನೂ ಅಭಿವೃದ್ಧಿಪಡಿಸಿದೆ.

ಹಣ್ಣಿನ ಸದ್ಬಳಕೆಗೆ ಚಿಂತನೆ:

ಸಾಮಾನ್ಯವಾಗಿ ‘ಗೇರು ಕೃಷಿ’ಯಲ್ಲಿ ಬೀಜವನ್ನು ಕಾರ್ಖಾನೆಯಲ್ಲಿ ಸಂಸ್ಕರಿಸಿದರೆ ಹಣ್ಣನ್ನು ತಿಂದೋ, ಜಾನುವಾರುಗಳಿಗೆ ಆಹಾರವಾಗಿ ನೀಡಿ ವ್ಯಯಿಸಲಾಗುತ್ತದೆ. ಆದರೆ ಕೇರಳ ಹಾಗೂ ಗೋವಾದಲ್ಲಿ ಗೇರು ಹಣ್ಣಿನ ಜೆಲ್, ಹಲ್ವಾ, ಜ್ಯೂಸ್ ತಯಾರಿಸಿ ಮಾರಾಟ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಗೇರು ಹಣ್ಣನ್ನು ಕೊಳೆಯಲು ಬಿಡದೆ ಸದ್ಬಳಕೆ ಮಾಡಲು ರಾಜ್ಯ ಗೇರು ನಿಗಮವು ಚಿಂತನೆ ನಡೆಸಿದೆ.

ಮುಂದಿನ ಯೋಜನೆಗಳು:

ನಿಗಮವು 2023-24ನೇ ವರ್ಷದಲ್ಲಿ 633.40 ಹೆಕ್ಟೇರು ಗೇರು ನೆಡುತೋಪುಗಳ ಪುನಃಶ್ಚೇತನ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಹಾಗೂ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿಯಲ್ಲಿ ಕಾಮಗಾರಿಗಳನ್ನು ಕೈಗೆತ್ತಿಗೊಳ್ಳಲಿದೆ. ಇದಲ್ಲದೆ ಮಣ್ಣು ಹಾಗೂ ನೀರಿನ ಸಂರಕ್ಷಣೆಯ ಕಾಮಗಾರಿಗಳನ್ನು ಕೈಗೆತ್ತಿಗೊಳ್ಳುವುದಲ್ಲದೆ ಆರ್‌ಕೆವಿವೈ ಅನುಮೋದಿತ ವಿಸತ್ತತ ಯೋಜನೆಯಲ್ಲಿ ತಿಳಿಸಿದಂತಹ ಇತರ ಕೆಲಸಗಳನ್ನು ಕೈಗೆತ್ತಿಗೊಳ್ಳಲಿದೆ. ಹೀಗಾಗಿ, ಕರ್ನಾಟಕ ಗೇರು ಅಭಿವೃದ್ಧಿ ನಿಗಮವು ಗೇರು ಬೆಳೆಯನ್ನು ಉಳಿಸಿಕೊಳ್ಳಲು ಮತ್ತು ಹೆಚ್ಚಿಸಲು ಹಣಕಾಸಿನ ನೆರವಿನಿಂದ ತನ್ನ ಕ್ಷೇತ್ರೀಯ ಕೆಲಸಗಳನ್ನು ನಿರ್ವಹಿಸುತ್ತಿದೆ ಎಂದು ನಿಗಮ ಮಾಹಿತಿ ನೀಡಿದೆ.

ಆಮದು ಹೆಚ್ಚಳ:

ಕೋವಿಡ್ ಬಳಿಕ ದೇಶದ ಹೆಚ್ಚಿನ ಗೇರು ಸಂಸ್ಕರಣೆದಾರರು ವಿಯೆಟ್ನಾಂ, ದಕ್ಷಿಣ ಆಫ್ರಿಕಾ ದೇಶಗಳಿಂದ ಗೇರು ಆಮದು ಮಾಡಿಕೊಳ್ಳುತ್ತಿದ್ದಾರೆ. ಅಲ್ಲಿ ಅದರ ದರ ಕಡಿಮೆ ಇದೆ. ಇದರಿಂದ ಇಲ್ಲಿನ ಗೇರುಬೀಜ ಮಾರುಕಟ್ಟೆಗೆ ಹೊಡೆತ ಬೀಳುತ್ತಿದೆ. ಜಾಗತಿಕವಾಗಿ ಅಂದಾಜು 50 ಲಕ್ಷ ಟನ್ ಕಚ್ಚಾ ಗೇರು ಬೀಜಕ್ಕೆ ಬೇಡಿಕೆ ಇದ್ದರೆ, ಆ ಪೈಕಿ 35ರಿಂದ 38 ಲಕ್ಷ ಟನ್ ಕಚ್ಚಾ ಗೇರು ಬೆಳೆಯುವುದು ಆ ಖಂಡದಲ್ಲಿಯೇ. ಕಚ್ಚಾ ಗೇರು ಬೀಜವನ್ನು ಭಾರತಕ್ಕೆ ರಫ್ತು ಮಾಡುವ ಬದಲು ತನ್ನಲ್ಲೇ ಸಂಸ್ಕರಣೆ ಮಾಡಿ ರಫ್ತು ಮಾಡಬೇಕು ಎಂಬ ಚರ್ಚೆ ಆಫ್ರಿಕಾದಲ್ಲಿಯೂ ಮುನ್ನೆಲೆಗೆ ಬಂದಿದೆ. ಇದು ಕಾರ್ಯರೂಪಕ್ಕೆ ಬಂದರೆ ಭಾರತದ ಈ ಸಂಸ್ಕರಣಾ ಉದ್ಯಮಕ್ಕೆ ಹೊಡೆತ ಬೀಳಲಿದೆ ಎಂದು ಗೇರು ಸಂಸ್ಕರಣಾ ಉದ್ಯಮಿ ಕೆ.ಪ್ರಕಾಶ್ ಕಲ್ಬಾವಿ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಭಾರತದ ಸಂಸ್ಕರಣಾ ಉದ್ಯಮಕ್ಕೆ 20 ಲಕ್ಷ ಟನ್ ಕಚ್ಚಾ ಗೇರು ಬೀಜ ಬೇಕು. ಆದರೆ, ನಮ್ಮ ದೇಶದಲ್ಲಿ ಬೆಳೆಯುವುದು ಸರಾಸರಿ 5 ಲಕ್ಷ ಟನ್ ಮಾತ್ರ. ನಮಗೆ ಬೇಕಿರುವ ಕಚ್ಚಾ ಗೇರು ಬೀಜಗಳಿಗೆ ಹೊರದೇಶಗಳನ್ನೇ ಅವಲಂಬಿಸಿದ್ದೇವೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವಿಜಯಲಕ್ಷ್ಮಿ ಫೌಂಡೇಷನ್ ಕೆಸಿಎಂಎ ಸಹಯೋಗದಲ್ಲಿ 2015ರಿಂದ ಗೇರು ಕೃಷಿಗೆ ಉತ್ತೇಜನ ನೀಡುವ ಕೆಲಸ ಮಾಡಲಾಗಿದೆ. ಗೇರು ಕೃಷಿ ಅಡಿಕೆ, ತೆಂಗು ಮತ್ತಿತರ ಬೆಳೆಯಂತೆ ಲಾಭದಾಯಕ ಬೆಳೆ ಎಂದು ನಮ್ಮ ರೈತರಿಗೆ ಅನಿಸುತ್ತಲೇ ಇಲ್ಲ. ನಮ್ಮ ರೈತರು ಗೇರು ಬೆಲೆಯನ್ನು ಸರಕಾರಿ ಬೆಳೆಯಾಗಿ ನೋಡುತ್ತಿದ್ದಾರೆಯೇ ಹೊರತು ವಾಣಿಜ್ಯ ಬೆಳೆಯಾಗಿ ನೋಡುತ್ತಿಲ್ಲ. ವಿಜ್ಞಾನಿಗಳು ಹೊಸ ಹೊಸ ಗೇರು ತಳಿ ಅಭಿವೃದ್ಧಿ ಪಡಿಸಿದ್ದರೂ, ಅದು ರೈತರ ಜಮೀನಿಗೆ ಹೋಗಿ ಕೃಷಿಯ ರೂಪ ಪಡೆಯುತ್ತಿಲ್ಲ ಎಂದು ಮಾಹಿತಿ ನೀಡುತ್ತಾರೆ ಗೇರು ಸಂಸ್ಕರಣಾ ಉದ್ಯಮಿ ಕೆ.ಪ್ರಕಾಶ್ ಕಲ್ಬಾವಿ ಅವರು.

ಗ್ರಾಮೀಣ ಪ್ರದೇಶದ ಸಾವಿರಾರು ಮಂದಿ ಬದುಕು ಕಟ್ಟಿಕೊಳ್ಳಲು ಗೇರು ಕೃಷಿ ಆಸರೆಯಾಗಿದೆ. ಈ ಕಾರ್ಯಕ್ಕೆ ಮಹಿಳಾ ಕಾರ್ಮಿಕರನ್ನೇ ನೆಚ್ಚಿಕೊಳ್ಳಲಾಗಿದೆ. ಈ ಕಾಯಕದ ಮೂಲಕ ತಮ್ಮ ಮಕ್ಕಳಿಗೂ ಉತ್ತಮ ಶಿಕ್ಷಣ ಒದಗಿಸಿ, ಸಾವಿರಾರು ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಆದರೆ, ರಾಜ್ಯ ಕರಾವಳಿ ಪ್ರದೇಶಕ್ಕೆ ಆರ್ಥಿಕ ಬುನಾದಿ ಹಾಕಿದ್ದ ಗೇರು ಕೃಷಿ, ಉದ್ಯಮ ಇಂದು ನೆಲಕಚ್ಚಿವೆ. ಅದಲ್ಲದೆ, ಉದ್ಯಮಕ್ಕಾಗಿ ಕೋಟ್ಯಂತರ ರೂ. ಸಾಲ ಮಾಡಿ ಯಂತ್ರೋಪಕರಣ ಖರೀದಿಸಿರುವ ಕೆಲ ಕಂಪೆನಿಗಳು, ಸಾಲಕಟ್ಟಲಾಗದೆ ಬಾಗಿಲು ಮುಚ್ಚಿವೆ. ಕಾರ್ಖಾನೆಗಳ ನಡುವೆ ಆರೋಗ್ಯಕರವಲ್ಲದ ಪೈಪೋಟಿಯೂ ನಷ್ಟಕ್ಕೆ ಕಾರಣ. ನಷ್ಟದ ಹಾದಿಯನ್ನು ತುಳಿದಿರುವ ಈ ಉದ್ಯಮಕ್ಕೆ ಪುನಶ್ಚೇತನ ಸಿಗದಿದ್ದರೆ ಕರಾವಳಿಯ ಪುರಾತನ ಉದ್ಯಮ ನೆನಪಿನಲ್ಲಿ ಉಳಿಯುವ ದಿನಗಳು ದೂರವಿಲ್ಲ

ಮನೆಗೊಂದು ಗೇರು ಗಿಡ’ ಅಭಿಯಾನ

ಗೇರು ಬೆಳೆಗೆ ಉತ್ತೇಜನ ನೀಡುವ ಉದ್ದೇಶದಿಂದ ಕರ್ನಾಟಕ ಗೇರು ಅಭಿವೃದ್ಧಿ ನಿಗಮವು ‘ಮನೆಗೊಂದು ಗೇರು ಗಿಡ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದೆ. ಗೋಡಂಬಿಯಂತೆ, ಗೇರು ಹಣ್ಣಿನಲ್ಲೂ ಸಿ-ಜೀವಸತ್ವ ಹೇರಳವಾಗಿದೆ. ಗೇರು ಹಣ್ಣಿನ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ. ಗೇರು ಬೆಳೆಗೆ ಉತ್ತೇಜನ ನೀಡಲು ಕರಾವಳಿಯ ಮೂರೂ ಜಿಲ್ಲೆಗಳ ಪ್ರತಿ ವಿಧಾನಸಭಾ ಕ್ಷೇತ್ರದ ಹೋಬಳಿ ಮಟ್ಟದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದೇವೆ. ಜಿಲ್ಲಾ ಮಟ್ಟದಲ್ಲೂ ಕಾರ್ಯಾಗಾರ ನಡೆಸಲಿದ್ದೇವೆ ಎನ್ನುತ್ತಾರೆ ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಅವರು.

ಗೇರುಬೀಜ ಉತ್ಪಾದನೆಯಲ್ಲಿ ರಾಜ್ಯಕ್ಕೆ 6ನೇ ಸ್ಥಾನ

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಒಟ್ಟು 25,627 ಹೆಕ್ಟೇರ್ ಪ್ರದೇಶದಲ್ಲಿ ಗೇರು ಬೆಳೆಯಲಾಗುತ್ತಿದೆ. ಗೇರು ಬೆಳೆಯುವ ಪ್ರದೇಶದ ವಿಸ್ತೀರ್ಣದಲ್ಲಿ ಕರ್ನಾಟಕವು ದೇಶದಲ್ಲಿ 5ನೇ ಸ್ಥಾನ ಹಾಗೂ ಗೇರುಬೀಜ ಉತ್ಪಾದನೆಯಲ್ಲಿ 6ನೇ ಸ್ಥಾನದಲ್ಲಿದೆ. ನಿಗಮವು ಗೇರು ತೋಪುಗಳನ್ನು ಬೆಳೆಸಲು ಉತ್ತೇಜನ ನೀಡುತ್ತಾ ಬಂದಿದೆ. ರಾಜ್ಯದಲ್ಲಿ 53 ಸಾವಿರ ಟನ್ ಕಚ್ಚಾ ಗೇರುಬೀಜ ಉತ್ಪಾದನೆಯಾಗುತ್ತಿದ್ದು, ಇದರಲ್ಲಿ ನಿಗಮದ ಗೇರು ತೋಪುಗಳ ಪಾಲು 616 ಟನ್‌ಗಳಷ್ಟಿದೆ. ನಮ್ಮ ದೇಶದಲ್ಲಿ ಹೆಕ್ಟೇರ್‌ಗೆ ಸರಾಸರಿ 700 ಟನ್ ಗೇರು ಉತ್ಪಾದನೆಯಾದರೆ, ರಾಜ್ಯದಲ್ಲಿ ಈ ಪ್ರಮಾಣ 450 ಟನ್ ಇದೆ. ಹವಾಮಾನ, ಭೌಗೋಳಿಕತೆ ಹಾಗೂ ಮಣ್ಣಿನಲ್ಲಿರುವ ಪೋಷಕಾಂಶಗಳಿಗೆ ಅನುಗುಣವಾಗಿ ಗೇರು ಇಳುವರಿ ಬರುತ್ತದೆ.

- ಕಮಲಾ ಕೆ., ರಾಜ್ಯ ಗೇರು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ

ಎಂಡೋಸಲ್ಫಾನ್ ಹೊಡೆತ

ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಗೇರು ಬೀಜ ಉತ್ಪಾದನೆಯನ್ನು ಹೆಚ್ಚಿಸುವ ಉದ್ದೇಶದಿಂದ ಜರ್ಮನಿಯಲ್ಲಿ ಬಳಕೆಯಾಗುತ್ತಿದ್ದ ‘ಎಂಡೋಸಲ್ಫಾನ್’ ಎಂಬ ಕ್ರಿಮಿನಾಶಕವನ್ನು ಸರಕಾರವೇ ಗೇರು ನೆಡುತೋಪುಗಳಿಗೆ ಹೆಲಿಕಾಪ್ಟರ್ ಮೂಲಕ ಸಿಂಪಡಣೆ ಮಾಡಿತ್ತು.

1980ರಿಂದ 2000ದ ಅವಧಿಯಲ್ಲಿ ಗೇರು ಅಭಿವೃದ್ಧಿ ನಿಗಮದಿಂದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರಕನ್ನಡ ಜಿಲ್ಲೆಯ ಗೇರು ನೆಡುತೋಪುಗಳ ಮೇಲೆ ಹೆಲಿಕಾಪ್ಟರ್ ಮೂಲಕ ಹಾಗೂ ಮಾನವ ಶಕ್ತಿಯನ್ನು ಬಳಸಿ ಎಂಡೋಸಲ್ಫಾನ್ ಸಿಂಪಡಣೆ ಮಾಡಲಾಗಿತ್ತು. ಇದರ ಪರಿಣಾಮ ಸಾವಿರಾರು ಜನ ವಿವಿಧ ರೀತಿಯ ಬಹುವಿಧ ಅಂಗವೈಕಲ್ಯತೆ, ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಅಂಶ ಬೆಳಕಿಗೆ ಬರುತ್ತಿದ್ದಂತೆ ಹೈಕೋರ್ಟ್ ಆದೇಶದ ಮೇರೆಗೆ 2011ರಲ್ಲಿ ಸರಕಾರ ಕರ್ನಾಟಕದಲ್ಲಿ ಎಂಡೋಸಲ್ಫಾನ್ ಕ್ರಿಮಿನಾಶಕ ಬಳಕೆಯನ್ನು ನಿಷೇಧಿಸಿತ್ತು. ಈ ನಿಟ್ಟಿನಲ್ಲಿ ನೆಡುತೋಪುಗಳಲ್ಲಿ ಬೆಳೆಯುವ ಗೇರು ಕೃಷಿಗೆ ಅಂದಿನಿಂದ ಇಂದಿನವರೆಗೆ ಯಾವುದೇ ಎಂಡೋಸಲ್ಫಾನ್ ಸಹಿತ ರಾಸಾಯನಿಕ ಕೀಟನಾಶಕ ಸಿಂಪಡಣೆ ಮಾಡಲಾಗುತ್ತಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಅಬ್ದುಲ್ ರಹಿಮಾನ್ ತಲಪಾಡಿ

contributor

Similar News